ದಸರಾ ಆಚರಣೆಯ ಶುಭ ಸಂದರ್ಭದಲ್ಲೇ ಮೈಸೂರಿನ ರಾಜವಂಶಸ್ಥ ಒಡೆಯರ್ ಕುಟುಂಬಕ್ಕೆ ಮತ್ತೊಂದು ಮಗುವಿನ ಆಗಮನವಾಗಿದೆ. ರಾಜವಂಶಸ್ಥ ಯದುವೀರ್ ಒಡೆಯರ್ ಅವರ ಪತ್ನಿ ತ್ರಿಷಿಕಾ ಅವರು ಆಯುಧ ಪೂಜೆಯ ದಿನವಾದ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಈಗಾಗಲೇ ಏಳು ವರ್ಷದ ಒಬ್ಬ ಮಗನನ್ನು ಹೊಂದಿರುವ ಯುವರಾಜ ಯುವರಾಣಿಯರು ಈಗ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಹಾರಾಣಿ ತ್ರಿಷಿಕಾ ದೇವಿ ಖಾಸಗಿ ಆಸ್ಪತೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.
ಈ ನಡುವೆ ಹುಟ್ಟಿನ ಸೂತಕದಲ್ಲೇ ಯದುವೀರ ಒಡೆಯರ್ ದಸರಾ ಸಾಂಪ್ರದಯಿಕ ಪೂಜೆಯಲ್ಲಿ ತೊಡಗಿದರೇ ಎಂಬ ಅನುಮಾನ ವ್ಯಕ್ತವಾಗಿದೆ. ಹಿಂದೂ ಸಂಪ್ರದಾಯದಲ್ಲಿ ಹುಟ್ಟು ಮತ್ತು ಸಾವಿನ ನಂತರದ ಕೆಲವು ದಿನ ಸೂತಕ ಎಂದು ಪರಿಗಣಿಸಲಾಗುತ್ತದೆ. ಈ ದಿನಗಳಲ್ಲಿ ಯಾವುದೇ ಪೂಜೆ ಪುನಸ್ಕಾರಗಳು ಆ ಕುಟುಂಬದಲ್ಲಿ ನಡೆಯುವುದಿಲ್ಲ ಎಂಬುದು ತಿಳಿದಿರುವ ವಿಚಾರ.
ಹೀಗಿರುವಾಗ ಹುಟ್ಟಿನ ಸೂತಕದಲ್ಲೇ ಪೂಜೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸೂತಕದ ಸಂದರ್ಭದಲ್ಲೇ ಕಂಕಣ ತೊಟ್ಟು ಪೂಜೆ ನೆರವೇರಿಸಿದ್ದು, ಮುಂದಿನ ಪೂಜಾ ಕಾರ್ಯಕ್ರಮಗಳಲ್ಲೂ ಯದುವೀರ ಒಡೆಯರ್ ಇದೇ ರೀತಿಯಲ್ಲಿ ಭಾಗಿ ಆಗುವದೇ ಎಂಬ ಅನುಮಾನ ವ್ಯಕ್ತವಾಗಿದೆ.
ಅರಮನೆಯಲ್ಲಿ ಹೇಗೆ ಪೂಜಾ ಕೈಂಕರ್ಯಗಳು ನಡೆಯುತ್ತದೆ ಎಂಬ ಅಂಶ ಕುತೂಹಲಕ್ಕೆ ಕಾರಣವಾಗಿದೆ.ಈ ಕುರಿತಂತೆ ಮುಂದಿನ ಪೂಜಾ ವಿಧಿವಿಧಾನಗಳನ್ನ ಮುಂದುವರೆಸುವ ಬಗ್ಗೆ ಅರಮನೆ ಪುರೋಹಿತರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಅರಮನೆ ಮೂಲಗಳಿಂದ ತಿಳಿದು ಬಂದಿದೆ.