ಚನ್ನಪಟ್ಟಣ: ಕಳೆದ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಮಂಡ್ಯ ಸಂಸದರಾಗಿ ಆಯ್ಕೆಯಾದ ನಂತರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಖಾಲಿ ಉಳಿದಿದೆ. ಸದ್ಯದಲ್ಲೇ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಆದರೆ ಈ ಚುನಾವಣೆಯಲ್ಲಿ ತಮ್ಮ ಮಗ ನಿಖಿಲ್ ಸ್ಪರ್ಧಿಸುವುದಿಲ್ಲ ಎಂದು ಸಚಿವ ಕುಮರಾಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಚನ್ನಪಟ್ಟಣದಲ್ಲಿ ನಡೆದ ಬಮೂಲ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ನಿಖಿಲ್ ಈಗಾಗಲೇ ಎರಡು ಚುನಾವಣೆಯಲ್ಲಿ ಸೋತು ಸಾಕಷ್ಟು ನೋವು ಅನುಭವಿಸಿದ್ದಾನೆ. ಆ ನೋವು ನನಗೆ ಮಾತ್ರ ಗೊತ್ತು. ಹಾಗಾಗಿ ಅವನು ಮತ್ತೆ ಸ್ಪರ್ಧಿಸುವುದಿಲ್ಲ. ಚನ್ನಪಟ್ಟಣದಿಂದ ಯೋಗೇಶ್ವರ್ ಅಥವಾ ಇನ್ಯಾರಾದರೂ ಎನ್‌ಡಿಎ ಅಭ್ಯರ್ಥಿ ಸ್ಪರ್ಧಿಸಬಹುದು. ಯಾರೇ ಸ್ಪರ್ಧಿಸಿದರೂ ನಾವು ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಅವರು ಹೇಳಿದರು.
ಬಳಿಕ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ʼಚನ್ನಪಟ್ಟಣ ನನ್ನ ಜೀವ’ ಎಂದು ಹೊಸ ನಾಟಕವಾಡಲು ಬಂದಿರುವ ಮಹಾನುಭಾವರೊಬ್ಬರು ಇಷ್ಟು ದಿನ ಎಲ್ಲಿ ಹೋಗಿದ್ದರು? ಜನರ ಕಷ್ಟಗಳ ಬಗ್ಗೆ ಏನಾದರು ಕೇಳಿದ್ದರೇ? ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದಿದ್ದು, ಇವರೂ ಉಪಮುಖ್ಯಮಂತ್ರಿಯಾಗಿದ್ರಲ್ಲಾ ಇಲ್ಲಿಯವರೆಗೂ ಚನ್ನಪಟ್ಟಣ ಜ್ಞಾಪಕಕ್ಕೆ ಬರಲಿಲ್ಲವೇ? ಹೊಸದಾಗಿ ಜನಸಂಪರ್ಕ ಸಭೆ ಮಾಡುತ್ತಿದ್ದೀರಲ್ಲ ನಿಮ್ಮ ಸಹೋದರ ಮಾಡಿದ ಜನಸಂಪರ್ಕ ಸಭೆಗಳಿಂದ ಏನಾದರೂ ಪ್ರಯೋಜನವಾಯ್ತ ಎಂದು ಪ್ರಶ್ನಿಸಿದರು.
ಮುಸ್ಲಿಮ್ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವಂತೆ ಒತ್ತಡ ತರುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು “ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಮುಸ್ಲಿಂ ಮತದಾರರಿಗಾಗಿ ನಾನು ಏನೆಲ್ಲಾ ಮಾಡಿದ್ದೇನೆಂದು ನೆನಪಿಸಿಕೊಳ್ಳಲಿ. ಇಷ್ಟೆಲ್ಲಾ ಮಾಡಿದರೂ ಕನಿಷ್ಟ ಪಕ್ಷಕ್ಕೆ ತಕ್ಕ ಪ್ರತಿಕ್ರಿಯೆಯಾದರೂ ಬೇಡವೇ?” ಎಂದು ಪ್ರಶ್ನಿಸುವ ಮೂಲಕ ತಮ್ಮ ಮಗನ ಸೋಲಿಗೆ ಕಾರಣರಾದ ಮುಸ್ಲಿಂ ಮುಖಂಡರ ವಿರುದ್ಧ ಕಿಡಿಕಾರಿದರು.