ಶ್ರೀರಾಮ ಮರ್ಯಾದಾ ಪುರುಷ ಎಂದು, ರಾವಣ ಅತ್ಯಂತ ದುಷ್ಟ ವ್ಯಕ್ತಿ ಎಂದು ಈ ದೇಶದ ಸಂಪ್ರದಾಯವಾದಿಗಳು, ಇಲ್ಲಿನ ಶೂದ್ರ ಸಮುದಾಯಗಳ ನಿಷ್ಕ್ರಿಯ ಮೆದುಳಿನಲ್ಲಿ ಸಾವಿರಾರು ವರುಷಗಳ ಹಿಂದೆಯೇ ಬಿತ್ತಿದ್ದಾರೆ. ಅದು ಈಗ ಒಳ್ಳೆಯ ಫಸಲು ಕೊಡುತ್ತಿದೆ ಎನ್ನುತ್ತಾರೆ ಕಲಬುರ್ಗಿಯ ಪತ್ರಕರ್ತ ವಿಕ್ರಮ್ ತೇಜಸ್.
ಇತ್ತೀಚೆಗೆ ನಡೆದ ನಾಡ ಹಬ್ಬ ವಿಜಯದಶಮಿ (ದಸರಾ) ದಿನದಂದು ಕಲಬುರ್ಗಿ ನಗರದಲ್ಲಿ ಹೊಸ ಬೆಳವಣಿಗೆಯೊಂದು ನಡೆಯಿತು. ಅದೇನೆಂದರೆ, ಸೌಹಾರ್ದ ಮೂರ್ತಿ ಮಹಾದಾಸೋಹಿ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬೃಹತ್ ಮಟ್ಟದ ರಾವಣ ಮೂರ್ತಿ ನಿರ್ಮಿಸಿ ದಹನ ಮಾಡುವ ಪ್ರಕ್ರಿಯೆ ತುಂಬಾ ಜೋರಾಗಿ ನಡೆದಿತ್ತು. ಅದರ ಹಿಂದೆ ಒಂದು ಪಕ್ಷ ಹಾಗೂ ಅದರ ತಾಯಿ ಸಂಘಟನೆ ಸದ್ದಿಲ್ಲದ ಹಾಗೆ ಕೆಲಸ ಮಾಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ದುರುದ್ದೇಶ ಅಡಗಿತ್ತು. ಅಷ್ಟೊತ್ತಿಗೆ ಸ್ಥಳೀಯ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ತೀಕ್ಷ್ಣ ಪ್ರಜ್ಞೆಯಿಂದ ಅದು ವಿಫಲವಾಯಿತು.
ರಾವಣ ಬದುಕಿದ!
ಸ್ಥಳೀಯ ದಲಿತ ಸಂಘಟನೆಗಳ ಸಮನ್ವಯ ಸಮಿತಿ, ದಲಿತ ಸೇನೆ ಮತ್ತು ಇತರ ಪ್ರಗತಿಪರ ಸಂಘಟನೆಗಳ ನಾಯಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ. ಒಂದು ವೇಳೆ ರಾವಣ ದಹನ ಮಾಡಲು ಅವಕಾಶ ನೀಡಿದ್ದಲ್ಲಿ ನಾವು ಕೂಡಾ ರಾಮನನ್ನು ದಹನ ಮಾಡುತ್ತೇವೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡುತ್ತಾರೆ. ಅದರ ಪ್ರತಿಫಲವಾಗಿ ಈ ವರ್ಷ ಜಿಲ್ಲಾಡಳಿತ ರಾವಣ ದಹನ ಮಾಡಲು ಅವಕಾಶ ನಿರಾಕರಿಸಿದೆ. ಆದ್ದರಿಂದ, ಈ ವರ್ಷ ರಾವಣ ಬದುಕಿದ (ಗೊಡ್ಡು ಸಂಪ್ರದಾಯ ನಿಂತಿತು). ಇದು ಸಂತೋಷದ ವಿಷಯ.
ಕಲಬುರ್ಗಿಯಲ್ಲೂ ಕೋಮುವಾದದ ಕೊಳ್ಳಿ
ಕರಾವಳಿಯಲ್ಲಿ ನಡೆಸುತ್ತಿದ್ದ ಕೋಮು ದಳ್ಳುರಿಯ ಪ್ರಯೋಗವನ್ನು ಬಿಸಿಲೂರಾದ ಸೂರ್ಯನಗರಿ ಎಂದೇ ಖ್ಯಾತಿಯಾಗಿರುವ ಕಲಬುರ್ಗಿಯಲ್ಲೂ ಮಾಡಲು ಶತಪ್ರಯತ್ನ ನಡೆಯುತ್ತಿದೆ. ಆದರೆ, ಇದು ಬಸವಾದಿ ಶರಣರ ಕ್ರಾಂತಿಯ ನಾಡು, ಸೂಫಿ, ಸಂತರ, ತತ್ವ ಪದಕಾರರ ಸೌಹಾರ್ದ ನಾಡು ಹಾಗೂ ಬೌದ್ಧರು ನೆಲೆಸಿದ ಹಾಗೂ ನಡೆದಾಡಿದ ಶಾಂತಿಯ ಬೀಡೂ ಹೌದು. ಹಾಗಾಗಿ ಅವರು ಇಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಆದರೆ, ಹಲವು ಜನ ಸಂಸ್ಕೃತಿಯ ಸಾಮರಸ್ಯದ ಈ ನಾಡಿಗೆ ಕೋಮುವಾದದ ಕೊಳ್ಳಿಯಿಟ್ಟು ಮೈ ಕಾಯಿಸಿಕೊಳ್ಳುವ ಪ್ರಯತ್ನ ಇತ್ತೀಚೆಗೆ ತುಂಬಾ ಜೋರಾಗಿದೆ. ಅವುಗಳನ್ನು ಹಿಮ್ಮೆಟ್ಟಿಸುವ ಶಕ್ತಿಗಳು ಸಹ ಮತ್ತೆ ಚಿಗುರೊಡೆಯುತ್ತಿರುವುದು ಸಮಾಧಾನ ನೀಡುತ್ತಿರುವ ಸಂಗತಿ.
ಶ್ರೀರಾಮ ಮರ್ಯಾದಾ ಪುರುಷ ಎಂದು, ರಾವಣ ಅತ್ಯಂತ ದುಷ್ಟ ವ್ಯಕ್ತಿ ಎಂದು ಈ ದೇಶದ ಸಂಪ್ರದಾಯವಾದಿಗಳು, ಇಲ್ಲಿನ ಶೂದ್ರ ಸಮುದಾಯಗಳ ನಿಷ್ಕ್ರಿಯ ಮೆದುಳಿನಲ್ಲಿ ಸಾವಿರಾರು ವರುಷಗಳ ಹಿಂದೆಯೇ ಬಿತ್ತಿದ್ದಾರೆ. ಅದು ಈಗ ಒಳ್ಳೆಯ ಫಸಲು ಕೊಡುತ್ತಿದೆ. ಜೊತೆಗೆ ಈ ಹುಂಬ ಮನಸ್ಥಿತಿಯ ಜನರಿಗೆ ವಿಜಯ ದಶಮಿ ದಿನದಂದು ರಾವಣನನ್ನು ದಹಿಸುವ ಬಿಟ್ಟಿ ಸಂಪ್ರದಾಯವನ್ನು ಇವರ ಮೇಲೆ ಇವರಿಗೆ ಗೊತ್ತಿಲ್ಲದ ಹಾಗೆ ಹೇರಿದ್ದಾರೆ.
ಇಲ್ಲಿ ಲಾಭವಿಲ್ಲ ಶ್ರಮ ಮಾತ್ರವೇ ಇರುವುದು
ಆದರೆ, ಶೂದ್ರ ಸಮುದಾಯವನ್ನು ಈ ಗೊಡ್ಡು ಸಂಪ್ರದಾಯಕ್ಕೆ ದೂಡಿದ ಅವರ್ಯಾರೂ ಇತ್ತ ಸುಳಿಯುವುದೂ ಇಲ್ಲ. ಇವರೇ ಹೊತ್ತು ತರಬೇಕು, ಇವರೇ ಕಟ್ಟಬೇಕು, ಇವರೇ ಪ್ರತಿಷ್ಠಾಪಿಸಬೇಕು ಹಾಗೂ ಇವರೇ ಸುಟ್ಟು ಹಾಕಬೇಕು. ಕಾರಣ, ಇಲ್ಲಿ ಲಾಭವಿಲ್ಲದೆ ಹೆಚ್ಚಿನ ಶ್ರಮ ಮಾತ್ರವೇ ಇರುವುದು… ಅವರಿಗೆ ಯಾವ ಶ್ರಮವೂ ಇಲ್ಲದೆ ಅಧಿಕ ಲಾಭವಿರುವ ದೇವಸ್ಥಾನಗಳು ಬೇಕು. ಅದು ಹಿಂದೂ ದೇವರಾಗಲಿ ಅಥವಾ ಮುಸ್ಲಿಂ ದೇವರಾಗಲಿ ನಡೆಯುತ್ತೆ, ಅಲ್ಲಿ ಅವರ ಸಂಪ್ರದಾಯಕ್ಕೆ ಹೊಂದಾಣಿಕೆ ಮಾಡಿಕೊಂಡು ಪರಿವರ್ತಿಸಿಕೊಳ್ಳುತ್ತಾರೆ.
ಇದೇ ಮನುಷ್ಯ ಧರ್ಮ
ಹಾಗೆ ನೋಡಿದರೆ, ಸುಡುವುದು ಅಥವಾ ಕೊಲ್ಲುವುದು ಸದ್ಧರ್ಮ ಲಕ್ಷಣವಲ್ಲ. ಮತಿಹೀನ ವ್ಯಕ್ತಿ ಮಾತ್ರ ಇಂತಹ ಕೆಲಸ ಮಾಡಲು ಸಾಧ್ಯ. ಸಂಸ್ಕೃತಿಯಿಲ್ಲದವರು ಮಾತ್ರ ಅಧರ್ಮ ಆಚರಣೆ ಮಾಡುತ್ತಾರೆ. ಕೊಲ್ಲುವುದು ಹೇಡಿಯ ಕೆಲಸ. ಮನ ಪರಿವರ್ತನೆ ಮಾಡುವುದು ಯೋಗಿಯ ಕೆಲಸ. ಸತ್ಯದ ಹಾದಿಯಲ್ಲಿ ನಡೆಯುವವನು, ಧೈರ್ಯಶಾಲಿಯಾಗಿದ್ದು, ಅವನು ಯಾರನ್ನೂ ಕೊಲ್ಲದೆ ಕ್ರೂರಿ ಅಥವಾ ದುಷ್ಟ ವ್ಯಕ್ತಿಯನ್ನು ಸಹ ಪರಿವರ್ತಿಸುತ್ತಾನೆ. ಅದೇ ನಿಜವಾದ ಮನುಷ್ಯ ಧರ್ಮ.
ರಾಮಾಯಣ ಒಂದು ಕಾಲ್ಪನಿಕ ಮಹಾ ಕಾವ್ಯ
ಶ್ರೀರಾಮನು ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ ಮಹಾಕಾವ್ಯದ ಕಥಾ ನಾಯಕ, ರಾವಣ ಆ ಮಹಾಕಾವ್ಯದ ಖಳನಾಯಕ ಎಂಬ ನಂಬಿಕೆ ನನ್ನನ್ನೂ ಒಳಗೊಂಡಂತೆ ಹಲವರಲ್ಲಿದೆ ಎಂದುಕೊಂಡಿದ್ದೇನೆ. ಆದ್ದರಿಂದ ರಾಮ, ಲಕ್ಷ್ಮಣ, ಸೀತೆ, ರಾವಣ ಹಾಗೂ ಹನುಮಂತ ಇವೆಲ್ಲ ಕಾಲ್ಪನಿಕ ಪಾತ್ರಗಳು. ರಾಮಾಯಣವೂ ಒಂದು ಕಾಲ್ಪನಿಕ ಮಹಾ ಕಾವ್ಯವಾಗಿದೆ ಎಂದೇ ಹೇಳಬಹುದು.
ತ್ರಿಪದಿ ಕವಿ, ತತ್ವಜ್ಞಾನಿ ಸರ್ವಜ್ಞನನ್ನು ಒಮ್ಮೆ ಯಾರೋ ಒಬ್ಬರು ರಾಮಾಯಣ ಮತ್ತು ಮಹಾಭಾರತ ಕುರಿತು ಏನಾದರೂ ಹೇಳಿ ಎಂದು ಕೇಳಿಕೊಂಡರಂತೆ. ಅದಕ್ಕೆ ಆ ಮಹಾ ಕವಿ ಹೀಗೆ ಹೇಳುತ್ತಾರೆ-
“ಹಾದರದ ಕಥೆಯನ್ನು
ಸೋದರರ ವಧೆಯನ್ನು
ಆಲಿಸಿ ಕೇಳುವವನನ್ನು ಕರೆತಂದು
ಕೆರದಿಂದ ಹೊಡೆ ಎಂದ ಸರ್ವಜ್ಞ”
ಅಂದರೆ, ಇದರ ಅರ್ಥ ಇಷ್ಟೇ- ಇವುಗಳಲ್ಲಿ ಒಂದು ಸೋದರರ ವಧೆ ಮಾಡುವುದು, ಮತ್ತೊಂದು ಹಾದರದ ಕಥೆಯಾಗಿದೆಯೇ ಹೊರತು ಇದರಿಂದ ಕಲಿಯುವುದೇನೂ ಇಲ್ಲ. ಇವುಗಳು ನಿಜವಾದ ಘಟನೆಗಳು ಎನ್ನುವುದಕ್ಕೆ ನಂಬಲರ್ಹ ಕುರುಹುಗಳಾಗಲಿ, ಐತಿಹಾಸಿಕ ಹಿನ್ನೆಲೆಯಾಗಲಿ ಏನೂ ಇಲ್ಲ. ಇದೊಂದು ಹೇರಿಕೆಯ ಸಂಪ್ರದಾಯವೇ ಹೊರತು ಮತ್ತೊಂದಿಲ್ಲ.
ರಾಮಾಯಣ ಮತ್ತು ಮಹಾಭಾರತ ಎರಡನ್ನೂ ಕಾಲ್ಪನಿಕ ಎನ್ನುವ ಸತ್ಯವನ್ನು ಅರಿತಿರುವ, ರಾಮ-ಕೃಷ್ಣರು ಆ ಪುರಾಣಗಳ ಪುರುಷರೇ ವಿನಃ ಮತ್ತೇನೂ ಅಲ್ಲ. ಆದರೆ, ನನಗೆ ಈ ವರ್ಷ ಒಂದು ಆಶ್ಚರ್ಯ ಅಥವಾ ಗೊಂದಲ ಎದುರಾಗುತ್ತಿದೆ. ಅದೇನೆಂದರೆ, ರಾವಣನು ಶೂದ್ರ ರಾಜ, ಬೌದ್ಧ ರಾಜ ಅಂತೆಲ್ಲ ಅನೇಕ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅದನ್ನು ಎಲ್ಲರೂ ಗಮನಿಸಿರಬಹುದು. ಅದರಲ್ಲೂ ಈ ವರ್ಷವಂತು ಅಂತಹ ಸಂದೇಶಗಳು ಅತೀ ಹೆಚ್ಚು ವೈರಲ್ ಆಗುತ್ತಿವೆ. ಅದರಿಂದ ಅಷ್ಟೇ ಗೊಂದಲಗಳು ಸೃಷ್ಟಿಯಾಗುತ್ತಿವೆ.
ಗೊಂದಲಗಳು
ರಾವಣ ಬೌದ್ಧ ರಾಜ ಎಂದಾದರೆ, ನಾವು ಪುರಾಣ ಪುರುಷ ಎಂದು ನಂಬಿದ್ದ ರಾಮನನ್ನು ವೈದಿಕರ ರಾಜ ಎಂದು ನಾವೇ ಒಪ್ಪಿಕೊಂಡಂತೆ ಆಗುವುದಿಲ್ಲವೇ?
ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳು ಸಂಪುಟ 4 ರಲ್ಲಿ ಡಾ.ಅಂಬೇಡ್ಕರ್ ಅವರು (ಹಿಂದೂ ಧರ್ಮದ ಒಗಟುಗಳು) ರಾಮ ಮತ್ತು ಕೃಷ್ಣನ ಬಗ್ಗೆ ಸಾಕಷ್ಟು ವಿಶ್ಲೇಷಣೆ ಮಾಡಿದ್ದಾರೆ. ಆದರೆ ರಾವಣ ಬೌದ್ಧ ಅಥವಾ ಶೂದ್ರ ರಾಜ ಅಂತ ಎಲ್ಲೂ ಹೇಳಿಲ್ಲ. ಹಾಗಾಗಿ, ನಾವೇ ಹೊಸ ಗೊಂದಲ ಸೃಷ್ಟಿಸಿದಂತಾಗುವುದಿಲ್ಲವೇ?
ರಾವಣ ದಹನ ನಿಲ್ಲಿಸಿ ರಾಮನ ಹೆಸರಿನಲ್ಲಿ ರಾಜ್ಯವಾಳಲು ಹೊರಟವರಿಗೆ ಬ್ರೇಕ್ ಹಾಕಿದಂತಾಗಿದೆ. ಒಳ್ಳೆಯ ಹೆಜ್ಜೆ. ಒಂದು ತಪ್ಪನ್ನು ಸರಿಪಡಿಸಿದಂತಾಗಿದೆ. ಆದರೆ, ರಾವಣನು ಬೌದ್ಧ ಅಥವಾ ಶೂದ್ರ ರಾಜನಾಗಿದ್ದ ಎಂದು ಹೇಳುವ ಮೂಲಕ ಹೊಸ ತಪ್ಪೊಂದನ್ನು ಮಾಡಿದಂತಾಗುವುದಿಲ್ಲವೇ?
ರಾವಣನ ಬಗ್ಗೆ ಹೊಸ ಇತಿಹಾಸ ಕಟ್ಟುವ ಮೂಲಕ ರಾಮನನ್ನು ಸಹ ಐತಿಹಾಸಿಕ ಪುರುಷನನ್ನಾಗಿ ಮಾಡುವ ಮತ್ತೊಂದು ತಪ್ಪು ಇದಲ್ಲವೇ?
ಭಾವ ಜೀವಿ (emotional fellow) ಗಳಾದ ದಲಿತರು ಖುಷಿ ಪಟ್ಟರೆ ಆಶ್ಚರ್ಯ ಪಡಬೇಕಿಲ್ಲ. ಇತ್ತೀಚೆಗೆ ʼನಾನು ಹಿಂದೂವಲ್ಲ, ನಾನೊಬ್ಬ ಬೌದ್ಧʼ (‘I am not Hindu, I am a Buddhist’) ಎನ್ನುತ್ತಲೇ ಮತಾಂತರ ನಿಷೇಧ ಕಾಯಿದೆಯನ್ನು ಬೆಂಬಲಿಸಿದಾಗಲೂ ಖುಷಿ ಪಟ್ಟ ಮುಗ್ಧರನ್ನು ಕಂಡಿದ್ದೇವೆ! ಯಾರೋ ಜೈ ಭೀಮ್ ಎಂದರೆ ಎಲ್ಲವನ್ನು ಮರೆತು ಬೆಂಬಲಿಸುವವರ ಸಂಖ್ಯೆ ಕಡಿಮೆಯೆನಿಲ್ಲ.
ದಲಿತ ಹೋರಾಟಗಾರರು ಹಾಗೂ ಸಾಹಿತಿಗಳು ರಾವಣನನ್ನು ಕುರಿತು ಒಂದೆರಡು ಪುಸ್ತಕ ಬರೆದು, ಒಂದೆರಡು ಸಲ ಜನುಮದಿನ ಆಚರಣೆ ಮಾಡಿದರೆ ಸಾಕು. ದಲಿತರನ್ನು ಓಲೈಕೆ ಮಾಡಲು ರಾವಣನನ್ನು ಅದ್ಭುತವಾಗಿ ವರ್ಣಿಸಿ ರಾಮನ ಜನ್ಮದಿನ ಊರು ರಾಜ್ಯ ಅವನು ವನವಾಸ ಮಾಡಿದ ಕಾಡು ಎಲ್ಲಾ ದಾಖಲೆಗಳನ್ನು ಅಧಿಕೃತ ಎಂದು ಸಾಬೀತು ಮಾಡುವ ಹಸಿ ಸುಳ್ಳಿನ ಹೊಸ ಇತಿಹಾಸವನ್ನೇ ಕಟ್ಟುತ್ತಾರೆ ಎನ್ನುವುದೇ ನಮಗಿರುವ ಆತಂಕ.
ಸುಳ್ಳನ್ನು ವಿರೋಧಿಸುವ ವೇಗದಲ್ಲಿ
ನಾವಿಂದು ತುಂಬಾ ಪ್ರಜ್ಞಾಪೂರ್ವಕವಾಗಿ ಆಲೋಚನೆ ಮಾಡಬೇಕಿದೆ. ಅವರ ನಾಟಕದ ಕಥಾನಾಯಕನನ್ನು ಹಂಗಿಸುವ ಅಥವಾ ನಿಂದಿಸುವ ಭರದಲ್ಲಿ ಅವರದೇ ಕಥೆಯ ಖಳನಾಯಕನನ್ನು ನಮ್ಮ ಸಮುದಾಯದ ನಾಯಕನಾಗಿಸುವುದು ಎಷ್ಟು ಸರಿ? ನಾವು ಸಮರ್ಥಿಸುವ ನಾಯಕ ಅಥವಾ ನಾವು ಒಪ್ಪಿಕೊಳ್ಳುವ ಕಥೆಯಲ್ಲಿ ಏನಾದರೂ ವೈಜ್ಞಾನಿಕತೆಯ ವಾಸನೆಯಾಗಲಿ ಅಥವಾ ಐತಿಹಾಸಿಕ ಕುರುಹಗಳಾಗಲಿ ಇವೆಯೇ ಎಂಬುದನ್ನು ಗಮನಿಸಬೇಕು. ಸತ್ಯದ ಹುಡುಕಾಟದಲ್ಲಿ ಕಾಲ್ಪನಿಕ ಕಥೆಗಳು ಸುಳಿಯಲೇ ಬಾರದು. ಸುಳ್ಳನ್ನು ವಿರೋಧಿಸುವ ವೇಗದಲ್ಲಿ ಮತ್ತೊಂದು ಸುಳ್ಳಿನ ಆಸರೆ ಪಡೆಯಬಾರದು ಎನ್ನುವುದು ನನ್ನ ಅಭಿಪ್ರಾಯ.
ವಿಕ್ರಮ್ ತೇಜಸ್
ಕಲಬುರ್ಗಿಯವರಾದ ಇವರು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು.