- ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ
Scientific Temper ಎಂಬ ಪದವನ್ನು ರೂಪಿಸಿ ಮೊಟ್ಟಮೊದಲು ಬಳಸಿದ್ದು ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು. ಅವರು ಇದನ್ನು 1946ರಲ್ಲಿ ತಮ್ಮ “ಡಿಸ್ಕವರಿ ಆಫ್ ಇಂಡಿಯಾ” ಕೃತಿಯಲ್ಲಿ ಬಳಸಿದ್ದಾರೆ. ಅಲ್ಲಿ ಅವರು “ಸೈಂಟಿಫಿಕ್ ಟೆಂಪರ್” ಎಂದರೇನು ಎಂದೂ ವ್ಯಾಖ್ಯಾನಿಸಿದ್ದಾರೆ.
“The Scientific Temper is a way of life (defined in this context as an individual and social process of thinking and acting) which uses the scientific method and which may, consequently, include questioning, observing physical reality, testing, hypothesizing, analyzing, and communicating (not necessarily in that order).
ಸರಳವಾಗಿ ಹೇಳುವುದಾದರೆ,“ಪ್ರಶ್ನೆ, ಭೌತಿಕ ವಾಸ್ತವದ ಅವಲೋಕನ, ಪರೀಕ್ಷೆ, ಪರಿಕಲ್ಪನೆ, ವಿಶ್ಲೇಷಣೆ ಇವುಗಳನ್ನು ಒಳಗೊಂಡ ವಿಜ್ಞಾನ ವಿಧಾನವನ್ನು ಬಳಸುವ ಆಲೋಚನೆ ಮತ್ತು ಆಚರಣೆಯ ವೈಯಕ್ತಿಕ ಮತ್ತು ಸಾಮಾಜಿಕ ಪ್ರಕ್ರಿಯೆ.”ಇಲ್ಲಿ ಆಲೋಚನೆ ಮತ್ತು ಆಚರಣೆ ಎರಡರಲ್ಲಿಯೂ ಇದು ಕಂಡುಬಂದ ವೈಜ್ಞಾನಿಕ ಮನೋವೃತ್ತಿ ಸಾರ್ಥಕ, ಮತ್ತು ಇದು ವೈಯಕ್ತಿಕ ನೆಲೆಯಲ್ಲಷ್ಟೇ ಅಲ್ಲ, ಸಾಮಾಜಿಕ, ರಾಜಕೀಯ ನೆಲೆಯಲ್ಲಿಯೂ ಕಂಡುಬರಬೇಕು ಎಂಬ ಮಾತನ್ನು ಹೇಳಿರುವುದು ಅರ್ಥಪೂರ್ಣವಾಗಿದೆ.
ನೆಹರು ಅವರು ಆರಂಭದಿಂದಲೂ ವೈಜ್ಞಾನಿಕ ಮನೋವೃತ್ತಿ ಉಳ್ಳವರಾಗಿದ್ದರು. ಅವರಿಗೆ ದೇವರಲ್ಲಿ ನಂಬಿಕೆ ಇರಲಿಲ್ಲ. ದೇವಸ್ಥಾನಗಳಿಂದ ಬಲುದೂರ. ಈ ಕುರಿತು ಮಹಾತ್ಮ ಗಾಂಧಿಯವರಿಗೆ ಇದ್ದ ನಂಬಿಕೆಗಳನ್ನೂ ಅವರು ಟೀಕಿಸುತ್ತಿದ್ದರು. ಹೀಗಾಗಿ ತಮ್ಮ “Discovery of India” – “ಭಾರತ ದರ್ಶನ”ದಲ್ಲಿ ಅವರು ವೈಜ್ಞಾನಿಕ ಮನೋವೃತ್ತಿಯ ಕುರಿತು ವಿಶದವಾಗಿ ವಿಶ್ಲೇಷಿಸಿದ್ದಾರೆ. 1928ರಲ್ಲಿ, ಮಸ್ಸೌರಿಯಲ್ಲಿ ಓದುತ್ತಿದ್ದ 10 ವರ್ಷದ ಮಗಳು ಇಂದಿರಾ ಪ್ರಿಯದರ್ಶಿನಿಗೆ ಅವರು 30 ಪತ್ರಗಳನ್ನು ಬರೆಯುತ್ತಾರೆ; ಅವು ಹೇಗಿದ್ದೀಯ, ಚೆನ್ನಾಗಿದ್ದೀಯಾ ಎನ್ನುವ ರೀತಿಯ ತಂದೆ ಮಗಳಿಗೆ ಬರೆದ ಮುದ್ದಿನ ಪತ್ರಗಳಲ್ಲ; ಬದಲಿಗೆ, “ಬುಕ್ ಆಫ್ ನೇಚರ್” ಎಂಬ ಮೊದಲ ಪತ್ರದಿಂದ ಆರಂಭಿಸಿ ನೆಹರು ಅವರು ಭೂಮಿಯಲ್ಲಿ ಜೀವದ ಉಗಮ ಹೇಗಾಯಿತು ಎಂದು ಬರೆಯುತ್ತಾರೆ. ನಂತರ ಒಂದೊಂದೇ ಪತ್ರದಲ್ಲಿ ಜೀವ ವಿಕಾಸ, ಪುರಾಣಗಳು, ಭಾಷೆಗಳು, ವಾಣಿಜ್ಯ, ಭೋಗೋಳ, ವಿಜ್ಞಾನ ಇತ್ಯಾದಿ ವಿವಿಧ ವಿಷಯಗಳ ಕುರಿತು ಬರೆಯುತ್ತಾರೆ. ಅವರ ಪತ್ರಗಳು ಒಬ್ಬ ಪ್ರಜ್ಞಾವಂತ ಶಿಕ್ಷಕ ಹತ್ತು ವರ್ಷದ ಮಗುವನ್ನು ಉದ್ದೇಶಿಸಿ ವಿಷಯಗಳನ್ನು ಹೇಗೆ ಕಲಿಸಬೇಕು ಎಂಬುದಕ್ಕೆ ಮಾದರಿಯಾಗಿವೆ. ಅವುಗಳಲ್ಲಿನ ಶೈಕ್ಷಣಿಕ ವಿಧಾನಗಳು, ಸರಳವಾದ ಭಾಷೆ, ನಿರೂಪಣಾ ಶೈಲಿಯ ಕುರಿತೇ, ಮಹಾರಾಷ್ಟ್ರದ ವೈಜಾಪುರದ ವಿನಾಯಕರಾವ್ ಪಾಟೀಲ್ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾದ ಡಾ.ಡಿ.ಎಸ್.ಸಾಳುಂಕೆಯವರು ಒಂದು ಅಧ್ಯಯನವನ್ನೇ ಪ್ರಕಟಿಸಿದ್ದಾರೆ. ಬಹುಶಃ ಎಳೆಯರಿಗಾಗಿ ಶೈಕ್ಷಣಿಕ ವಿಷಯಗಳ ಬಗ್ಗೆ ಬರೆಯುವವರು, ಬೋಧಿಸುವವರು ಈ ಮೂವತ್ತು ಪತ್ರಗಳನ್ನು ಈ ದೃಷ್ಠಿಯಿಂದ ಅಧ್ಯಯನಿಸುವುದು ಪ್ರಯೋಜನವಾದೀತು.
ಸ್ವಾತಂತ್ರ್ಯ ಹೋರಾಟದಲ್ಲಿ, ಸುಮಾರು 1920 ರಿಂದ 27 ವರ್ಷಗಳ ಕಾಲ ಸಕ್ರಿಯವಾಗಿದ್ದಾಗಲೇ ನೆಹರು ಅವರು ಸ್ವತಂತ್ರ ಭಾರತಕ್ಕಾಗಿ ಹಲವು ಕನಸುಗಳನ್ನು ಕಂಡಿದ್ದರು. ಅವು ಭ್ರಾಮಕ ಕನಸುಗಳಾಗಿರದೇ ಐತಿಹಾಸಿಕ ವಾಸ್ತವಗಳನ್ನು ಆಧರಿಸಿದ ಯೋಜನೆಗಳಾಗಿದ್ದವು. ಸ್ವಾತಂತ್ರ್ಯ ಬಂದು ಅವರೇ ದೇಶದ ಪ್ರಥಮ ಪ್ರಧಾನಿಯಾದಾಗ, ದೇಶವನ್ನು ಕಾಡುತ್ತಿದ್ದ ಹಸಿವು, ಬಡತನ, ನಿರಕ್ಷರತೆ ಇತ್ಯಾದಿ ತುರ್ತು ಸಮಸ್ಯೆಗಳ ಪರಿಹಾರಕ್ಕಾಗಿ ನೆಚ್ಚಿಕೊಂಡಿದ್ದು ವಿಜ್ಞಾನ ಮತ್ತು ತಂತ್ರಜ್ಞಾನವನ್ನು. ಅವರು ಪ್ರಧಾನಿಯಾಗಿದ್ದ ಸುಮಾರು 15 ವರ್ಷಗಳಲ್ಲಿ 32 ಬೃಹತ್ ನೀರಾವರಿ/ವಿದ್ಯುತ್ ಯೋಜನೆಗಳು, ಉದ್ಯಮಗಳು, ಉನ್ನತ ದರ್ಜೆಯ ಶೈಕ್ಷಣಿಕ, ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಿದರು, ಈಗಿನ ಪ್ರಧಾನಿಯವರಿಗೆ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಕಟ್ಟುವುದೇ ರಾಷ್ಟ್ರೀಯ ಕಾರ್ಯ ಯೋಜನೆಯಾಗಿದೆ. ಆದರೆ, ಈ ಮೊದಲ ಪ್ರಧಾನಿ, 1948ರಲ್ಲಿ ಭಾಕ್ರಾ ನಂಗಲ್ ಅಣೆಕಟ್ಟಿಗೆ ಶಂಕುಸ್ಥಾಪನೆ ಮಾಡಿ ಮಾತಾಡಿದಾಗ, ಇವೇ “ಭಾರತದ ಆಧುನಿಕ ದೇವಾಲಯಗಳು” ಎಂಬ ಹೇಳಿಕೆಯನ್ನು ಕೊಟ್ಟರು. ಇಂಥ ವಿಷನರಿಯಾಗಿದ್ದ ಪ್ರಧಾನಿ ನೆಹರು ಅವರು ನಿರೂಪಿಸಿದ “ವೈಜ್ಞಾನಿಕ ಮನೋವೃತ್ತಿ”ಯ ವ್ಯಾಖ್ಯೆ ಈಗಲೂ ಪ್ರಚಲಿತ.
ವೈಜ್ಞಾನಿಕ ಮನೋವೃತ್ತಿ ಮತ್ತು ಭಾರತ ಸಂವಿಧಾನ
“ಭಾರತ ಸಂವಿಧಾನ ಎಂಥ ಗ್ರಂಥ” ಎಂದು ಕೇಳಿದರೆ ನಿಮ್ಮ ಉತ್ತರವೇನು? ಕೆಲವರಿಗೆ ಭಾರತ ಸಂವಿಧಾನ ಸಾರುವ ಸಮಾನತೆ, ಸಮತೆ ಮತ್ತು ಇತರ ಹಕ್ಕುಗಳ ಕುರಿತು ಗುನುಗು ಇದೆ, ಹೊರನೋಟಕ್ಕೆ ಅದನ್ನು ಗೌರವಿಸುತ್ತೇವೆ ಎಂದು ಆಲೋಚನೆಯಲ್ಲಿ ಹೇಳಿದರೂ ಆಚರಣೆಯಲ್ಲಿ ಅದನ್ನು ಅವಹೇಳನ ಮಾಡುತ್ತಾರೆ. 2018ರ ಆಗಸ್ಟ್ 9ರಂದು ಯೂತ್ ಫಾರ್ ಇಕ್ವಾಲಿಟಿ ಫೌಂಡೇಷನ್ (ಅಜಾದ್ ಸೇನಾ) ಮತ್ತು ಆರಕ್ಷಣ್ ವಿರೋಧಿ ಪಾರ್ಟಿ ಎಂಬ ಎರಡು ಸಂಘಟನೆಗಳು ಎಸ್.ಸಿ./ಎಸ್.ಟಿ (ದೌರ್ಜನ್ಯಗಳ ತಡೆಗಟ್ಟುವಿಕೆ) ಕಾಯ್ದೆಯಲ್ಲಿ ತರಲಾದ ತಿದ್ದುಪಡಿಯ ವಿರುದ್ಧ ಪ್ರತಿಭಟನೆಯ ವೇಳೆಯಲ್ಲಿ ಭಾರತ ಸಂವಿಧಾನದ ಪ್ರತಿಯನ್ನು ಸುಟ್ಟರು. ಅಪರಾಧಿಗಳನ್ನು ಬಂಧಿಸಿದರು, ಶಿಕ್ಷೆಯೂ ಆಗಿರಬಹುದು. ಇದು ಆಕ್ರೋಶದಲ್ಲಿ ಭೌತಿಕವಾಗಿ ಸಂವಿಧಾನದ ಪ್ರತಿಯನ್ನು ಸುಟ್ಟ ಪ್ರಕರಣ, ಆದರೆ ಸಂವಿಧಾನವನ್ನು ಗೌರವಿಸುತ್ತೇವೆ ಎಂದು ಸಂಭಾವಿತರ ಹಾಗೆ ಮಾತಾಡಿ, ಅದರ ಮೂಲಭೂತ ತತ್ತ್ವಗಳನ್ನೇ ದಿನವೂ ಸುಡುವ ಬಹುತೇಕ ಜನಪ್ರತಿನಿಧಿಗಳು ಈ ದೂಷಣೆಯಿಂದ ತಪ್ಪಿಸಿಕೊಳ್ಳುತ್ತಾರೆ. ಇರಲಿ.
ಇನ್ನೊಂದು ವರ್ಗವಿದೆ. ಅವರು, “ಭಾರತ ಸಂವಿಧಾನ ಒಂದು“ಪವಿತ್ರ” ಗ್ರಂಥ, ಪ್ರಜಾಪ್ರಭುತ್ವ ನಮ್ಮ ಧರ್ಮ, ಸಂವಿಧಾನ ನಮ್ಮ ಧರ್ಮಗ್ರಂಥ” ಎಂದು ಹೇಳುತ್ತಾರೆ, ಡಾ.ಅಂಬೇಡ್ಕರ್ ಜಯಂತಿಯಂದು ಸಂವಿಧಾನದ ಪ್ರತಿಗೆ ಹೂ ಹಾಕಿ ಶಾಸ್ತ್ರೋಕ್ತವಾಗಿ ಊದಿನ ಕಟ್ಟಿ ಹಚ್ಚಿ ಆರತಿ ಬೆಳಗಿ ಪೂಜೆ ಮಾಡುವವರೂ ಇದ್ದಾರೆ. ಅವರ ಅಭಿಮಾನವನ್ನು ಮೆಚ್ಚಬೇಕು. ಮೊದಲು ನಾನೂ ಹಾಗೇ ಹೇಳುತ್ತಿದ್ದೆ. ಆದರೆ ಹೆಚ್ಚು ತಿಳಿವಳಿಕೆ ಬಂದ ನಂತರ ನನ್ನ ಅಭಿಪ್ರಾಯ ಬೇರೆಯಾಯಿತು. ಕುರಾನ್, ಬೈಬಲ್, ಗೀತೆ ಇತ್ಯಾದಿ ಗ್ರಂಥಗಳನ್ನು ನಾವು ದೈವಿಕ, ಅಪೌರುಷೇಯ, ಅವತೀರ್ಣಗೊಂಡಿದ್ದು, ಪವಿತ್ರ ಎಂದೆಲ್ಲಾ ಭಾವಿಸುತ್ತೇವೆ. ಆದ್ದರಿಂದ ಅವುಗಳನ್ನು ಗೌರವಿಸುತ್ತೇವೆ, ಅವುಗಳಿಗೆ ಅವಮಾನವಾದರೆ ಜೀವ ಕೊಡುತ್ತೇವೆ, ಆದರೆ ತೆಗೆದು ಓದುವುದಿಲ್ಲ, ಅದರಲ್ಲಿ ವಾಸ್ತವವಾಗಿ ಏನು ಹೇಳಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ತಾವು ಓದಿದ್ದೇವೆ ಎಂದು ಹೇಳುವರು ಅದರಲ್ಲಿದೆ ಎಂದು ಹೇಳುವುದನ್ನು ಬುದ್ಧಿ ಮುಚ್ಚಿಕೊಂಡು ನಂಬುತ್ತೇವೆ. ಭಾರತ ಸಂವಿಧಾನದ ಕುರಿತು ಈ ಮಾದರಿಯ ಅಂಧವಿಶ್ವಾಸ, ಭಕ್ತಿಯೂ ಸಲ್ಲದು.
ವಾಸ್ತವವಾಗಿ ಭಾರತ ಸಂವಿಧಾನ ಇದ್ಯಾವುದೂ ಅಲ್ಲ. ಎಂದರೆ ಇದು ದೈವಿಕವಲ್ಲ, ಲೌಕಿಕ. ಇದು ಸ್ವತಃ ದೇವರಿಂದ ದೇವದೂತನ ಮೂಲಕ ಅವತೀರ್ಣಗೊಂಡಿಲ್ಲ, ಎಂದರೆ ಅಪೌರುಷೇಯವಲ್ಲ, ಇದನ್ನು ಮನುಷ್ಯರೇ ಬರೆದಿದ್ದು, ಇದು ಪವಿತ್ರವಲ್ಲ, ಮೌಲಿಕವಾದದ್ದು. ಡಾ.ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ, 6.12.1946 ರಿಂದ 24.1.1950ರ (2 ವರ್ಷ 11 ತಿಂಗಳು 18 ದಿನ) ವರೆಗೆ ನಡೆದ ಸಂವಿಧಾನ ರಚನಾ ಸಭೆಯಲ್ಲಿ ಇದರ ರಚನೆಯಾಯಿತು. ವಿವಿಧ ರಾಜ್ಯಗಳಿಂದ ಬಂದ, 15 ಜನ ಮಹಿಳೆಯರೂ ಸೇರಿದ ಹಾಗೆ 299 ಜನಪ್ರತಿನಿಧಿಗಳು ಇದರ ರಚನೆಯಲ್ಲಿ ಪಾಲ್ಗೊಂಡರು. 22 ಸಮಿತಿಗಳಲ್ಲಿ ಹಲವಾರು ವಿಷಯಗಳ ಸುದೀರ್ಘ ವಿಶ್ಲೇಷಣೆ ಮಾಡಿದರು. ಆಯಾ ಸಮಿತಿಗಳಲ್ಲಿ ಮೂಡಿದ ವರದಿಗಳನ್ನು ಸಂವಿಧಾನ ರಚನಾ ಸಭೆಯ 11 ಗೋಷ್ಠಿಗಳಲ್ಲಿ 166 ದಿನ ಎಲ್ಲರೂ ಸೇರಿ ಚರ್ಚಿಸಿ ಪರಿಷ್ಕರಿಸಲಾಯಿತು. 29.08.1947 ರಂದು ರಚನೆಯಾದ ’ಕರಡು ರಚನಾ ಸಮಿತಿ’ಯು ಅದಕ್ಕೆ ಒಂದು ಗ್ರಂಥದ ರೂಪವನ್ನು ನೀಡಿತು. ಈ ಸಮಿತಿಯ ಅಧ್ಯಕ್ಷರಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿದ್ವತ್ತು, ಅನುಭವ, ನಿರಂತರದ ಪರಿಶ್ರಮದ ಫಲವಾಗಿ ಈಗಿನ ಸಂವಿಧಾನದ ಕರಡು ಸಿದ್ಧವಾಯಿತು.26.11.1949ರಂದು ಭಾರತ ಸಂಸತ್ತು ಇದನ್ನು ಅಂಗೀಕರಿಸಿ, 26.01.1950ರಂದು ಇದು ದೇಶದಲ್ಲಿ ಜಾರಿಗೆ ಬಂತು. ಇದರ ರಚನೆಯ ಪ್ರಕ್ರಿಯೆಯೇ ಅತ್ಯಂತ ಲೌಕಿಕವಾಗಿತ್ತು, ಜನತಂತ್ರಾತ್ಮಕವಾಗಿತ್ತು, ಆ ಕಾರಣಕ್ಕಾಗಿ ವೈಜ್ಞಾನಿಕವಾಗಿತ್ತು ಎಂಬುದನ್ನು ಗಮನಿಸಿ.
ಸಂವಿಧಾನದ ಪ್ರಸ್ತಾವನೆ
ಭಾರತ ಸಂವಿಧಾನದ ಮೊದಲ ಪುಟವೇ ಪ್ರಸ್ತಾವನೆ. Preamble of Constitution of India. ಇದು ಇಡೀ ಭಾರತ ಸಂವಿಧಾನದ ಮೂಲ ಆಶಯ, ತಾತ್ಪರ್ಯ, ದ್ಯೇಯೋದ್ಧೇಶದ ಹೇಳಿಕೆ, ಶಪಥ. ಇದರಲ್ಲಿರುವ ಅಂಶಗಳನ್ನು ನಾವು ಬಿಡಿಸಿ ಮನನ ಮಾಡಿಕೊಳ್ಳುವುದು, ಆಲೋಚನೆ ಮತ್ತು ಆಚರಣೆಯಲ್ಲಿ ಅಳವಡಿಸಿಕೊಳ್ಳುವುದು ಒಳ್ಳೆಯದು. ಸಂವಿಧಾನದ ಪ್ರಸ್ತಾವನೆ ಸಂವಿಧಾನದ ತಾತ್ಪರ್ಯವಿದ್ದಂತೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ವಾಸ್ತವವಾಗಿ ಪ್ರಸ್ತಾವನೆಯೇ ’ಸಂವಿಧಾನ’. ನಂತರ ಬರುವ 25 ಭಾಗಗಳ 448 ಅನುಚ್ಛೇದಗಳು, 12 ಅನುಸೂಚಿ ಸಹಿತವಾದ ಸುಮಾರು 250 ಪುಟಗಳ ಪಠ್ಯವು ಪ್ರಸ್ತಾವನೆಯಲ್ಲಿ ಬರುವ ಒಂದೊಂದು ಪದಕ್ಕೆ ನೀಡಿರುವ ’ಅಡಿಟಿಪ್ಪಣಿ’ ಅಥವಾ ’ವಿವರ’ ಎನ್ನಬಹುದು. ಅಷ್ಟು ಮುಖ್ಯ ಸಂವಿಧಾನದ ಪ್ರಸ್ತಾವನೆ. ಪ್ರಸ್ತಾವನೆಯ ಪಠ್ಯದ ಕೆಲವು ಅಂಶಗಳನ್ನು ನೋಡೋಣ;
1.ಇಡೀ ಭಾರತ ಸಂವಿಧಾನ ಆರಂಭವಾಗುವುದೇ We the People of India, “ಭಾರತ ಜನತೆಯಾದ ನಾವು”ಎಂಬ ಮಾತಿನಿಂದ…ಪ್ರಸ್ತಾವನೆ ಕೊನೆಗೊಳ್ಳುವುದು “ಈ ಸಂವಿಧಾನವನ್ನುನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ” ಎಂದು.ಎಂದರೆ ದೇವರಾಗಲೀ, ಪ್ರವಾದಿಗಳಾಗಲೀ, ಯಾವುದೇ ಶಾಹಿಗಳಾಗಲೀ ಇದನ್ನು ನಮ್ಮ ಮೇಲೆ ಹೇರಿಲ್ಲ.ನಮಗೆ ನಾವೇ ವಿಧಿಸಿಕೊಂಡಿದ್ದೇವೆ. ಈ ಪದಗಳನ್ನು ಮನನ ಮಾಡಿಕೊಂಡರೆ ಇದು ನಮ್ಮದೇ ಸಂವಿಧಾನ ಎಂಬ ಪ್ರೀತಿ, ಅಭಿಮಾನ, ಶ್ರದ್ಧೆ, ಜವಾಬ್ದಾರಿ ಮೂಡುತ್ತದೆ. ಮುಂದಿನದೆಲ್ಲ ಹೆಚ್ಚು ಸುಗಮವಾಗುತ್ತದೆ.
2.ಸ್ವತಂತ್ರ ಭಾರತವನ್ನು ಕಟ್ಟುವುದಕ್ಕಾಗಿ ನಮ್ಮ ಗುರಿಗಳೇನು ಎನ್ನುವುದನ್ನು ಪ್ರಸ್ತಾವನೆ Sovereign, Socialist, Secular, Democratic Republic ಎಂದು ಹೇಳಿದೆ. ಇದರಲ್ಲಿ ಎರಡು ಪದಗಳನ್ನು ಮಾತ್ರ ನಾನು ವಿಮರ್ಶೆಗೆ ತೆಗೆದುಕೊಳ್ಳುತ್ತೇನೆ.
ಪ್ರಸ್ತಾವನೆಯ ಇಂಗ್ಲಿಷ್ ಆವೃತ್ತಿಯಲ್ಲಿ Secular ಎಂಬ ಪದವನ್ನು ಬಳಸಿದೆ. ಕೇಂಬ್ರಿಜ್ ಇಂಗ್ಲಿಷ್ ನಿಘಂಟುವಿನಲ್ಲಿ ಇದರ ಅರ್ಥ, ’not connected with religion or spiritual matters’ ಮತ್ತು ‘not having any connection with religion’ ಎಂದಿದೆ. ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟುವಿನಲ್ಲಿ Secularಎನ್ನುವ ಪದಕ್ಕೆ, “ಲೌಕಿಕ, ಜಾತ್ಯತೀತ, ಮತ ಧರ್ಮಾತೀತ, ರಾಷ್ಟ್ರನೀತಿ ಆಡಳಿತ ವ್ಯವಸ್ಥೆಯಲ್ಲಿ ಧರ್ಮದ ಪ್ರವೇಶ ಕೂಡದೆನ್ನುವ; ಧಾರ್ಮಿಕ ಕ್ಷೇತ್ರಕ್ಕೆ, ಚರ್ಚು, ಮಠ, ಮಸೀದಿ ಇತ್ಯಾದಿಗಳಿಗೆ ಸಂಬಂಧಿಸದೇ ಇರುವ…” ಎಂದಿದೆ.
ಇದನ್ನು ಅನುಸರಿಸಿ ಕೆಲವು ಭಾಷೆಗಳಲ್ಲಿ ಸೆಕ್ಯುಲರ್ ಎಂಬ ಪದವನ್ನು ಅನುವಾದ ಮಾಡಿಕೊಂಡಿರುವುದನ್ನು ನೋಡಿ: ಮೂಲ ಇಂಗ್ಲಿಷ್ ಆವೃತ್ತಿಯೊಂದಿಗೇ ರಚಿತವಾದ ಹಿಂದಿ ಆವೃತ್ತಿಯಲ್ಲಿ ’ಪಂಥ್ ನಿರಪೇಕ್ಷ್’ ಎಂಬ ಪದವಿದೆ, ಹಾಗೆಯೇ ತೆಲುಗು-ಲೌಕಿಕ, ಮರಾಠಿ-ಧರ್ಮ್ ನಿರಪೇಕ್ಷ್, ಬಂಗಾಲಿ-ಧರ್ಮ್ ನಿರಪೇಕ್ಷ್. ಆದರೆ ಕನ್ನಡದಲ್ಲಿ ಸರಕಾರದ ಅಧಿಕೃತ ಅನುವಾದದಲ್ಲಿ [1]ಸೆಕ್ಯುಲರ್ ಎಂಬ ಪದಕ್ಕೆ “ಸರ್ವಧರ್ಮ ಸಮಭಾವದ” ಎಂಬ ಪದವನ್ನು ಬಳಸಿದ್ದಾರೆ. ಈ ಅರ್ಥ ಎಲ್ಲಿಯೂ ಇಲ್ಲ ಅನ್ನುವುದಷ್ಟೆ ಅಲ್ಲ, ಮೂಲ ಅರ್ಥವನ್ನು ಇದು ಹಾದಿ ತಪ್ಪಿಸುತ್ತದೆ. ಸಂವಿಧಾನದ ಮೂಲ ಆಶಯಕ್ಕೆ ತದ್ವಿರುದ್ಧವಾಗಿದೆ. ಆದ್ದರಿಂದ ಸಂವಿಧಾನದ ಪ್ರಸ್ತಾವನೆಯನ್ನು ಅರ್ಥ ಮಾಡಿಕೊಳ್ಳುವಾಗ ನಾವು ಸೆಕ್ಯುಲರ್ ಎಂಬ ಪದವನ್ನು “ಮತಧರ್ಮ ನಿರಪೇಕ್ಷ” ಎಂದೇ ಅರ್ಥ ಮಾಡಿಕೊಳ್ಳಬೇಕು.
3. ಪ್ರಸ್ತಾವನೆಯಲ್ಲಿರುವ ಇನ್ನೊಂದು ಪದ, Democratic ಎನ್ನುವುದು. ಇದನ್ನು ಬಂಗಾಲಿಯಲ್ಲಿ ಜನತಾಂತ್ರಿಕ್, ಹಿಂದಿಯಲ್ಲಿ ಲೋಕತಂತ್ರಾತ್ಮಕ್, ಮರಾಠಿಯಲ್ಲಿ ಲೋಕಶಾಶಿ, ತಮಿಳಿನಲ್ಲಿ ಜನನಾಯಕ ಎಂದೆಲ್ಲಾ ಮಾಡಿಕೊಂಡಿದ್ದಾರೆ. ಇವು ಹೆಚ್ಚು ಸರಿ. ಆದರೆ ಕನ್ನಡದ ಅಧಿಕೃತ ಅನುವಾದದಲ್ಲಿ Democratic ಎನ್ನುವುದಕ್ಕೆ“ಪ್ರಜಾಸತ್ತಾತ್ಮಕ”ಎಂಬ ಪದವನ್ನು ಬಳಸಲಾಗಿದೆ (ಹೆಚ್ಚಿನವರು ಪ್ರಜಾಪ್ರಭುತ್ವ ಎಂಬ ಪದವನ್ನೇ ಬಳಸುತ್ತಾರೆ.) ಎಂದರೆ ಇಲ್ಲಿ ನಮ್ಮನ್ನು ’ಪ್ರಜೆ’ ಎಂದು ಕರೆಯಲಾಗಿದೆ. ಅನೇಕ ಬಗೆಯ ಪ್ರಭುಗಳು ಇದ್ದಾಗ ನಾವು ವಿನೀತ ಪ್ರಜೆಗಳಾಗಿದ್ದೆವು. ಈಗ ನಾವೇ ದೇಶದ ಸಮಷ್ಠಿ ಮಾಲೀಕರು, ಈಗ ಯಾರೂ ಪ್ರಭುಗಳಿಲ್ಲ, ನಾವೂ ಪ್ರಭುಗಳಾಗಬಾರದು. ನಾವು ಈ ದೇಶದ citizenಗಳು, ನಾಗರಿಕರು, ಜನರು. ಆದ್ದರಿಂದ ನಮ್ಮದು ಜನಸತ್ತಾತ್ಮಕ ಗಣರಾಜ್ಯ.
ಎಲ್ಲ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ, ಸಮತೆ ದೊರೆಯುವಂತೆ ಮಾಡುವ ಮತ್ತು ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವ ದೃಢ ಸಂಕಲ್ಪ ಮಾಡಿದ್ದೇವೆ ಎಂದಿದೆ. ವಿಧಾನದ ಒಳಗಿನ ಯಾವುದೇ ಅನುಚ್ಛೇದ ಪ್ರಸ್ತಾವನೆಯಲ್ಲಿನ ಮೌಲ್ಯಗಳನ್ನು ಮೀರುವಂತಿಲ್ಲ, ಅದಕ್ಕೆ ಅನುಗುಣವಾಗಿಯೇ ಇರಬೇಕು ಎಂದಾದ ಮೇಲೆ ಇಡೀ ಸಂವಿಧಾನವು ಹೇಗೆ ವೈಚಾರಿಕತೆ, ತರ್ಕ, ಸಾಮಾಜಿಕ ನ್ಯಾಯ, ವೈಜ್ಞಾನಿಕ ಮನೋವೃತ್ತಿಯನ್ನು ಆಧರಿಸಿದೆ ಎಂಬುದನ್ನು ಪ್ರಸ್ತಾವನೆಯಲ್ಲಿಯೇ ದೃಢಪಡಿಸಲಾಗಿದೆ.
ಸಂವಿಧಾನ ಸಾಕ್ಷರತೆ
ಸಂವಿಧಾನದ ಪ್ರಕಾರ ನಮ್ಮದು ಜನ ತಂತ್ರಾತ್ಮಕ ಗಣರಾಜ್ಯ. ಎಂದರೆ ಈ ದೇಶದ ನಾಗರಿಕರೇ ಇಡೀ ದೇಶದ ಸಮಷ್ಠಿ ಮಾಲೀಕರು; ದೇಶದ ಆಗುಹೋಗುಗಳಿಗೆ ಬಾಧ್ಯಸ್ಥರು, ಹೊಣೆಗಾರರು. ನಾಗರಿಕರು ಉತ್ಪಾದನೆ, ಸಂಶೋಧನೆ, ಸೇವೆ, ದುಡಿಮೆ ಇತ್ಯಾದಿ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಆದ್ದರಿಂದ ಅವರ ಪರವಾಗಿ ಈ ದೇಶವನ್ನು (ಆಳಲು ಅಲ್ಲ) ನಡೆಸಿಕೊಂಡು ಹೋಗಲು ಅವರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಚುನಾವಣೆಗಳಲ್ಲಿ (ಮತ’ದಾನ’ ಮಾಡಿ ಅಲ್ಲ) ಮತ (ಅಭಿಪ್ರಾಯ)ದ ಹಕ್ಕನ್ನು ಚಲಾಯಿಸುವ ಮೂಲಕ ಇದನ್ನು ಮಾಡುತ್ತಾರೆ. ಚುನಾಯಿಸಿ ಬರುವವರು ನಮ್ಮ ’ನಾಯಕರಲ್ಲ’, ಅವರು ನಮ್ಮ ಪ್ರತಿನಿಧಿಗಳು. ಅವರಿಗೆ ಸಮಯವಿದೆ, ಪರಿಣತಿ, ಅನುಭವ ಇದೆ ಎಂಬುದಕ್ಕಾಗಿ ನಾವು ಅವರನ್ನು ಆಯ್ಕೆ ಮಾಡುತ್ತೇವೆ. ಅವರಿಗೆ ಸಂವಿಧಾನ ಬದ್ಧವಾದ ಸ್ಥಾನಮಾನ, ಅಧಿಕಾರ, ಸಂಭಾವನೆ, ಸೌಕರ್ಯ, ಭತ್ಯ ಇತ್ಯಾದಿ ಎಲ್ಲವನ್ನೂ ಒದಗಿಸಿ, ನೀವು ಆಯ್ಕೆಯಾಗಿರುವ ಅವಧಿ ಮುಗಿಯುವ ವರೆಗೆ ಪ್ರಾಮಾಣಿಕವಾಗಿ ನಮ್ಮ ಅಭ್ಯುದಯಕ್ಕಾಗಿ ದುಡಿಯಿರಿ ಎಂದು ಕಳಿಸಿರುತ್ತೇವೆ. ಆದರೆ ಈ ಮಾದರಿಯಲ್ಲಿ ತಮ್ಮ ಅಧಿಕಾರವೇನು, ತಮ್ಮ ಮತದ ಮಹತ್ವವೇನು ಎಂಬುದು ನಾಗರಿಕರಿಗೆ ಗೊತ್ತಿದೆಯೇ? ಸಂವಿಧಾನ ಜಾರಿಯಾದ 1950ರ ವರ್ಷದ ಭಾರತೀಯರಿಗೆ ಹೋಗಲಿ, ಈಗಿನ 2020ರ ಸಾರ್ವಜನಿಕರಿಗಾದರೂ ಸಂವಿಧಾನ ಮತ್ತು ಅದರ ಮಹತ್ವದ ಕುರಿತು ಅರಿವಿದೆಯೇ? ಇಲ್ಲ.
ಹೀಗಾಗಿ, ಭಾರತ ಸಂವಿಧಾನದ ಮೂಲಭೂತ ಸಾಕ್ಷರತೆ ಭಾರತದ ನಾಗರಿಕರಿಗೆ ಇರಬೇಕಾಗುತ್ತದೆ; ಮುಖ್ಯವಾಗಿ ಮತವನ್ನು ಚಲಾಯಿಸಿ ದೇಶ ನಡೆಸುವವರನ್ನು ಆಯ್ಕೆ ಮಾಡುವ ವಯಸ್ಕರಿಗೆ ಸಂವಿಧಾನದ ಮೂಲಭೂತ ಅಂಶಗಳು ಗೊತ್ತಿರಬೇಕಾಗುತ್ತದೆ. ಆದರೆ, ಅದ್ಯಾಕೋ, ಅಷ್ಟೊಂದು ಕಾಳಜಿಯಿಂದ, ಸಾಮಾಜಿಕ ಹೊಣೆಗಾರಿಕೆಯಿಂದ ಸಂವಿಧಾನವನ್ನು ರಚಿಸಿ, ಜಾರಿಗೆ ತಂದ ಆಗಿನ ಹಿರಿಯರು, ನಂತರ ಅದರ ಕುರಿತು ದೇಶದ ನಾಗರಿಕರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಗೌಣವಾಗಿ ಕಂಡರು, ಜನಸತ್ತಾತ್ಮಕ ವ್ಯವಸ್ಥೆಯನ್ನು ಅಂಗೀಕರಿಸಿದ ಆರಂಭದಿಂದಲೇ ಆಗಿರುವ ಬಹುದೊಡ್ಡ ಪ್ರಮಾದವಿದು. ಜನರ ಪ್ರತಿನಿಧಿಗಳು ಎಂದು ಹೇಳಿಕೊಂಡು ಸಂವಿಧಾನ ರಚನಾ ಸಭೆಯಲ್ಲಿ ಕುಳಿತು ಪರಿಶ್ರಮ ವಹಿಸಿ ಅದ್ಭುತವಾದ ಸಂವಿಧಾನವನ್ನು ಸಾಕಾರಗೊಳಿಸಿದ ಆ ಹಿರಿಯರು, ಸಭಾಧ್ಯಕ್ಷರೂ, ತಾವೂ ಅದಕ್ಕೆ ’ಭಾರತದ ಜನತೆಯಾದ ನಮ್ಮ’ ಪರವಾಗಿ ಸಹಿ ಹಾಕಿ, 1950ರ ಜನವರಿ 26ರಂದು ಅದನ್ನು ಜಾರಿ ಮಾಡಿದ ನಂತರವಾದರೂ ಕೂಡಲೇ ಮಾಡಬೇಕಾದ ಒಂದು ಕೆಲಸವಿತ್ತು. ಆಗ ಭಾರತದ ಜನಸಂಖ್ಯೆ 36 ಕೋಟಿ ಇತ್ತು. ಅವರನ್ನು ಉದ್ದೇಶಿಸಿ, “ನೋಡಿಯಪ್ಪಾ, ನಿಮ್ಮ ಪರವಾಗಿ ಎಂದು ಹೇಳಿಕೊಂಡು ನಾವು ನಮ್ಮೆಲ್ಲರಿಗಾಗಿ ಈ ಸಂವಿಧಾನವನ್ನು ರಚಿಸಿದ್ದೇವೆ. ಇದರ ಅನುಷ್ಠಾನದಲ್ಲಿ ನೀವೂ ಕೂಡ ಸಮಸಮ ಭಾಧ್ಯಸ್ಥರು, ನೀವೂ ಇದರ ಕುರಿತು ಮೂಲಭೂತ ಅಂಶಗಳನ್ನು ತಿಳಿದುಕೊಳ್ಳುವುದು ಸೂಕ್ತ” ಎಂದು ಪ್ರಾಮಾಣಿಕವಾಗಿ ಹೇಳಬೇಕಾಗಿತ್ತು. ಸಂವಿಧಾನದ ಮೂಲ ತತ್ತ್ವಗಳು, ಹಕ್ಕುಗಳು, ಬಾಧ್ಯತೆಗಳು ಇತ್ಯಾದಿಗಳನ್ನು ಸರಳಗೊಳಿಸಿ, ಕೈಪಿಡಿ ರಚನೆ ಮಾಡಬೇಕಾಗಿತ್ತು. ಅದನ್ನು ಬಳಸಿ ಬೃಹತ್ ಪ್ರಮಾಣದಲ್ಲಿ “ಸಂವಿಧಾನ ಸಾಕ್ಷರತಾ” ಆಂದೋಲನವನ್ನು ನಡೆಸಬೇಕಾಗಿತ್ತು. ದೇಶದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವ ಮುನ್ನ ದೇಶದ ಮಾಲೀಕರಿಗೆ ಅದರ ಕುರಿತು ಅರಿವನ್ನು ಮೂಡಿಸಬೇಕಾಗಿತ್ತು. ಕೊನೆಯ ಪಕ್ಷ, ಮೊದಲ ಪಂಚವಾರ್ಷಿಕ ಯೋಜನೆಯಲ್ಲಿಯಾದರೂ ಸಂವಿಧಾನ ಸಾಕ್ಷರತೆಗೆ ಪ್ರಪ್ರಥಮ ಆದ್ಯತೆಯನ್ನು ನೀಡಬೇಕಾಗಿತ್ತು. ಆಗಿನ ಸಂವಿಧಾನ ಸಭೆಯ 299 ಪ್ರತಿನಿಧಿಗಳ ಅನುಮೋದನೆ ಪಡೆದ ಹಾಗೆ ಜನರ ಸಹಮತಿಯನ್ನು ಪಡೆಯಬೇಕಾಗಿತ್ತು. ಜನರನ್ನು ಅವರ ಸಂವಿಧಾನದ ಕುರಿತು ಸಾಕ್ಷರರನ್ನಾಗಿ ಮಾಡಬೇಕಾಗಿತ್ತು; ಇದು ಅಕ್ಷರದ ಸಾಕ್ಷರತೆಗಿಂತ, ಬಡತನ ನಿವಾರಣೆಗಿಂತಲೂ ಮಹತ್ವದ್ದಾಗಿತ್ತು, ತುರ್ತಾಗಿತ್ತು. ಅದನ್ನು ಮಾಡದೇ ಇದ್ದದ್ದು, ಈಗಲೂ ಅಂಥ ಯಾವುದೇ ಪ್ರಯತ್ನ, ಯೋಜನೆ ಇಲ್ಲದಿರುವುದು ಭಾರತ ಇಂದು ಎದುರಿಸುತ್ತಿರುವ ಸಾಂವಿಧಾನಿಕ ಮೌಲ್ಯಗಳ ಅವನತಿಗೆ ಮೂಲ ಕಾರಣವಾಗಿದೆ. ಆಟವನ್ನು ಆಡುತ್ತೇವೆ, ಆದರೆ ನಾವು ಆಡುವ ಆಟದ ಮೂಲ ನಿಯಮಗಳೇ ಗೊತ್ತಿಲ್ಲ.
ಹಕ್ಕುಗಳು ಮತ್ತು ಕರ್ತವ್ಯಗಳು
ಬಹುಶಃ ಹಿಂದಿನ ಯಾವುದೇ ಆಳ್ವಿಕೆಗಳಲ್ಲಿ ಇಲ್ಲದೇ ಇದ್ದ ಮಾನವ ಹಕ್ಕುಗಳನ್ನು ಭಾರತ ಸಂವಿಧಾನವು ನಮಗೆ ನೀಡಿದೆ. ಸಂವಿಧಾನದ ಭಾಗ 3ರಲ್ಲಿ, ಅನುಚ್ಛೇದ 12 ರಿಂದ 35ರಲ್ಲಿ ಆರು ಬಗೆಯ ಮೂಲಭೂತ ಹಕ್ಕುಗಳನ್ನು ನೀಡಿದೆ. ಆದರೆ, ಜನತಂತ್ರ ಯಶಸ್ವಿಯಾಗಬೇಕು ಎಂದರೆ ನಾಗರಿಕರು ಬರೀ ತಮ್ಮ ಹಕ್ಕುಗಳನ್ನು ಚಲಾಯಿಸುವುದರಲ್ಲಿ, ಅವುಗಳನ್ನು ಅನುಭವಿಸುವುದರಲ್ಲಿ ಕಾಲ ಕಳೆದರೆ ಆಗುವುದಿಲ್ಲ. ಪ್ರತಿಯೊಬ್ಬ ನಾಕರಿಕರಿಗೂ ಕೆಲವು ಸಾಂವಿಧಾನಿಕ ಕರ್ತವ್ಯಗಳೂ ಇರಬೇಕು. ಇದು ಕಾಲಾಂತರದಲ್ಲಿ ನಮಗೆ ಮನನವಾಯಿತು.
1976ರಲ್ಲಿ ಸರ್ದಾರ್ ಸ್ವರಣ್ ಸಿಂಗ್ ಸಮಿತಿಯು ನೀಡಿದ ಶಿಫಾರಸ್ಸನ್ನು ಅನುಸರಿಸಿ ಅಗಿನ ಸರಕಾರವು ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ತಂದು ಮೊದಲ ಬಾರಿಗೆ ಭಾಗ 4 ಎ-ರಲ್ಲಿ ಪ್ರತಿಯೊಬ್ಬ ಭಾರತೀಯರೂ ನಿಭಾಯಿಸಬೇಕಾದ 10 ಮೂಲಭೂತ ಕರ್ತವ್ಯಗಳನ್ನು ಪಟ್ಟಿ ಮಾಡಲಾಯಿತು. ಮುಂದೆ 2002ರಲ್ಲಿ, 86ನೇ ಸಂವಿಧಾನ ತಿದ್ದುಪಡಿಯ ಮೂಲಕ ಹನ್ನೊಂದನೆಯ, “ಪ್ರತಿಯೊಬ್ಬ ಪೋಷಕರೂ ತಮ್ಮ 6 ರಿಂದ 14ರ ಒಳಗಿನ ಮಕ್ಕಳಿಗೆ ಶಿಕ್ಷಣದ ಅವಕಾಶವನ್ನು ಒದಗಿಸುವುದು” ಎಂಬ ಮೂಲಭೂತ ಕರ್ತವ್ಯವನ್ನು ಸೇರಿಸಲಾಗಿದೆ. ನನಗೆ ಪ್ರಸ್ತುತ ಮುಖ್ಯವಾಗಿರುವುದು ಇದರಲ್ಲಿನ ಒಂದು ಮೂಲಭೂತ ಕರ್ತವ್ಯ.
ಸಂವಿಧಾನದ ಭಾಗ 4 ಎ, ಅನುಚ್ಛೇದ 51 ಎ (ಎಚ್)ರ ಪ್ರಕಾರ “ವೈಜ್ಞಾನಿಕ ಮನೋವೃತ್ತಿ, ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣಾ ಮನೋಭಾವವನ್ನು ಬೆಳೆಸಿಕೊಳ್ಳುವುದು” ನಮ್ಮೆಲ್ಲರ ಮೂಲಭೂತ ಕರ್ತವ್ಯವಾಗಿದೆ.
ನಿಜವೆಂದರೆ ’ವೈಜ್ಞಾನಿಕ ಮನೋವೃತ್ತಿ’ ಎಂಬುದರಲ್ಲಿಯೇ ’ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣಾ ಮನೋಭಾವ”ಗಳು ಒಳಗೊಂಡಿವೆ, ಆದರೂ ಅವುಗಳನ್ನು ಇನ್ನೂ ಸ್ಪಷ್ಟವಾಗಿ ಮನಗಾಣಿಸಲು ಹೀಗೆ ಬರೆಯಲಾಗಿದೆ. ಇತರ ಹಲವು ದೇಶಗಳ ಸಂವಿಧಾನಗಳಲ್ಲಿ ಮೂಲಭೂತ ಕರ್ತವ್ಯಗಳನ್ನು ನಮೂದಿಸಲಾಗಿದ್ದರೂ, ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳುವುದನ್ನು ಮೂಲಭೂತ ಕರ್ತವ್ಯವನ್ನಾಗಿ ವಿಧಿಸಿರುವುದು ನಮ್ಮ ಸಂವಿಧಾನದಲ್ಲಿ ಮಾತ್ರ ಎಂದು ಹೇಳಲಾಗುತ್ತದೆ.
ಜನ ಏಕೆ ಕಂಗಾಲಾಗಿದ್ದಾರೆ?
ನಮಗೆ ನಾವೇ ಸಂವಿಧಾನವನ್ನು ಕೊಟ್ಟುಕೊಂಡ ನಂತರದಿಂದ ಜನತಂತ್ರಾತ್ಮಕ ಗಣರಾಜ್ಯವಾದ ನಮ್ಮ ದೇಶದಲ್ಲಿ ಜನತೆಯೇ ದೇಶದ ಸಮಷ್ಟಿ ಒಡೆಯರು. ತಮ್ಮನ್ನು ತಾವೇ ಸಂವಿಧಾನದ ಅಡಿಯಲ್ಲಿ ನಿರ್ವಹಿಸಿಕೊಳ್ಳುವವರು. ಆದರೂ ನಮ್ಮ ದೇಶದ ಜನಸಾಮಾನ್ಯರು ಏಕೆ ಇಷ್ಟೊಂದು, ಅಸಹಾಯಕ, ದಯನೀಯ ಪರಿಸ್ಥಿತಿಯಲ್ಲಿದ್ದಾರೆ? ಏಕೆಂದರೆ, ಅವರಿಗೆ ತಮ್ಮ ಪಾತ್ರ, ತಮ್ಮ ಹೊಣೆಗಾರಿಕೆಯ ಅರಿವಿಲ್ಲ.
ಜನತಂತ್ರವು ಯಶಸ್ವಿಯಾಗುವುದು, ಸಬಲಗೊಳ್ಳುವುದು ಜನರ ಭಾಗವಹಿಸುವಿಕೆಯಿಂದ. ಭಾಗವಹಿಸುವುದು ಎಂದರೆ ಚುನಾವಣೆ ಬಂದಾಗ ಕೇವಲ ತಮ್ಮ ಓಟನ್ನು ಒತ್ತಿ ತೆಪ್ಪಗೆ ಕೂಡುವುದಲ್ಲ. ದೇಶದಲ್ಲಿ ಜಾರಿಯಾಗುವ ಪ್ರತಿಯೊಂದು ಯೋಜನೆ, ಅನುಷ್ಠಾನ, ಫಲಿತಾಂಶ ಎಲ್ಲದರಲ್ಲಿಯೂ ಸಕ್ರಿಯವಾಗಿ ಭಾಗವಹಿಸುವುದು, ಯಶಸ್ಸಿನ ಪ್ರಶಂಸೆಯನ್ನು ಪಡೆಯುವುದು, ಸೋಲಿನ ಹೊಣೆಯನ್ನು ಹೊರುವುದು. ಎಂದರೆ, ಜನರ ಮಾಹಿತಿ ಸಂಪನ್ನವಾದ, ವಿವೇಕಯುತ ಭಾಗವಹಿಸುವಿಕೆ ಜನತಂತ್ರದ ಯಶಸ್ಸಿನ ಗುಟ್ಟು. ಇಂಥ ಜನ ನಮ್ಮಲ್ಲಿ ಎಷ್ಟು ಪ್ರಮಾಣದಲ್ಲಿದ್ದಾರೆ? ಇದಕ್ಕಾಗಿ ಮೂಲಭೂತವಾಗಿ ಜನರಲ್ಲಿ ವೈಜ್ಞಾನಿಕ ಮನೋವೃತ್ತಿ, ಜಿಜ್ಹಾಸೆ ಮತ್ತು ಸುಧಾರಣಾ ಮನೋಭಾವ ಇರಬೇಕಾಗುತ್ತೆ, ಅದಕ್ಕೆ ಅಲ್ಲವೇ ಅದನ್ನು 1976ರ ನಂತರವಾದರೂ ನಾವು ನಮ್ಮ ಮೂಲಭೂತ ಕರ್ತವ್ಯವೆಂಬಂತೆ ಒಪ್ಪಿಕೊಂಡಿರುವುದು!
ಸಮಾನತೆ, ಸಮತೆ, ಸೌಹಾರ್ದಯುತವಾದ, ಅಂಧಶ್ರದ್ಧೆ ಮತ್ತು ಅತಾರ್ಕಿಕ ಆಚರಣೆಗಳಿಂದ ಮುಕ್ತವಾದ, ಅಲೌಕಿಕದ ಭ್ರಮೆಯಲ್ಲಿ ಬದುಕುವುದನ್ನು ಬಿಟ್ಟು ಸ್ವವಿಶ್ವಾಸದ ಮೇಲೆ ಭರವಸೆ ಇಡುವ, ಜನರ ಸಕ್ರಿಯವಾದ ಭಾಗವಹಿಸುವಿಕೆಯಿಂದಲೇ ದೇಶದ ಸುಸ್ಥಿರ ಅಭಿವೃದ್ಧಿ ಸಾಧ್ಯ. ಇದು ಸಾಧ್ಯವಾಗಬೇಕು ಎಂದರೆ ಜನತಂತ್ರದಲ್ಲಿ ಭಾಗವಹಿಸುವ ಎಲ್ಲರೂ ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ.
ಮರೀಚಿಕೆಯಾಗಿರುವ ವೈಜ್ಞಾನಿಕ ಮನೋವೃತ್ತಿ
ಶಿಕ್ಷಣ, ಆರ್ಥಿಕ ಅಭಿವೃದ್ಧಿ, ಆಧುನಿಕ ತಂತ್ರಜ್ಞಾನ ಇವುಗಳ ಬೆಳವಣಿಗೆಯಾದಾಗ ಅದರ ಪರಿಣಾಮವಾಗಿ ಸಹಜವಾಗಿಯೇ ಜನರಲ್ಲಿ ವೈಚಾರಿಕತೆ ಬೆಳೆಯುತ್ತದೆ ಎಂಬ ಒಂದು ನಂಬಿಕೆಯಿತ್ತು. ಇದೊಂದು ಮೂಢನಂಬಿಕೆ ಎಂದು ಸಾಬೀತಾಗಿದೆ. ಮೂಢನಂಬಿಕೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತಿದೆ; ಹೆಚ್ಚು ಆಳವಾಗಿ ಬೇರೂರುತ್ತಿದೆ. ವಿಪರ್ಯಾಸದ ಸಂಗತಿಯೆಂದರೆ ದಟ್ಟವಾದ, ಅಖಂಡವಾದ, ಅಚಲವಾದ ಮೌಢ್ಯವನ್ನು ಜನರಲ್ಲಿ ಬಿತ್ತಿ ಬೆಳೆಸಲು ಆಧುನಿಕ ವಿಜ್ಞಾನ ತಂತ್ರಜ್ಞಾನದ ಸಾಧನಗಳನ್ನೇ ಬಳಸಿಕೊಳ್ಳುತ್ತಿರುವುದು. ಮೌಢ್ಯವನ್ನು ಬೆಳೆಸುವುದು, ಕಣ್ಣುಮುಚ್ಚಿ ಹೇಳಿದ್ದನ್ನು ನಂಬುವ ಮನೋದಾಸ್ಯವನ್ನು ಪೋಷಿಸುವುದು ಫಲಜ್ಯೋತಿಷ, ವಾಸ್ತು, ಸಂಖ್ಯಾಶಾಸ್ತ್ರ, ಮಾಂತ್ರಿಕ ಶಕ್ತಿಯ ವಸ್ತುಗಳನ್ನು ಮಾರುವಂಥ ಕೆಲವರಿಗೆ ಲಾಭದಾಯಕ ವ್ಯಾಪಾರವಾದರೆ, ಸ್ವಾರ್ಥಿ ರಾಜಕಾರಣಿಗಳಿಗೆ ಇದು ಶೋಷಣೆಯ ಸಾಧನವಾಗಿವೆ.
ಸಾಮಾಜಿಕ ಹೊಣೆಗಾರಿಕೆ ಎನ್ನುವುದರ ಮೂಲ ಕಾಗುಣಿತವೂ ಗೊತ್ತಿರದ ಮಾಧ್ಯಮಗಳು, ಅವುಗಳನ್ನು ಬಳಸಿಕೊಳ್ಳುವ ವಂಚಕರು, ಅವರ ಮಾತಿಗೆ ಮರುಳಾಗಿ ಕಂಗಾಲಾಗಿರುವ, ಭಯಗ್ರಸ್ಥರಾಗಿರುವ ಜನ ಸಾಮಾನ್ಯರು ಹೀಗೆ ಅತಾರ್ಕಿಕವಾಗಿ ಮಾತಾಡಿದರೆ, ಆಚರಿಸಿದರೆ ಅದೊಂದು ಮಾತು. ಆದರೆ, ನಮ್ಮ ಪರವಾಗಿ, ಪ್ರತಿನಿಧಿಗಳಾಗಿ ನಮ್ಮ ದೇಶವನ್ನು ನಿರ್ವಹಿಸಿ ಎಂದು ನಾವು ಗ್ರಾಮ ಮಟ್ಟದಿಂದ ಹಿಡಿದು ಸಂಸತ್ತಿನ ಮಟ್ಟದ ವರೆಗೆ ಆಯ್ಕೆ ಮಾಡಿ ಕಳಿಸುವ ರಾಜಕಾರಣಿಗಳೂ ಯಾವುದೇ ನಾಚಿಕೆಯಿಂದಲ್ಲದೇ ಮುಜುಗರವಿಲ್ಲದೇ ಮೂಢಾಚರಣೆಯಲ್ಲಿ ತೊಡಗಿರುವುದು ತುಂಬ ವಿಷಾದದ ಸಂಗತಿ.
ಸಂವಿಧಾನದ ಅನುಚ್ಛೇದ 25-28ರಲ್ಲಿ ಭಾರತದ ನಾಗರೀಕರು ತಮ್ಮ ಆಯ್ಕೆಯ ಧರ್ಮವನ್ನು ಅನುಸರಿಸುವ, ಬೋಧಿಸುವ, ಪ್ರಚಾರ ಮಾಡುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ನೀಡುತ್ತದೆ. ದೇಶದ ಬಹುಧರ್ಮೀಯ ಮತ್ತು ಬಹುತ್ವದ ಹಿನ್ನೆಲೆಯಲ್ಲಿ ಇದನ್ನು ಇನ್ನೊಂದು ಧರ್ಮವನ್ನು ಅನುಸರಿಸುವ ನಾಗರಿಕರ ಹಕ್ಕುಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಮಾಡಬೇಕು ಎಂದು ನಿರೀಕ್ಷಿಸಲಾಗುತ್ತದೆ. ಆದರೆ, ಇದೆಲ್ಲಾ, ನಾಗರಿಕರ ವೈಯಕ್ತಿಕ ಹಕ್ಕಿನ ಪ್ರಶ್ನೆಯಾಯಿತು. ಆದರೆ ಇಡೀ ರಾಷ್ಟ್ರಕ್ಕೆ ತನ್ನದೇ ಆದ ಧರ್ಮ ಎಂಬುದಿಲ್ಲ.
ನವೆಂಬರ್ 5, 2019ರಂದು, 5ನೇ ಇಂಡಿಯಾ ಇಂಟರ್ ನ್ಯಾಷನಲ್ ಸೈನ್ಸ್ ಫೆಸ್ಟಿವಲನ್ನು ಉದ್ಘಾಟಿಸುತ್ತಾ, ಪ್ರಧಾನಿ ಮೋದಿಯವರು ಜನರಲ್ಲಿ ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸುವುದು ಎಷ್ಟೊಂದು ಮಹತ್ವದ ವಿಚಾರ ಎಂಬುದರ ಕುರಿತು ವಿದ್ವತ್ಪೂರ್ಣವಾಗಿ ಮಾತಾಡಿದರು, ಅದೇ ವರ್ಷ ಜನವರಿ 3ರಂದು ೧೦೬ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಉದ್ಘಾಟನೆಯೆ ವೇಳೆಯಲ್ಲಿ ಪುರಾಣದ ಉದಾಹರಣೆಗಳನ್ನು ಕೊಟ್ಟು ಪ್ಲ್ಯಾಸ್ಟಿಕ್ ಸರ್ಜರಿ, ಜೆನೆಟಿಕ್ ಇಂಜಿನಿಯರಿಂಗ್, ವಿಮಾನಯಾನ ಸಾವಿರಾರು ವರ್ಷಗಳ ಹಿಂದೆಯೆ ಭಾರತದಲ್ಲಿತ್ತು ಎಂದು ಹೇಳಿದರು. ಜುಲೈ 22ರಂದು ಗುಜರಾತಿನಲ್ಲಿರುವ ಕಕ್ರಪಾರ್ ಪರಮಾಣು ಶಕ್ತಿ ಕೇಂದ್ರ ಮಾಡಿದ ಪರಮ ಸಾಧನೆಯ ಆಚರಣೆಗಾಗಿ ಇದ್ದಲ್ಲಿಂದಲೇ ವಿಜ್ಞಾನಿಗಳಿಗೆ ಅಭಿನಂದನೆ ಹೇಳಿದರು, ಖುದ್ದಾಗಿ ಹೋಗಲಿಲ್ಲ; ಆದರೆ ಆಗಸ್ಟ್ 5ರಂದು ಅಯೋದ್ಯೆಯ ರಾಮ ಮಂದಿರ ಶಿಲಾನ್ಯಾಸ ಪೂಜೆಗೆ ಸಕಲ ಗೌರವಗಳೊಂದಿಗೆ ಹಾಜರಾದರು. ಇದು ಬೀಜದ ರೂಪದಲ್ಲಿ ನಮ್ಮ ದೇಶದಲ್ಲಿನ ವೈಜ್ಞಾನಿಕ ಮನೋವೃತ್ತಿಯ ಸ್ಥಿತಿಗತಿಯನ್ನು, ಎಡೆಬಿಡಂಗಿತನ, ಗೊಂದಲಗಲಿಬಿಯ ಸ್ಥಿತಿಯನ್ನು ಸೂಚಿಸುತ್ತದೆ. ಈ ಕುರಿತು ನಿಮ್ಮ ಜವಾಬ್ದಾರಿ ಏನು, ಅರಿತುಕೊಳ್ಳಿ.
ಕೃಪೆ: “ಹೊಸರು” ಮಾಸಿಕ