ದೆಹಲಿ: ಚುನಾವಣಾ ಆಯೋಗವು ಕೈಗೊಂಡಿರುವ ‘ವಿಶೇಷ ಸಮಗ್ರ ಪರಿಷ್ಕರಣೆ’ (Special Intensive Revision – SIR) ಪ್ರಕ್ರಿಯೆಯಡಿ ದೇಶಾದ್ಯಂತ ಇದುವರೆಗೆ ಬರೋಬ್ಬರಿ 12 ಕೋಟಿಗೂ ಅಧಿಕ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಇದು ದೇಶದಲ್ಲಿ ಪ್ರಜಾಪ್ರಭುತ್ವವನ್ನು ಹಳ್ಳಹಿಡಿಸುವ ‘ರಕ್ತರಹಿತ ರಾಜಕೀಯ ಹತ್ಯಾಕಾಂಡ’ (Bloodless Political Genocide) ಎಂದು ರಾಜಕೀಯ ಅರ್ಥಶಾಸ್ತ್ರಜ್ಞ ಡಾ. ಪರಕಾಲ ಪ್ರಭಾಕರ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುಕ್ತಾಯಗೊಂಡ ಮೂರನೇ ಹಂತದ ಪರಿಷ್ಕರಣೆಯ ಕರಡು ಪಟ್ಟಿಯಲ್ಲೇ ಸುಮಾರು 6.15 ಕೋಟಿ (ಶೇ. 17 ರಷ್ಟು) ಮತದಾರರ ಹೆಸರುಗಳನ್ನು ಅಳಿಸಿಹಾಕಲಾಗಿದ್ದು, ಜನಸಂಖ್ಯೆ ಏರಿಕೆಯಾಗುತ್ತಿದ್ದರೂ ಮತದಾರರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿಯುತ್ತಿರುವುದು ಗಂಭೀರ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅವರು ‘ದಿ ವೈರ್’ಗೆ ನೀಡಿದ ಸಂದರ್ಶನದಲ್ಲಿ ವಿಶ್ಲೇಷಿಸಿದ್ದಾರೆ.
ದೆಹಲಿಯಲ್ಲಿ ಶೇಕಡಾ 30 ಕ್ಕೂ ಹೆಚ್ಚು ಹಾಗೂ ಮಹಾರಾಷ್ಟ್ರದಲ್ಲಿ ಬರೋಬ್ಬರಿ 2 ಕೋಟಿ (ಶೇ. 20-21 ರಷ್ಟು) ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದ್ದು, ಪಶ್ಚಿಮ ಬಂಗಾಳದಲ್ಲಿ 93 ಲಕ್ಷ ಮತ್ತು ತಮಿಳುನಾಡಿನಲ್ಲಿ 97 ಲಕ್ಷ ಮತಗಳನ್ನು ಕೈಬಿಡಲಾಗಿದೆ. ಈ ಭಾರಿ ಪ್ರಮಾಣದ ಅಳಿಸುವಿಕೆ ಕೇವಲ ಆಡಳಿತಾತ್ಮಕ ದೋಷವಲ್ಲ, ಇದರ ಹಿಂದೆ ಸ್ಪಷ್ಟವಾದ ಪೂರ್ವಯೋಜಿತ ವಿನ್ಯಾಸವಿದೆ ಎಂದು ಆರೋಪಿಸಿದ ಪ್ರಭಾಕರ್, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು, ದಿನಗೂಲಿ ನೌಕರರು ಹಾಗೂ ಈ ವರ್ಗಗಳ ಮಹಿಳೆಯರ ಹೆಸರುಗಳನ್ನು ಅಸಮಾನ ಪ್ರಮಾಣದಲ್ಲಿ ತೆಗೆದುಹಾಕಲಾಗುತ್ತಿದೆ ಎಂದು ಬೆಟ್ಟು ಮಾಡಿದರು.
ಕೇವಲ ಚುನಾವಣಾ ಗೆಲುವು-ಸೋಲಿಗಾಗಿ ಮಾತ್ರವಲ್ಲದೆ, ದೇಶದ ಪ್ರಜೆಗಳನ್ನು ‘ಮತದಾನದ ಹಕ್ಕುಳ್ಳವರು’ ಮತ್ತು ‘ಹಕ್ಕಿಲ್ಲದವರು’ ಎಂದು ಎರಡು ವರ್ಗಗಳಾಗಿ ವಿಭಜಿಸಿ, ಶೋಷಿತ ಸಮುದಾಯಗಳನ್ನು ರಾಜಕೀಯ ಮುಖ್ಯವಾಹಿನಿಯಿಂದ ಹೊರದಬ್ಬುವ ಅಪಾರ್ಥೈಡ್ (ವರ್ಣಭೇದ) ನೀತಿಯನ್ನು ಇದು ಹೋಲುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ತಮ್ಮ ಹಕ್ಕು ವಂಚಿತಗೊಂಡಿರುವುದೇ ತಿಳಿಯದ ಕೋಟ್ಯಂತರ ಬಡ ಮತ್ತು ಅಂಚಿನಲ್ಲಿರುವ ಜನರ ಹಿತದೃಷ್ಟಿಯಿಂದ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ‘ಮತ ಕಳೆದುಕೊಂಡವರ ಒಕ್ಕೂಟ’ (Deleted Voters Union) ರಚನೆಯಾಗಬೇಕು ಮತ್ತು ಜನಸಾಮಾನ್ಯರು ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ಅವರು ಕರೆ ನೀಡಿದರು.
ಆರ್‌ಟಿಐ ಪ್ರಶ್ನೆಗಳಿಗೆ ನಿಖರ ಉತ್ತರವನ್ನಾಗಲಿ ಅಥವಾ ಸಿಸಿಟಿವಿ ದೃಶ್ಯಾವಳಿಗಳನ್ನಾಗಲಿ ನೀಡದೆ ಸಂಪೂರ್ಣ ಅಪಾರದರ್ಶಕವಾಗಿ ನಡೆದುಕೊಳ್ಳುತ್ತಿರುವ ಹಾಲಿ ಚುನಾವಣಾ ಆಯೋಗವನ್ನು ತಕ್ಷಣವೇ ವಿಸರ್ಜಿಸಿ, ನೈಜ ಪ್ರಜಾಸತ್ತಾತ್ಮಕ ಮಾನದಂಡಗಳ ಅಡಿಯಲ್ಲಿ ಮರುರಚಿಸಿದರೆ ಮಾತ್ರ ದೇಶದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ಸಾಧ್ಯ ಎಂದು ಪ್ರಭಾಕರ್ ಸ್ಪಷ್ಟಪಡಿಸಿದರು.
