ಬೆಂಗಳೂರಿನ ನಗರ್ತ ಪೇಟೆಯ ಗಲ್ಲಿಯಲ್ಲಿ ನಡೆದ ಒಂದು ಸಣ್ಣ ವ್ಯಾವಹಾರಿಕ ಗಲಾಟೆ ಈಗ ಬಿಜೆಪಿ ಪಕ್ಷದ ನಾಯಕರ ಆಗಮನದಿಂದ ರಾಜಕೀಯ ಮತ್ತು ಕೋಮು ವಿವಾದಕ್ಕೆ ಕಾರಣವಾಗಿದೆ. ಸಧ್ಯ ಈ ವಿವಾದಕ್ಕೆ ಸಂಬಂಧಿಸಿದಂತೆ ಈಗ ವಿಡಿಯೋ ಸಾಕ್ಷಿ ಸಿಕ್ಕಿದ್ದು, ಬಿಜೆಪಿ ರಾಜಕೀಯ ಉದ್ದೇಶಿತ ಗಲಭೆ ಎಂಬ ಆರೋಪಕ್ಕೆ ಸಾಕ್ಷ್ಯ ಸಿಕ್ಕಂತಾಗಿದೆ.
ನಗರ್ತಪೇಟೆಯಲ್ಲಿ ನಡೆದಿರುವ ಕೋಮು ಗಲಭೆ ವಿಚಾರವಾಗಿ ಈಗ ಬಿಜೆಪಿ ಪಕ್ಷದ ಚಿಕ್ಕಪೇಟೆ ಶಾಸಕರೇ ಆಗಿರುವ ಉದಯ್ ಗರುಡಾಚಾರ್ ಕೂಡಾ ಪ್ರತಿಕ್ರಿಯೆ ನೀಡಿದ್ದು, ಒಂದು ಸಣ್ಣ ಗಲಾಟೆಯನ್ನು ಸಂಸದ ತೇಜಸ್ವಿ ಸೂರ್ಯ ಹಾಗೂ ಶೋಭಾ ಕರಂದ್ಲಾಜೆಯಂತಹ ನಾಯಕರು ಈ ಮಟ್ಟಕ್ಕೆ ಬಿಂಬಿಸಬಾರದಿತ್ತು. ಇದು ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೇ ದೊಡ್ಡ ಪೆಟ್ಟು ಬೀಳುವ ಸಾಧ್ಯತೆ ಇದೆ ಎಂದು ಬಹಿರಂಗವಾಗಿ ಅಭಿಪ್ರಾಯ ಪಟ್ಟಿದ್ದಾರೆ.
ಈಗಾಗಲೇ ಚುನಾವಣಾ ನೀತಿ ಸಂಹಿತೆ ಇದ್ದರೂ ಕೋಮು ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ನೀತಿ ಸಂಹಿತೆಯನ್ನೂ ಉಲ್ಲಂಘನೆ ಮಾಡಿದ್ದಾರೆ ಸಂಸದ ತೇಜಸ್ವಿ ಸೂರ್ಯ. ಹೀಗಿರುವಾಗ ಸಾಮಾಜಿಕ ಸಂಘಟನೆಯೊಂದು ಚುನಾವಣಾ ಆಯೋಗದ ಮೆಟ್ಟಿಲೇರಿದೆ. ನೀತಿ ಸಂಹಿತೆ ಜಾರಿಯಲ್ಲಿರುವಾಗ ಹನುಮಾನ್ ಚಾಲಿಸ ಪಠಣಕ್ಕೆ ಕರೆ ನೀಡಿರುವುದು, ಗುಂಪು ಘರ್ಷಣೆಗೆ ಪ್ರಚೋದಿಸಿರುವುದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ.
ಇನ್ನು ಕಾಂಗ್ರೆಸ್ ಕೂಡಾ ಈ ಬಗ್ಗೆ ಟ್ವೀಟ್ ಮಾಡಿ ‘ಇದು ಬಿಜೆಪಿಯವರು ಚುನಾವಣೆಗಾಗಿ ಹಚ್ಚಿದ ಕೋಮು ಬೆಂಕಿ ಎನ್ನುವುದಕ್ಕೆ ಪುಷ್ಟಿ ನೀಡಿದ್ದಾರೆ. ಎಂಬ ಅವಿವೇಕಿ ಶಿಶುವಿಗೆ ಈ ಗಲಾಟೆಯ ವಿಷಯದಲ್ಲಿ ರಾಜಕೀಯ ಬೇಳೆ ಬೇಯಿಸಬೇಡ ಎಂದು ಸ್ವತಃ ಬಿಜೆಪಿ ಶಾಸಕರೇ ಹೇಳಿದ್ದರೂ ಕೋಮು ಸಂಘರ್ಷ ಉಂಟುಮಾಡಲು ಮುಂದಾಗಿದ್ದಾರೆ. ಇಷ್ಟು ದಿನ ಕಣ್ಮರೆಯಾಗಿದ್ದ ತೇಜಸ್ವಿ ಸೂರ್ಯನಿಗೆ ತನ್ನ ಸಾಧನೆ ಹೇಳಿ ಮತ ಕೇಳುವ ಯೋಗ್ಯತೆ ಅರ್ಹತೆ ಇಲ್ಲದಿರುವುದೇ ಈ ಎಲ್ಲಾ ನಾಟಕಗಳ ಮೂಲ ಕಾರಣ!’ ಎಂದು ಟ್ವೀಟ್ ಮಾಡಿದೆ.
ಅಸಲಿಗೆ ಗಲಭೆ ನಡೆದ ಅಂಗಡಿಯಲ್ಲಿ ಸಿಕ್ಕಿದ್ದು ಎನ್ನಲಾದ ವಿಡಿಯೋ ಕ್ಲಿಪ್ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅಂಗಡಿಯಲ್ಲಿ ಇರುವ ವ್ಯಕ್ತಿಗೆ ಅಂಗಡಿಗೆ ಬಂದ ಗಿರಾಕಿಗಳು ಯಾವುದೋ ವಸ್ತುವನ್ನು ತೋರಿಸಿ ಪ್ರಶ್ನಿಸಿರುತ್ತಾರೆ. ಆಗ ಅಂಗಡಿಯವ ಹಾಗೂ ಗಿರಾಕಿಗಳ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಈ ಸಂದರ್ಭದಲ್ಲಿ ಉದ್ರೇಕಕ್ಕೆ ಒಳಗಾದ ಗಿರಾಕಿ ಅಂಗಡಿಯವನಿಗೆ ಹೊಡೆಯಲು ಮುಂದಾಗುತ್ತಾನೆ.. ಇಷ್ಟು ಚಿತ್ರಣ ವಿಡಿಯೋದಲ್ಲಿದೆ. ಆದರೆ ಇಲ್ಲೆಲ್ಲೂ ಹನುಮಾನ್ ಚಾಲಿಸ ಪಠಣದ ಬಗ್ಗೆಯಾಗಲಿ, ಅಥವಾ ಧರ್ಮಾಧಾರಿತ ಮಾತುಗಳಾಗಲಿ ಬಂದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದೊಂದು ಸ್ಪಷ್ಟವಾಗಿ ವ್ಯವಹಾರಕ್ಕೆ ಸಂಬಂಧಿಸಿದ ಗಲಾಟೆ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುವಂತಿದೆ.
ಮಾಡಿದ ತಪ್ಪಿಗೆ ಶಿಕ್ಷೆ ಆಗಬೇಕು ಎಂಬುದು ಎಲ್ಲರ ಒತ್ತಾಯ. ಆದರೆ ಅದಕ್ಕೆ ಕೋಮು ಬಣ್ಣ ಬಳಿಯುವುದು, ಅನವಶ್ಯಕ ಗಲಭೆ ಸೃಷ್ಟಿಸುವ ಬಗ್ಗೆ ತನಿಖೆ ಚುರುಕುಗೊಳ್ಳಬೇಕಿದೆ. ಅಷ್ಟಕ್ಕೂ ಗಲಭೆಯಲ್ಲಿನ ಆರೋಪಿಗಳಲ್ಲಿ ಹಿಂದೂಗಳು ಇರುವ ಬಗ್ಗೆ ಮಾಧ್ಯಮಗಳು ಸ್ಪಷ್ಟಪಡಿಸಿವೆ.
ಆದರೆ ಚುನಾವಣೆ ಸಂದರ್ಭದಲ್ಲಿ ಇಂತಹ ಒಂದು ಸಣ್ಣ ಗಲಭೆಯನ್ನು ರಾಜ್ಯದ ಜ್ವಲಂತ ಸಮಸ್ಯೆ ಎಂಬಂತೆ ಗುಂಪು ಸೇರಿಸಿದ ಬಗ್ಗೆ ಈಗ ಎಲ್ಲೆಡೆ ಚರ್ಚೆ ಶುರುವಾಗಿದೆ. ತೇಜಸ್ವಿ ಸೂರ್ಯ ಉದ್ದೇಶಪೂರ್ವಕವಾಗಿ ಈ ಗಲಭೆಗೆ ಪ್ರಚೋದನೆ ನೀಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.