Home Uncategorized ಕರ್ನಲ್‌ಗೆ ಯಾರೂ ಬರೆಯೋದಿಲ್ಲ: ಕೆ ಪಿ ಲಕ್ಷ್ಮಣ್ ಕರಾಮತ್ತು!

ಕರ್ನಲ್‌ಗೆ ಯಾರೂ ಬರೆಯೋದಿಲ್ಲ: ಕೆ ಪಿ ಲಕ್ಷ್ಮಣ್ ಕರಾಮತ್ತು!

0

ಎಂ.ನಾಗರಾಜಶೆಟ್ಟಿಯವರ ನಾಗಾಂಕಣ -07

ಸ್ಟೂಲ್, ಕಿರು ಬೆಂಚುಗಳ ಮೇಲೆ ನಿಂತ ಎಂಟ್ಹತ್ತು ನಟ, ನಟಿಯರು; ಅವರ ಭುಜ, ಎದೆ, ಸೊಂಟ, ಕಾಲುಗಳಿಗೆ ಸುತ್ತಿಕೊಂಡ ಹಗ್ಗ!

ನಾಟಕ ಥಿಯೇಟರ್ ಗೆ ಜನ ಸೇರುವಾಗಲೇ ರಂಗದ ಮೇಲೆ ಕರೆಕ್ಟಾಗಿ ಇಪ್ಪತ್ತು ನಿಮಿಷ, ಒಂದೇ ಭಂಗಿಯಲ್ಲಿ- ಕೊಂಚ ಓಲಾಡುತ್ತಾ- ನಿಂತುಕೊಂಡಿದ್ದನ್ನು ಗಮನಿಸಿ ಗೆಳೆಯರೊಬ್ಬರು ʼ ಇಷ್ಟೊತ್ತು ಯಾಕೆ ಅಲುಗಾಡದೆ ನಿಲ್ಲಬೇಕು? ಅವರಿಗೆಲ್ಲಾ ಎಷ್ಟು ಕಷ್ಟ ʼ ಎಂದರು.
ʼ ಲಕ್ಷ್ಮಣ್ ಸುಮ್ನೇ ನಿಲ್ಸೋದಿಲ್ಲ, ಏನೋ ಒಂದು ಮಾಡಿರ್ತಾರೆ ʼ ಮತ್ತೊಬ್ಬ ಗೆಳೆಯ ಪ್ರತಿಕ್ರಿಯಿಸಿದರು.

ʼ ಕರ್ನಲ್ ಗೆ ಯಾರೂ ಬರೆಯೋದಿಲ್ಲ ʼ ನಾಟಕ ಈ ಸ್ಥಿರ ದೃಶ್ಯದಿಂದ ಪ್ರಾರಂಭವಾಗುತ್ತದೆ.

ಲ್ಯಾಟಿನ್‌ ಅಮೇರಿಕಾದ ಲೇಖಕ ಗ್ಯಾಬ್ರಿಯಲ್‌ ಗಾರ್ಸಿಯಾ ಮಾರ್ಕ್ವೆಜ್ ಯಾರಿಗೆ ಗೊತ್ತಿಲ್ಲ ಹೇಳಿ? ʼ ಒನ್ ಹಂಡ್ರೆಡ್ ಇಯರ್ಸ್ ಅಫ್ ಸಾಲಿಟ್ಯೂಡ್ ʼ ಕೃತಿಗೆ 1982 ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ, ಸಾಹಿತ್ಯ ಪ್ರಿಯರೆಲ್ಲರ ಮೆಚ್ಚಿನ ಲೇಖಕನ ಮಹತ್ವದ ಕಿರುಕಾದಂಬರಿ ʼ ನೋ ಬಡಿ ರೈಟ್ಸ್ ಟು ದ ಕರ್ನಲ್ ʼ. ಅದನ್ನು 2013ರಲ್ಲಿ ಶ್ರೀನಿವಾಸ ವೈದ್ಯ ʼ ಕರ್ನಲ್ ಗೆ ಯಾರೂ ಬರೆಯುವುದೇ ಇಲ್ಲʼ ಎನ್ನುವ ಹೆಸರಲ್ಲಿ ಕನ್ನಡಕ್ಕೆ ಅನುವಾದಿಸಿದರು.

ಶಂಕರ್‌ ನಾಗ್‌ ಹೆಸರಲ್ಲಿ ಆರಂಭವಾದ, ನಾಟಕಗಳ ನಿತ್ಯೋತ್ಸವಕ್ಕೆ ಹೆಸರಾದ ʼ ರಂಗಶಂಕರʼ ಕ್ಕೆ ಈಗ ಇಪ್ಪತ್ತರ ಹರೆಯ. ಈ ಸವಿ ನೆನಪಲ್ಲಿ ಥಿಯೇಟರ್‌ ಫೆಸ್ಟಿವಲ್‌ ಆಯೋಜಿಲಾಗಿದೆ. ಕನ್ನಡದ ಜನ ಮಾನಸದಲ್ಲಿ ನೆಲೆ ನಿಂತ ʼ ಸಮುದಾಯʼ ತಂಡ ಹಲವು ನಾಟಕಗಳನ್ನು ‘ರಂಗಶಂಕರ’ದಲ್ಲಿ ಪ್ರದರ್ಶಿಸಿ ಅದರ ರಂಗ ಪಯಣದಲ್ಲಿ ಜೊತೆಯಾಗಿದೆ. ಈ ಜೋಡಿ ಇಪ್ಪತ್ತರ ರಂಗ ಹಬ್ಬದ ಕೊಡುಗೆಯಾಗಿ ಸಜ್ಜುಗೊಳಿಸಿದ ಅಪೂರ್ವ ನಾಟಕ ʼ ಕರ್ನಲ್‌ ಗೆ ಯಾರೂ ಬರೆಯೋದಿಲ್ಲ ʼ

ʼದಕ್ಲಕಥಾ ದೇವಿ ಕಾವ್ಯʼ ʼ ಪಂಚಮಪದʼ ʼ ಬಾಬ್‌ ಮಾರ್ಲಿ ಫ್ರಂ ಕೋಡಿಹಳ್ಳಿʼ ನಾಟಕಗಳಿಂದ ಹೆಸರಾದ ಕೆ ಪಿ ಲಕ್ಷ್ಮಣ್‌ ಈಗ ಸ್ಟಾರ್‌ ಡೈರೆಕ್ಟರ್.‌ ಅವರ ನಾಟಕವನ್ನು ನೋಡಲು ರಂಗಾಸಕ್ತರು ಮುಗಿಬೀಳುತ್ತಾರೆ. ʼ ಬಾಬ್‌ ಮಾರ್ಲಿ ಫ್ರಂ ಕೋಡಿಹಳ್ಳಿʼ ನಂತರ ಲಕ್ಷ್ಮಣ್‌ ಮಾರ್ಕ್ವೆಜ್‌ ನ ಕೃತಿಯನ್ನು ನಿರ್ದೇಶಿಸುತ್ತಾರೆ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿತ್ತು. ರಂಗಶಂಕರದಲ್ಲಿ ಲಕ್ಷ್ಮಣ್‌ ಪಠ್ಯ, ನಿರ್ದೇಶನ ಇರುವ ʼ ಕರ್ನಲ್‌ಗೆ ಯಾರೂ ಬರೆಯೋದಿಲ್ಲʼ ಮೊದಲ ಪ್ರದರ್ಶನಕ್ಕೆ ದಿನ ನಿಗದಿಯಾಗುತ್ತಿದ್ದಂತೆ ಸೀಟುಗಳು ಭರ್ತಿಯಾಗತೊಡಗಿತು. ಪ್ರದರ್ಶನದ ಎರಡು ದಿನಗಳ ಮುಂಚೆಯೇ ʼ ಬುಕ್‌ ಮೈ ಶೋʼ ದಲ್ಲಿ ಟಿಕೇಟ್‌ ಸಿಗುತ್ತಿರಲಿಲ್ಲ. ಇದು ಲಕ್ಷ್ಮಣ್‌ ರ ಜನಪ್ರಿಯತೆ.

ನಾಟಕ ನಿರ್ದೇಶಕರಿಗೆ ತಾರಾಪಟ್ಟ ಲಭಿಸುವುದು ಸುಲಭದ ಮಾತಲ್ಲ. ಲಕ್ಷ್ಮಣ್‌ ಕಿರಿಯ ವಯಸ್ಸಲ್ಲೇ ಅದನ್ನು ಸಾಧಿಸಿದ್ದು ಬಹಳ ದೊಡ್ಡ ವಿಷಯವೇ. ಆದರೆ ಇದು ಸವಾಲುಗಳ ಕ್ಲಿಷ್ಟ ಹಾದಿ. ಮಾರ್ಕ್ವೆಜ್‌ ಹೇಳುವಂತೆ ʼ (ಯಶಸ್ಸು) ಪರ್ವತಾರೋಹಿಯೊಬ್ಬ ಪರ್ವತದ ತುತ್ತ ತುದಿಯನ್ನು ಹತ್ತುವ ಸಲುವಾಗಿ ಹೆಚ್ಚು ಕಡಿಮೆ ತನ್ನನ್ನು ತಾನೇ ಕೊಂದುಕೊಳ್ಳುವಂತದು. ಅವನು ಅಲ್ಲಿ ತಲುಪಿದ ಮೇಲೆ ಮಾಡೋದಾದಾರೂ ಏನು? ಕೆಳಗಿಳಿಯಬೇಕು. ಇಲ್ಲಾ ಎಚ್ಚರಿಕೆಯಿಂದ ಆದಷ್ಟೂ ಘನತೆಯಿಂದ ಕೆಳಗಿಳಿಯಲು ಪ್ರಯತ್ನಿಸಬೇಕುʼ. ಲಕ್ಷ್ಮಣ್‌ ಗೆ ಘನತೆ, ಎಚ್ಚರ ಎರಡೂ ಇರುವುದರಿಂದ ಆದಷ್ಟು ಜಾಗ್ರತೆಯಿಂದ ನಾಟಕಗಳನ್ನು ಆಯ್ದುಕೊಳ್ಳುತ್ತಾರೆ; ಏರುವ ಶ್ರಮ ವಹಿಸುತ್ತಾರೆ

ʼ ಕರ್ನಲ್‌ಗೆ ಯಾರೂ ಬರೆಯೋದಿಲ್ಲʼ ಭರವಸೆ, ಅಸಹಾಯಕತೆ ಮತ್ತು ವಿಷಾದ ಸ್ಥಾಯಿಯಾಗುಳ್ಳ ನಾಟಕ. ಯುದ್ಧಾನಂತರ ಅರವತ್ತು ವರ್ಷ ಕರ್ನಲ್ ತನಗೆ ಬರಬೇಕಾದ ಪೆನ್ಶನ್‌ ಗಾಗಿ ಕಾಯುತ್ತಿರುತ್ತಾನೆ. ಅವನ ಕ್ರಾಂತಿಕಾರಿ ಮಗನನ್ನು ಗುಂಡಿಕ್ಕಿ ಹತ್ಯೆ ಮಾಡಿರುತ್ತಾರೆ. ಕರ್ನಲ್‌ ಹೆಂಡತಿ ಅಕ್ಟೋಬರ್‌ ಚಳಿಗೆ ಅಸ್ತಮಾದಿಂದ ಬಳಲಿ ಕೆಮ್ಮುತ್ತಿರುತ್ತಾಳೆ. ಸಾಯುವ ಕಾಲದಲ್ಲಿ ಮಗ ಬಿಟ್ಟುಹೋದ ಹುಂಜವನ್ನು ಸಾಕುವುದರೊಂದಿಗೆ ಅವರ ಹೊಟ್ಟೆಪಾಡಿಗೂ ಕಷ್ಟ. ಕರ್ನಲ್‌ ಮಾತ್ರಾ ಪ್ರತಿ ಶುಕ್ರವಾರ ಬಂದರು ಕಟ್ಟೆಗೆ ಹೋಗುತ್ತಾನೆ; ಟಪಾಲು ಬರುವ ನಿರೀಕ್ಷೆಯಲ್ಲಿ!

ವ್ಯಕ್ತಿಯೊಬ್ಬ ದೋಣಿಗೋಸ್ಕರ ಕಾಯುತ್ತಿರುವುದನ್ನು ಕಂಡಾಗ ಈ ಕಾದಂಬರಿಗೆ ಪ್ರೇರಣೆ ದೊರಕಿತು; ಬಳಿಕ ಕೆಲ ವರ್ಷಗಳ ನಂತರ ಪತ್ರವೊಂದಕ್ಕೆ ಅಥವಾ ಮನಿ ಆರ್ಡರ್‌ ಗೆ ಕಾಯುವ ಸ್ಥಿತಿ ತನಗೂ ಬಂದಾಗ ಅದು ಮೂರ್ತರೂಪ ತಾಳಿತು ಎಂದು ಮಾರ್ಕ್ವೆಜ್‌ ಹೇಳುತ್ತಾನೆ. ನಾಟಕದಲ್ಲಿ ಕರ್ನಲ್ ಕಾಯುತ್ತಾನೆ; ಅಪಾರ ನಿರೀಕ್ಷೆಯಲ್ಲಿ ಮೊದಲಿಂದ ಕೊನೆಯವರೆಗೂ ಕಾಯುತ್ತಾನೆ. ಆದರೆ ಭರವಸೆ ಕಳೆದುಕೊಳ್ಳುವುದಿಲ್ಲ. ಮಗನಿಲ್ಲದ ದುಃಖ, ಹೊಟ್ಟೆಗಿಲ್ಲದ ಸಂಕಟ, ಚಳಿಯಿಂದ ರಕ್ಷಿಸಿಕೊಳ್ಳಲಾಗದ ಪರಿಸ್ಥಿತಿ ಯಾವುದೂ ಅವನನ್ನು ವಿಚಲಿತಗೊಳಿಸುವುದಿಲ್ಲ.

ಇದು ಕರ್ನಲ್ ಮತ್ತು ಅವನ ಹೆಂಡತಿಯ ಕತೆಯಂತೆ ಕಂಡರೂ ಅಷ್ಟು ಮಾತ್ರವೇ ಅಲ್ಲ. ಸಂಗೀತಗಾರನೊಬ್ಬನ ಸಾವಾದಾಗ ಮೆರವಣಿಗೆ ಸಾಗಲು ಆಡಳಿತದ ಒಪ್ಪಿಗೆ ಬೇಕು. ಪತ್ರಿಕೆಗಳಲ್ಲಿರುವುದು ಸೆನ್ಸಾರ್ ಆದ ಸುದ್ದಿಗಳು. ಸಿನಿಮಾಗಳ ಗುಣ ಮಟ್ಟವನ್ನು ನಿಗದಿ ಮಾಡಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಯುದ್ಧಗಳಲ್ಲಿ ಹೋರಾಡಿದ ಕರ್ನಲ್ ಗೇ ಬಂದೂಕು ಹಿಡಿಯಲಾಗುತ್ತದೆ. ದೇಶಕ್ಕಾಗಿ ಹೋರಾಡಿದ ಯೋಧನ ಬಗ್ಗೆ ಕಾಳಜಿಯೇ ಇಲ್ಲ! ಆಪತ್ಕಾಲದಲ್ಲಿ ಲಾಭ ಮಾಡಿಕೊಳ್ಳಲು ಇಚ್ಛಿಸುವವರೇ ಹೆಚ್ಚು! ಮಾರ್ಷಲ್ ಲಾ ಕಾಲದಲ್ಲಿ ಪ್ರಜೆಗಳ ಸ್ವಾತಂತ್ರ್ಯ ಹರಣ, ಸಾಮಾನ್ಯರ ಬದುಕಿಗೆ, ನೋವಿಗೆ ಬೆಲೆಯೇ ಇಲ್ಲದಿರುವುದನ್ನು ಪ್ರಕಟ ಪಡಿಸುವ ನಾಟಕ ಸಮಕಾಲೀನ ಘಟನೆಗಳತ್ತ ಬೊಟ್ಟು ಮಾಡುತ್ತದೆ. ಮಾರ್ಕ್ವೆಜ್ ಕೊಲಂಬಿಯಾದ ಆಂತರಿಕ ತುಮುಲದ ಕತೆ ಹೇಳಿದರೂ ಅದು ಎಲ್ಲಾ ಕಾಲದ ಸರ್ವಾಧಿಕಾರಿಗಳ ನಡೆಯೂ ಆಗಿರುವುದರಿಂದ ʼ ಕರ್ನಲ್‌ಗೆ ಯಾರೂ ಬರೆಯೋದಿಲ್ಲʼ ನಾಟಕಕ್ಕೆ ಪ್ರಸ್ತುತತೆ ಇದೆ.

ಕರ್ನಲ್ ಮತ್ತು ಅವನ ಹೆಂಡತಿಯಂತೆ ಮಾರ್ಕ್ವೆಜ್ ಕೃತಿಯಲ್ಲಿ ಹುಂಜವೂ ಮುಖ್ಯವಾಗಿದೆ. ಕರ್ನಲ್ ದಂಪತಿಯ ನಿರಾಶೆಯ, ಅಸಹಾಯಕತೆಯ ಬದುಕಿಗೆ ಹುಂಜವೊಂದೇ ಭರವಸೆ. ಅದಕ್ಕೆ ಕಾಳು ಹಾಕುವುದೆಂದರೆ ಆಶಾವಾದವನ್ನು ಪೋಷಿಸುವುದು; ಮಾರಲು ಹೊರಡುವುದೆಂದರೆ ಎಲ್ಲವನ್ನೂ ಕಳೆದುಕೊಂಡ ಭರವಸೆ ಇಲ್ಲದ ಸ್ಥಿತಿ! ಹುಂಜದ ರೂಪಕವನ್ನು ಮಾರ್ಕ್ವೆಜ್ ಬಹಳ ಸಮರ್ಥವಾಗಿ ಕೃತಿಯಲ್ಲಿ ಬಳಸಿಕೊಂಡಿದ್ದಾನೆ.

ಕೆ ಪಿ ಲಕ್ಷ್ಮಣ್ ಹುಂಜವನ್ನು ರಂಗದಲ್ಲಿ ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ನನಗೆ ಕುತೂಹಲವಿತ್ತು. ಇಲ್ಲಿ ಲಕ್ಷ್ಮಣ್ ರಂಗ ಪ್ರತಿಭೆ ನಿಜಕ್ಕೂ ಕೆಲಸ ಮಾಡಿದೆ. ರಂಗದ ಎಡಬದಿಗೆ ಪರದೆಯ ತುದಿಯಲ್ಲಿ ಎರಡು ಗರಿಗಳನ್ನಷ್ಟೇ ತೋರಿಸಿ, ಅದನ್ನು ನೆರಳು- ಬೆಳಕಿನ ವಿನ್ಯಾಸದಲ್ಲಿ ಸಂದರ್ಭಕ್ಕನುಸಾರ ಪ್ರತಿಫಲಿಸುವ ಕಲ್ಪನೆ ಅಪೂರ್ವವಾದದ್ದು. ಕ್ಕೊಕ್ಕೊಕ್ಕೋ ಕೂಗು ಕೂಡಾ ಸರಿಯಾದ ರೀತಿಯಲ್ಲಿ ಬಳಕೆಯಾಗಿದೆ.

ಇನ್ನೂ ಹಲವು ಸಂದರ್ಭಗಳಲ್ಲಿ ನಾಟಕದಲ್ಲಿ ನಿರ್ದೇಶಕನ ಸೃಜನಶೀಲತೆಯನ್ನು ಗುರುತಿಸಬಹುದು. ದಪ್ಪನೆಯ ಬಿಳಿ ಹಗ್ಗ- ಮೊದಲ ದೃಶ್ಯದಿಂದ ಕೊನೆ ವರೆಗೂ ಒಂದಲ್ಲ ಒಂದು ರೀತಿಯಲ್ಲಿ ಬಳಕೆಯಾಗಿದ್ದು, ಅದನ್ನು ಜನರನ್ನು ಬಿಗಿಯುವ ಸರ್ವಾಧಿಕಾರದ ಪ್ರತೀಕದಂತೆಯೇ, ಬಂದರು ಕಟ್ಟೆಯ ನಿರ್ಮಾಣದಲ್ಲಿ, ದೃಶ್ಯಗಳ ಸಂಯೋಜನೆಯಲ್ಲಿ ಉಪಯೋಗಿಸಿಕೊಳ್ಳಲಾಗಿದೆ. ಪಾತ್ರಧಾರಿಗಳ ನಿರ್ವಹಣೆಯಲ್ಲಿ ಎಂದೂ ಮೇಲುಗೈ ಸಾಧಿಸುವ ಲಕ್ಷ್ಮಣ್ ಈ ನಾಟಕದಲ್ಲೂ ಡಾಕ್ಟರ್, ಸುಬಾಸ ಮತ್ತು ಹುಡುಗ- ಹುಡುಗಿಯರನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ʼ ಬಾರೆ, ಬಾರೆನ್ನ ಸಖಿಯೇ ʼ ಹಿನ್ನೆಲೆ ಹಾಡು ಕಲ್ಪನಾಶೀಲ ಮನಸ್ಸಿನ ಅತ್ಯುತ್ತಮ ಉದಾಹರಣೆ. ಭರವಸೆ, ವಿಷಾದಕ್ಕೆ ತಕ್ಕಂತೆ ಈ ಹಾಡನ್ನು ಬಳಸಿಕೊಂಡಿರುವ ರೀತಿ ಮನ ಮುಟ್ಟುತ್ತದೆ. ಅದೇ ರೀತಿ ಸಂಗೀತ, ನೆರಳು- ಬೆಳಕಿನ ನಿರ್ವಹಣೆ ಮೆಚ್ಚುವಂತಿದೆ.

ʼ ಕರ್ನಲ್‌ಗೆ ಯಾರೂ ಬರೆಯೋದಿಲ್ಲʼ ವಿಷಾದ, ಭರವಸೆಗಳು ಹಾಸುಹೊಕ್ಕಾಗಿರುವ ನಿಧಾನ ಗತಿಯ ನಾಟಕ. ಕಾಯುವಿಕೆಯೇ ಪ್ರಧಾನವಾದ- ಮಾರ್ಕ್ವೆಜ್ ಕೃತಿಯಲ್ಲಿಯೇ ಇರುವ- ನಿಧಾನ ಗತಿ ಕರ್ನಲ್ ನ ಬೇಗುದಿಯನ್ನು, ಸಮಾಜದ ಸ್ಥಗಿತತೆಯನ್ನು ಹೇಳಲು ಅವಶ್ಯವಾದರೂ ನಾಟಕೀಯ ಘಟನೆಗಳಿಲ್ಲದೆ ಬಳಲುತ್ತದೆ. ಮುಖ್ಯವಾಗಿ, ಈ ವರೆಗಿನ ಲಕ್ಷ್ಮಣ್ ನಾಟಕಗಳಲ್ಲಿ ಸಮೃದ್ಧವಾಗಿರುವ ಹಾಡು, ಕುಣಿತಗಳನ್ನು, ಬೆಚ್ಚಿ ಬೀಳಿಸುವ ಮಾತುಗಳನ್ನು ನಿರೀಕ್ಷಿಸಿದವರಿಗೆ ಇದು ಬೇರೆಯೇ ಅನುಭವವನ್ನು ನೀಡುತ್ತದೆ.

ಈ ನಾಟಕದಲ್ಲಿ ಲಕ್ಷ್ಮಣ್ ರವರ ಫೇವರಿಟ್ ನಟರ ಬದಲಾಗಿ ʼಸಮುದಾಯʼ ದ ನಟರೇ ಇದ್ದಾರೆ. ಕರ್ನಲ್ ಮತ್ತು ಅವನ ಪತ್ನಿಯ ಪಾತ್ರ ವಹಿಸಿದ ನಟ- ನಟಿ ಸೂಕ್ತವಾಗಿ ಅಭಿನಯಿಸಿದ್ದರೆ, ಡಾಕ್ಟರ್ ಪಾತ್ರ ನಾಟಕ ಸಾಗಿದಂತೆ ಗಟ್ಟಿಗೊಂಡಿತು. ಲಾಯರ್ ಕಿರಿಚಿದ್ದು ಹೆಚ್ಚಾಗಿ ಮಾತುಗಳು ಸ್ಪಷ್ಟವಾಗಲಿಲ್ಲ. ಕೆಲವು ಸಂದರ್ಭಗಳಲ್ಲಿ ಪಾತ್ರಗಳ ಮುಖೇನ ಸೃಷ್ಟಿಸಿದ ಹಾಸ್ಯ ನಗು ತರಿಸಿತು. ಕೃತಿಯಲ್ಲಿಯೇ ಇರುವ- ʼ ಸತ್ತವರು ಕೂಡಾ ತಪ್ಪೆಸಗುತ್ತಾರೆ ಅಂದಂತಾಯಿತು ʼ ಎನ್ನುವ ಮಾತಿಗೆ ತಮಾಷೆಯ ಗುಣವಿತ್ತು. ಇದನ್ನು ಬಿಟ್ಟಿದ್ದೇಕೆಂದು ತಿಳಿಯಲಿಲ್ಲ; ಕಲಾವಿದರೇ ಮರೆತು ಬಿಟ್ಟರೇ?

ಶ್ರೀನಿವಾಸ ವೈದ್ಯರ ಅನುವಾದದಲ್ಲಿ ಬರುವ ಕೊನೆಯ ಮಾತು ʼ ಶೆಗಣಿ ʼ. ನಾಟಕದಲ್ಲಿ ಮಡಿವಂತಿಕೆಯಿಂದ ಹೊರ ಬಂದು ಇಂಗ್ಲಿಷ್ ಮೂಲದ ಹೇಲು ಅನ್ನುವುದನ್ನೇ ಬಳಸಿಕೊಳ್ಳಲಾಗಿದೆ. ಇದು ಸರಿಯಾದ ಶಬ್ದ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಮಾತಿನೊಂದಿಗೆ ವಿಷಾದದ ಛಾಯೆ ಮೂಡಿಸಲು ನಾಟಕ ಸಫಲವಾದರೂ ಅದು ಗಾಢವಾಗಿ ಪ್ರೇಕ್ಷಕನನ್ನು ಕಾಡುವುದಿಲ್ಲ. ಹಾಗೆಯೇ ಕೃತಿಯಲ್ಲಿರುವ ಎಂದೂ ಕಳೆದುಕೊಳ್ಳದ ಭರವಸೆಯನ್ನು ಸ್ಪಷ್ಟವಾಗಿ ನಾಟಕದಲ್ಲಿ ಕಾಣಲಾಗುವುದಿಲ್ಲ ಎಂದೇ ಹೇಳಬೇಕು.

ಲಕ್ಷ್ಮಣ್ ಈ ವರೆಗಿನ ನಾಟಕಗಳಿಗಿಂತ ಭಿನ್ನವಾದ ನಾಟಕವನ್ನು ನಿರ್ದೇಶಿಸುವ ಸವಾಲನ್ನು ಎದುರುಗೊಂಡು, ಮಾರ್ಕ್ವೆಜ್ ನ ಕೃತಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ನಾಟಕ ಮೂಲಕ್ಕೆ ನಿಷ್ಠವಾಗಿದ್ದು ನಿರ್ದೇಶಕ ಸೃಜನಶೀಲ ಸ್ವಾತಂತ್ರ್ಯವನ್ನು ಬಳಸಿಕೊಂಡು ಹೆಚ್ಚು ಮಾರ್ಪಾಡು ಮಾಡಿಕೊಂಡಿಲ್ಲ. ದುರಿತ ಕಾಲವನ್ನು ಸಮೀಕರಿಸುವ ಲಕ್ಷಣಗಳಿದ್ದರೂ ಕೊಲಂಬಿಯಾದ ಕರ್ನಲ್ ನ ಬದುಕು ಕನ್ನಡದ ಪ್ರೇಕ್ಷಕನನ್ನು ಆವರಿಸಿಕೊಳ್ಳುವುದಿಲ್ಲ. ʼ ಕರ್ನಲ್‌ಗೆ ಯಾರೂ ಬರೆಯೋದಿಲ್ಲʼ ಕೃತಿಯ ದೇಶೀಯ ರೂಪದಂತಿರುವ ʼ ತಬರನ ಕತೆʼ ಹೆಚ್ಚು ಆಪ್ತವಾಗುತ್ತದೆ.

ಮಾರ್ಕ್ವೆಜ್‌ ನ ʼ ಕರ್ನಲ್‌ಗೆ ಯಾರೂ ಬರೆಯುವುದೇ ಇಲ್ಲʼ ಕಿರು ಕಾದಂಬರಿಯನ್ನು ರಂಗರೂಪಕ್ಕೆ ತರುವುದು ಕಷ್ಟದ ಕೆಲಸ. ಕೆ ಪಿ ಲಕ್ಷ್ಮಣ್ ಈ ಸಾಹಸವನ್ನು ಕೈಗೆತ್ತಿಕೊಂಡು, ಈ ಕಾಲದ ಪರಿಸ್ಥಿತಿಗೆ ಮುಖಾಮುಖಿಯಾಗಿದ್ದಾರೆ. ಅಪಾರ ಹಿತೈಷಿಗಳ, ಅಭಿಮಾನಿಗಳ ಬೆಂಬಲವಿರುವ ಲಕ್ಷ್ಮಣ್ ಭಿನ್ನ ಪ್ರಯೋಗಕ್ಕೆ ಒಡ್ಡಿಕೊಂಡಿರುವುದು ಸಂತೋಷದ ಮತ್ತು ಮೆಚ್ಚುಗೆಯ ವಿಷಯ. ಅವರಿಂದ ಇನ್ನಷ್ಟು ಹೊಸ ಪ್ರಯೋಗಗಳು ನಡೆಯಲಿ ಹಾಗೂ ರಂಗಭೂಮಿಯಲ್ಲಿ ಈಗಾಗಲೇ ಆರಂಭವಾಗಿರುವ ಲಕ್ಷ್ಮಣ್ ಶಕೆ ಮುಂದುವರಿಯಲಿ ಎಂದು ಹಾರೈಸುವೆ.

ಕಾಲ, ದೇಶಕ್ಕೆ ಅನುಗುಣವಾಗಿ ಗುಣಾತ್ಮಕ ನಾಟಕಗಳನ್ನು ನೀಡುತ್ತಾ ಬಂದಿರುವ ‘ಸಮುದಾಯ’ ಈ‌ ಬಾರಿಯೂ ವಿಶಿಷ್ಟ ಪ್ರಯೋಗವನ್ನು ಮಾಡಿದೆ. ಈ ವಿನೂತನ ಪ್ರಯೋಗಕ್ಕಾಗಿ ಸಮುದಾಯ ಮತ್ತು ರಂಗಶಂಕರಕ್ಕೆ ಅಭಿನಂದನೆಗಳು.

ನಾಟಕದ ಆರಂಭದಲ್ಲಿ ಗೆಳೆಯರು ʼ ಲಕ್ಷ್ಮಣ್ ಸುಮ್ನೇ ನಿಲ್ಸೋದಿಲ್ಲ, ಏನೋ ಒಂದು ಮಾಡಿರ್ತಾರೆ ʼ ಎಂದು ಹೇಳಿದ್ದರು. ನಾಟಕದ ಕೊನೆಯಲ್ಲಿ ನಟ-ನಟಿಯರು ಮತ್ತೊಮ್ಮೆ ಹಗ್ಗ ಸುತ್ತಿಕೊಂಡು ಹಾಗೇ ಅಲ್ಲಾಡದೆ ನಿಂತಿದ್ದು ಕಂಡಾಗ ಗೆಳೆಯರು ಹೇಳಿದ್ದು ಸರಿ ಅನ್ನಿಸಿತು. ಹೌದು,ಇಷ್ಟೆಲ್ಲಾ ಆದ ಮೇಲೂ ಎಲ್ಲವೂ ಮತ್ತೆ ಮೊದಲಿನಂತೆ, ʼ ನಿಶ್ಚಲʼ !

*** ***

You cannot copy content of this page

Exit mobile version