ನೈಜೀರಿಯಾ: ಗುರುವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಪ್ರದೇಶಗಳು ಪ್ರವಾಹದಲ್ಲಿ ಮುಳುಗಿವೆ. ಇದರ ಜೊತೆಗೆ ಒಂದು ದೊಡ್ಡ ಅಣೆಕಟ್ಟು ಕುಸಿದುಬಿದ್ದ ಪರಿಣಾಮ ಪ್ರವಾಹದ ತೀವ್ರತೆ ಅನಿರೀಕ್ಷಿತವಾಗಿ ಹೆಚ್ಚಾಗಿ, ಪರಿಸ್ಥಿತಿ ಇನ್ನಷ್ಟು ಭೀಕರವಾಗಿದೆ. ಈ ನೈಸರ್ಗಿಕ ವಿಪತ್ತಿನಿಂದ ಈವರೆಗೆ 111 ಮಂದಿ ಸಾವನ್ನಪ್ಪಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ನೈಜೀರಿಯಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಸ್ಥಗಿತಗೊಂಡಿದೆ. ಪ್ರವಾಹದ ಉಗ್ರತೆಗೆ ಮನೆಗಳು, ವಾಹನಗಳು ಕೊಚ್ಚಿಕೊಂಡು ಹೋಗಿವೆ. ಹಲವರು ತಮ್ಮ ನಿವಾಸಗಳನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಅಧಿಕಾರಿಗಳ ಪ್ರಕಾರ, ಶುಕ್ರವಾರ ಸಂಜೆಯ ವೇಳೆಗೆ ಸಹಾಯಕ ತಂಡಗಳು 111 ಮೃತದೇಹಗಳನ್ನು ಹೊರತೆಗೆದಿವೆ. ಸಾವಿರಾರು ಜನರು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ. ಪ್ರಭಾವಿತ ಪ್ರದೇಶಗಳಲ್ಲಿ ಪಾರುಗಾಣಿಕಾ ಕಾರ್ಯಾಚರಣೆ ತೀವ್ರಗೊಂಡಿದೆ.
ನೈಜೀರಿಯಾಕ್ಕೆ ಇಂತಹ ಪ್ರವಾಹಗಳು ಹೊಸದೇನಲ್ಲ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಹ ಇದೇ ರೀತಿಯ ಭೀಕರ ಪ್ರವಾಹದಿಂದಾಗಿ ಅಣೆಕಟ್ಟುಗಳು ಕುಸಿದು ಸುಮಾರು 30 ಮಂದಿ ಪ್ರಾಣ ಕಳೆದುಕೊಂಡಿದ್ದರು. ಆ ಸಮಯದಲ್ಲಿ ಲಕ್ಷಾಂತರ ಮಂದಿ ಸಂತ್ರಸ್ತರಾಗಿದ್ದರು. ದೇಶದಲ್ಲಿ ಈಗಾಗಲೇ ಬೊಕೊ ಹರಾಮ್‌ನಂತಹ ಉಗ್ರಗಾಮಿ ಸಂಘಟನೆಗಳಿಂದ ಮಾನವೀಯ ಸಂಕಷ್ಟ ಉಂಟಾಗಿದ್ದು, ಈ ಇತ್ತೀಚಿನ ಪ್ರವಾಹವು ಆ ಸಂಕಷ್ಟವನ್ನು ಮತ್ತಷ್ಟು ತೀವ್ರಗೊಳಿಸಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ವಾತಾವರಣ ಬದಲಾವಣೆಯಿಂದಾಗಿ ನೈಜೀರಿಯಾ ಆಗಾಗ ಪ್ರವಾಹದಂತಹ ತೀವ್ರ ಹವಾಮಾನ ಸನ್ನಿವೇಶಗಳನ್ನು ಎದುರಿಸುತ್ತಿದೆ ಎಂದು ಪರಿಸರವಾದಿಗಳು ಹೇಳುತ್ತಾರೆ. ಕಡಿಮೆ ಅವಧಿಯಲ್ಲಿ ಅತಿಯಾದ ಮಳೆಯಾಗುವುದರಿಂದ ಭಾರೀ ನಷ್ಟ ಸಂಭವಿಸುತ್ತಿದೆ. ಪ್ರಸ್ತುತ ಮಳೆಯೂ ಇದೇ ರೀತಿಯದ್ದಾಗಿದ್ದು, ಒಮ್ಮೆಗೆ ಸುರಿದ ಭಾರೀ ಮಳೆಯಿಂದಾಗಿ ಅನಿರೀಕ್ಷಿತ ಪ್ರವಾಹ ಸಂಭವಿಸಿ, ಜೀವಹಾನಿ ಮತ್ತು ಆಸ್ತಿ ನಷ್ಟವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸರ್ಕಾರವು ತಕ್ಷಣದ ಸಹಾಯ ಕಾರ್ಯಗಳನ್ನು ಕೈಗೊಂಡಿದ್ದರೂ, ನಷ್ಟದ ತೀವ್ರತೆ ಹೆಚ್ಚಿರುವುದರಿಂದ ಸಾಮಾನ್ಯ ಸ್ಥಿತಿಗೆ ಮರಳಲು ಸಮಯ ಹಿಡಿಯುವ ಸಾಧ್ಯತೆ ಇದೆ.