Home ಬೆಂಗಳೂರು ಆಟದ ಮೈದಾನ ಮರೆತು ಆನ್ಲೈನ್‌ ಜಗತ್ತಿನಲ್ಲಿ ಮುಳುಗಿರುವ ಮಕ್ಕಳು: ಆತಂಕ ವ್ಯಕ್ತಪಡಿಸಿದ ವರದಿ

ಆಟದ ಮೈದಾನ ಮರೆತು ಆನ್ಲೈನ್‌ ಜಗತ್ತಿನಲ್ಲಿ ಮುಳುಗಿರುವ ಮಕ್ಕಳು: ಆತಂಕ ವ್ಯಕ್ತಪಡಿಸಿದ ವರದಿ

0

ಬೆಂಗಳೂರು: ಕೋವಿಡ್-19 ನಂತರ ಮಕ್ಕಳಲ್ಲಿ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಮತ್ತು ಆನ್‌ಲೈನ್ ಚಟುವಟಿಕೆಗಳು ಗಣನೀಯವಾಗಿ ಹೆಚ್ಚಾಗಿದ್ದು, 42% ಮಕ್ಕಳು ತಮ್ಮ ಆನ್‌ಲೈನ್ ಸ್ನೇಹಿತರಿಂದ ಲೈಂಗಿಕ ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ ಎಂದು ಒಂದು ಅಧ್ಯಯನ ಬಹಿರಂಗಪಡಿಸಿದೆ.

ಮಕ್ಕಳ ಹಕ್ಕುಗಳ ಆಯೋಗವು “ಮಕ್ಕಳ ಆನ್‌ಲೈನ್ ಅಪಾಯಗಳ” ಕುರಿತು ನಡೆಸಿದ ವಿಶೇಷ ಅಧ್ಯಯನದ ಸಾರಾಂಶವು ಈ ಆತಂಕಕಾರಿ ವಿಷಯವನ್ನು ಬೆಳಕಿಗೆ ತಂದಿದೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಕಾಸಸೌಧದಲ್ಲಿ ಆಯೋಜಿಸಿದ ಕಾರ್ಯಾಗಾರದಲ್ಲಿ ಈ ವರದಿಯನ್ನು ಬಿಡುಗಡೆಗೊಳಿಸಿದ್ದು, ಈ ಬಗ್ಗೆ ಶಾಸನಸಭೆಯ ಅಧಿವೇಶನದಲ್ಲಿ ಚರ್ಚೆ ನಡೆಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ತರಗತಿಗಳು ಮತ್ತು ಆಟದ ಮೈದಾನದಲ್ಲಿ ಸಮಯ ಕಳೆಯಬೇಕಾದ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಖಾತೆಗಳನ್ನು ರಚಿಸಿಕೊಂಡಿರುವ ಅವರು, ಗೇಮಿಂಗ್ ಮತ್ತು ಚಾಟ್ ರೂಂಗಳಲ್ಲಿ ಸೈಬರ್ ಕ್ರಿಮಿನಲ್‌ಗಳಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ. 15-18 ವರ್ಷದ ಮಕ್ಕಳಲ್ಲಿ 25% ದಿನಕ್ಕೆ ಹಲವು ಬಾರಿ ಮೊಬೈಲ್ ಬಳಸುತ್ತಿದ್ದು, 80% ಹದಿಹರೆಯದವರು ದೈನಂದಿನ ಸಂವಹನಕ್ಕಾಗಿ ಮೊಬೈಲ್ ಬಳಸುತ್ತಾರೆ. ಒಂದು ಗಂಟೆಗಿಂತ ಹೆಚ್ಚು ಕಾಲ ದಿನವೂ ಮೊಬೈಲ್ ಬಳಸುವುದಾಗಿ ಅವರು ತಿಳಿಸಿದ್ದಾರೆ.

ಹದಿಹರೆಯದವರಲ್ಲಿ 16% ಅಪರಿಚಿತರೊಂದಿಗೆ ಆನ್‌ಲೈನ್‌ನಲ್ಲಿ ಸ್ನೇಹ ಬೆಳೆಸಿದ್ದಾರೆ. ವೈಯಕ್ತಿಕವಾಗಿ ಭೇಟಿಯಾದವರಿದ್ದೀರಾ ಎಂದು ಕೇಳಿದಾಗ 10% ಹೌದು ಎಂದಿದ್ದಾರೆ, ಇದರಲ್ಲಿ 4% ಹೆಣ್ಣು ಮಕ್ಕಳು ಮತ್ತು 12% ಗಂಡು ಮಕ್ಕಳು ಸೇರಿದ್ದಾರೆ. ಈ ಪೈಕಿ 9% ನಗರದ ಮಕ್ಕಳು ಮತ್ತು 12% ಗ್ರಾಮೀಣ ಮಕ್ಕಳು ಇದ್ದಾರೆ ಎಂದು ವರದಿ ತಿಳಿಸಿದೆ.

ಅಧ್ಯಯನದ ಮುಖ್ಯಾಂಶಗಳು:

ಎಲ್ಲ ವಯೋಮಾನದ ಮಕ್ಕಳಲ್ಲಿ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಬಳಕೆ ಸಾಮಾನ್ಯವಾಗಿದೆ. ಪಾಲಕರ ಪ್ರಕಾರ, 42% ಮಕ್ಕಳು ಆನ್‌ಲೈನ್ ಸ್ನೇಹಿತರಿಂದ ಲೈಂಗಿಕ ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ, ಇದರಿಂದ ಕಿರುಕುಳ ಮತ್ತು ಗ್ರೂಮಿಂಗ್ ಸಮಸ್ಯೆಗಳು ಹೆಚ್ಚಾಗುತ್ತಿವೆ. 1% ಮಕ್ಕಳು ಅಪರಿಚಿತರೊಂದಿಗೆ ಖಾಸಗಿ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.

8-11 ವರ್ಷದ ಮಕ್ಕಳಲ್ಲಿ 87% ಆನ್‌ಲೈನ್ ಬಳಸುತ್ತಿದ್ದರೆ, 15-18 ವರ್ಷದವರಲ್ಲಿ 99% ಗಂಡು ಮಕ್ಕಳು ಮತ್ತು 100% ಹೆಣ್ಣು ಮಕ್ಕಳು ಆನ್‌ಲೈನ್‌ನಲ್ಲಿ ಸಕ್ರಿಯರಾಗಿದ್ದಾರೆ.

ಕೋವಿಡ್ ನಂತರ 15-18 ವರ್ಷದ ಅರ್ಧದಷ್ಟು ಮಕ್ಕಳು ಆನ್‌ಲೈನ್ ಬಳಕೆಯಲ್ಲಿ ತೊಡಗಿಕೊಂಡಿದ್ದಾರೆ. ತರಗತಿ ಮುಗಿದ ನಂತರ ಆಟದ ಮೈದಾನಕ್ಕೆ ಹೋಗದೆ, 72% ಮಕ್ಕಳು ವಿರಾಮದ ಸಮಯವನ್ನು ಆನ್‌ಲೈನ್‌ನಲ್ಲಿ ಕಳೆಯುತ್ತಿದ್ದಾರೆ.

12-14 ವರ್ಷದ ಮಕ್ಕಳಲ್ಲಿ 97% ಯೂಟ್ಯೂಬ್ ಬಳಸುತ್ತಿದ್ದರೆ, 92% ವಾಟ್ಸಾಪ್‌ನಲ್ಲಿ ತೊಡಗಿದ್ದಾರೆ, ಮತ್ತು 73% ಸರ್ಚ್ ಎಂಜಿನ್‌ಗಳನ್ನು ಬಳಸುತ್ತಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.

ಶಿಫಾರಸುಗಳು:
ಪಾಲಕರು ಮತ್ತು ಮಕ್ಕಳ ನಡುವೆ ಸುರಕ್ಷಿತ ಆನ್‌ಲೈನ್ ವರ್ತನೆಯ ಬಗ್ಗೆ ಮುಕ್ತ ಸಂವಾದ; ವಯಸ್ಸಿಗೆ ತಕ್ಕ ಡಿಜಿಟಲ್ ಸುರಕ್ಷತಾ ಉಪಕರಣಗಳ ತಯಾರಿಕೆ; ಶಾಲಾ ಪಠ್ಯಕ್ರಮದಲ್ಲಿ ಡಿಜಿಟಲ್ ಸಾಕ್ಷರತೆ ಮತ್ತು ಸುರಕ್ಷತೆಯನ್ನು ಕಡ್ಡಾಯಗೊಳಿಸುವುದು; ಸಹಪಾಠಿಗಳ ನೇತೃತ್ವದ ಶಿಕ್ಷಣ ಕಾರ್ಯಕ್ರಮಗಳ ಆರಂಭ; ಶಿಕ್ಷಕರು ಮತ್ತು ಸಮಾಲೋಚಕರಿಗೆ ತರಬೇತಿ; ಶಾಲೆಯಲ್ಲಿ ವರದಿ ಸಂಗ್ರಹ ವ್ಯವಸ್ಥೆಯ ಬಲವರ್ಧನೆ; ಜಿಲ್ಲಾ ಮಟ್ಟದ ಸಹಾಯವಾಣಿ ಮತ್ತು ಬೆಂಬಲ ಕೇಂದ್ರಗಳ ಸ್ಥಾಪನೆ; ಕರ್ನಾಟಕ ಒಎಸ್‌ಇಎಸಿ ಟಾಸ್ಕ್ ಫೋರ್ಸ್ ರಚನೆ.


OnlineSafety #ChildRights #CyberRisks #KarnatakaNews

You cannot copy content of this page

Exit mobile version