ದೆಹಲಿ: ದೇಶದಲ್ಲಿ ಬೂತ್ ಲೆವೆಲ್ ಆಫೀಸರ್‌ಗಳ (BLO) ಸಾವುಗಳು ನಿಲ್ಲುತ್ತಿಲ್ಲ. ಇತ್ತೀಚೆಗೆ, ಮತ್ತೊಬ್ಬ ಬಿಎಲ್‌ಒ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಾಜಸ್ಥಾನದ ಧೋಲ್ಪೂರ್‌ನಲ್ಲಿ 41 ವರ್ಷದ ಅನುಜ್ ಗಾರ್ಗ್ ಎಂಬ ಶಿಕ್ಷಕರು ಬಿಎಲ್‌ಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ಬೆಳಿಗ್ಗೆ ಅವರಿಗೆ ಹೃದಯಾಘಾತ ಸಂಭವಿಸಿದೆ.
ಕುಟುಂಬ ಸದಸ್ಯರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಾರ್ಗಮಧ್ಯದಲ್ಲಿಯೇ ಗಾರ್ಗ್ ಮೃತಪಟ್ಟಿದ್ದಾರೆ. ಎಸ್‌ಐಆರ್‌ನ ಕೆಲಸದ ಒತ್ತಡದಿಂದಲೇ ಗಾರ್ಗ್ ಅವರಿಗೆ ಹೃದಯಾಘಾತವಾಗಿ ಸಾವು ಸಂಭವಿಸಿದೆ ಎಂದು ಕುಟುಂಬ ಸದಸ್ಯರು ನೋವು ವ್ಯಕ್ತಪಡಿಸಿದ್ದಾರೆ.
ಗಾರ್ಗ್ ಅವರ ಸಹೋದರಿ ವಂದನಾ ಮಾತನಾಡಿ, “ನನ್ನ ಸಹೋದರ ಮಧ್ಯರಾತ್ರಿ 1 ಗಂಟೆಯವರೆಗೂ ಎಸ್‌ಐಆರ್‌ಗೆ ಸಂಬಂಧಿಸಿದ ಕೆಲಸ ಮಾಡಿದ್ದರು. ತೀವ್ರವಾದ ಕೆಲಸದ ಒತ್ತಡದಿಂದಾಗಿ ಅವರು ಆತಂಕಕ್ಕೆ ಒಳಗಾಗಿದ್ದರು. ಎಸ್‌ಐಆರ್ ಕೆಲಸ ಪ್ರಾರಂಭವಾದಾಗಿನಿಂದ ಅವರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು,” ಎಂದು ಹೇಳಿದರು.
“ಭಾನುವಾರ ಬೆಳಿಗ್ಗೆ ಅವರು ನನಗೆ ಟೀ ಕೇಳಿದರು, ಆದರೆ ನಾನು ಟೀ ತಯಾರಿಸುವಷ್ಟರಲ್ಲಿ ಕುಸಿದುಬಿದ್ದರು,” ಎಂದು ವಂದನಾ ಅಳುತ್ತಾ ತಿಳಿಸಿದರು. ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರು.
ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಗಾರ್ಗ್ ಅವರ ಸೂಪರ್‌ವೈಸರ್ ಆದ ಲೋಕೇಂದ್ರ ಕುಮಾರ್ ಕ್ಷೋತ್ರಿಯ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಗಾರ್ಗ್ ಉತ್ತಮ ಕೆಲಸಗಾರ ಎಂದು ಹೇಳಿದರು.
ಗಾರ್ಗ್ ಅವರಿಗೆ ವಹಿಸಿದ ಕೆಲಸದಲ್ಲಿ ಶೇಕಡಾ 80 ರಷ್ಟನ್ನು ಅವರು ಪೂರ್ಣಗೊಳಿಸಿದ್ದರು ಮತ್ತು ಕೆಲಸದ ಬಗ್ಗೆ ಎಂದಿಗೂ ದೂರಲಿಲ್ಲ ಎಂದು ತಿಳಿಸಿದರು. ಆದರೆ, ಗಾರ್ಗ್ ಅವರೊಂದಿಗೆ ಬಿಎಲ್‌ಒ ಆಗಿ ಕೆಲಸ ಮಾಡುತ್ತಿದ್ದ ಇನ್ನೊಬ್ಬ ವ್ಯಕ್ತಿ, ಗಾರ್ಗ್ ಅವರು ಕೆಲಸದ ಒತ್ತಡದಲ್ಲಿದ್ದಾರೆ ಎಂದು ತಮ್ಮ ಬಳಿ ಹೇಳಿಕೊಂಡಿದ್ದರು ಎಂದು ತಿಳಿಸಿದರು. “ನಾನು ಗಾರ್ಗ್ ಅವರನ್ನು 2-3 ದಿನಗಳ ಹಿಂದೆ ಭೇಟಿಯಾಗಿದ್ದೆ. ನಾವೆಲ್ಲರೂ ಒತ್ತಡದಲ್ಲಿದ್ದೇವೆ,” ಎಂದು ಆ ವ್ಯಕ್ತಿ ಹೇಳಿದ್ದಾರೆ.
