ಹೊಸ ದೆಹಲಿ: ಬೆಂಗಳೂರಿನಲ್ಲಿ ಮಂಗಳವಾರ ನಡೆದ 26 ವಿರೋಧ ಪಕ್ಷಗಳ ಸಭೆಯಲ್ಲಿ ಮಹತ್ವದ ನಿರ್ಧಾರವೊಂದನ್ನು ಕೈಗೊಳ್ಳಲಾಗಿದೆ. ಮೂಲಗಳ ಪ್ರಕಾರ ಎದುರಾಳಿ ಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ INDIA ಎಂದು ಹೆಸರಿಟ್ಟಿವೆ. ಇದರ ಪೂರ್ಣ ಸ್ವರೂಪವನ್ನು ಇಂಡಿಯನ್ ನ್ಯಾಷನಲ್ ಡೆಮೊಕ್ರಟಿಕ್ ಇನ್ಕ್ಲೂಸಿವ್ ಅಲಯನ್ಸ್ (Indian National Democratic Inclusive Alliance) ಎಂದು ಹೇಳಲಾಗುತ್ತಿದೆ.
ಈ ಮೈತ್ರಿ ಕೂಟದ ಹೆಸರನ್ನು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸೂಚಿಸಿದ್ದು, ಬಹುತೇಕ ಪಕ್ಷಗಳು ತಮ್ಮ ಸಮ್ಮತಿ ಸೂಚಿಸಿವೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಈ ಕುರಿತು ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ, ಆದರೆ ಹೆಚ್ಚಿನ ಪಕ್ಷಗಳು ಈ ಹೆಸರನ್ನು ಬೆಂಬಲಿಸಿವೆ.
ಭಾರತದಲ್ಲಿ ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದೆ. ಬಿಜೆಪಿ
ವಿರುದ್ಧ ವಿರೋಧ ಪಕ್ಷಗಳು ಸಜ್ಜಾಗುತ್ತಿದ್ದು ಈ ನಿಟ್ಟಿನಲ್ಲಿ ಈಗಾಗಲೇ ಸಭೆಗಳು ನಡೆದಿವೆ. ಇದೇ ವಿಷಯದಡಿ ಜುಲೈ 17 ಮತ್ತು 18ರಂದು ಬೆಂಗಳೂರಿನಲ್ಲಿ 26 ವಿರೋಧ ಪಕ್ಷಗಳು ಒಟ್ಟಾಗಿ ಸಭೆ ಸೇರಿವೆ. ಈ ಪಕ್ಷಗಳು ಒಂದೇ ವೇದಿಕೆಯಲ್ಲಿ ಒಂದಾಗುತ್ತಿರುವುದು ಇದು ಎರಡನೇ ಬಾರಿ. ಜೂನ್‌ನಲ್ಲಿ ಈ ಎಲ್ಲಾ ಪಕ್ಷಗಳು ಪಾಟ್ನಾದಲ್ಲಿ ಒಟ್ಟಿಗೆ ಕುಳಿತಿದ್ದವು. ಮತಗಳ ವಿಭಜನೆಯನ್ನು ನಿಲ್ಲಿಸಿ, ಬಿಜೆಪಿ ಮೂರನೇ ಬಾರಿ ಅಧಿಕಾರಕ್ಕೆ ಬರಬಾರದು ಎಂಬ ಉದ್ದೇಶದಿಂದ ಲೋಕಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸುವುದು ಈ ಎಲ್ಲಾ ಪಕ್ಷಗಳ ಗುರಿಯಾಗಿದೆ.