ಬೆಂಗಳೂರು: ಕ್ರೈಸ್ತ ಪಾದ್ರಿಯೊಬ್ಬರು ಚರ್ಚ್ ಗಳಲ್ಲಿ ಕನ್ನಡ ಬಳಕೆಯ ಕುರಿತು ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಕನ್ನಡ ಕ್ರೈಸ್ತರ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಇಂದು ಬೆಳಿಗ್ಗೆ ಮಹಾಧರ್ಮಧ್ಯಕ್ಷರ ನಿವಾಸದಲ್ಲಿ ಪ್ರತಿದಿನ ನಡೆಯುವ ಪೂಜೆಯ ಮಧ್ಯದಲ್ಲಿ ಕ್ರೈಸ್ತ ಧರ್ಮ ಗುರು ಲುರ್ದು ಜೇವಿಯರ್ ಸಂತೋಷ್ ಎಂಬುವವರು ಚರ್ಚ್ ಗಳಲ್ಲಿ ಕನ್ನಡ ಬಳಕೆಯ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿರುವುದು ಕನ್ನಡ ಕ್ರೈಸ್ತರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ರಫಾಲಯ ರಾಜ್, ಸುಮಾರು ವರ್ಷಗಳಿಂದ ಚರ್ಚ್ ಗಳಲ್ಲಿ ಕನ್ನಡ ಭಾಷೆಯ ಪೂಜೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಹೋರಾಟ ಮಾಡುತ್ತಿದ್ದೇವೆ., ಹೀಗಿರುವಾಗ ಫಾದರ್ ಸಂತೋಷ್ ಅವರು ನೀಡಿರುವ ಹೇಳಿಕೆ ಆಘಾತ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫಾದರ್ ಸಂತೋಷ್ ಕನ್ನಡಿಗರನ್ನು, ಕನ್ನಡವನ್ನು ಹೀಗಳೆದಿದ್ದಾರೆ.. ನಾಲಿಗೆ ಹರಿಬಿಟ್ಟು ಕನ್ನಡಿಗರನ್ನು ಪಿಶಾಚಿಗಳು ಎಂದು ಕರೆದಿದ್ದಾರೆ. ಇದನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಸಂಘದ ಉಪಾಧ್ಯಕ್ಷ ಜಾನ್ ಬ್ರಿಟ್ಟೋ, ಮುಖಂಡರಾದ ದೇವಕುಮಾರ್, ಐಸಾಕ್, ಚಂದ್ರು, ಬರ್ತಲೌಮ್ ಘಟನೆ ಕುರಿತು ಕಿಡಿಕಾರಿದ್ದು, ಫಾದರ್ ಸಂತೋಷ್ ಕೂಡಲೇ ಕ್ಷಮೆ ಕೋರಬೇಕು. ಅವರನ್ನು ಅಮಾನತು ಪಡಿಸಬೇಕು ಎಂದು ಬೆಂಗಳೂರಿನ ಮಹಾಧರ್ಮಧ್ಯಕ್ಷರನ್ನು ಒತ್ತಾಯಿಸಿದ್ದಾರೆ.
ಪಾದ್ರಿ ಲುರ್ದು ಜೇವಿಯರ್ ಸಂತೋಷ್ ಕನ್ನಡಿಗರನ್ನು ನಿಂದಿಸಿ ಮಾತನಾಡಿರುವ ವಿಡಿಯೋ ಇಲ್ಲಿದೆ.