ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿರುವ ಪರಿಣಾಮ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಹೈಕಮಾಂಡ್ ಬಿಸಿ ಮುಟ್ಟಿಸಿದೆ. ಆ ಮೂಲಕ ಬಣ ಬಡಿದಾಟಕ್ಕೆ ನಿಂತಿರುವ ರೆಬೆಲ್ ಶಾಸಕರಿಗೆ ಯತ್ನಾಳ್ ಮೂಲಕ ನೋಟೀಸ್ ಭಯ ಹುಟ್ಟಿಸಿದೆ.
ಬಿಜೆಪಿ ಪಕ್ಷದ ಶಿಸ್ತು ಸಮಿತಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪಕ್ಷದ ಹಿರಿಯ ನಾಯಕರು ಮತ್ತು ರಾಜ್ಯಾಧ್ಯಕ್ಷರ ವಿರುದ್ಧ ನಿರಂತರವಾಗಿ ಬಹಿರಂಗ ವಾಗ್ದಾಳಿ ನಡೆಸುತ್ತಿರುವ ಯತ್ನಾಳ್ ಅವರಿಗೆ ಈಗ ಎರಡನೇ ನೋಟೀಸ್ ಜಾರಿಯಾಗಿದೆ.
ಈ ಹಿಂದೆ ಕಳೆದೆರಡು ತಿಂಗಳ ಹಿಂದೆಯೂ ಯತ್ನಾಳ್ ಇದೇ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ನೋಟಿಸ್ ಜಾರಿ ಮಾಡಿತ್ತು. ಆದರೆ ಈಗ ಹೈಕಮಾಂಡ್ ಗೆ ಉತ್ತರ ನೀಡಲು ಯತ್ನಾಳ್ ಅವರಿಗೆ ಗಡುವು ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಈಗಾಗಲೇ ದೆಹಲಿಯಲ್ಲೇ ಇರುವ ಹಿನ್ನೆಲೆಯಲ್ಲಿ ಹೈಕಮಾಂಡ್ ಎದುರು ಖುದ್ದು ಹಾಜರಾಗಿ 72 ಗಂಟೆಯೊಳಗೆ ನೋಟಿಸ್ ಸಂಬಂಧ ವಿವರಣೆ ನೀಡಬೇಕು ಎಂದು ಶಿಸ್ತು ಸಮಿತಿ ಯತ್ನಾಳ್ ವಿರುದ್ಧ ನೋಟಿಸ್ ನೀಡಿ ಶಾಕ್ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ಬಣ ಬಡಿದಾಟಕ್ಕೆ ಬ್ರೇಕ್ ಹಾಕುವ ಸಲುವಾಗಿ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಕಡೆಗೆ ಸಂಧಾನ ಮಾತುಕತೆ ನಡೆಸಲು ಹೈಕಮಾಂಡ್ ಯತ್ನಿಸಿದರೂ ಹೈಕಮಾಂಡ್ ಮಾತಿಗೂ ಬಗ್ಗದ ಹಿನ್ನೆಲೆಯಲ್ಲಿ ಈ ನೋಟೀಸ್ ಜಾರಿಯಾಗಿದೆ ಎಂಬ ಮಾಹಿತಿ ಸಿಕ್ಕಿದೆ.