ವೈಫಲ್ಯ ನಿಮ್ಮದು, ರಾಜೀನಾಮೆ ನೀಡಿ: ಪ್ರಧಾನಿ ಮೋದಿ ಭಾಷಣದ ವಿರುದ್ಧ ವಿರೋಧ ಪಕ್ಷಗಳಿಂದ ಆಕ್ರೋಶ

ದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ (ಸಂವಿಧಾನದ 131ನೇ ತಿದ್ದುಪಡಿ) ಸೋಲುಂಡ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ನಡೆಸಿದ ಭಾಷಣ ಹೊಸ ರಾಜಕೀಯ ವಿವಾದದ ಕಿಡಿ ಹೊತ್ತಿಸಿದೆ. ಪ್ರಧಾನಿಯವರ ಭಾಷಣವು ಸಂಪೂರ್ಣವಾಗಿ ಪಕ್ಷಪಾತದಿಂದ ಕೂಡಿದ ರಾಜಕೀಯ ಪ್ರಸಾರವಾಗಿದೆ ಎಂದು ವಿರೋಧ ಪಕ್ಷದ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಸೂದೆಯ ಸೋಲಿಗೆ ವಿರೋಧ ಪಕ್ಷಗಳೇ ಕಾರಣ ಎಂದು ಪ್ರಧಾನಿ ಆರೋಪಿಸುತ್ತಿದ್ದರೆ, ಇದಕ್ಕೆ ತದ್ವಿರುದ್ಧವಾಗಿ ಸರ್ಕಾರದ ವೈಫಲ್ಯವೇ ಕಾರಣ ಎಂದು ಪ್ರತಿಪಕ್ಷಗಳು ತಿರುಗೇಟು ನೀಡಿವೆ.


ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ಕಳೆದ 12 ವರ್ಷಗಳಲ್ಲಿ ಸಾಧಿಸಿದ್ದು ಏನೂ ಇಲ್ಲದ ಪ್ರಧಾನಿ, ಹತಾಶರಾಗಿ ದೇಶವನ್ನುದ್ದೇಶಿಸಿ ಮಾಡುವ ಅಧಿಕೃತ ಭಾಷಣವನ್ನು ಹಸಿ ಸುಳ್ಳುಗಳು ಮತ್ತು ಕೆಸರೆರಚುವ ರಾಜಕೀಯ ಪ್ರಚಾರವಾಗಿ ಬದಲಿಸಿದ್ದಾರೆ,” ಎಂದು ಕಿಡಿಕಾರಿದ್ದಾರೆ. ಜನರ ಆಕಾಂಕ್ಷೆಗಳಿಗೆ ತಕ್ಕಂತೆ ಆಡಳಿತ ನಡೆಸುವಲ್ಲಿ ಸೋತಿರುವ ಬಿಜೆಪಿ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ ಎಂದು ಅವರು ಒತ್ತಾಯಿಸಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿಕ್ರಿಯಿಸಿ, ಮಹಿಳಾ ಮೀಸಲಾತಿಯ ಮರೆಯಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ (Delimitation) ಹುನ್ನಾರ ನಡೆಸುತ್ತಿರುವ ಪ್ರಧಾನಿ ದೇಶದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇತ್ತ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮಾತನಾಡಿ, ಮಸೂದೆ ಅಂಗೀಕರಿಸಲು ವಿಫಲವಾಗಿರುವ ಎನ್‌ಡಿಎ ಸರ್ಕಾರ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸೋತಿದೆ. ಆದ್ದರಿಂದ ಕೇಂದ್ರ ಸರ್ಕಾರ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮತ್ತೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ವಿರುದ್ಧ ಸಿಪಿಐ ಸಂಸದ ಪಿ. ಸಂತೋಷ್ ಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತ ಜ್ವಾನೇಶ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ. ಪ್ರಧಾನಿಯವರು ತಮ್ಮ ಭಾಷಣದ ಮೂಲಕ ಅಸೆಂಬ್ಲಿ ಚುನಾವಣೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಅವರು ದೂರಿದ್ದಾರೆ. ದೂರದರ್ಶನ ಮತ್ತು ಸಂಸದ್ ಟಿವಿಯಂತಹ ಸಾರ್ವಜನಿಕ ವೇದಿಕೆಗಳನ್ನು ಬಳಸಿಕೊಂಡು ಪ್ರಧಾನಿ ಸರ್ಕಾರಿ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಅವರು, ಈ ಬಗ್ಗೆ ಚುನಾವಣಾ ಆಯೋಗವು ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು