Home ರಾಜ್ಯ ರಾಮನಗರ ಬಿಜೆಪಿಯೊಂದಿಗಿದ್ದರೂ ನಾವು ಸಿದ್ಧಾಂತ ಮರೆತಿಲ್ಲ! ಚನ್ನಪಟ್ಟಣದ ಮುಸ್ಲಿಂ ಮತದಾರರಿಗೆ ನಿಖಿಲ್‌ ಗಾಳ!

ಬಿಜೆಪಿಯೊಂದಿಗಿದ್ದರೂ ನಾವು ಸಿದ್ಧಾಂತ ಮರೆತಿಲ್ಲ! ಚನ್ನಪಟ್ಟಣದ ಮುಸ್ಲಿಂ ಮತದಾರರಿಗೆ ನಿಖಿಲ್‌ ಗಾಳ!

0

‘ನಾವು ಬಿಜೆಪಿ ಜೊತೆ ಕೈ ಜೋಡಿಸಿದ್ದೇವೆ ಎನ್ನುವ ಮಾತ್ರಕ್ಕೆ ನಮ್ಮ ಸಿದ್ದಾಂತಗಳನ್ನು ಮಾರಾಟ ಮಾಡಿಕೊಂಡಿದ್ದೇವೆ ಎಂದಲ್ಲ. ಅಲ್ಪಸಂಖ್ಯಾತರು ಸೇರಿ ಎಲ್ಲ ಸಮುದಾಯಗಳ ಜನರ ಏಳಿಗೆಗೂ ನಾವು ದುಡಿಯುತ್ತೇವೆ’ ಇದು ಇಂದು ಕೊಪ್ಪಳದಲ್ಲಿ  ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ ಮಾತು.

ಚನ್ನಪಟ್ಟಣ ಚುನಾವಣಾ ಕಣ ಡಿಕೆ ಬ್ರದರ್ಸ್‌ ಮತ್ತು ಜೆಡಿಎಸ್‌ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ಲೋಕಸಭಾ ಚುನಾವಣೆಯ ಸೋಲಿನ ಸಿಟ್ಟಿನಿಂದ ಕುದಿಯುತ್ತಿರುವ ಡಿಕೆ ಬ್ರದರ್ಸ್‌ ಹೇಗಾದರೂ ಮಾಡಿ ಚನ್ನಪಟ್ಟಣ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಶತಾಯ ಗತಾಯ ಈ ಕ್ಷೇತ್ರವನ್ನು ಗೆಲ್ಲಲೇಬೇಕು ಎನ್ನುವ ಹಟದಲ್ಲಿ ಸಚಿವ ಡಿಕೆ ಶಿವಕುಮಾರ್‌ ಇದ್ದಾರೆ.

ಅತ್ತ ಜೆಡಿಎಸ್‌ ಕೂಡಾ ಈ ಕ್ಷೇತ್ರವನ್ನು ತನ್ನ ಬಳಿಯಲ್ಲೇ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೆ ಅದಕ್ಕೆ ಉರುಳಾಗಿರುವುದು ಅದರದೇ ಮೈತ್ರಿ ಪಕ್ಷದ ನಾಯಕ ಸಿಪಿ ಯೋಗೇಶ್ವರ್‌. ಸಿಪಿ ಯೋಗೇಶ್ವರ್‌ ಟಿಕೆಟ್‌ ಪಡೆಯುವಲ್ಲಿ ಸಾಧ್ಯವಿರುವ ಪ್ರಯತ್ನಗಳನ್ನೆಲ್ಲ ಮಾಡುತ್ತಿದ್ದಾರೆ. ಮೊದಮೊದಲು ನಿಂತೇ ಸಿದ್ಧ ಎನ್ನುತ್ತಿದ್ದ ಯೋಗೇಶ್ವರ್‌ ಈಗೆರಡು ದಿನಗಳಿಂದ ಚೂರು ತಣ್ಣಗಾದ ಹಾಗಿದ್ದು, ಪಕ್ಷ ಟಿಕೆಟ್‌ ಕೊಟ್ಟವರ ಪರ ಕೆಲಸ ಮಾಡುವುದಾಗಿ ಹೇಳುತ್ತಿದ್ದಾರೆ.

ಈ ಕುರಿತು ನಿಖಿಲ್‌ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ‘ಸಿ.ಪಿ. ಯೋಗೇಶ್ವರ ಈಗಾಗಲೇ ವಿಧಾನಪರಿಷತ್‌ ಸದಸ್ಯರಿದ್ದಾರೆ. ಚನ್ನಪಟ್ಟಣದಲ್ಲಿ ಪ್ರಬಲವಾಗಿ ಬೆಳೆದ ಎರಡನೇ ಹಂತದ ನಾಯಕರ ದೊಡ್ಡಪಡೆಯೇ ಇದೆ. ಬಿಜೆಪಿ ಹಾಗೂ ಜೆಡಿಎಸ್‌ ಸಂಬಂಧ ಶಾಶ್ವತವಾಗಿ ಇರಬೇಕು ಎನ್ನುವ ಕಾರಣಕ್ಕೆ ದೇವೇಗೌಡರ ಮನಪೂರ್ತಿಯಾಗಿ ಮೈತ್ರಿಗೆ ಸಹಿ ಹಾಕಿದ್ದಾರೆ. ಎರಡೂ ಪಕ್ಷಗಳ ನಾಯಕರ ಸಮ್ಮತಿಯೊಂದಿಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುವುದು’ ಎಂದು ಹೇಳಿದ್ದಾರೆ.

ಇದೆಲ್ಲದರ ನಡುವೆ ಇಂದು ನಿಖಿಲ್‌ ಕುಮಾರಸ್ವಾಮಿ ಆಡಿರುವ ಸಿದ್ಧಾಂತದ ಮಾತು ಅಲ್ಲಿ ನಿರ್ಣಾಯಕವಾಗಿರುವ ಮುಸ್ಲಿಂ ಮತಗಳ ಕುರಿತು ಯೋಚಿಸಿ ಆಡಿದಂತಿದೆ. ಚನ್ನಪಟ್ಟಣ ವಿಧಾನಸಭಾ ಕೇತ್ರದಲ್ಲಿ ಮುಸ್ಲಿಂ ಮತದಾರರು ಸರಿಸುಮಾರು 45,609 ಇದ್ದು, ಇದು ಮತದಾರರ ಪಟ್ಟಿ ವಿಶ್ಲೇಷಣೆಯ ಪ್ರಕಾರ ಒಟ್ಟು ಮತದಾರರ ಸಂಖ್ಯೆಯ ಸುಮಾರು 20.9%.

ಅತ್ತ ಡಿಕೆ ಶಿವಕುಮಾರ್‌ ಮತ್ತೆ ಮತ್ತೆ ಚನ್ನಪಟ್ಟಣದತ್ತ ಓಡಾಡುತ್ತಿರುವಾಗ, ನಿಖಿಲ್‌ ಹೇಳಿಕೆಗೆ ಪ್ರಾಮುಖ್ಯತೆ ಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಜನರು ಗೌಡರ ಅಳಿಯನ ಕೈ ಹಿಡಿದಿರುವುದರಿಂದ, ಡಿಕೆ ಶಿವಕುಮಾರ್‌ ಕಡೆಯ ಅಭ್ಯರ್ಥಿಗೆ ಈ ಬಾರಿ ಅನುಕಂಪದ ಮತಗಳು ಕಳೆದ ಚುನಾವಣೆಗೆ ಪರಿಹಾರ ರೂಪದಲ್ಲಿ ಬರುವ ಸಾಧ್ಯತೆಗಳೂ ಇವೆ.

ಇದೆಲ್ಲದರ ನಡುವೆ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಮುಸ್ಲಿಂ ಮತಗಳು ಈ ಹಿಂದೆ ದೊಡ್ಡ ಸಂ‍ಖ್ಯೆಯಲ್ಲಿ ಜೆಡಿಎಸ್‌ ಪಾಲಾಗುತ್ತಿದ್ದವು ಆದರೆ ಕಳೆದ ಬಾರಿ ಕುಮಾರ ಸ್ವಾಮಿಯವರ ಮಗನಾದ ನಿಖಿಲ್‌ ರಾಮನಗರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್ ಹುಸೇನ್‌ ಎಚ್‌.ಎ ಎದುರು ಸೋತಿದ್ದರು. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮತದಾರರ ವಿರುದ್ಧ ಕುಮಾರಸ್ವಾಮಿ ಬೇಸರದಿಂದ ಮಾತನಾಡಿದ್ದರು.

ಇದೀಗ ನಿಖಿಲ್‌ ಕುಮಾರಸ್ವಾಮಿ ಡ್ಯಾಮೇಜ್‌ ಕಂಟ್ರೋಲ್‌ ಮಾಡುತ್ತಿದ್ದು ಇದು ಅವರಿಗೆ ಪ್ರಯೋಜನ ತರಲಿದೆಯೇ ಎನ್ನುವುದನ್ನು ಮುಂದಿನ ಚುನಾವಣೆಯೇ ತಿಳಿಸಬೇಕಿದೆ.

You cannot copy content of this page

Exit mobile version