ದೆಹಲಿ: ನೇಮಕಾತಿ ಪತ್ರ ವಿತರಿಸುವ ಸಂದರ್ಭದಲ್ಲಿ ಮಹಿಳಾ ವೈದ್ಯರೊಬ್ಬರ ಹಿಜಾಬ್ (ಮೋರೆ ಮುಸುಕು) ತೆಗೆಸುವ ಮೂಲಕ ವಿವಾದಕ್ಕೀಡಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕ್ರಮವನ್ನು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ‘ಆಮ್ನೆಸ್ಟಿ ಇಂಟರ್ನ್ಯಾಷನಲ್’ ಸೇರಿದಂತೆ ಹಲವು ಪಶ್ಚಿಮ ಏಷ್ಯಾ ದೇಶಗಳು ತೀವ್ರವಾಗಿ ಖಂಡಿಸಿವೆ.
ಈ ಘಟನೆಯನ್ನು ಮಹಿಳೆಯರ ಗೌರವ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಅಸ್ತಿತ್ವದ ಮೇಲಿನ ದಾಳಿ ಎಂದು ಆಮ್ನೆಸ್ಟಿ ಬಣ್ಣಿಸಿದೆ. ಮಹಿಳೆಯೊಬ್ಬರ ಧಾರ್ಮಿಕ ಮತ್ತು ವೈಯಕ್ತಿಕ ಆಯ್ಕೆಯನ್ನು ಸಾರ್ವಜನಿಕವಾಗಿ ಪ್ರಶ್ನಿಸಿರುವುದು ಸರಿಯಲ್ಲ ಎಂದು ಹಲವು ಮುಸ್ಲಿಂ ರಾಷ್ಟ್ರಗಳು ಆಕ್ಷೇಪ ವ್ಯಕ್ತಪಡಿಸಿವೆ.
ವಿಶ್ವಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿದ್ದರೂ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮಾತ್ರ ನಿತೀಶ್ ಕುಮಾರ್ ಅವರ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ಗುರುವಾರ ಪ್ರತಿಕ್ರಿಯಿಸಿದ ಅವರು, “ನೇಮಕಾತಿ ಪತ್ರ ಸ್ವೀಕರಿಸಲು ಬಂದ ವ್ಯಕ್ತಿ ತನ್ನ ಮುಖವನ್ನೇ ತೋರಿಸದಿದ್ದರೆ ಹೇಗೆ? ನಾವೇನಾದರೂ ಇಸ್ಲಾಮಿಕ್ ದೇಶದಲ್ಲಿದ್ದೇವೆಯೇ?” ಎಂದು ಪ್ರಶ್ನಿಸಿದ್ದಾರೆ.
“ಜನರು ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ, ಆದರೆ ಇದು ಭಾರತ. ಇಲ್ಲಿನ ಕಾನೂನುಗಳ ಪ್ರಕಾರವೇ ಎಲ್ಲರೂ ನಡೆಯಬೇಕು. ನಿತೀಶ್ ಕುಮಾರ್ ಅವರು ಸರಿಯಾದ ಕೆಲಸವನ್ನೇ ಮಾಡಿದ್ದಾರೆ” ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಹಿಜಾಬ್ ತೆಗೆಸಿದ್ದರಿಂದ ಮನನೊಂದ ಮಹಿಳಾ ವೈದ್ಯೆ ಸರ್ಕಾರಿ ಉದ್ಯೋಗವನ್ನೇ ತಿರಸ್ಕರಿಸಿದ್ದಾರೆ ಎಂಬ ವರದಿಗಳ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಚಿವರು ಘಾಟಾಗಿ ಉತ್ತರಿಸಿದ್ದಾರೆ. “ಆಕೆ ಕೆಲಸವನ್ನು ತಿರಸ್ಕರಿಸುತ್ತಾಳೋ ಅಥವಾ ಗಂಗೆಗೆ ಹಾರುತ್ತಾಳೋ ಅದು ಆಕೆಯ ಇಚ್ಛೆ” ಎಂದು ವಿವಾದಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
