ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಹಾಲಕ್ಕಿ ಸಮುದಾಯದ ಹಿರಿಯ ಜನಪದ ಹಾಡುಗಾರ್ತಿ ಸುಕ್ರಿ ಬೊಮ್ಮಗೌಡ ̇(88 ವರ್ಷ ವಯಸ್ಸು) ಗುರುವಾರ ನಿಧನರಾಗಿದ್ದಾರೆ. ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಮೂರು ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ ಅವರು ಚೇತರಿಸಿಕೊಂಡಿದ್ದರು. ಅಂಕೋಲಾ ತಾಲೂಕಿನ ಬಡಿಗೆರಿ ಗ್ರಾಮದ ತಮ್ಮ ಮನೆಯಲ್ಲಿ ನಸುಕಿನ ಜಾವ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಉತ್ತರ ಕನ್ನಡ ಜಿಲ್ಲೆಯ ಸುಕ್ರಿ ಬೊಮ್ಮಗೌಡ ಅವರು ಸುಕ್ರಜ್ಜಿ ಎಂದೇ ಪ್ರಸಿದ್ಧರು. ಹಾಲಕ್ಕಿ ಜಾನಾಂಗ ಜಾನಪದ ಗಾಯಕಿ ಎಂದು ಜನಪ್ರಿಯರಾಗಿರುವ ಅವರು, ಹಾಲಕ್ಕಿ ಜಾನಪದ ಹಾಡುಗಳ ಜೊತೆ ಮದ್ಯ ನಿಷೇಧ ಹೋರಾಟ ಸೇರಿದಂತೆ ಹಲವು ಹೋರಾಟದಲ್ಲಿ ಭಾಗಿಯಾಗಿದ್ದರು.
ತಮ್ಮ ಹೋರಾಟಗಳ ಮೂಲಕ ಅವರು ಅಂಕೋಲದ ಬಡಿಗೇರಿ ಗ್ರಾಮವನ್ನು ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡಿದ್ದರು. ಜಾನಪದ ಹಾಡುಗಳ ಮೂಲಕ ಸಮುದಾಯದ ಮಹಿಳೆಯ ಪರಿಚಯಿಸುವ ಕಾರ್ಯ ನಿರ್ವಹಿಸಿದ್ದ ಸುಕ್ರಜ್ಜಿಗೆ 1999ರಲ್ಲಿ ಜನಪದಶ್ರೀ ಪ್ರಶಸ್ತಿ, 2006ರಲ್ಲಿ ನಾಡೋಜ ಪ್ರಶಸ್ತಿ, 2017ರಲ್ಲಿ ಪದ್ಮಶ್ರೀ ಪ್ರಶಸ್ತಿಗಳು ಸಿಕ್ಕಿದ್ದವು.
“ಪ್ರಖ್ಯಾತ ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ ಅವರ ನಿಧನದಿಂದ ಸಾಂಸ್ಕೃತಿಕ ಲೋಕಕ್ಕೆ ಆಗಿರುವ ನಷ್ಟ ತುಂಬಲು ಸಾಧ್ಯವಿಲ್ಲ. ಅವರೊಬ್ಬರು ಹುಟ್ಟು ಕಲಾವಿದೆ. ಹಾಲಕ್ಕಿ ಜಾನಪದ ಹಾಡುಗಳ ಮೂಲಕವೇ ಲೋಕಪ್ರಸಿದ್ಧರಾಗಿದ್ದ ‘ಸುಕ್ರಜ್ಜಿ’ ಅವರಿಗೆ ಸಂಗೀತವೇ ಬದುಕಾಗಿತ್ತು.” ಎಂದು ಸಿಎಂ ನುಡಿ ನಮನ ಸಲ್ಲಿಸಿದ್ದಾರೆ.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿ, ಹಾಲಕ್ಕಿ ಹಾಡುಗಳ ಕೋಗಿಲೆ, ಪದ್ಮಶ್ರೀ ಪುರಸ್ಕೃತರು ಹಾಗೂ ಸುಕ್ರಜ್ಜಿ ಎಂದೇ ಜನಜನಿತರಾಗಿದ್ದ ಸುಕ್ರಿ ಬೊಮ್ಮಗೌಡ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು ಎಂದಿದ್ದಾರೆ.
“ಜಾನಪದ ಗಾನಕೋಗಿಲೆ ‘ಪದ್ಮಶ್ರೀ ಪುರಸ್ಕೃತೆ’ ಸುಕ್ರಿ ಬೊಮ್ಮು ಗೌಡ ಅವರು ನಮ್ಮನ್ನೆಲ್ಲ ಅಗಲಿರುವ ಸುದ್ದಿ ತಿಳಿದು ಮನಸ್ಸಿಗೆ ದುಃಖ ಉಂಟಾಯಿತು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಜನಿಸಿದ ಇವರು ತಮ್ಮ ಜಾನಪದ ಗಾಯನದ ಮೂಲಕ ಜಾನಪದ ಕ್ಷೇತ್ರದಲ್ಲಿ ಮೈಲುಗಲ್ಲು ಸೃಷ್ಟಿಸಿದ ಸುಕ್ರಿ ಗೌಡರನ್ನು ಕಳೆದುಕೊಂಡಿರುವುದು ಜಾನಪದ ಕ್ಷೇತ್ರಕ್ಕೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಕೋರಿ ಕುಟುಂಬ ವರ್ಗಕ್ಕೆ ಹಾಗೂ ಅಭಿಮಾನಿಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಸಚಿವ ಮಂಕಾಳ ವೈದ್ಯ ಸಂತಾಪ ಸೂಚಿಸಿದ್ದಾರೆ.