ಹಸಿವು ಕಲಿಸಿಕೊಡುವ ಪಾಠ, ಜಗತ್ತಿನ ಯಾವ ಯೂನಿವರ್ಸಿಟಿಯೂ ಕಟ್ಟಿಕೊಡಲಾರದು. ನಮ್ಮಂತೋರಿಗೆ,
ವಾಳೈ ಸಿನಿಮಾ ನೋಡಿ, ಬಾಲ್ಯ ನೆನಪಾಯ್ತು ಅಂತ ಹೇಳೋದಿಕ್ಕಾಗಲ್ಲ. ನಾನಿನ್ನೂ ಬಾಲ್ಯದ ಟ್ರೋಮಾಗಳಲ್ಲೇ ಬದುಕನ್ನ ಬದುಕುತ್ತಿರೋದು. ಹತ್ತಾರು ಸಲ ಈ ಬಗ್ಗೆ ಬರೆದುಕೊಂಡದ್ದಿದೆ.
ನನ್ನ ಕಾರ್ಮೀಕ ಬದುಕು ಶುರುವಾದಾಗ ಒಂದನೇ ಕ್ಲಾಸ್ ಓದುತ್ತಿದ್ದೆ. ನನಗಾಗ ಆರು ವರ್ಷ…,ಅಂದು ಶುರುವಾದ ದುಡಿಮೆ, ಬಹುಶಃ ನನ್ನ ಎರಡು ಮಕ್ಕಳ ಡೆಲಿವರಿ ಸಮಯದಲ್ಲಿ ಮಾತ್ರ ಬ್ರೇಕ್ ತೆಗೆದುಕೊಂಡಿದ್ದು, ಅದೂ ಕೂಡ ಹದಿನೈದು ದಿನಗಳಿಂದ ತಿಂಗಳವರೆಗೆ ಮಾತ್ರ.
ಬೆಂಗಳೂರಿನ ಸ್ಲಮ್ ಒಂದರಲ್ಲಿ ಹುಟ್ಟಿ, ಅನುಭವಿಸಿದ ಬಡತನದ ಯಾತನೆ, ಹಸಿವಿನ ಸಂಕಟ ನಾನಿಂದಿಗೂ ಮರೆತಿಲ್ಲ. ಯಾವುದನ್ನೂ ಮರೆಯುವುದೂ ಇಲ್ಲ…
ಆ ದಿನಗಳಲ್ಲಿ ನನ್ನಂತೇ ಸಣ್ಣ ವಯಸ್ಸಿನಲ್ಲಿ ದುಡಿಮೆಗೆ ಬಿದ್ದವರು ನಮ್ಮ ಬೀದಿಯಲ್ಲೇ ಹತ್ತದಿನೈದು ಮಕ್ಕಳಿದ್ದವು. ಊದುಬತ್ತಿ ತೀಡುತ್ತಿದ್ದ ಅಂಬಿಕಾ, ಶಾಂತಿ, ಅಗಸರ ನಾಣಿ ಅಣ್ಣ, ಸೀಮೆಣ್ಣೆ ಕೃಷ್ಣಾ, ಅಶ್ವತ್ಥ, ಬಾಲ್ಯದ ಗೆಳತಿ ಟೀನಾ, ತರಕಾರಿ ಅಂಗ್ಡಿ ಆನಂದ, ಭಾರತಿ, ನಮ್ಮೆಲ್ಲರದ್ದೂ ಆಲ್ಮೋಸ್ಟ್ ಪ್ಯಾರಲಲ್ ಟ್ರ್ಯಾಕಿನಲ್ಲಿ ಸಾಗುತ್ತಿರುವ ಬದುಕೇ ಆಗಿತ್ತು. ಪ್ರೈಮರಿ ಶಾಲೆಯ ಶ್ರೀಕಂಠಯ್ಯ ಮೇಷ್ಟ್ರು, ಶಾಲೆಯ ಅರಳಿಕಟ್ಟೆ, ಮರಿಯಮ್ಮ ಟೀಚರ್, ಏಳನೇ ತರಗತಿಯಲ್ಲಿದ್ದಾಗ, ಕಣ್ಣೆದುರೇ ರೈಲ್ವೆ ಹಳಿಗೆ ಬಿದ್ದು ಸಾವಿಗೆ ಶರಣಾದ ಆತ್ಮೀಯ ಗೆಳತಿ ಪದ್ಮಜಾ…ಎಲ್ಲವೂ ನೆನಪಾಗಿ ಎದೆಭಾರವಾಯಿತು.
ನಮ್ಮ ಮನೆಯಲ್ಲಿ ವಾರದಲ್ಲಿ, ಮೂರ್ನಾಲ್ಕು ದಿನಗಳು ಮನೆಯಲ್ಲಿ ಅನ್ನ ಮಾಡುತ್ತಿರಲಿಲ್ಲ. ಎದ್ರೆ ಕುಂತ್ರೆ ಅಂಗನವಾಡಿಯ ಹಾಲು ಬ್ರೆಡ್ಡು…ಅನ್ನ ಸಾರು ತಿನ್ನಬೇಕಾದ್ರೆ, ಅಜ್ಜಿಯ ಮನೆಗೆ ಎರಡು ಕಿಲೋಮೀಟರ್ ನೆಡೆದು ಹೋಗಬೇಕಿತ್ತು. ಗುಡ್ಡದಹಳ್ಳಿಯ ಫ್ಲೋರ್ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಾತ, ಮಿಲ್ಲಿಗೆ ಬರುತ್ತಿದ್ದ ಗಿರಾಕಿಗಳ ಬಳಿ, ರಾಗಿ ಹಿಟ್ಟು, ಅಕ್ಕಿ ಹಿಟ್ಟು ಸಂಗ್ರಹಿಸಿ, ಕೂಡಿಟ್ಟು, ಒಂದು ಚೀಲ ತುಂಬಿದ ಮೇಲೆ, ಅದನ್ನು ನಮ್ಮ ಮನೆಗೆ ತಲುಪಿಸುತ್ತಿತ್ತು. ಆ ಏರಿಯಾ ಮಾರ್ವಾಡಿ ಜನರ ಮನೆಯಲ್ಲಿ ಬರ್ತಡೇಯೋ, ಪೂಜೆಗಳೋ, ಮದುವೆ ಕಾರ್ಯಗಳೋ ಜರುಗಿದಾಗ, ಅವರ ಮನೆಯಲ್ಲಿ ಮಾಡುತ್ತಿದ್ದ ಸಿಹಿ ತಿಂಡಿಗಳನ್ನು ಕವರ್ ನಲ್ಲಿ ಹಾಕಿ ತಂದು ಕೊಡುತ್ತಿತ್ತು. ಒಂದು ಸಣ್ಣ ಮಿಠಾಯಿ ತಿನ್ನಲು ಅಮ್ಮನ ಬಳಿ ನಾಲ್ಕಾಣೆಗಾಗಿ ಹೇಳಿದ ಸುಳ್ಳಿಗೆ, ಬೀದಿಯುದ್ದಕ್ಕೂ ಮನೆ ಬಾಗಿಲಿನವರೆಗೂ ಇಟ್ಟಿನ ದೊಣ್ಣೆ ಮುರಿಯುವವರೆಗೂ ಅಮ್ಮಾ ಹೊಡೆದಿದ್ದಳು.
ವೈರ್ ಚೇರುಗಳ ಫ್ರೇಮುಗಳನ್ನ, ಎಳೆಯ ಕೈಯಲ್ಲಿ ಹೊತ್ತು, ಸ್ಕೂಲಿನ ಬ್ಯಾಗು ತಗಲಾಕಿಕೊಂಡು ಎರಡು ಕಿಲೋ ಮೀಟರ್ ನಡೆದುಕೊಂಡು ಮನೆಗೆ ಬರಬೇಕಾಗಿತ್ತು. ಕಾಲಿನಲ್ಲಿ ಮೆಟ್ಟಿರುತ್ತಿದ್ದ ಹವಾಯ್ ಚಪ್ಪಲಿ ಒಂದು ಸಲ ಕಿತ್ತು ಹೋದರೆ, ಮತ್ತೆ ಅದನ್ನು ಕೊಂಡಕೊಳ್ಳಲು ತಿಂಗಳುಗಳೇ ಆಗುತ್ತಿತ್ತು. ಹರಿದ ಬಟ್ಟೆಗಳು, ನೆಂಟರು ಕೊಡುತ್ತಿದ್ದ ಅವರ ಮಕ್ಕಳ ಹಳೆಯ ಬಟ್ಟೆಗಳನ್ನು ಹಾಕಿಕೊಂಡು ವರ್ಷಾನುಗಟ್ಟಲೆ ಬದುಕನ್ನ ದೂಡಿದ್ದಿದೆ.
ಹಗಲು – ರಾತ್ರಿಗಳ ವ್ಯತ್ಯಾಸವೇ ಗೊತ್ತಿರದೇ ದುಡಿಯುವುದು ನಮ್ಮ ಧರ್ಮ…ಅದಿಲ್ಲದಿದ್ದರೆ, ಕುಟುಂಬದ ನೌಕೆ ಸಾಗುತ್ತಿರಲಿಲ್ಲ…ಚೇರುಗಳಿಗೆ ವೈರ್ ಪೋಣಿಸುತ್ತಾ, ರಬ್ಬರ್ ಫ್ಯಾಕ್ಟರಿಯ ಮಿಡ್ನೈಟ್ ಹನ್ನೆರಡರ ಸೈರನ್, ನಮಗೆ ಆ ದಿನದ ಕೂಲಿಯಿಂದ ಸಿಗುತ್ತಿದ್ದ ಬಿಡುಗಡೆ. ಕೈ ಕಾಲು ಮರಗಟ್ಟಿ, ಸಿಮೆಂಟ್ ಮೆತ್ತದ ಇಟ್ಟಿಗೆಯ ಗೋಡೆಗಳಿಗೆ ಒರಗಿ ಕುಂತಿದ್ದರೆ, ಸುತ್ತಮುತ್ತಲ ಗಲೀಜಿಗೆ ಅದೆಷ್ಟೊ ಸಲ ಮೈ ಮೇಲೆ ಹತ್ತುತ್ತಿದ್ದ ಚೇಳು, ಜರಿಗಳು…ಮೂಗಿನಲ್ಲಿ ಸುರಿದು ಬರುತ್ತಿದ್ದ ರಕ್ತ ಮಾಮೂಲಾಗೋಗಿತ್ತು. ಮೈ ಮೇಲಿರುತ್ತಿದ್ದ ಶರ್ಟಿನಿಂದ ಒರೆಸಿಕೊಂಡು, ಆ ದಿನದ ಟಾರ್ಗೆಟ್ ರೀಚ್ ಮಾಡುವುದಷ್ಟೇ ನಮ್ಮ ಕೆಲಸ. On time ಚೇರುಗಳನ್ನು ಎಣೆದು ಕೊಡದಿದ್ದರೆ, ಮತ್ತೆ ನಮಗೆ ಕೆಲಸ ಸಿಗುತ್ತಿರಲಿಲ್ಲ. ಆ ಭಯ ಬೇರೆ.
ನನ್ನ ಅಮ್ಮಾ , ನಮ್ಮ ಮನೆಯ ಬಡತನದ ಸಿಟ್ಟನ್ನೆಲ್ಲಾ ಎತ್ತಿಹಾಕಲು ಸಿಗುತ್ತಿದ್ದ ಏಕೈಕ ಪ್ರಾಣಿ ನಾನೊಬ್ಬಳೇ. ಗಂಡನ ಎದುರು ಕೆಮ್ಮುತ್ತಿರಲಿಲ್ಲ. ಅಣ್ಣಂದಿರ ಮೇಲಿನ ಮುದ್ದು…ಸಿಕ್ಕ ನನ್ನೊಬ್ಬಳ ಮೇಲೆ ಸದಾ ಬ್ರಹ್ಮಾಸ್ತ್ರ ಪ್ರಯೋಗ. ಆಕೆಯ ಬೈಗುಳ, ಸಿಟ್ಟು, ಆ ಕೆಂಗಣ್ಣು ಇಂದಿಗೂ ನನಗೆ night mares…ತಪ್ಪಿಸಿಕೊಳ್ಳಲು ಬದಲಿ ಆಯ್ಕೆಗಳಿರಲಿಲ್ಲ. ಅಪ್ಪನ ಕುಡಿತ, ಮನೆಯ ಬಡತನ, ಸಂಬಂಧಿಕರ ನಡುವೆ ಕಟ್ಟಿಕೊಟ್ಟ ಅವಮಾನಗಳನ್ನು ಮಾತುಗಳಲ್ಲಿ ಪೋಣಿಸಿ, ಭದ್ರವಾಗಿ ಯಾವುದೋ ಪೆಟ್ಟಿಗೆಯಲ್ಲಿಟ್ಟು, ಅಟ್ಟದ ಮೇಲಿಟ್ಟು, ಓ ಇದು ನನ್ನದಲ್ಲ ಎಂದು ಮರೆತುಬಿಡಲು ಸಾಧ್ಯವೇ ಇಲ್ಲ…!
ಕಳೆದ ಹತ್ತು ವರ್ಷಗಳಲ್ಲಿ ಎಷ್ಟೋ ಸಲ ನನ್ನ ಬಾಲ್ಯದ ನೆನಪುಗಳನ್ನು, ದುರ್ಘಟನೆಗಳನ್ನು ಫೇಸ್ಬುಕ್ಕಿನಲ್ಲಿ ಎತ್ತಿ ಹಾಕುವಾಗ, ನನ್ನಂತವೇ ಒಂದಷ್ಟು ಜೀವಗಳು, ಆ ಬರಹಗಳಲ್ಲಿ ತಮ್ಮನ್ನು ಹಗುರಾಗಿಸಿಕೊಂಡು ನನ್ನೊಂದಿಗೆ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡದ್ದಿದೆ. ಅದೇ ತರ, ವೈಯಕ್ತಕ ಬದುಕಿನ ಬಗ್ಗೆ ಹೀಗೆ ಮುಕ್ತವಾಗಿ ಬರೆದುಕೊಳ್ಳುವುದು ಕ್ಷಮಿಸಲಾರದ ಅಪರಾಧ ಎಂದು judge ಮಾಡಿದವರೂ ಇದ್ದಾರೆ.
ಕನಿಷ್ಠ ಊಟ ಬಟ್ಟೆಗೆ ಬಾಲ್ಯದಲ್ಲಿ ಹೋರಾಡಿಯೇ, ದುಡಿದೇ ಪಡೆದವರಿಗೆ ಮಾತ್ರ, ಆ ಅವಮಾನ, ಕುದಿವ ರಕ್ತದ ಅರ್ಥ ಗೊತ್ತಿರುತ್ತದೆ. ಮತ್ತು, ನನ್ನ ಪ್ರಕಾರ ಯಾವುದೇ ವ್ಯಕ್ತಿ ತನ್ನ ಬದುಕನ್ನು ಯಥಾವತ್ತಾಗಿ ಕಟ್ಟಿಕೊಡಲು ಸಾಧ್ಯವಾಗುವ ಸಂವೇದನೆಗಳಿರುವುದಿಲ್ಲವೋ, ಆತನಿಗೆ/ಆಕೆಗೆ ಸಮಾಜದ ಯಾವುದೇ ಇನ್ನೊಬ್ಬ ವ್ಯಕ್ತಿಯ/ಇನ್ನೊಬ್ಬರ ಬದುಕಿನ ಬಗ್ಗೆ ಬರೆಯುವ ಅರ್ಹತೆ ಇರುವುದಿಲ್ಲ.
ಸಿನ್ಮಾದಲ್ಲಿ ಮಾರಿ ಸೆಲ್ವರಾಜ್ ಬಾಲ್ಯದ ಬದುಕು ಜರುಗಿದ ಊರು, ಸಮಯ, ಬೇರೆ…ಆದ್ರೆ ಹಸಿವು ಕೊಟ್ಟ ನೆನಪು, ನೋವು ಸಂಕಟ, ಹಸಿವು ಕಲಿಸಿಕೊಟ್ಟ ಪಾಠ ಒಂದೇ…! ಸಿನಿಮಾ ನೋಡ ನೋಡುತ್ತಾ, ನಮ್ಮದೇ ಬದುಕಿಗೆ ಕನ್ನಡಿ ಹಿಡಿದಷ್ಟು ಸಾಮ್ಯತೆಗಳು ತಾಗುತ್ತಾ ಹೋಗುತ್ತದೆ. ಅದರಲ್ಲೂ ಬುಡುಬಡುಕೆಯವನ ಕಿರುಡಮರುಗದ ಸದ್ದಿಗೆ ಎರಡ್ಮೂರ ಸಲ ಬೆಚ್ಚು ಬಿದ್ದೆ. ಸತ್ತ ಕರುವೊಂದರ ಮೈಯೊಳಗೆ ಒಣಹುಲ್ಲು ತುಂಬಿ, ಅದರ ನೆನಪನ್ನು ಜೀವಂತವಾಗಿಡುವ ಶಿವಾನೆಂಜಮ್, ಪೂಂಗುಡಿ ಟೀಚರ್ ಮೇಲಿನ ಅವನ ಅಗಾಧವಾದ ಪ್ರೇಮ, ರೇಡಿಯೋದಲ್ಲಿ ಕೇಳಿಬರುವ ಹಾಡು, ಬಾಳೆ ತೋಟದಲ್ಲಿ ಹಸಿವಿನಿಂದ ಕದ್ದು ತಿಂದ ಒಂದು ಬಾಳೆಹಣ್ಣಿಗಾಗಿ, ತೋಟದ ಮಾಲೀಕನಿಂದ ಬಿದ್ದ ಏಟುಗಳು, ವೆಂಬು ಮತ್ತವಳ ಪ್ರೇಮಿಯ ಮೌನ ಸಂಭಾಷಣೆಗೆ ಸಿಗದ ಒಂದು ಲಾಜಿಕಲ್ ಕನ್‌ಕ್ಲೂಷನ್, ಕಳೆದು ಹೋದ ಹಸುವಿನ ಹುಡುಕಾಟದಲ್ಲಿ ಶಿವಾನೆಂಜಮ್ ನ ಆಕ್ರಂದನದ ಕೂಗಿನ ಶಬ್ಧ, ಅನ್ನದ ತುತ್ತು ತಿನ್ನುವ ಹೊತ್ತಿಗೆ, ತಾಯ ಬೈಗುಳಕ್ಕೆ ಹೆದರಿ, ಶಿವಾನೆಂಜಮ್ ಎದ್ದು ಬಿದ್ದು ಓಡುವಾಗಿನ ಆ ಏದುಸಿರು, ಅವನೆದೆಯ ಬಡಿತ, ಮೈಯಿಂದ ಕಿತ್ತುಕೊಂಡು ಹೊರಬರುವ ಬೆವರು, ಹೊಟ್ಟೆಯ ಸಂಕಟ, ಅವನ ತಾಯಿಯ ಮಡುಗಟ್ಟಿದ ನೋವು, ನರಕಸದೃಶ ಸಾವಿನ ಲೋಕವನ್ನು ಕಟ್ಟಿಕೊಟ್ಟ, ಕ್ಲೈಮ್ಯಾಕ್ಸ್ ಕಡೆಗಿನ ಆ ಇಪ್ಪತ್ತು ನಿಮಿಷದ ಪಯಣ….,
ಅಂದಿಗೂ, ಇಂದಿಗೂ ನನಗ್ಯಾವುದೇ ಬರಹಗಳು, ಅಥವ ಸಿನ್ಮಾಗಳು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯೋದು, ಅಲ್ಲಿ ಬದುಕಿನ ನೈಜ ಚಿತ್ರಣ ಇದ್ದಾಗ ಮಾತ್ರ.
ವಾಳೈ ಸಿನಿಮಾವನ್ನ, ಸಿನಿಮಾ ಅಂತ ಮಾತ್ರ ನೋಡಲು ಸಾಧ್ಯವೇ ಇಲ್ಲ. ಅದೊಂದು ಮಾರಿ ಸೆಲ್ವರಾಜ್ ಎಂಬ ಮುಗ್ಧ ಜೀವ, ತನ್ನ ಹಸಿವಿನ ಜರ್ನಿಯನ್ನು, ನಿರ್ಭೀತವಾಗಿ, ಮುಕ್ತವಾಗಿ ಕಟ್ಟಿಕೊಟ್ಟ ಒಂದು painful Biopic.
ಇದೇ ಸಿನಿಮಾವನ್ನು ಮಾರಿ ಸೆಲ್ವರಾಜ್, ಸಿನಿಮಾ ಇಂಡಸ್ಟ್ರಿಗೆ ಬಂದ ಹೊಸದರಲ್ಲಿ ಮಾಡಿದ್ದರೆ, ಬಹುಶಃ, ಒಂದು sophisticated ವರ್ಗದ ಜನ, ಅದೆಷ್ಟು ಅವಮಾನಗಳನ್ನು ಮಾಡುತ್ತಿದ್ದರೋ? ಮಾರಿ, ಅದೆಷ್ಟು ತಿರಸ್ಕಾರಕ್ಕೆ ಒಳಗಾಗುತ್ತಿದ್ದರೋ ಕಾಣೆ.
ಒಂದು ಹಂತದವರೆಗೆ, ನೋವನ್ನೆಲ್ಲಾ ನುಂಗಿ, ತನ್ನದೇ ಟ್ಯಾಲೆಂಟ್, ಬದುಕಿನ ಶ್ರದ್ಧೆಯಿಂದ ಇಂದು ತಮ್ಮದೇ ಬೆಂಚ್‌ಮಾರ್ಕ್ ಸೃಷ್ಟಿಸಿರುವ ಮಾರಿ ಸೆಲ್ವರಾಜ್, ಬಹುಶಃ, ಇದು ಸರಿಯಾದ ಸಮಯ ಎಂಬುದನ್ನು ಮನಗಾಣಿಕೊಂಡಿರಬೇಕು. ಹಾಗಾಗಿಯೇ, ಇಷ್ಟು ನಿರ್ಭೀತವಾಗಿ, ತಮ್ಮ ಬದುಕಿನ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ, ಸಿನಿಮಾದ ಮೂಲಕ ಹೊರಹಾಕಿದ್ದಾರೆ.
ಹಸಿವಿನ ಬಾಲ್ಯ ಕಟ್ಟಿಕೊಟ್ಟ ಅನುಭವಗಳಿಗೋ, ಅವಮಾನಗಳಿಗೋ ಏನೋ, ನನ್ನ ಸುತ್ತಮುತ್ತ ಸಂಪರ್ಕಕ್ಕೆ ಬಂದ ಅದೆಷ್ಟೋ ಜನರ ನೋವು, ಸಂಕಟ ನನ್ನನ್ನು ಅಲುಗಾಡಿಸಿರುವುದು ಕೂಡ, ಇಂತದ್ದೇ ಕಾರಣಕ್ಕೆ.
ಇಂತದ್ದೇ ಕಾರಣಕ್ಕಾಗಿಯೇ ಬಹುಶಃ ನನ್ನ ಕಣ್ಣುಗಳು ನಗುವಿನಲ್ಲೂ, ಎಂದೂ ಬತ್ತದ ಕಣ್ಣೀರೊಂದನ್ನು ಇಂದಿಗೂ ಜೊತೆಗೇ ಹೊತ್ತು ಸಾಗುತ್ತಿರುವುದು.
ಇದೇ ಕಾರಣಕ್ಕಾಗಿಯೇ ಬಹುಶಃ ನನ್ನ ಕೈಲಾದಷ್ಟು, ನನ್ನ ಮಿತಿಯಲ್ಲಿ ಜೊತೆಗಾರರ ಜೊತೆ ನಿಂತಿದ್ದು.
ಇದೇ ಕಾರಣಕ್ಕಾಗಿಯೇ ನನ್ನೊಂದಿಗೆ ಜರುಗಿದ ಮೋಸಗಳನ್ನೂ, ಬಿದ್ದ ಬಾಸುಂಡೆಗಳನ್ನೂ, ಮಾಫಿ ಮಾಡಿ, ಮುಂದೆ ಸಾಗಿದ್ದು…!
ಇದೇ ಕಾರಣಕ್ಕಾಗಿಯೇ ನಾನಿಷ್ಟು ಗಟ್ಟಿಯಾಗಿದ್ದು, ಸ್ವತಂತ್ರವಾಗಿ ನನ್ನ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿದ್ದು …!
ಎಷ್ಟೋ ಜನ ” ನೀ ಯಾಕಿಷ್ಟು ಎಮೋಷನಲ್” ಇದ್ದೀಯ ?” ಎಂದು ಕೇಳಿದಾಗ ಎಂದಿನಂತೆ ನನ್ನ ಉತ್ತರ “ಯಾರ ಕಣ್ಣುಗಳಲ್ಲಿ ಇನ್ನೂ ಕಣ್ಣೀರು ಬತ್ತಿಲ್ಲವೋ, ಅಂತವರಷ್ಟೇ ಮನುಷ್ಯರು, And I proud to identify myself, one among them” ಎಂದೇ ಹೇಳುತ್ತೇನೆ.
ಅಂತ ಮನುಷ್ಯರ ಸಾಲಿನಲ್ಲಿ ಮಾರಿ ಸೆಲ್ವರಾಜ್ ಎಂಬ ದೈತ್ಯ ಪ್ರತಿಭೆ ನಮ್ಮ ನಡುವಿನ ಹೆಮ್ಮೆ !
Loads of Love to U Mari Selvaraj sir❤
U deserve more and more respect ❤
- ಸುರಭಿ ರೇಣುಕಾಂಬಿಕಾ