Wednesday, June 19, 2024

ಸತ್ಯ | ನ್ಯಾಯ |ಧರ್ಮ

ಪರೇಶ್ ಮೇಸ್ತ ಪ್ರಕರಣ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಹೊನ್ನಾವರ: ಪರೇಶ್ ಮೇಸ್ತ ಅವರದ್ದು ಹತ್ಯೆ ಅಲ್ಲ, ಆಕಸ್ಮಿಕ‌ ಸಾವು ಎಂಬ ಕೇಂದ್ರೀಯ ತನಿಕಾ ದಳ(ಸಿಬಿಐ)ದ ಅಂತಿಮ ವರದಿ ಹಿನ್ನಲೆ, ಪ್ರಕರಣದ ಕುರಿತು ಕಾಂಗ್ರೆಸ್‌ ಪಕ್ಷದ ಮೇಲೆ ಸುಳ್ಳು ಆರೋಪ ಮಾಡಿದ್ದಕ್ಕಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ನಗರದಲ್ಲಿ ಗುಂಪು ಹಿಂಸಾಚಾರದ ಘಟನೆಯ ನಂತರ ನಾಪತ್ತೆಯಾಗಿದ್ದ ಪರೇಶ್ ಮೇಸ್ತ, ಎರೆಡು ದಿನಗಳ ಬಳಿಕ ಶವವಾಗಿ ಸರೋವರದ ಬಳಿ ಪತ್ತೆಯಾಗಿದ್ದ. ಈ ಹಿನ್ನಲೆ ಬಲಪಂಥೀಯ ಗುಂಪುಗಳು ಮತ್ತು ಆಗಿನ ವಿರೋಧ ಪಕ್ಷ ಬಿಜೆಪಿಯು ಮೇಸ್ತ ಅವರನ್ನು ಇತರ ಧರ್ಮದ ಜನರು ಚಿತ್ರಹಿಂಸೆ ನೀಡಿ ಕೊಂದಿದ್ದು, ಪ್ರಕರಣವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಚ್ಚಿಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ, ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಈ ಹಿನ್ನಲೆ ಸಿದ್ದರಾಮಯ್ಯ ಅವರು ಡಿಸೆಂಬರ್‌ 13,2017 ರಂದು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ್ದರು.

ಇಂದು ಈ ಪ್ರಕರಣದ ಅಂತಿಮ ವರದಿಯನ್ನು ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ವರದಿಯಲ್ಲಿ ಪರೇಶ್ ಮೇಸ್ತ ಅವರ ಸಾವು ಕೊಲೆಯಲ್ಲ, ಆಕಸ್ಮಿಕ ಎಂದು ತಿಳಿಸಿದೆ.

ಈ ಹಿನ್ನಲೆಯಲ್ಲಿ ಟ್ವೀಟ್‌ ಮಾಡುವ ಮೂಲಕ ಆಕ್ರೋಶ ಹೊರಹಾಕಿರುವ ಸಿದ್ದರಾಮಯ್ಯ ಅವರು, ಹೊನ್ನಾವರದ ಪರೇಶ್ ಮೇಸ್ತನದ ಹತ್ಯೆ ಅಲ್ಲ, ಆಕಸ್ಮಿಕ‌ ಸಾವು ಎಂಬ ಸಿಬಿಐನ ವಿಚಾರಣಾ ವರದಿ ರಾಜ್ಯ ಬಿಜೆಪಿ ಮುಖಕ್ಕೆ ಬಡಿದ ತಪರಾಕಿ. ಬಿಜೆಪಿಗೆ ಮಾನ-ಮರ್ಯಾದೆ ಇದ್ದರೆ ನಮ್ಮ ಮೇಲೆ ಮಾಡಿದ್ದ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೋರಬೇಕು ಎಂದು ಹೇಳಿದ್ದಾರೆ.

ಬಿಜೆಪಿ ಗೆದ್ದಿರುವ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್ ಮೇಸ್ತನಂತಹ ಅಮಾಯಕ ಯುವಕರ ರಕ್ತ ಇದೆ. ಬಿಜೆಪಿ ನಾಯಕರೇ, ನೀವು ಅನುಭವಿಸುತ್ತಿರುವ ಅಧಿಕಾರದ ಕುರ್ಚಿಗೆ ಮೇಸ್ತಾನಂತಹ ಯುವಕರ ರಕ್ತದ ಕಲೆ ಅಂಟಿಕೊಂಡಿದೆ ಎಂದು ಟೀಕಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು