ನೈಜೀರಿಯಾ: ನೈಜೀರಿಯಾದಲ್ಲಿ ದೋಣಿ ಮಗುಚಿ ಬಿದ್ದ ಪರಿಣಾಮ 40ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಆ ದೇಶದ ತುರ್ತು ಸಂಸ್ಥೆ ತಿಳಿಸಿದೆ.
ಭಾನುವಾರ (ಆಗಸ್ಟ್ 17) ವಾಯುವ್ಯ ನೈಜೀರಿಯಾದ ಸೊಕೊಟೊ ರಾಜ್ಯದಲ್ಲಿ ಪ್ರಸಿದ್ಧ ಮಾರುಕಟ್ಟೆಯೊಂದಕ್ಕೆ 50 ಜನರನ್ನು ಕರೆದೊಯ್ಯುತ್ತಿದ್ದ ದೋಣಿ ಮುಳುಗಿದೆ. ಈ ದೋಣಿ ದುರಂತದಲ್ಲಿ 40 ಮಂದಿ ನಾಪತ್ತೆಯಾಗಿದ್ದಾರೆ ಎಂದು ತುರ್ತು ಸಂಸ್ಥೆ ಹೇಳಿದೆ. ಈ ಘಟನೆಯಲ್ಲಿ ಹತ್ತು ಜನರನ್ನು ರಕ್ಷಿಸಲಾಗಿದೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ಜುಬೈದರ್ ಉಮರ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ ಪ್ರಕಟಣೆ ಹೊರಡಿಸಿದ್ದಾರೆ.
ನಾಪತ್ತೆಯಾದವರನ್ನು ಹುಡುಕಲು ಸ್ಥಳೀಯ ಅಧಿಕಾರಿಗಳು ಮತ್ತು ರಕ್ಷಣಾ ಪಡೆಗಳೊಂದಿಗೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ. ಮೂರು ವಾರಗಳ ಹಿಂದೆ, ಉತ್ತರ-ಮಧ್ಯ ನೈಜೀರಿಯಾದ ನೈಜರ್ ರಾಜ್ಯದಲ್ಲಿ ಸುಮಾರು 100 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ ಕನಿಷ್ಠ 13 ಜನರು ಸಾವನ್ನಪ್ಪಿದ್ದರು ಮತ್ತು ಹಲವರು ನಾಪತ್ತೆಯಾಗಿದ್ದರು.