ಪುಣೆ: ನೀಟ್ (NEET) ಪೇಪರ್ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಪುಣೆ ಪೊಲೀಸರು ಬುಧವಾರ ಮಹಿಳೆಯೊಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿ, ಬಿಬ್ವೆವಾಡಿ ಪ್ರದೇಶದಿಂದ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. “ನಾವು ಆಕೆಯನ್ನು ವಿಚಾರಣೆ ನಡೆಸಿದ್ದೇವೆ ಮತ್ತು ಹೆಚ್ಚಿನ ತನಿಖೆಗಾಗಿ ಕೇಂದ್ರೀಯ ತನಿಖಾ ದಳಕ್ಕೆ (CBI) ಹಸ್ತಾಂತರಿಸಿದ್ದೇವೆ,” ಎಂದು ಅವರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಆದರೆ, ಮೇ 3 ರಂದು ನಡೆದ ವೈದ್ಯಕೀಯ ಪದವಿ ಪೂರ್ವ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯ ಸೋರಿಕೆಯಲ್ಲಿ ಈ ಮಹಿಳೆಯ ನಿಖರವಾದ ಪಾತ್ರವೇನು ಎಂಬ ಬಗ್ಗೆ ಮಾಹಿತಿ ನೀಡಲು ಕಮಿಷನರ್ ನಿರಾಕರಿಸಿದ್ದಾರೆ. ಪೇಪರ್ ಸೋರಿಕೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಪರೀಕ್ಷೆಯನ್ನು ರದ್ದುಗೊಳಿಸಿದೆ.
ಪರೀಕ್ಷೆಯ ರದ್ದತಿಯಿಂದಾಗಿ ದೇಶದ ಸುಮಾರು 22 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಆಕಾಂಕ್ಷಿಗಳು ಮತ್ತು ಅವರ ಕುಟುಂಬಗಳು ಹೊಸ ಪರೀಕ್ಷಾ ದಿನಾಂಕ, ಪ್ರವೇಶ ಪತ್ರ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆಯ ಬಗ್ಗೆ ಆತಂಕಕ್ಕೊಳಗಾಗಿದ್ದಾರೆ.
