Home ರಾಜಕೀಯ ಬಿಜೆಪಿಯೊಳಗಿನ ಸರ್ವಾಧಿಕಾರವನ್ನು ಕೊನೆಗೊಳಿಸುವ ಸಲುವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ – ಈಶ್ವರಪ್ಪ

ಬಿಜೆಪಿಯೊಳಗಿನ ಸರ್ವಾಧಿಕಾರವನ್ನು ಕೊನೆಗೊಳಿಸುವ ಸಲುವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ – ಈಶ್ವರಪ್ಪ

0

ಶಿವಮೊಗ್ಗ: ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ನಾನು ನಿಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ನಾನು ಈ ಚುನಾವಣೆ ಗೆದ್ದ ನಂತರ ವಿಜಯೇಂದ್ರ ತಮ್ಮ ರಾಜ್ಯಾಧ್ಯಕ್ಷರ ಹುದ್ದೆಯಿಂದ ಇಳಿಯುವುದು ಪಕ್ಕಾ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ದೃಢವಾಗಿ ನುಡಿದಿದ್ದಾರೆ.

ತಮ್ಮ ಮಗ ಕಾಂತೇಶ್‌ ಅವರಿಗೆ ಹಾವೇರಿ ಕ್ಷೇತ್ರದಿಂದ ಟಿಕೆಟ್‌ ದೊರೆಯದೆ ಸಿಟ್ಟಾಗಿರುವ ಹಿರಿಯ ಬಿಜೆಪಿ ನಾಯಕ ಈಶ್ವರಪ್ಪ ತಾನು ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ತನ್ನ ಈ ಚುನಾವಣೆಯಲ್ಲಿ ಗೆಲ್ಲಿಸಿ ಬಿ ವೈ ರಾಘವೇಂದ್ರ ಅವರಿಗೆ ಸೋಲಿನ ರುಚಿ ಉಣಿಸಬೇಕೆಂದು ಅವರು ಜನರ ಬಳಿ ಮನವಿ ಮಾಡಿದ್ದಾರೆ.

ನಾನು ಚುನಾವಣೆಯಲ್ಲಿ ನಿಲ್ಲುವುದರ ಕುರಿತು ರಾಜ್ಯಾದ್ಯಂತ ಚರ್ಚೆಯಾಗುತ್ತಿದ್ದು, ತಾನು ಗೆಲ್ಲುವುದು ಶತಃಸಿದ್ಧ ಎಂದು ಹೇಳಿರುವ ಈಶ್ವರಪ್ಪ ತನ್ನ ಗೆಲುವಿನ ನಂತರ ವಿಜಯೇಂದ್ರ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ನನ್ನ ಮಗನಿಗೆ ಜೂನ್‌ ತಿಂಗಳಿನಲ್ಲಿ ತೆರವಾಗಲಿರುವ ವಿಧಾನ ಪರಿಷತ್‌ ಸ್ಥಾನವನ್ನು ನೀಡುವುದಾಗಿ ಆಫರ್‌ ಕೊಟ್ಟಿದ್ದಾರೆ. ನನಗೂ ರಾಜ್ಯಪಾಲ ಹುದ್ದೆ ಕೊಡುವುದಾಗಿ ಪಕ್ಷದ ಹೈಕಮಾಂಡ್‌ ಹೇಳಿತ್ತು. ಆದರೆ ನನಗೆ ಯಾವುದೇ ಸ್ಥಾನಮಾನ ಮುಖ್ಯವಲ್ಲ ಪಕ್ಷವನ್ನು ಉಳಿಸುವುದಷ್ಟೇ ನನ್ನ ಗುರಿ ಎಂದು ಅವರು ಹೇಳಿದರು. ಯಡಿಯೂರಪ್ಪ ಕುಟುಂಬದಿಂದ ಪಕ್ಷವನ್ನು ಮುಕ್ತಗೊಳಿಸದೆ ಪಕ್ಷಕ್ಕೆ ಉಳಿವಿಲ್ಲವೆಂದು ಅವರು ಹೇಳಿದ್ದಾರೆ.

ಒಂದು ಕುಟುಂಬದ ಕೈಯಲ್ಲಿ ಪಕ್ಷ ಸಿಕ್ಕಿದೆ, ಸರ್ವಾಧಿಕಾರಿ ಧೋರಣೆ ಇದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಬದಲಾವಣೆ ಮಾಡುವ ಪ್ರಯತ್ನ ರಾಜ್ಯದಲ್ಲಿ ನಡೆಯುತ್ತಿದೆ. ನಾನು ಸಹ ಆ ದಿಕ್ಕಿನಲ್ಲಿ ಪ್ರಯತ್ನ ಮಾಡ್ತಿದ್ದೇನೆ. ಯಾರೇ ಬಂದು ಮನವೊಲಿಸಿದರೂ ಹಿಂದೆ ಸರಿಯಲ್ಲ. ರಾಜ್ಯದಲ್ಲಿ ಈ ಬಾರಿ ಬಿಜೆಪಿ 28 ಸ್ಥಾನ ಗೆಲ್ಲಬೇಕು. ನಾನು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಾನು ಕುಟುಂಬದ ವಿರುದ್ಧ ಸ್ಪರ್ಧೆ ಮಾಡಿ ಗೆಲ್ಲುತ್ತೇನೆ, ಗೆದ್ದ ನಂತರ ಬಿಜೆಪಿ ಸೇರುತ್ತೇನೆ ಎಂದು ಅವರು ಹೇಳಿದ್ದಾರೆ.

You cannot copy content of this page

Exit mobile version