ಭಾರತದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾ ಕೂಟದಲ್ಲಿ ಕಳೆದ ಕೆಲವು ದಿನಗಳಿಂದ ಭಾರತೀಯ ಆಟಗಾರರು ನಿರಾಸೆಯನ್ನು ಎದುರಿಸುತ್ತಲೇ ಇದ್ದರು.
ಟೋಕಿಯೊ ಒಲಿಂಪಿಕ್ಸ್ 2020ರಲ್ಲಿ 7 ಪದಕಗಳನ್ನು ಗೆದ್ದಿರುವ ಭಾರತವು ಪ್ರಸ್ತುತ ವಿಶ್ವ ಕ್ರೀಡಾಕೂಟದಲ್ಲಿ ನಿರಾಶಾದಾಯಕ ಫಲಿತಾಂಶಗಳನ್ನು ದಾಖಲಿಸಿದೆ. ಇದುವರೆಗೆ ಕೇವಲ 3 ಪದಕಗಳನ್ನು ಗೆದ್ದಿದೆ. ಅವು ಕೂಡಾ ಕಂಚಿನ ಪದಕಗಳು. ಆದರೆ, ಮಂಗಳವಾರ ಆರಂಭವಾದ ಪುರುಷರ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಭಾರತದ ತಾರೆ ನೀರಜ್ ಚೋಪ್ರಾ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಭರವಸೆ ಮೂಡಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿಯೇ ದಾಖಲೆಯ ಎಸೆತದ ಮೂಲಕ ಫೈನಲ್ ತಲುಪಿದ್ದಾರೆ.
‘ಬಿ’ ಅರ್ಹತಾ ಗುಂಪಿನಲ್ಲಿ ಸ್ಪರ್ಧಿಸಿದ್ದ ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲಿಯೇ 89.34 ಮೀಟರ್ ದೂರ ಜಾವೆಲಿನ್ ಎಸೆತ ಎಸೆದು ಫೈನಲ್ ಪ್ರವೇಶ ಪಡೆದರು. ಒಲಿಂಪಿಕ್ಸ್ ನಿಯಮಗಳ ಪ್ರಕಾರ ಅರ್ಹತಾ ಸುತ್ತಿನಲ್ಲಿ 84 ಮೀಟರ್‌ಗಿಂತ ಹೆಚ್ಚು ದೂರ ಎಸೆಯುವವರು ಸ್ವಯಂಚಾಲಿತವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ. ಮೊದಲ ಪ್ರಯತ್ನದಲ್ಲಿ ನೀರಜ್ ಚೋಪ್ರಾ 89.94 ಮೀಟರ್ ದೂರ ಜಾವೆಲಿನ್ ಎಸೆದು ಫೈನಲ್‌ಗೆ ಅರ್ಹತೆ ಪಡೆದರು. ಪಾಕಿಸ್ತಾನದ ಜಾವೆಲಿನ್ ಎಸೆತಗಾರ ನದೀಮ್ 86.59 ಮೀಟರ್ ಎಸೆದು ಮೂರನೇ ಸ್ಥಾನ ಪಡೆದರು. ಪೀಟರ್ (ಗ್ರೆನಡಾ) 88.63 ಮೀ ಎಸೆದು ಎರಡನೇ ಸ್ಥಾನದಲ್ಲಿದ್ದಾರೆ. ಈ ಮೂವರು ‘ಬಿ’ ಗುಂಪಿನಿಂದ ಫೈನಲ್‌ಗೆ ಅರ್ಹತೆ ಪಡೆದರು. ಎರಡೂ ಗುಂಪುಗಳಿಂದ ಒಟ್ಟು 12 ಜಾವೆಲಿನ್ ಎಸೆತಗಾರರು ಫೈನಲ್‌ಗೆ ಅರ್ಹತೆ ಪಡೆಯಲಿದ್ದಾರೆ. ಫೈನಲ್ ಆಗಸ್ಟ್ 8ರಂದು ನಡೆಯಲಿದೆ.