ಪಾಕಿಸ್ತಾನದ ಅಬ್ದುಲ್ ಅಹದ್ ಎಂಬ ಬಾಲಕ ಒಬ್ಬಂಟಿಯಾಗಿದ್ದ ತನ್ನ ತಾಯಿಗೆ ಮರು ಮದುವೆ ಮಾಡಿಸುವ ಮೂಲಕ ಆ ದೇಶದ ಪಿತೃಪ್ರಧಾನ ವ್ಯವಸ್ಥೆ ಧಿಕ್ಕರಿಸುವ ದೈರ್ಯವನ್ನು ಪ್ರದರ್ಶಿಸಿದ್ದಾನೆ. ತನ್ನ ತಾಯಿ ಮತ್ತೆ ಸಾಂಗತ್ಯ ಜೀವನ ಪಡೆದುಕೊಳ್ಳುವಂತೆ ಮಾಡಿ ನೆಟ್ಟಿಗರ ಪ್ರಶಂಸೆಗೆ ಪಾತ್ರನಾಗಿದ್ದಾನಿದ್ದಾನೆ.
ಬಾಲಕ ತನ್ನ ತಾಯಿಗೆ 2ನೇ ಮದುವೆ ಮಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕನ ನಿರ್ಧಾರವನ್ನು ಶ್ಲಾಘಿಸಿದ ನೆಟ್ಟಿಗರು, “ನೀನು ನಿನ್ನ ತಾಯಿಗಾಗಿ ಮಾಡಬಹುದಾದ ಅತ್ಯುತ್ತಮ ಕೆಲಸ” ಎಂದು ಕಾಮೆಂಟ್ ಮಾಡಿದ್ದಾರೆ.
“ಈ ವಯಸ್ಸಿನಲ್ಲಿ ಆತನ ಬಹಳ ಸಂವೇದನಾಶೀಲ ಮತ್ತು ಭಾವನಾತ್ಮಕವಾಗಿ ಸವಾಲಿನ ನಿರ್ಧಾರ” ಎಂದು ಕೆಲವರು ಹೇಳಿದ್ದಾರೆ. “ಇದು ಕಠಿಣ ನಿರ್ಧಾರ, ಆದರೆ ನೀವು ಅದನ್ನು ಉತ್ತಮವಾಗಿ ಮಾಡಿದ್ದೀರಿ. ನಿಮ್ಮ ತಾಯಿಯ ಭವಿಷ್ಯ ಮತ್ತು ಜೀವನದ ಬಗ್ಗೆ ಯೋಜಿಸುವ ನೀವು ಒಬ್ಬ ಒಳ್ಳೆಯ ಮಗ” ಎಂದು ಕಮೆಂಟಿಸಿದ್ದಾರೆ.
ಇದು ಭಾರತ ಮತ್ತು ಪಾಕಿಸ್ತಾನದಂತಹ ಪಿತೃಪ್ರಧಾನ ಸಮಾಜದಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ. ಪುರುಷರು ಒಂದಕ್ಕಿಂತ ಹೆಚ್ಚು ಮದುವೆಯಾದರೂ ಸಮಸ್ಯೆಯಿಲ್ಲ. ಆದರೆ, ಹೆಣ್ಣು ಮಾತ್ರ ಒಬ್ಬನನ್ನು ಮಾತ್ರವೇ ಮದುವೆಯಾಗಬೇಕು. ಪತಿ ಸತ್ತ ನಂತರವೂ ಆತನ ನೆನಪಿನಲ್ಲೇ ಜೀವನ ದೂಡಬೇಕು. ಮತ್ತೊಂದು ಮದುವೆಯಾಗಬಾರದು ಎಂಬಂತಹ ಅಲಿಖಿತ ನಿಯಮವನ್ನು ಪಿತೃಪ್ರಭುತ್ವದ ವ್ಯವಸ್ಥೆಯಲ್ಲಿ ಹೇರಲಾಗಿದೆ. ಈ ವ್ಯವಸ್ಥೆಯಲ್ಲಿ ಮರುವಿವಾಹವಾಗಲು ಮುಂದಾಗುವ ವಿಧವೆಯರು ಅಥವಾ ವಿಚ್ಛೇದಿತ ಮಹಿಳೆಯರನ್ನು ದೂಷಿಸಲಾಗುತ್ತದೆ. ಕಳಂಕಿತರಂತೆ ನೋಡಲಾಗುತ್ತದೆ. ಇಂತಹ ಧೋರಣೆಯ ವಿರುದ್ಧ ಬಾಲಕ ಸೆಡ್ಡುಹೊಡೆದು ನಿಂತಿದ್ದು, ಹಲವರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಬಾಲಕನ ನಿರ್ಧಾರವನ್ನು ನೆಟ್ಟಿಗರು ಅತ್ಯುತ್ತಮ ನಡೆ ಎಂದು ಶ್ಲಾಘಿಸಿದ್ದಾರೆ.
.