Home ವಿದೇಶ ದೊಡ್ಡ ಮಟ್ಟದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾದ ಒರಾಕಲ್: 30,000 ಸಿಬ್ಬಂದಿ ವಜಾ, 12,000 ಭಾರತೀಯರಿಗೆ ಸಂಕಷ್ಟ

ದೊಡ್ಡ ಮಟ್ಟದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾದ ಒರಾಕಲ್: 30,000 ಸಿಬ್ಬಂದಿ ವಜಾ, 12,000 ಭಾರತೀಯರಿಗೆ ಸಂಕಷ್ಟ

0

ನ್ಯೂಯಾರ್ಕ್: ಅಮೆರಿಕದ ತಂತ್ರಜ್ಞಾನ ದೈತ್ಯ ಒರಾಕಲ್ (Oracle) ಸಂಸ್ಥೆಯು ಮಂಗಳವಾರ ಏಕಾಏಕಿ ಭಾರಿ ಪ್ರಮಾಣದ ಲೇಆಫ್‌ಗೆ ಚಾಲನೆ ನೀಡಿದ್ದು, ವಿಶ್ವದಾದ್ಯಂತ ಕೆಲಸ ಮಾಡುತ್ತಿರುವ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಉದ್ಯೋಗ ಕಡಿತದಿಂದ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವುದು ಭಾರತೀಯರು ಎಂಬುದು ಆತಂಕಕಾರಿ ಸಂಗತಿಯಾಗಿದೆ.

ಒಟ್ಟು 1.62 ಲಕ್ಷ ಸಿಬ್ಬಂದಿಯನ್ನು ಹೊಂದಿರುವ ಒರಾಕಲ್, ತನ್ನ ಶೇ. 18ರಷ್ಟು ಉದ್ಯೋಗಿಗಳನ್ನು ಕೈಬಿಟ್ಟಿದೆ. ವಜಾಗೊಂಡವರ ಪೈಕಿ ಬರೋಬ್ಬರಿ 12,000 ಮಂದಿ ಭಾರತೀಯ ಮೂಲದವರಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಸಾವಿರಾರು ಉದ್ಯೋಗಿಗಳಿಗೆ ಏಕಕಾಲದಲ್ಲಿ ಲೇಆಫ್ ಇಮೇಲ್ ಕಳುಹಿಸಲಾಗಿದ್ದು, ಕಂಪನಿಯ ಪುನರ್ವ್ಯವಸ್ಥೀಕರಣದ ಭಾಗವಾಗಿ ನಿಮ್ಮ ಹುದ್ದೆಗಳ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಮಾರ್ಚ್ 31 ಅವರ ಕೊನೆಯ ಕೆಲಸದ ದಿನವಾಗಿದ್ದು, ತಕ್ಷಣವೇ ಕಂಪನಿಯ ಲ್ಯಾಪ್‌ಟಾಪ್ ಹಾಗೂ ಸಿಸ್ಟಮ್‌ಗಳ ಆಕ್ಸೆಸ್ ಅನ್ನು ಸ್ಥಗಿತಗೊಳಿಸಿರುವುದು ಉದ್ಯೋಗಿಗಳಿಗೆ ಆಘಾತ ತಂದಿದೆ.

ವಿಶೇಷವೆಂದರೆ, ಒರಾಕಲ್ ಪ್ರಸ್ತುತ ಯಾವುದೇ ನಷ್ಟದಲ್ಲಿಲ್ಲ. ಕಳೆದ ತ್ರೈಮಾಸಿಕದಲ್ಲಿ ಕಂಪನಿಯ ಲಾಭವು ಶೇ. 95ರಷ್ಟು ಹೆಚ್ಚಾಗಿ 6.13 ಬಿಲಿಯನ್ ಡಾಲರ್‌ಗೆ ತಲುಪಿತ್ತು. ಆದರೂ, ಕೃತಕ ಬುದ್ಧಿಮತ್ತೆ (AI) ಡೇಟಾ ಸೆಂಟರ್ ಕ್ಷೇತ್ರದಲ್ಲಿ ಭಾರಿ ಹೂಡಿಕೆ ಮಾಡಲು ಕಂಪನಿ ನಿರ್ಧರಿಸಿದೆ. ಸುಮಾರು 156 ಬಿಲಿಯನ್ ಡಾಲರ್ ವೆಚ್ಚದ ಈ ಯೋಜನೆಗಾಗಿ ಈಗಾಗಲೇ 50 ಬಿಲಿಯನ್ ಡಾಲರ್ ಸಾಲ ಮಾಡಿರುವ ಕಂಪನಿ, ವೆಚ್ಚವನ್ನು ಸರಿದೂಗಿಸಲು ಈ ಕಠಿಣ ನಿರ್ಧಾರ ಕೈಗೊಂಡಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಈ ಕ್ರಮದಿಂದ ಕಂಪನಿಗೆ ಸುಮಾರು 10 ಬಿಲಿಯನ್ ಡಾಲರ್ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ವಜಾಗೊಂಡ ಉದ್ಯೋಗಿಗಳಿಗೆ ಕಂಪನಿಯು ಮೂರು ತಿಂಗಳ ಸಂಬಳ, ಕೆಲಸ ಮಾಡಿದ ಪ್ರತಿ ವರ್ಷಕ್ಕೆ 15 ದಿನಗಳ ವೇತನ ಮತ್ತು ಗ್ರಾಚ್ಯುಟಿ ಸೇರಿದಂತೆ ಕೆಲವು ಪರಿಹಾರ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಆದರೆ, ಭಾರತ ಹಾಗೂ ಅಮೆರಿಕದಲ್ಲಿರುವ ಸಾವಿರಾರು ಕುಟುಂಬಗಳು ಈ ದಿಢೀರ್ ನಿರ್ಧಾರದಿಂದ ಆರ್ಥಿಕ ಅನಿಶ್ಚಿತತೆಗೆ ಸಿಲುಕಿವೆ.

You cannot copy content of this page

Exit mobile version