Home ಅಂಕಣ ಸಂಸತ್ತಿನ ಪೂರ್ವಸೂರಿಗಳು- 17 : ಉತ್ಸಾಹಿ ಸಂಸದೀಯ ಪಟು ಗೋಡೆ ಮುರಾಹರಿ

ಸಂಸತ್ತಿನ ಪೂರ್ವಸೂರಿಗಳು- 17 : ಉತ್ಸಾಹಿ ಸಂಸದೀಯ ಪಟು ಗೋಡೆ ಮುರಾಹರಿ

0

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಹದಿನೇಳನೆಯ ಲೇಖನ

ರಾಜ್ಯಸಭೆ ಮತ್ತು ಲೋಕಸಭೆಗಳೆರಡರಲ್ಲೂ ಉಪಸಭಾಪತಿಯಾಗಿದ್ದ ಮುರಾಹರಿ ರಾಜ್ಯಸಭೆಯಿಂದ ಅಮಾನತುಗೊಂಡ ಮತ್ತು ದೈಹಿಕವಾಗಿ ಹೊರಹಾಕಲ್ಪಟ್ಟ ಮೊದಲ ಸಂಸದರೂ ಆಗಿದ್ದರು.

ಗೋಡೆ ಮುರಾಹರಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು. ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದವರು. ಸಮಾಜವಾದಿ ನಾಯಕರಾಗಿದ್ದ ಅವರು ಉತ್ತಮ ಸಂಸರೂ ಆಗಿದ್ದರು. ರಾಜ್ಯಸಭೆ ಮತ್ತು ಲೋಕಸಭೆಗಳೆರಡರಲ್ಲೂ ಉಪಸಭಾಪತಿಯಾಗಿ ಸೇವೆ ಸಲ್ಲಿಸಿದ್ದರು. ರಾಜ್ಯಸಭೆಯಿಂದ ಅಮಾನತುಗೊಂಡ ಮತ್ತು ಸದನದ ಮಾರ್ಷಲ್‌ಗಳಿಂದ ದೈಹಿಕವಾಗಿ ಹೊರಹಾಕಲ್ಪಟ್ಟ ಮೊದಲ ಸಂಸದ ಒಂಬ ಖ್ಯಾತಿಯನ್ನೂ ಅವರು ಪಡೆದಿದ್ದರು.

ಗೋಡೆ ಮುರಾಹರಿ 1926 ಮೇ 20 ರಂದು ಬಿಹಾರದ (ಈಗಿನ ಜಾರ್ಖಂಡ್) ಜಮ್ಶೆಡ್‌ಪುರದಲ್ಲಿ ಜಿ. ಗಂಗರಾಜು ಅವರ ಮಗನಾಗಿ ಜನಿಸುತ್ತಾರೆ. ಆಂಧ್ರಪ್ರದೇಶದ ಹಿಂದುಳಿದ ಪೆರಿಕೆ (ಪುರಗಿರಿ ಕ್ಷತ್ರಿಯ) ಎಂಬ ಜಾತಿಗೆ ಸೇರಿದವರು. ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಮದ್ರಾಸ್‌ನ ಪಚ್ಚಿಯಪ್ಪ ಕಾಲೇಜಿನಲ್ಲಿ ಶಿಕ್ಷಣ ಪಡೆದುಕೊಂಡಿದ್ದರು.

ಮುರಾಹರಿ 1941-47 ರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. 1948 ರಲ್ಲಿ ಕಾಂಗ್ರೆಸ್‌ನಿಂದ ಹೊರ ಬರುವವರೆಗೂ ಅದರ ಸಮಾಜವಾದಿ ಗುಂಪಿನ ಸದಸ್ಯರಾಗಿದ್ದರು. 1943 ರಲ್ಲಿ “ಕ್ವಿಟ್ ಇಂಡಿಯಾ” ಚಳುವಳಿಯಲ್ಲಿ ಭಾಗವಹಿಸಿದ ಕಾರಣಕ್ಕೆ ಅವರು ಜೈಲು ಸೇರಿದ್ದರು. 1946 ರಲ್ಲಿ ಜವಾಹರಲಾಲ್‌ ನೆಹರೂ ಅವರ ಮಧ್ಯಂತರ ಸರಕಾರ ಸ್ಥಾಪನೆಯಾಗುವ ತನಕ ಸುಮಾರು ಎರಡು ವರ್ಷಗಳ ಕಾಲ ಬನಾರಸ್‌ ಜಿಲ್ಲೆಯಿಂದ ಗಡೀಪಾರು ಶಿಕ್ಷೆಗೆ ಗುರಿಯಾಗಿದ್ದರು. ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಸಮಾಜವಾದಿ ಪಕ್ಷದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮೂರು ಬಾರಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು.

ಸಮಾಜವಾದಿಯಾಗಿದ್ದ ಮುರಾಹರಿ ಲೋಹಿಯಾರ ನಿಕಟವರ್ತಿಯಾಗಿದ್ದರು. 1957-58 ರ ಅವಧಿಯಲ್ಲಿ ಅಖಿಲ ಭಾರತ ಸಮಾಜವಾದಿ ಯುವಕ್‌ ಸಭಾದ ಕಾರ್ಯದರ್ಶಿಯಾಗಿ, 1958-50 ರಲ್ಲಿ ಅಖಿಲ ಭಾರತ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ, 1961-63 ರ ಅವಧಿಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ಮತ್ತು ಕೇಂದ್ರ ಸಂಸದೀಯ ಮಂಡಳಿಯ ಕಾರ್ಯದರ್ಶಿಯೂ ಆಗಿದ್ದರು.

ಉತ್ತರ ಪ್ರದೇಶದ ಮುರಾಹರಿಯವರು, 1962 ರಲ್ಲಿ ಮೊದಲ ಬಾರಿಗೆ ಸಮಾಜವಾದಿ ಪಕ್ಷದಿಂದ ನಾಮನಿರ್ದೇಶಿತರಾಗಿ ರಾಜ್ಯಸಭೆಗೆ ಆಯ್ಕೆಯಾಗುತ್ತಾರೆ. 1968 ರಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಪುನಹ ಆಯ್ಕೆಯಾಗುತ್ತಾರೆ. ನಂತರ ಕಾಂಗ್ರೆಸ್‌ ಪಕ್ಷ ಸೇರುವ ಅವರು, 1968 ರಿಂದ 1977 ರವರೆಗೆ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಸಂಸದರಾಗಿ ಆಯ್ಕೆಯಾಗಿದ್ದರು. 1972 ರಿಂದ 1977 ರವರೆಗೆ ರಾಜ್ಯಸಭೆಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಅವರು 1966 ರಿಂದ 1968 ರವರೆಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸದಸ್ಯರಾಗಿದ್ದರು. 1968 ರಿಂದ 1970 ರವರೆಗೆ ಸಾರ್ವಜನಿಕ ಉದ್ಯಮಗಳ ಸಮಿತಿಯ ಸದಸ್ಯರಾಗಿದ್ದರು. 1950 ರಿಂದ 1957 ರವರೆಗೆ ಅವರು ಸಾಮಾಜಿಕ ಸಂಸ್ಕೃತಿ ಸಂಸ್ಥೆ ಮತ್ತು ಜನ ಮಂಚ್ ಮದ್ರಾಸ್‌ನ ಸದಸ್ಯರಾಗಿದ್ದರು. ಕಾನ್ಸ್ಟಿಟ್ಯೂಷನ್‌ ಕ್ಲಬ್‌ ಆಫ್ ಇಂಡಿಯಾದ ಉಪಾಧ್ಯಕ್ಷರಾಗಿದ್ದರು. 1970 ರಿಂದ 1971 ರವರೆಗೆ ರಾಷ್ಟ್ರೀಯ ಹಡಗು ಮಂಡಳಿಯ ಸದಸ್ಯರಾಗಿದ್ದರು. 1954 ರಲ್ಲಿ ಕೋಪನ್ ಹೇಗನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಸಮಾಜವಾದಿ ಯುವ ಒಕ್ಕೂಟದ ಕಾಂಗ್ರೆಸ್‌ಗೆ ಮತ್ತು ಬರ್ಲಿನ್‌ನಲ್ಲಿ ನಡೆದ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಜರ್ಮನಿ ಪಕ್ಷದ ಕಾಂಗ್ರೆಸ್‌ಗೆ ಅವರು ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದರು.

ಮುರಾಹರಿ ಅವರು ವಿರೋಧ ಪಕ್ಷದಲ್ಲಿದ್ದ ಕಾಲದಲ್ಲಿ ಅವರು ತನ್ನ ಅಶಿಸ್ತಿನ ಕಾರಣದಿಂದಲೇ ಹೆಸರುವಾಸಿಯಾಗಿದ್ದರು. ಆ ಕಾರಣಕ್ಕಾಗಿಯೇ ಅವರನ್ನು 1962 ಸೆಪ್ಟಂಬರ್‌ 3 ರಂದು ಉಳಿದ ಅಧಿವೇಶನಗಳಿಂದ ಅಮಾನತ್ತು ಮಾಡಲಾಗುತ್ತದೆ. ಆದರೂ ಸದನದಿಂದ ಹೊರ ನಡೆಯಲು ನಿರಾಕರಿಸುವ ಅವರನ್ನು ಮಾರ್ಷಲ್‌ಗಳು ಎತ್ತಿಕೊಂಡು ಹೋಗಿ ಹೊರ ಹಾಕುತ್ತಾರೆ.

1966 ಜುಲೈ 25 ರಂದು ಪುನಃ ಅಶಿಸ್ತಿನ ಕಾರಣಕ್ಕಾಗಿ ಮುರಾಹರಿ ಅಮಾನತ್ತುಗೊಳ್ಳುತ್ತಾರೆ. ಈ ಸಲ ತನ್ನ ಸಹೋದ್ಯೋಗಿ ರಾಜ್‌ ನರೇನ್‌ ಅವರೊಂದಿಗೆ ಒಂದು ವಾರದ ಅಮಾನತ್ತಿಗೆ ಗುರಿಯಾಗಿದ್ದರು. ಸದನದ ನಾಯಕರಾಗಿದ್ದ ಎಂ.ಸಿ. ಛಾಗ್ಲಾ ಮಂಡಿಸಿದ್ದ ಎರಡು ಪ್ರತ್ಯೇಕ ನಿರ್ಣಯಗಳನ್ನು ಅಂಗೀಕರಿಸಿ ಈ ಅಮಾನತ್ತು ವಿಧಿಸಲಾಗಿತ್ತು. ಇಬ್ಬರೂ ಕೂಡ ಸದನದಿಂದ ಹೊರ ನಡೆಯಲು ತಯಾರಾಗದ ಕಾರಣ, ಅವರಿಬ್ಬರನ್ನೂ ಮಾರ್ಷಲ್‌ಗಳು ಎತ್ತಿಕೊಂಡು ಹೋಗಿ ಹೊರ ಹಾಕುತ್ತಾರೆ. ಮರುದಿನ ರಾಜ್ಯಸಭೆಯ ಅಧ್ಯಕ್ಷರು ಈ ಘಟನೆಯ ಕುರಿತು ತಮ್ಮ ಕಳವಳ ವ್ಯಕ್ತಪಡಿಸುತ್ತಾರೆ. ಇತರ ಪಕ್ಷಗಳ ನಾಯಕರು ಕೂಡ ವಿಷಾದ ವ್ಯಕ್ತಪಡಿಸುತ್ತಾರೆ.

1977 ರಲ್ಲಿ ರಾಜ್ಯಸಭೆಗೆ ರಾಜೀನಾಮೆ ನೀಡುವ ಮುರಾಹರಿ, ವಿಜಯವಾಡದಿಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆಗೆ ಚುನಾಯಿತರಾಗುತ್ತಾರೆ. ಪ್ರಮುಖ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್‌ನ ಸದಸ್ಯರಾಗಿದ್ದ ಅವರು 1977 ಏಪ್ರಿಲ್‌ 1 ರಂದು ಲೋಕಸಭೆಯ ಉಪಸಭಾಪತಿಯಾಗಿ ಆಯ್ಕೆಯಾಗುತ್ತಾರೆ.

ಆ ಅವಿರೋಧ ಆಯ್ಕೆಯ ಕುರಿತು ಅಂದಿನ ಸ್ಪೀಕರ್‌ ನೀಲಂ ಸಂಜೀವ ರೆಡ್ಡಿ ಅವರು ಹೀಗೆ ಹೇಳಿದ್ದರು:
“ಈ ಸದನದ ಉಪಸಭಾಪತಿಯಾಗಿ ಆಯ್ಕೆಯಾಗಿರುವ ಶ್ರೀ ಗೋಡೆ ಮುರಾಹರಿ ಅವರನ್ನು ಸನ್ಮಾನಿಸಲು ಗೌರವಾನ್ವಿತ ಸದಸ್ಯರುಗಳ ಜೊತೆಗೆ ಭಾಗಿಯಾಗಲು ನನಗೆ ಸಂತೋಷವಾಗುತ್ತಿದೆ. ಅವರಿಗೆ ನನ್ನ ಅಭಿನಂದನೆಗಳು. ಶ್ರೀಯುತ ಮುರಾಹರಿಯವರು ಮೇಲ್ಮನೆಯ ಸಮೃದ್ಧ ಅನುಭವಗಳೊಂದಿಗೆ ಈ ಸದನಕ್ಕೆ ಬಂದಿದ್ದಾರೆ. ಸಭಾಪತಿ ಸ್ಥಾನದ ಜವಾಬ್ದಾರಿಯನ್ನು ಹಂಚಿಕೊಳ್ಳಲು ಶ್ರೀ ಮುರಾಹರಿ ಅವರಂತಹ ಅನುಭವಿ ಸಹೋದ್ಯೋಗಿ ಲಭಿಸಿರುವುದು ನನಗೆ ವೈಯಕ್ತಿಕವಾಗಿಯೂ ಸಂತೋಷದ ಸಂಗತಿ. ಸಂಸದೀಯ ಪ್ರಜಾಪ್ರಭುತ್ವದಲ್ಲಿ, ಸಭಾಧ್ಯಕ್ಷ ಸ್ಥಾನದಲ್ಲಿರುವ ವ್ಯಕ್ತಿಯು ಸದನದ ಎಲ್ಲ ವಿಭಾಗಗಳ ನಡುವೆ, ತನ್ನ ಪಕ್ಷದ ಗುರುತನ್ನೂ ಕೂಡ ಪರಿಗಣಿಸದೆ, ವಿಶ್ವಾಸ ಮೂಡಿಸಲು ಮತ್ತು ತನ್ನ ಕರ್ತವ್ಯ ನಿರ್ವಹಣೆಯಲ್ಲಿ ನಿಷ್ಪಕ್ಷಪಾತ ನಿಲುವು ಹಾಗೂ ಸಮಗ್ರತೆಯನ್ನು ಕಾಯ್ದುಕೊಳ್ಳಬೇಕೆಂದು ಸಹಜವಾಗಿಯೇ ನಿರೀಕ್ಷಿಸಲಾಗುತ್ತದೆ. ಸದನದ ವ್ಯವಹಾರಗಳನ್ನು ಕ್ರಮಬದ್ಧವಾಗಿ ನಿರ್ವಹಿಸಲು ಮತ್ತು ಅದನ್ನು ಸಮಯಮಿತಿಯಲ್ಲಿ ಪೂರ್ಣಗೊಳಿಸಲು, ಸದನದ ಎಲ್ಲ ವಿಭಾಗಗಳು ಅಭಿಪ್ರಾಯಗಳನ್ನು ಮಂಡಿಸಲು ಸಾಕಷ್ಟು ಸಮಯಾವಕಾಶ ನೀಡಲಾಗಿದೆ ಮತ್ತು ಆ ವಿಷಯದಲ್ಲಿ ಮತ್ತೆ ತಕರಾರು ತೆಗೆಯಲು ಯಾವುದೇ ಕಾನೂನಾತ್ಮಕ ಅವಕಾಶದ ಅಗತ್ಯವಿಲ್ಲವೆಂದು ನಾವು ಖಚಿತಪಡಿಸಬೇಕಾಗಿದೆ. ಮತ್ತೊಮ್ಮೆ ನಾನು ಶ್ರೀ ಮುರಾಹರಿ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತಾ ಅವರಿಗೆ ಶುಭ ಹಾರೈಸುತ್ತೇನೆ.”

ಮುರಾಹರಿ ತನ್ನ ಧನ್ಯವಾದ ಸಮರ್ಪಣೆಯಲ್ಲಿ ಹೀಗೆ ಹೇಳಿದ್ದರು:
“ಮಾನ್ಯ ಸಭಾಪತಿಗಳೇ, ನಿಮ್ಮ ಜೊತೆಗೆ ಮಾತನಾಡಿದ ಇತರ ಎಲ್ಲ ಸಹೋದ್ಯೋಗಿಗಳಿಗೂ ನಾನು ಕೃತಜ್ಞನಾಗಿದ್ದೇನೆ. ಈ ಸದನದ ಉಪಸಭಾಪತಿಯಾಗಿ ನಾನು ಅತ್ಯಂತ ನಿಷ್ಪಕ್ಷಪಾತ ನಿಲುವನ್ನು ಹೊಂದಲೇಬೇಕಾಗಿದೆ. ಅದನ್ನು ನಾನು ಇನ್ನೊಂದು ಸದನದಲ್ಲಿ ಸಾಧಿಸಿ ತೋರಿಸಿದ್ದೇನೆ ಕೂಡ. ನಾನು ಈ ಸದನದಲ್ಲಿರುವ ಎಲ್ಲ ವಿಭಾಗಗಳಿಗೂ ಸೇರಿದವನಾಗಿರುತ್ತೇನೆ; ಅವರು ಈ ಕಡೆಯಿರಲಿ ಅಥವಾ ಆ ಕಡೆಯಿರಲಿ. ನಾನು ಯಾವುದೇ ಒಂದು ವಿಭಾಗಕ್ಕೆ ಸೇರಿದವನಾಗಿರುವುದಿಲ್ಲ. ತಮ್ಮ ಬಗ್ಗೆ ಹೇಳುವುದಾದರೆ, ನಾನು ಹಲವು ಸಂಸದೀಯ ನಿಯೋಗಗಳಲ್ಲಿ ಮತ್ತು ಇತರ ರೀತಿಯಲ್ಲಿ ತಮ್ಮೊಂದಿಗೆ ಒಡನಾಟವನ್ನು ಹೊಂದಿದ್ದೆ. ಆ ಅನುಭವಗಳೆಲ್ಲವೂ ಆಹ್ಲಾದಕರವಾಗಿದ್ದವು. ಉಪಸಭಾಪತಿಯಾಗಿ ನನ್ನ ಕರ್ತವ್ಯ ನಿರ್ವಹಣೆಯಲ್ಲಿ ನೀವು ಒಬ್ಬ ಹಿರಿಯಣ್ಣನ ಸ್ಥಾನದಲ್ಲಿ ನಿಂತು ನನಗೆ ಮಾರ್ಗದರ್ಶನ ನೀಡುತ್ತೀರಿ ಮತ್ತು ನನಗೆ ದೊರಕಬಹುದಾದ ಪ್ರೀತಿಯನ್ನು ದಯಪಾಲಿಸುತ್ತೀರಿ ಎಂದು ನಾನು ಭಾವುಸುತ್ತೇನೆ; ಅದರಲ್ಲೂ ವಿಶೇಷವಾಗಿ ತಾವು ಈ ಸದನದ ಸಭಾಪತಿಗಳಾಗಿರುವಾಗಲೇ ನಾವಿಬ್ಬರು ಹೊಂದಿದ್ದ ಸಂಬಂಧದ ಹಿನ್ನೆಲೆಯಲ್ಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೇ ಒಂದು ದೊಡ್ಡ ಪ್ರಯೋಗದ ಮೂಲಕ (ತುರ್ತು ಪರಿಸ್ಥಿತಿ) ನಾವೀಗ ಹಾದು ಬಂದಿದ್ದೇವೆ. ಜೊತೆಗೆ ಸಾರ್ವತ್ರಿಕ ಚುನಾವಣೆಗಳನ್ನು ಸ್ವತಂತ್ರವೂ ನ್ಯಾಯಯುತವೂ ಆಗಿ ನಡೆಸುವ ಒಂದು ಬೃಹತ್‌ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿ ಹೊರ ಹೊಮ್ಮಿದ್ದೇವೆ.

“ಈ ಸದನದಲ್ಲಿ ಪ್ರತಿಧ್ವನಿಸುವ ಜನರ ಆಶೋತ್ತರಗಳನ್ನು ಸದನದ ಎಲ್ಲ ವಿಭಾಗಗಳು ಕೂಡ ತಮ್ಮ ರಾಜಕೀಯ ಭೀನ್ನತೆಯಾಚೆಗೆ ಗೌರವಿಸುತ್ತಾರೆ ಎಂದು ನನಗೆ ನಂಬಿಕೆಯಿದೆ. ಸಭಾಪತಿಗಳ ಸ್ಥಾನದಲ್ಲಿ ಕುಳಿತುಕೊಳ್ಳುವ ನಮಗೆ, ಈ ಸದನದ ಒಳಗೆ ನಡೆಯುವ ವ್ಯವಹಾರಗಳು ಮತ್ತು ಹೊರಗಿರುವ ಜನರ ಆಶೋತ್ತರಗಳ ನಡುವೆ ಸೂಕ್ಷ್ಮವಾದ ಸಮತೋಲನ ಕಾಯ್ದುಕೊಳ್ಳುವ ಗಂಭೀರವಾದ ಜವಾಬ್ದಾರಿಯಿದೆ. ಸಭಾಧ್ಯಕ್ಷನಾಗಿ ನಾನು ಕರ್ತವ್ಯ ನಿರ್ವಹಿಸುವಾಗಲೂ, ನಾನು ಜನರ ಆಶೋತ್ತರಗಳನ್ನು ಮರೆಯುವುದಿಲ್ಲ ಮತ್ತು ಈ ಸದನವು ಆ ಆಶೋತ್ತರಗಳನ್ನು ಪ್ರತಿಧ್ವನಿಸುತ್ತಿದೆ ಎಂಬುದನ್ನು ಗಮನಿಸಲು ಪ್ರಯತ್ನಿಸುತ್ತಿರುತ್ತೇನೆ. ಆದ್ದರಿಂದ ನಾನು ನಿಮಗೆ ನೀಡುವ ಮಾತೆಂದರೆ, ನಾನು ಯಾವುದೇ ರೀತಿಯ ಹುದ್ದೆಯಲ್ಲಿದ್ದರೂ ಕೂಡ ಈ ಆದರ್ಶಗಳನ್ನು ಯಾವತ್ತಿಗೂ ಮುಂದಿಟ್ಟುಕೊಳ್ಳುತ್ತೇನೆ. ಈ ದೇಶದ ಸಂಸದೀಯ ಪ್ರಜಾಪ್ರಭುತ್ವದ ಪ್ರಯೋಗವು ಅದು ಕಾಣಬೇಕಿರುವ ಅತ್ಯಂತ ದೊಡ್ಡ ಯಶಸ್ಸು ಅದಕ್ಕೆ ದೊರೆಯಲು ಪ್ರಯತ್ನ ಪಡುತ್ತೇನೆ. ಆದ್ದರಿಂದ, ಸದನದ ಸರ್ವ ವಿಭಾಗಗಳೂ ಕೂಡ ನನಗೆ ಈ ನಿಟ್ಟಿನಲ್ಲಿ ಸಹಕಾರ ನೀಡುತ್ತವೆಯೆಂದು ನಿರೀಕ್ಷಿಸುತ್ತೇನೆ. ಏಕೆಂದರೆ, ಆ ಕಡೆಗೆ ಕುಳಿತಿರುವ ವ್ಯಕ್ತಿಗಳೂ ಕೂಡ ಸದನದ ಹೊರಗೆ ನನಗೆ ಸ್ನೇಹಿತರು ಮತ್ತು ಹಲವು ರೀತಿಯಲ್ಲಿ ಸಹೋದ್ಯೋಗಿಗಳೇ ಆಗಿದ್ದಾರೆ. ನಿಜ ಹೇಳಬೇಕೆಂದರೆ, ಅವರಲ್ಲಿ ಕೆಲವು ವ್ಯಕ್ತಿಗಳ ಜೊತೆ ಜೊತೆಗೇ ನಾನು ರಾಜಕಾರಣಕ್ಕೆ ಇಳಿದವನು. ಆದ್ದರಿಂದಲೇ ಉಪಸಭಾಪತಿಯಾಗಿ ನಾನು ನನ್ನ ಕರ್ತವ್ಯಗಳನ್ನು ನಿರ್ವಹಿಸಲು ಕೇವಲ ಟ್ರೆಶರಿ ಬೆಂಚಿನಿಂದ ಮಾತ್ರವಲ್ಲ, ಆ ಕಡೆಗಿರುವ ನನ್ನವರಿಂದಲೂ ಸಹಕಾರ ದೊರೆಯುತ್ತದೆ ಎಂದು ಭಾವಿಸುತ್ತೇನೆ.

“ಹಾಗೆಯೇ, ವಿರೋಧ ಪಕ್ಷಗಳಿಗೆ ಯಾವಾಗಲೂ ಸಭಾಪತಿಗಳ ರಕ್ಷಣೆಯ ಅಗತ್ಯ ಬರುವುದಿಲ್ಲ, ಬದಲಿಗೆ ಅದು ಬೇಕಾಗಿರುವುದು ಮುಂದಿನ ಸಾಲಿನ ಟ್ರೆಶರಿ ಬೆಂಚಿನವರಿಗೆ ಎಂಬುದೂ ನನಗೆ ತಿಳಿದಿದೆ. ಬಹುತೇಕ ಸಂದರ್ಭಗಳಲ್ಲಿ ಈ ಟ್ರೆಶರಿ ಬೆಂಚಿನವರಿಗೇ ಸಭಾಧ್ಯಕ್ಷರಿಂದ ಅತಿ ಹೆಚ್ಚು ರಕ್ಷಣೆ ಬೇಕಾಗಿ ಬರುತ್ತದೆ. ಏಕೆಂದರೆ, ವಿರೋಧ ಪಕ್ಷಗಳು ಮಂತ್ರಿಗಳನ್ನು ಮುತ್ತಿಗೆ ಹಾಕುವಾಗ, ಟ್ರೆಶರಿ ಬೆಂಚಿನ ರಕ್ಷಣೆಗೆ ಇಳಿಯಬೇಕಾದವರು ಸಭಾಪತಿಗಳು. ಉಪಸಭಾಪತಿಯಾಗಿ ನನ್ನ ಕರ್ತವ್ಯಗಳನ್ನು ಹೊತ್ತುಕೊಳ್ಳುವಾಗ ನನಗೆ ಈ ಎಲ್ಲ ಅಂಶಗಳ ಬಗ್ಗೆ ಸ್ಪಷ್ಟತೆಯಿದೆ. ಇಲ್ಲಿ ಮಾತನಾಡಿದ ಎಲ್ಲರಿಗೂ ಮತ್ತು ತಮಗೂ ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.”

1982 ರಲ್ಲಿ ತಮ್ಮ 56 ನೇ ವಯಸ್ಸಿನಲ್ಲಿ ಮುರಾಹರಿ ನವದೆಹಲಿಯಲ್ಲಿ ನಿಧನರಾದರು.

ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾ, ಅಂದಿನ ಲೋಕಸಭಾ ಸ್ಪೀಕರ್ ಬಲರಾಮ್ ಜಾಖಡ್ 1982 ಆಗಸ್ಟ್ 6 ರಂದು ಹೇಳಿದ ಮಾತುಗಳು ಹೀಗಿವೆ:
“ಆರನೇ ಲೋಕಸಭೆಯ ಸದಸ್ಯರೂ ಮತ್ತು ಮಾಜಿ ಉಪಸಭಾಪತಿಗಳೂ ಆಗಿದ್ದ ಶ್ರೀ ಗೋಡೆ ಮುರಾಹರಿ ಅವರ ನಿಧನದ ವಾರ್ತೆಯನ್ನು ನಾನೀಗ ಸದನಕ್ಕೆ ತಿಳಿಸಲೇಬೇಕಾಗಿದೆ. ಶ್ರೀ ಗೋಡೆ ಮುರಹರಿ ಆಂಧ್ರಪ್ರದೇಶದ ವಿಜಯವಾಡ ಕ್ಷೇತ್ರದಿಂದ 6ನೇ ಲೋಕಸಭೆಗೆ ಚುನಾಯಿತರಾಗಿದ್ದರು. 1970-71 ರಲ್ಲಿ ಅವರು ನ್ಯಾಷನಲ್ ಶಿಪ್ಪಿಂಗ್ ಬೋರ್ಡ್ ಸದಸ್ಯರಾಗಿದ್ದರು. ಅವರು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಅಂತರ್‌ ಸಂಸದೀಯ ಒಕ್ಕೂಟ, ಕಮಿಷನ್‌ ಆನ್‌ ನ್ಯಾಷನಲ್‌ ಲೆಜಿಸ್ಲೇಚರ್ಸ್‌, ವರ್ಲ್ಡ್‌ ಕಾನ್ಸ್ಟಿಟ್ಯೂಷನ್‌ ಆಂಡ್‌ ಪಾರ್ಲಿಮೆಂಟರಿ ಅಸೋಸಿಯೇಷನ್‌, ಇಂಡಿಯನ್‌ ಪಾರ್ಲಿಮೆಂಟರಿ ಗ್ರೂಪ್‌ ಮೊದಲಾದವು ಅಂತಹ ಸಂಸ್ಥೆಗಳು. ಅವರೊಬ್ಬ ಅನುಭವಿ ಮತ್ತು ಉತ್ಸಾಹಿ ಸಂಸದರಾಗಿದ್ದರು. ಸಮರ್ಥ ಸಭಾಪತಿಯಾಗಿಯೂ ಗುರುತಿಸಿಕೊಂಡಿದ್ದರು. ಆಗಸ್ಟ್‌ 5 ರಂದು ಅವರು ನವದೆಹಲಿಯಲ್ಲಿ ನಿಧನರಾಗಿದ್ದಾರೆ. ಈ ಗೆಳೆಯನ ಅಗಲಿಕೆಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಅವರ ಕುಟುಂಬಕ್ಕೆ ಸಂತಾಪ ಸಲ್ಲಿಸಲು ಈ ಸದನವು ನನ್ನೊಂದಿಗೆ ಸೇರುತ್ತದೆ ಎಂದು ನಾನು ಭಾವಿಸುತ್ತೇನೆ.”

ಗೋಡೆ ಮುರಾಹರಿ ಅವರು ಇಂಡಿಯನ್‌ ಪಾರ್ಲಿಮೆಂಟರಿ ಗ್ರೂಪ್‌ನ ಉಪಾಧ್ಯಕ್ಷರಾಗಿದ್ದರು. ಜಿನೀವಾದ ಅಂತರ್‌ ಸಂಸದೀಯ ಒಕ್ಕೂಟದ ಸದಸ್ಯರಾಗಿದ್ದರು. ಕಮಿಷನ್‌ ಆನ್‌ ನ್ಯಾಷನಲ್‌ ಲೆಜಿಸ್ಲೇಚರ್ಸ್‌ ಹಾಗೂ ವರ್ಲ್ಡ್‌ ಕಾನ್ಸ್ಟಿಟ್ಯೂಷನ್‌ ಆಂಡ್‌ ಪಾರ್ಲಿಮೆಂಟರಿ ಅಸೋಸಿಯೇಷನ್‌ ಸಂಸ್ಥೆಗಳ ಚೇರ್ಮನ್‌ ಆಗಿದ್ದರು.

ಸಂಸತ್‌ ವ್ಯವಹಾರಗಳ ಜೊತೆಗೆ ಅವರು ಪತ್ರಿಕೋದ್ಯಮ, ಯುವಜನರು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದರು. 1956 ರಿಂದ 1957 ರವರೆಗೆ ಅವರು ಯಂಗ್‌ ವರ್ಲ್ಡ್‌ ಎಂಬ ವಾರಪತ್ರಿಕೆಯ ಸಂಪಾದಕರಾಗಿದ್ದರು. ಮ್ಯಾನ್‌ಕೈಂಡ್‌ ಮತ್ತು ಜನವರಿ ಎಂಬೆರಡು ಮಾಸಿಕಗಳ ಪ್ರಕಾಶಕರಾಗಿದ್ದರು. ಇವುಗಳಿಗೆ ಲೋಹಿಯಾ ಸಂಪಾದಕರಾಗಿದ್ದರು.

ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

You cannot copy content of this page

Exit mobile version