"ಸಿಎಎ ಒಂದು ದೇಶ ಒಂದು ಚುನಾವಣೆಯಂತಹ ಹೊಸ ಹೊಸ ಕಾರ್ಯಕ್ರಮಗಳ ಬಗ್ಗೆ ಮಾತಾಡ್ತಾರೆ, ಇದು ಯಾರಿಗೆ ಬೇಕಿತ್ತು. ಸಂವಿಧಾನದಲ್ಲಿರುವ ಸಮಾನತೆಯ ಬಗ್ಗೆ ಇವರು ಮಾತಾಡಲ್ಲ," ಶಿವಸುಂದರ್ ಅವರ ಅಂಕಣ ಸಂಕಲನ 'ಸಂವಿಧಾನ v/s ಸಂಘಿಗಳ ಸುಳ್ಳು ಅಭಿಯಾನ' ಕೃತಿ ಬಿಡುಗಡೆಯಲ್ಲಿ ಮಾತನಾಡುತ್ತಾ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿಕೆ
ಬೆಂಗಳೂರು: “ಭಾರತವನ್ನು ಕನಿಷ್ಠ 1000 ವರ್ಷಗಳ ಹಿಂದಕ್ಕೆ ಕೊಂಡೋಯ್ಯತ್ತೇವೆ ಅಂತಾ ಆರ್.ಎಸ್.ಎಸ್ ಬಹಳ ಹಿಂದೆಯೇ ಬರೆದುಕೊಂಡಿತ್ತು. ಈಗಿನ ಕುಂಭಮೇಳ ಇದಕ್ಕೆ ಸಾಕ್ಷಿಯಾಗ್ತಿದೆ. ನಾಗರೀಕ ಸಮಾಜವನ್ನ ಇನ್ನಷ್ಟು ಹಿಂದಕ್ಕೆ ಅಂದರೆ ಅನಾಗರೀಕತೆಯತ್ತ ಎಳೆಯುತ್ತಿದ್ದಾರೆ,” ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯ ಪಟ್ಟರು.
2025 ಫೆಬ್ರವರಿ 12 ರಂದು ರಾಜಾಜಿನಗರದ ಈದಿನ.ಕಾಂ ಕಚೇರಿಯಲ್ಲಿ ತಮಟೆ ಮೀಡಿಯಾ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ ಹಮ್ಮಿಕೊಂಡಿದ್ದ ಶಿವಸುಂದರ್ ಅವರ ಅಂಕಣ ಸಂಕಲನ ‘ಸಂವಿಧಾನ v/s ಸಂಘಿಗಳ ಸುಳ್ಳು ಅಭಿಯಾನ’ ಕೃತಿ ಬಿಡುಗಡೆಯಲ್ಲಿ ಅವರು ಮಾತನಾಡಿದರು.
ಇದೇ ವೇಳೆ ಆರ್.ಎಸ್.ಎಸ್. ಮತ್ತು ಬಿಜೆಪಿಯ ಸಂಚುಗಳ ಕುರಿತು ಮಾತನಾಡಿದ ಅವರು ‘ಬಿಜೆಪಿ ಒಂದು ಸಹಜ ರಾಜಕೀಯ ಪಕ್ಷವಲ್ಲ, ಅದೊಂದು ಅಸಹಜ ರಾಜಕೀಯ ಪಕ್ಷ. ಇವರು ಅಧಿಕಾರಕ್ಕಾಗಿ ಏನನ್ನಾದರೂ ಮಾಡುತ್ತಾರೆ, ಇವರು ಸಿಎಎ, ಒಂದು ದೇಶ ಒಂದು ಚುನಾವಣೆಯಂತಹ ಹೊಸ ಹೊಸ ಕಾನೂನುಗಳ ಬಗ್ಗೆ ಮಾತಾಡ್ತಾರೆ, ಇದು ಯಾರಿಗೆ ಬೇಕಿತ್ತು. ಸಂವಿಧಾನದಲ್ಲಿರುವ ಸಮಾನತೆಯ ಬಗ್ಗೆ ಇವರು ಮಾತಾಡಲ್ಲ,” ಎಂದು ಆರೋಪಿಸಿದರು.
“ಭಾರತ ಒಂದು ದೊಡ್ಡ ಭ್ರಮಾ ಲೋಕದೊಳಗೆ ಸಿಕ್ಕಿಹಾಕಿಕೊಂಡಿದೆ. ಯಾಕೆಂದರೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಭಾಗಿಯಾಗದ, ಸದಾ ಒಂದು ಸಮುದಾಯದ ಏಳಿಗೆಯೇ ಮುಖ್ಯ ಅಂದುಕೊಂಡಿರುವ ಸಂಘಟನೆಯ ಭಾಗವಾಗಿರುವ ಪಕ್ಷ ಅಧಿಕಾರ ಹಿಡಿದಿದೆ. ಸಂಘಪರಿವಾರದ ಜೀವಾಳವೇ ಸುಳ್ಳು, ಶೂದ್ರರ ಮುಗ್ಧತೆಯನ್ನು ಬಳಸಿಕೊಂಡು ಅಧಿಕಾರ ಹಿಡಿಯುತ್ತಾರೆ. ಪ್ರತಿ ಚುನಾವಣೆಯಲ್ಲಿ ಒಂದೊಂದು ಸುಳ್ಳುಗಳನ್ನ ಬಳಸಿಕೊಂಡು ಅಧಿಕಾರಕ್ಕೆ ಬರ್ತಿದ್ದಾರೆ. ಸಂವಿಧಾನ ಮತ್ತು ಅಂಬೇಡ್ಕರ್ ಅವರನ್ನು ವಿರೋಧಿಸುತ್ತಲೇ ಬಂದ ಆರ್.ಎಸ್.ಎಸ್ ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಭಾರತೀಯತೆ ಇಲ್ಲ ಅಂತಾ ಆರೋಪಿಸಿದ್ದರು, ಅವರು ಹೇಳುವ ಭಾರತೀಯತೆಯಲ್ಲಿ ಜಾತೀಯತೆ ಮತ್ತು ಅಸ್ಪೃಶ್ಯತೆ ಇತ್ತು ಈ ಅಸಮಾನತೆ ಇಲ್ಲದ ಕಾರಣಕ್ಕೆ ಸಂವಿಧಾನವನ್ನು ಒಪ್ಪಿಕೊಳ್ಳಲಿಲ್ಲ. ಅವರು ಮನುಸ್ಮೃತಿಯೇ ನಮ್ಮ ಸಂವಿಧಾನ ಎನ್ನುತ್ತಾರೆ. ಈ ಮನುಸ್ಮೃತಿ ಒಂದು ನೀಚಾತಿನೀಚ ಗ್ರಂಥ. ಜಾತಿವ್ಯವಸ್ಥೆಯನ್ನು ಮಾಡಿಕೊಂಡ ಅವರು ಬಹುಸಂಖ್ಯಾತ ವರ್ಗಗಳಿಗೆ ಭೂಮಿ ಅಧಿಕಾರ ಸಿಗದಂತೆ ನೋಡಿಕೊಂಡರು. ಯಾವಾಗ ಮುಸಲ್ಮಾನರು ಈ ದೇಶಕ್ಕೆ ಬಂದರೋ ಆಗ ಅವರೊಂದಿಗೂ ರಾಜಿಯಾದರು, ಅವರ ಆಳ್ವಿಕೆಯನ್ನ ಒಪ್ಪಿಕೊಂಡಿದ್ದರು. ಯಾವಾಗ ಬ್ರಿಟಿಷರು ಬಂದರೋ ಆಗ ಅವರು ಬ್ರಿಟಿಷರನ್ನ ಒಪ್ಪಿಕೊಳ್ಳಲು ತಯಾರಿರಲಿಲ್ಲ, ಕಾರಣ ಬ್ರಿಟೀಷರ ಕಾನೂನು ವ್ಯವಸ್ಥೆ. ದೇಶಕ್ಕೆ ಬಂದ ಬ್ರಿಟೀಷರು ಇಲ್ಲಿ ಸಾಮಾಜಿಕ ಅಸಮಾನತೆಗಳನ್ನು ಗಮನಿಸಿ ಎಲ್ಲರಿಗೂ ಒಂದೇ ರೀತಿಯ ಕಾನೂನುಗಳನ್ನು ಮಾಡಿದರು. ಇಲ್ಲಿ ಜಾತೀಯತೆಗೆ ಜಾಗ ಇರಲಿಲ್ಲ ಹಾಗಾಗಿ ಆರ್.ಎಸ್.ಎಸ್. ಬ್ರಿಟೀಷರನ್ನ ದ್ವೇಷಿಸೋದಕ್ಕೆ ಆರಂಭಿಸಿತು.
“1925ರಲ್ಲಿ RSS ಸಂಘಟನೆ ಸ್ಥಾಪನೆಯ ನಂತರ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹೋಗದಂತೆ ತಾಕೀತು ಮಾಡಿದರು. ಬಾಬಾ ಸಾಹೇಬರನ್ನು ವಿರೋಧಿಸುತ್ತಲೇ ಬಂದ ಅವರು “ಆ ನಂತರದಲ್ಲಿ ತಮ್ಮ ವೋಟ್ ಬ್ಯಾಂಕಿಗಾಗಿ ಬಾಬಾ ಸಾಹೇಬರ ಹೆಸರನ್ನು ಹೇಳಿಕೊಳ್ಳೋಕೆ ಆರಂಭಿಸಿದರು. ಸಾವರ್ಕರ್ ಬೌದ್ಧ ಧರ್ಮವನ್ನೇ ದೇಶದ್ರೋಹದ ಧರ್ಮ ಅಂತ ಕರೀತಾರೆ. ಅದಾದ ಮೇಲೆ ಗೋಲ್ವಾಲ್ಕರ್ ಕೂಡಾ ಹಾಗೆ ವಿರೋಧಿಸ್ತಾರೆ. ಅಂತವರು ಯಾವ ಕಾರಣಕ್ಕೂ ಸಂವಿಧಾನ ಪ್ರಿಯರು, ಅಂಬೇಡ್ಕರ್ ವಾದಿಗಳಾಗಿರಲಿಲ್ಲ. ಈಗ ಸಂವಿಧಾನ ಅಭಿಯಾನ ಮಾಡುತ್ತಿದ್ದಾರೆ. ಅಂಬೇಡ್ಕರ್ ಆರ್.ಎಸ್.ಎಸ್. ಅನ್ನು ಬೆಂಬಲಿಸಿದ್ದರು ಅಂತಾರೆ. ಜೊತೆಗೆ ನಾವೇ ನಿಜವಾದ ಅಂಬೇಡ್ಕರ್ ವಾದಿಗಳು ಅಂತ ಹೇಳಿಕೊಳ್ಳುತ್ತಲೇ ದಲಿತ ದಮನಿತರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಅಧಿಕಾರಕ್ಕಾಗಿ ಏನನ್ನಾದರೂ ಮಾಡುವ ಬಿಜೆಪಿ ಸಾಂವಿಧಾನಿಕ ಸಂಸ್ಥೆಗಳನ್ನೇ ಬಳಸಿಕೊಂಡು ವೈರಿಗಳನ್ನ ಧ್ವಂಸ ಮಾಡುತ್ತಾರೆ. ಅಧಿಕಾರದ ಹಪಾಹಪಿ ಅವರಿಗೆ ಇದೆ. ವಾಮಮಾರ್ಗದಲ್ಲಿಯೇ ಅಧಿಕಾರ ಹಿಡಿವ ಬ್ರಾಹ್ಮಣರ ಸಂಘಟನೆ, ಪಕ್ಷ ಅದು. ಹೊರಗೆ ನಾವು ಐದನೆ ಬಹುದೊಡ್ಡ ರಾಷ್ಟ್ರ ಅಂತಾ ಹೇಳಿಕೊಳ್ಳುತ್ತಿದ್ದಾರೆ. ಆದರೆ ತಲಾ ಆದಾಯ ಗಮನಿಸಿದರೆ ದೇಶ ತುಂಬಾ ಕೆಳಹಂತದಲ್ಲಿದೆ. ಹಸಿವಿನ ಸೂಚ್ಯಂಕದಲ್ಲಿ 101ನೇ ಸ್ಥಾನದಲ್ಲಿದ್ದೇವೆ ಇದನ್ನ ಬಿಜೆಪಿಯ ರಾಜಕಾರಣಿಗಳು ಎಲ್ಲೂ ಮಾತಾಡಲ್ಲ,” ಎಂದು ಚಿನ್ನಸ್ವಾಮಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿ.ಸಿ ಬಸವರಾಜ್ ಮಾತನಾಡಿ “ಮೋದಿ ಅಧಿಕಾರಕ್ಕೆ ಬಂದ ಮೇಲೆ ಮಾಧ್ಯಮಗಳನ್ನ ತಮ್ಮ ಕಂಟ್ರೋಲ್ ಗೆ ತೆಗೆದುಕೊಂಡರು. ತಮ್ಮೆಲ್ಲಾ ಕೃತ್ಯಕ್ಕೆ ಬೇಕಾದಂತೆ ಬಳಸಿಕೊಂಡರು. ಈ ದೃಷ್ಟಿಯಿಂದ ನೋಡಿದಾಗ ಶಿವಸುಂದರ್ ಮಾಡುತ್ತಿರುವ ವಿಡಿಯೋ ಗಳು, ಬರವಣಿಗೆ ಎಷ್ಟು ಮುಖ್ಯ ಅಂತಾ ನಮಗೆ ಅರ್ಥವಾಗುತ್ತೆ. ನೋಟ್ ಬ್ಯಾನ್ ನಿಂದ ದೇಶದ ಆರ್ಥಿಕತೆ ಕೆಳಗೆ ಇಳಿಯಿತು, ಆದ್ರೆ ಜನರಿಗೆ ಇದರಿಂದ ಏನೋ ದೊಡ್ಡ ಬದಲಾವಣೆ ಆಗುತ್ತೆ ಅಂತಾ ನಂಬಿಸಲಾಯಿತು. ಇಂಡಿಯಾ ವಿಕಸಿತ ಆಗುತ್ತೆ ಅನ್ನೋತರ ಬಿಂಬಿಸಲಾಯಿತು,”
“2035 ರ ಒಳಗೆ ಇಂಡಿಯಾ ಮುಸ್ಲಿಂ ಕಂಟ್ರಿ ಆಗಿಬಿಡುತ್ತೆ ಅಂತಾ ಬಿಂಬಿಸುತ್ತಾರೆ. ಈ ಮೂಲಕ ದೇಶದ ಆರ್ಥಿಕ, ಸಾಮಾಜಿಕ ಸಮಸ್ಯೆಗಳತ್ತ ಜನರ ಗಮನ ಹರಿಯದಂತೆ ನೋಡಿಕೊಳ್ತಾರೆ. ಇದೆಲ್ಲವನ್ನ ಅರ್ಥ ಮಾಡಿಸೋಕೆ ನಾವು ಅಂಕಿಅಂಶಗಳ ಮೂಲಕ ಜನ ಸಾಮಾನ್ಯರಿಗೆ ತಿಳಿಸಬೇಕಾಗುತ್ತೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಶಿವಸುಂದರ್ ಅವರು ಮಾಡ್ತಿರೋ ಕೆಲಸ ಅತ್ಯಂತ ಮುಖ್ಯವಾದದ್ದು,” ಎಂದು ಬಿ.ಸಿ. ಬಸವರಾಜು ತಿಳಿಸಿದರು.
ಆರಂಭದಲ್ಲಿ ನಾವು ಸಂವಿಧಾನ ಬದಲಾಯಿಸುತ್ತೀವಿ ಅಂತಿದ್ದವರು. 2024ರ ಲೋಕಸಭಾ ಚುನಾವಣೆಯಲ್ಲಿ ಸರಳ ಬಹುಮತವನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ಎಚ್ಚೆತ್ತುಕೊಂಡ ಬಿಜೆಪಿ ಈಗ ಸಂವಿಧಾನ ಅಭಿಯಾನ ಆರಂಭಿಸಿದೆ. ಜೊತೆಗೆ ನಾವೇ ನಿಜವಾದ ಅಂಬೇಡ್ಕರ್ ಅನುಯಾಯಿಗಳು ಅಂತಾ ಹೇಳೋಕೆ ಆರಂಭಿಸಿದೆ. ಇದು ದಲಿತರನ್ನ ನಂಬಿಸೋಕೆ ಅವರನ್ನ ತಮ್ಮ ವೋಟ್ ಬ್ಯಾಂಕಾಗಿ ಬಳಸಿಕೊಳ್ಳೋಕೆ ಬಿಜೆಪಿ ಮಾಡುತ್ತಿರುವ ಸಂಚು. ಈ ಸಂಚಿನಲ್ಲಿ ಅವರು ಗೆದ್ದರೆ ಈ ದೇಶಕ್ಕೆ ಉಳಿಗಾಲವಿಲ್ಲ. ಶಿವಸುಂದರ್ ಅವರು ಈ ಪುಸ್ತಕದಲ್ಲಿ ತುಂಬಾ ಸರಳವಾಗಿ ಸಂಘಪರಿವಾರ ಈ ಸಂಚನ್ನು ವಿವರಿಸಿದ್ದಾರೆ,” ಎಂದು ಪುಸ್ತಕದ ಬಗ್ಗೆ ಬಸವರಾಜ್ ಹೇಳಿದ್ದಾರೆ.
ವೇದಿಕೆಯಲ್ಲಿದ್ದ ಮೈತ್ರೇಯಿಯವರು, “ಪಾಸಿಸಂನ ಸಂದರ್ಭದಲ್ಲಿ ದೇಶದಲ್ಲಿ ಆಗ್ತಿರೋ ವಿಷಯಗಳನ್ನ ಶಿವಸುಂದರ್ ಸರಳವಾಗಿ ಜನರಿಗೆ ತಲುಪಿಸ್ತಿದ್ದಾರೆ. ಸಂಘಪರಿವಾರದ ಕುತಂತ್ರಗಳಿಗೆ ಹೇಗೆ ಕೌಂಟರ್ ಕೊಡಬೇಕಿದೆಯೋ ಅದನ್ನು ಶಿವಸುಂದರ್ ಮಾಡ್ತಿದ್ದಾರೆ ಎಂದರು.
ಪುಸ್ತಕದ ಲೇಖಕ, ಮತ್ತು ಚಿಂತಕ ಶಿವಸುಂದರ್ ಅವರು ಮಾತನಾಡಿ, “ಇವತ್ತು ಆರ್.ಎಸ್.ಎಸ್. ಮತ್ತು ಬಿಜೆಪಿ ಹೋಗುತ್ತಿರುವ ವೇಗಕ್ಕೆ ನಮ್ಮಂತಹ ಸಾವಿರ ಬಾಯಿಗಳು ಬೇಕು. ಇದೊಂದು ಸುಧೀರ್ಘ ಕರಪತ್ರ. ಕರಪತ್ರದ ರೀತಿ ಕೊಟ್ಟರೆ ಜನ ಓದಲ್ಲ, ಅದಕ್ಕಾಗಿ ಪುಸ್ತಕ ಮಾಡ್ತಿದ್ದೇವೆ ಎಂದರು.
ದೆಹಲಿ ಚುನಾವಣೆಯ ನಂತರ ಬಿಜೆಪಿಗರಿಗಿದ್ದ ಅಲ್ಪ ಭಯವೂ ಹೋಗಿದೆ. ಭಾರತ ಮಾತ್ರವಲ್ಲ ಅಮೆರಿಕಾ ಸೇರಿದಂತೆ ಜಗತ್ತಿನ ಎಲ್ಲಾ ಪ್ರತಿಗಾಮಿ ಪಾಸಿಸ್ಟರು ಬಲಿಷ್ಠ ರಾಗುತ್ತಿದ್ದಾರೆ. ಪ್ಯಾಲೆಸ್ಟೀನಿಯರು ಸೋಲುವುದೆಂದರೆ ಭಾರತದಲ್ಲಿ ದಲಿತರು ಸೋತಂತೆ ಆ ಕಾರಣದಿಂದ ಇಂತ ಕಾರ್ಯಕ್ರಮಗಳು ಆಗಬೇಕು. ಇಂಥ ಪುಸ್ತಕಗಳನ್ನು ಹೆಚ್ಚೆಚ್ಚು ತಲುಪಿಸಬೇಕು ಎಂದು ಹೇಳಿದರು.
ಕೃತಿ ಬಿಡುಗಡೆಯಲ್ಲಿ ಇದ್ದ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ಅಧ್ಯಕ್ಷ ಬಸವರಾಜ್ ಕೌತಾಳ್, “ಎಲ್ಲಾ ಶೋಷಿತ ಸಮುದಾಯಗಳ ಪರ ಧ್ವನಿಯಾದ ದಲಿತ ಚಳುವಳಿಯ ಭಾಗವಾಗಿ ನಾವು ಇಲ್ಲಿದ್ದೇವೆ. ದೇಶ ಮುಂದೆ ಎದುರಿಸಬೇಕಾದ ಸಮಸ್ಯೆ-ಸವಾಲುಗಳನ್ನು ಅರ್ಥ ಮಾಡಿಕೊಂಡು ಶಿವಸುಂದರ್ ಈ ಕೃತಿ ರಚಿಸಿದ್ದಾರೆ. ಸಂವಿಧಾನದ ಸುತ್ತಾ, ಅಂಬೇಡ್ಕರ್ ಸುತ್ತಾ ದೊಡ್ಡ ರಾಜಕಾರಣ ನಡೀತಿದೆ. ಈ ಹೆಸರಿನಲ್ಲಿ ಶೋಷಿತ ಸಮುದಾಯವನ್ನು ವಂಚಿಸುತ್ತಿದ್ದಾರೆ. ಇದೇ ಪಾಸಿಸಂ ಅನ್ನು ನೂರಾರು ವರ್ಷಗಳಿಂದ ಹಿಮ್ಮೆಟಿಸಿದ್ದೇವೆ,” ಮುಂದೆಯೂ ಹಿಮ್ಮೆಟ್ಟಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಮೂಡ್ನಾಕೂಡು ಚಿನ್ನಸ್ವಾಮಿ, ಶಿವಸುಂದರ್, ಬಿ.ಸಿ. ಬಸವರಾಜು, ಮೈತ್ರೇಯಿ, ಬಸವರಾಜ್ ಕೌತಾಳ್, ಹುಲಿಕುಂಟೆ ಮೂರ್ತಿ, ಚಂದ್ರು ತರಹುಣಸೆ, ಅಶ್ವಿನಿಬೋಧ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.