Home ವಿಶೇಷ ಬಾಬಾಬುಡನ್‌ ಗಿರಿಯಲ್ಲಿ ಅರಳಿ ನಿಂತ ಗಿರಿಕನ್ಯೆ

ಬಾಬಾಬುಡನ್‌ ಗಿರಿಯಲ್ಲಿ ಅರಳಿ ನಿಂತ ಗಿರಿಕನ್ಯೆ

ನೀಲಿ ಕುರಿಂಜೆಯೊಂದಿಗೆ ಕಳೆದ ಒಂದು ದಿನ

0

ಮಲೆನಾಡಿನ ಬೆಟ್ಟ ಸಾಲಿನಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ನೀಲಿ ಕುರಿಂಜೆ ಅರಳಿದೆ. ತಂಡೋಪತಂಡವಾಗಿ ಪ್ರವಾಸಿಗರು ಇದನ್ನು ನೋಡಲು ಹೋಗಿ ಬರುತ್ತಿದ್ದಾರೆ. ನೀಲಿ ಕುರಿಂಜೆ ನೋಡಿದಾಗ ಆಗುವ ಅನುಭವವಾದರೂ ಎಂತಹುದು? ಹೂವುಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ದಾಕ್ಷಾಯಿಣಿ ದಾಚಿ ಅವರು ತಮ್ಮ ಹೂವನುಭವವನ್ನು ಪೀಪಲ್‌ ಮೀಡಿಯಾ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

ಗಿರಿಕನ್ಯೆ ನೀಲಕುರಿಂಜೆ ಸೀರೆಯನ್ನು ಉಟ್ಟು ಕಂಗೊಳಿಸುತ್ತಿದ್ದ ನೋಟ ಅವರ್ಣನೀಯ.‌

ನೀಲ ಕುರಿಂಜೆಯ ಮನಮೋಹಕ ದೃಶ್ಯ ಪದಗಳಿಗೆ ನಿಲುಕೋದೇ ಇಲ್ಲಾ…

ಹೂವು ಅರಳಿದ ದಿನದಿಂದಲೇ ಈ ನೀಲಿ ಸುಂದರಿಯರನ್ನು ಅದ್ಯಾವಾಗ ನೋಡ್ತಿನೋ ಅಂತ ಮನಸು ಹಂಬಲಿಸ್ತಾ ಇತ್ತು…

ಬೆಳಿಗ್ಗೆ ಕುರಿಂಜೆಯನ್ನು ನೋಡೋಕೆ ಹೋಗೋಣ ಅಂತ ಕೇಳಿದ ಕ್ಷಣದಿಂದ ಒಂಥರಾ ಎಕ್ಸೈಟ್ಮೆಂಟ್..‌. ಹೋಗುವ ದಾರಿಯಲ್ಲೆಲ್ಲಾ ಇವಳಾ ನೀಲಿ ಕುರಿಂಜೆ, ಹೇಗಿರ್ತಾಳೋ ಅಂತ ಕುತೂಹಲ … ನೀಲಿ ಸುಂದರಿಯ ನಿರೀಕ್ಷೆಯಲ್ಲಿ ದಾರಿ ಸಾಗಿದ್ದೇ ತಿಳಿಯಲಿಲ್ಲ…

ಸೀದಾ ಬಾಬಾಬುಡನ್ ಗಿರಿಗೆ ಹೋದ್ವಿ ನೋಡಿ… ‘ಗಂಧರ್ವ ಸೀಮೆಯಾಯಿತು ಕಾಡಿನ ನಾಡು ಕ್ಷಣದೊಳು ಕಾಡಿನ ನಾಡು ʼದ.ರಾ.ಬೇಂದ್ರೆʼಯವರ ಮಾತಿನಂತೆ –

 “ಬೆಟ್ಟಕ್ಕೆ ಬೆಟ್ಟವೇ ಅರಳಿದ ಸೊಬಗು…”

ನೀಲಕುರಿಂಜೆಯ ಕಡಲೊಳಗೆ ಮುಳುಗಿದಂತೆ ಭಾಸವಾಗ್ತಿತ್ತು…

ಹೂವನ್ನು ತುಳಿಯದೆ ನಡೆಯಲು ಆಗಲೇ ಇಲ್ಲಾ…

ಎಲ್ಲೆಲ್ಲೂ ಹೂವ ಹಾಸು … (Flower Carpet) ನೀಲಕುರಿಂಜೆ ಕ್ಷಮೆ ಕೇಳಿ ..ಅದ್ಭುತ ಸೌಂದರ್ಯವನ್ನು ಕಣ್ತುಂಬಿಕೊಂಡೆವು…

ಒಂದೊಂದೇ ಹೂವನ್ನು ನೋಡಿದಾಗ ಅದೇನೂ ಅಷ್ಟು ಚಂದ ಅನಿಸ್ಲಿಲ್ಲಾ ..ಹಾಗೇ ಒಟ್ಟಾಗಿ ಪೊದೆಯಾಕಾರದಲ್ಲಿ ಸಹಸ್ರ ಸಹಸ್ರ ಹೂವುಗಳು ಚೂರು ಜಾಗವನ್ನೇ ಬಿಡದಂತೆ ಅರಳಿದ್ದು ನಯನಮನೋಹರ ..

ತಂಗಾಳಿಗೆ ಹೂವಿನ ನೃತ್ಯ ….

ಸಾವಿರ ಸಾವಿರ

ಜೇನಿನ ಜೇಂಕಾರ ..

ನೀಲಕುರಿಂಜೆಯ ಮಡಿಲಲ್ಲಿ ಸುಮಾರು ಮೂರು ಗಂಟೆಗಳ ಗಂಟೆ ಇದ್ವಿ … ಮೂರು ನಿಮಿಷವೇನೋ ಅಂತ ಅನಿಸ್ತು..

ಹನ್ನೆರಡು ವರ್ಷಕ್ಕೊಮ್ಮೆ ಅರಳಿದರೇನು ಮನುಷ್ಯ ನೆಟ್ಟು ಬೆಳೆಸುವ  ಕೃತಕ ಹೂಗಿಡಗಳ ಸೊಬಗಿಗಿಂತ ..

ಈ ನೀಲ ಕುರಿಂಜೆಯು ಹಬ್ಬಿದ ಪರಿಯು…

ಈ ಜಗದ ಸಮಸ್ತರೂ ಒಟ್ಟಾಗಿ ಇದ್ದರೆ  ಮಾತ್ರ ಜಗಕೆ ಸೌಂದರ್ಯ ಅಂತ ಸಾರಿ ಹೇಳುವಂತಿತ್ತು..

ಹನ್ನೆರಡು ವರ್ಷಕ್ಕೊಮ್ಮೆ ಅರಳುವ ಈ ಸುಂದರಿ ನೀಲ ಕುರಿಂಜೆ ಪ್ರಕೃತಿಯ ವಿಸ್ಮಯಗಳಲ್ಲಿ ಒಂದು.. ಅನಿರ್ವಚನೀಯ ಆನಂದ

ದಾಕ್ಷಾಯಿಣಿ ದಾಚಿ
ಶಿವಮೊಗ್ಗ

You cannot copy content of this page

Exit mobile version