ಹೊಸದಿಲ್ಲಿ: ಪ್ರವಾದಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಹಲವು ರಾಜ್ಯಗಳಲ್ಲಿ ಪ್ರಕರಣ ಎದುರಿಸುತ್ತಿರುವ ನೂಪುರ್ ಶರ್ಮ ಅವರ ಮನವಿಯ ಮೇರೆಗೆ ಅವರ ವಿರುದ್ದದ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಒಂದೆಡೆ ಒಟ್ಟು ಸೇರಿಸುವುದಕ್ಕೆ ಸುಪ್ರಿಂ ಕೋರ್ಟ್ ಸಮ್ಮತಿಸಿದೆ.
ಪ್ರವಾದಿ ಮಹಮದ್ ರ ವಿರುದ್ಧ ವಾಹಿನಿಯೊಂದರ ಚರ್ಚೆಯಲ್ಲಿ ನೂಪುರ್ ಶರ್ಮ ಅವಮಾನಕಾರಿ ಹೇಳಿಕೆ ನೀಡಿದ್ದರು. ಇದು ತೀವ್ರ ಆಕ್ಷೇಪ ಮತ್ತು ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಅನೇಕ ಕೊಲ್ಲಿ ರಾಷ್ಟ್ರಗಳು ಅಧಿಕೃತವಾಗಿ ತಮ್ಮ ಆಕ್ಷೇಪ ದಾಖಲಿಸಿದ್ದರು. ಇದರ ಬೆನ್ನಿಗೆ ಬಿಜೆಪಿಯ ಅಧಿಕೃತ ವಕ್ತಾರೆ ಸ್ಥಾನದಿಂದ ಶರ್ಮಾರನ್ನು ಅಮಾನತು ಮಾಡಲಾಗಿತ್ತು. ಆಕೆಯ ವಿರುದ್ಧ ಅನೇಕ ರಾಜ್ಯಗಳಲ್ಲಿ ಎಫ್ ಐ ಆರ್ ದಾಖಲಾಗಿದ್ದವು.
ನೂಪುರ್ ಶರ್ಮಾ ವಿರುದ್ಧ ದೆಹಲಿ, ಮಹಾರಾಷ್ಟ್ರ, ಉತ್ತರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ, ಕರ್ನಾಟಕ, ಜಮ್ಮು ಕಾಶ್ಮೀರ ಮತ್ತು ಅಸ್ಸಾಂ ನಲ್ಲಿ ಪ್ರಕರಣ ದಾಖಲಿಸಲಾಗಿತ್ತು.