ದುಬಾೖ: 2023ರ ಅಕ್ಟೋಬರ್ 7 ರಿಂದ ಪ್ರಾರಂಭವಾದ ಗಾಜಾ-ಇಸ್ರೇಲ್ ಸಂಘರ್ಷವನ್ನು ಕೊನೆಗೊಳಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 20 ಅಂಶಗಳ ಯೋಜನೆಯನ್ನು ಪ್ರಕಟಿಸಿದ್ದಾರೆ. ಈ ಯೋಜನೆಗೆ ಭಾರತ, ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ಬಹುತೇಕ ದೇಶಗಳು ತಮ್ಮ ಬೆಂಬಲವನ್ನು ಸೂಚಿಸಿವೆ.
ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ ಟ್ರಂಪ್ ಅವರು ಭೇಟಿ ಮಾಡಿದ ನಂತರ ಈ ಯೋಜನೆಯನ್ನು ಘೋಷಿಸಲಾಗಿದೆ. ಈ ಯೋಜನೆಗೆ ನೆತನ್ಯಾಹು ಅವರೂ ಒಪ್ಪಿಗೆ ಸೂಚಿಸಿದ್ದು, ಒಂದು ವೇಳೆ ಹಮಾಸ್ ಇದನ್ನು ಒಪ್ಪಿಕೊಳ್ಳದಿದ್ದರೆ, ಇಸ್ರೇಲ್ ತನ್ನ ಉದ್ದೇಶಿತ ಕಾರ್ಯವನ್ನು ಪೂರ್ಣಗೊಳಿಸಲಿದೆ ಎಂದು ಇಸ್ರೇಲ್ ಪ್ರಧಾನಿ ಹೇಳಿದ್ದಾರೆ.
ಯೋಜನೆಯ ಪ್ರಮುಖ ಅಂಶಗಳು
ಟ್ರಂಪ್ ಪ್ರಕಟಿಸಿದ ಯೋಜನೆಗನುಗುಣವಾಗಿ, ಈ ಒಪ್ಪಂದವನ್ನು ಒಪ್ಪಿಕೊಂಡ ತಕ್ಷಣ ಎರಡೂ ಕಡೆಯಿಂದ ಸಂಘರ್ಷ ತಕ್ಷಣವೇ ನಿಲ್ಲಬೇಕು:
ಯುದ್ಧ ಸ್ಥಗಿತ: ಇಸ್ರೇಲ್ ಮತ್ತು ಹಮಾಸ್ ಒಪ್ಪಿದರೆ ತಕ್ಷಣದಿಂದಲೇ ಯುದ್ಧ ಸ್ಥಗಿತಗೊಳ್ಳುತ್ತದೆ.
ಸೇನಾ ವಾಪಸಾತಿ: ಇಸ್ರೇಲ್ ಗಾಜಾದಿಂದ ತನ್ನ ಸೇನೆಯನ್ನು ಹಿಂಪಡೆಯುವುದರ ಜೊತೆಗೆ, ವೈಮಾನಿಕ ಮತ್ತು ನೆಲದ ಮೇಲಿನ ಕಾರ್ಯಾಚರಣೆಯನ್ನು ನಿಲ್ಲಿಸಲಿದೆ.
ಒತ್ತೆಯಾಳುಗಳ ಬಿಡುಗಡೆ: ಹಮಾಸ್ ವಶದಲ್ಲಿರುವ ಜೀವಂತ ಮತ್ತು ಮೃತಪಟ್ಟಿರುವ ಎಲ್ಲ ಒತ್ತೆಯಾಳುಗಳನ್ನು 72 ಗಂಟೆಗಳಲ್ಲಿ ಬಿಡುಗಡೆ ಮಾಡಬೇಕು.
ಕೈದಿಗಳ ಬಿಡುಗಡೆ: ಇದಕ್ಕೆ ಪ್ರತಿಯಾಗಿ, ಇಸ್ರೇಲ್ ವಶದಲ್ಲಿರುವ 250 ಪ್ಯಾಲೆಸ್ತೀನ್ ಅಪರಾಧಿಗಳನ್ನು ಮತ್ತು ವಶದಲ್ಲಿರುವ 1700 ಮಂದಿಯನ್ನು ಬಿಡುಗಡೆ ಮಾಡಬೇಕು.
ಸಂಖ್ಯೆಗೆ ಪ್ರತಿಯಾಗಿ ಬಿಡುಗಡೆ: ಪ್ರತಿ ಮೃತ ಒತ್ತೆಯಾಳಿಗೆ ಪ್ರತಿಯಾಗಿ ಯುದ್ಧದಲ್ಲಿ ಮೃತಪಟ್ಟ 15 ಪ್ಯಾಲೆಸ್ತೀನಿಯರನ್ನು ಬಿಡುಗಡೆ ಮಾಡಲಾಗುವುದು.
ಕ್ಷಮೆ: ಶಸ್ತ್ರಾಸ್ತ್ರಗಳನ್ನು ಕೆಳಗಿಡುವ ಹಮಾಸ್ ಉಗ್ರರಿಗೆ ಕ್ಷಮಾದಾನ ನೀಡುವುದು.
ನೆರವು ರವಾನೆ: ಒಪ್ಪಂದ ಜಾರಿಯಾದ ಬಳಿಕ ಗಾಜಾ ಪಟ್ಟಿಗೆ ಎಲ್ಲ ನೆರವು ರವಾನೆಗೆ ಅವಕಾಶ.
ಗಾಜಾ ನಿರ್ವಹಣೆ: ಸ್ಥಳೀಯ ತಾಂತ್ರಿಕ ಸಮಿತಿ ಮೂಲಕ ಗಾಜಾ ನಿರ್ವಹಣೆ ನಡೆಯಲಿದೆ.
ಪ್ರತ್ಯೇಕ ರಾಷ್ಟ್ರ ಸ್ಥಾನಮಾನದ ಬಗ್ಗೆ ಮಾಹಿತಿ
ಟ್ರಂಪ್ ಘೋಷಿಸಿರುವ ಯೋಜನೆಯಲ್ಲಿ ಪ್ಯಾಲೆಸ್ತೀನ್‌ಗೆ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನದ ಕುರಿತು ಯಾವುದೇ ನಿರ್ದಿಷ್ಟ ಮಾಹಿತಿ ಇಲ್ಲ. ಆದರೆ, ಈ ನಿಟ್ಟಿನಲ್ಲಿ ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವೆ ಮಾತುಕತೆಗಳಿಗೆ ಈ ಯೋಜನೆ ಉತ್ತೇಜನ ನೀಡಲಿದೆ.
ಯೋಜನೆ ಸ್ವಾಗತಿಸಿದ ಪ್ರಧಾನಿ ಮೋದಿ
ಟ್ರಂಪ್ ಪ್ರಕಟಿಸಿದ 20 ಅಂಶಗಳ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಬೆಂಬಲ ಘೋಷಿಸಿದ್ದಾರೆ. ಈ ಯೋಜನೆಯು ಪ್ಯಾಲೆಸ್ತೀನ್ ಮತ್ತು ಇಸ್ರೇಲಿ ಜನರಿಗೆ ಹಾಗೂ ವಿಶಾಲ ಪಶ್ಚಿಮ ಏಷ್ಯಾ ಪ್ರದೇಶಕ್ಕೆ ದೀರ್ಘಕಾಲೀನ ಮತ್ತು ಸುಸ್ಥಿರ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಗೆ ಕಾರ್ಯಸಾಧ್ಯವಾದ ಮಾರ್ಗವನ್ನು ಒದಗಿಸುತ್ತದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.