ಇಸ್ಲಾಮಾಬಾದ್: ಮೂಲಭೂತ ಹಕ್ಕುಗಳಿಗಾಗಿ ಆಗ್ರಹಿಸಿ ಬೀದಿಗಿಳಿದಿರುವ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದ ಜನರ ದಂಗೆ ಎರಡನೇ ದಿನವೂ ಮುಂದುವರಿದಿದೆ. ಪ್ರತಿಭಟನಾಕಾರರನ್ನು ಮುಂದೆ ಸಾಗದಂತೆ ತಡೆಯಲು ಪೊಲೀಸರು ಮಂಗಳವಾರ ಬೆಳಗ್ಗೆ ಅಡ್ಡಲಾಗಿ ಇರಿಸಿದ್ದ ಕಂಟೇನರ್‌ಗಳನ್ನು ಪ್ರತಿಭಟನಾಕಾರರು ಎತ್ತಿ ನದಿಗೆ ಎಸೆದು ತಮ್ಮ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ.
ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ.
ವಿಡಿಯೋದಲ್ಲಿ, ಪ್ರತಿಭಟನಾಕಾರರು ತಮ್ಮ ಕೈಯಲ್ಲಿ ಕೋಲುಗಳನ್ನು ಹಿಡಿದು ಪಾಕಿಸ್ತಾನಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿರುವುದು ಮತ್ತು ಅವರ ವಾಹನಗಳನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಸೇತುವೆ ಮೇಲೆ ಅಡ್ಡಲಾಗಿ ಇರಿಸಿದ್ದ ಬೃಹತ್ ಕಂಟೇನರ್‌ಗಳನ್ನು ಪ್ರತಿಭಟನಾಕಾರರು ಒಟ್ಟಾಗಿ ಎತ್ತಿ ನದಿಗೆ ಎಸೆಯುವ ಮೂಲಕ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಅವಾಮಿ ಆಕ್ಷನ್ ಕಮಿಟಿ (AAC) ನೇತೃತ್ವದಲ್ಲಿ ಮೂಲಭೂತ ಹಕ್ಕುಗಳು ಸೇರಿದಂತೆ 38 ಬೇಡಿಕೆಗಳ ಈಡೇರಿಕೆಗಾಗಿ ಸೋಮವಾರ ಪ್ರತಿಭಟನೆ ಆರಂಭವಾಗಿತ್ತು. ಈ ವೇಳೆ ನಡೆದ ಘರ್ಷಣೆಯಲ್ಲಿ ಇಬ್ಬರು ಬಲಿಯಾಗಿದ್ದು, 22 ಮಂದಿ ಗಾಯಗೊಂಡಿದ್ದರು. ಆದರೂ ಜನರ ಪ್ರತಿಭಟನೆ ತೀವ್ರ ಸ್ವರೂಪ ಪಡೆದು ಮುಂದುವರಿದಿದೆ.