ಹೊಸದೆಹಲಿ: ಸೋಮವಾರ (ಮಾರ್ಚ್ 18) ಕೊಯಮತ್ತೂರಿನಲ್ಲಿ ನಡೆಸಲಾದ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋನಲ್ಲಿ ಶಾಲಾ ಮಕ್ಕಳು ಭಾಗವಹಿಸಿರುವ ಕುರಿತು ತಮಿಳುನಾಡಿನ ಕೊಯಮತ್ತೂರು ಜಿಲ್ಲಾ ಶಿಕ್ಷಣಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ.
ವರದಿಯ ಪ್ರಕಾರ, ಮೋದಿ ಅವರು ಮೆಟ್ಟುಪಾಳ್ಯಂ ರಸ್ತೆಯಲ್ಲಿರುವ ಗಂಗಾ ಆಸ್ಪತ್ರೆ ಮತ್ತು ಆರ್‌ಎಸ್ ಪುರಂನ ಮುಖ್ಯ ಅಂಚೆ ಕಚೇರಿ ನಡುವೆ ನಾಲ್ಕು ಕಿಲೋಮೀಟರ್ ರೋಡ್ ಶೋ ನಡೆಸಿದರು. ಸರ್ಕಾರಿ ಅನುದಾನಿತ ಶ್ರೀ ಸಾಯಿಬಾಬಾ ವಿದ್ಯಾಲಯ ಅನುದಾನಿತ ಮಾಧ್ಯಮಿಕ ಶಾಲೆಯ 14 ವರ್ಷದೊಳಗಿನ ಮಕ್ಕಳು ಪಕ್ಷದ ಚಿಹ್ನೆಗಳಿರುವ ಕೇಸರಿ ಬಣ್ಣದ ಬಟ್ಟೆ ಪಟ್ಟಿಗಳನ್ನು ಧರಿಸಿ ರೋಡ್ ಶೋ ವೇಳೆ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ವೇದಿಕೆಯಲ್ಲಿ ಪ್ರದರ್ಶನ ನೀಡುವುದು ಬೆಳಕಿಗೆ ಬಂದಿತ್ತು.
ರಾಜಕೀಯ ರ್ಯಾಲಿಗಳಲ್ಲಿ ಮಕ್ಕಳು ಭಾಗವಹಿಸುವುದು ಭಾರತದ ಚುನಾವಣಾ ಆಯೋಗದ (ಇಸಿಐ) ಸೂಚನೆಗಳಿಗೆ ವಿರುದ್ಧವಾಗಿದೆ ಎಂಬುದನ್ನು ಇಲ್ಲಿ ಗಮನಿಸಬೇಕು.
ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಘಟನೆಯ ವಿವರವಾದ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳು ಶಾಲಾ ಆಡಳಿತ ಮಂಡಳಿಗೆ ಆದೇಶಿಸಿದ್ದಾರೆ.
“ನಾವು ಸಮಸ್ಯೆಯ ಬಗ್ಗೆ ಗಮನ ಹರಿಸಿದ್ದೇವೆ ಮತ್ತು ARO ಅವರು ಸಂಬಂಧಿಸಿದ ಇಲಾಖೆಗಳಿಂದ ವರದಿಯನ್ನು ಕೇಳಿದ್ದಾರೆ” ಎಂದು ಕೊಯಮತ್ತೂರು ಜಿಲ್ಲಾಧಿಕಾರಿ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ತನಿಖೆಯ ಫಲಿತಾಂಶದ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಕಾರ್ಮಿಕ ಇಲಾಖೆಯ ಜಂಟಿ ಆಯುಕ್ತರು ಹಾಗೂ ಮುಖ್ಯ ಶಿಕ್ಷಣಾಧಿಕಾರಿಗಳಿಂದಲೂ ಪ್ರತ್ಯೇಕ ತನಿಖೆ ಆರಂಭಿಸಲಾಗಿದೆ.
ಮುಖ್ಯ ಶಿಕ್ಷಣಾಧಿಕಾರಿ ಎಂ.ಬಾಲಮುರಳಿ ‘ದಿ ಹಿಂದೂ’ ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ, ‘ನಾವು ತನಿಖೆ ಆರಂಭಿಸಿದ್ದೇವೆ. ಕಾರ್ಯಕ್ರಮದ ಮೊದಲು, ಎಲ್ಲಾ ಶಾಲೆಗಳು ಇಂತಹ ಅಭ್ಯಾಸಗಳಿಂದ ದೂರವಿರಲು ಸ್ಪಷ್ಟವಾಗಿ ಸೂಚಿಸಲಾಗಿತ್ತುʼ ಎಂದು ಹೇಳಿದ್ದಾರೆ.
ಸಹಾಯಕ ಚುನಾವಣಾಧಿಕಾರಿ (ಎಆರ್‌ಒ) ಪಿ.ಸುರೇಶ್ ಪತ್ರಿಕೆಯೊಂದಿಗೆ ಮಾತನಾಡುತ್ತಾ, ಇಂತಹ ಕ್ರಮಗಳು ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸುತ್ತದೆ ಎಂದು ಖಚಿತಪಡಿಸಿದರು. ‘ತನಿಖೆ ಪೂರ್ಣಗೊಂಡ ಬಳಿಕ ಮುಂದಿನ ಕ್ರಮಕ್ಕಾಗಿ ಚುನಾವಣಾ ಆಯೋಗಕ್ಕೆ ವರದಿ ಕಳುಹಿಸಲಾಗುವುದು’ ಎಂದರು.