ಪೌರಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಘನತೆಯಿಂದ ಬದುಕಲು ಬೇಕಾದ ವೇತನ, ಅತ್ಯಗತ್ಯವಾದ ಸುರಕ್ಷಾ ಸಲಕರಣೆಗಳು, ಕಾರ್ಮಿಕರ ಕಾನೂನುಗಳ ಅನ್ವಯ ಎಲ್ಲಾ ಸೌಲಭ್ಯಗಳು ಸಿಗಬೇಕೆಂದು ನಡೆಸುತ್ತಿದ್ದ ಹೋರಾಡಕ್ಕೆ ಕೊನೆಗೂ ಜಯ ಸಿಕ್ಕಿದೆ.
ರಾಜ್ಯ ಸರ್ಕಾರಕ್ಕೆ ಸುಮಾರು 26,000 ಪೌರಕಾರ್ಮಿಕರನ್ನು ಖಾಯಂ ಮಾಡಬೇಕೆಂದು ಹಾಗು ಇದರಲ್ಲಿ ಕಸಗುಡಿಸುವವರನ್ನೂ ಸೇರಿಸಬೇಕು ಎಂಬ ಬೇಡಿಕೆ ಇತ್ತು. ಅದರ ಭಾಗವಾಗಿ ಮೊದಲಿಗೆ ಮಹಾನಗರ ಪಾಲಿಕೆ ಸೇರಿದಂತೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 11,133 ಪೌರಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ರಾಜ್ಯ ಸರ್ಕಾರವು ಆದೇಶವನ್ನು ಹೊರಡಿಸಿದೆ. ಇದು ಮೊದಲ ಕಂತಾಗಿದ್ದು, ಉಳಿದ 12,800 ಪೌರಕಾರ್ಮಿಕರಿಗೆ ಶೀಘ್ರದಲ್ಲೇ ಸರ್ಕಾರಿ ನೌಕಕರೆಂದು ಆದೇಶಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಈ 11,133 ಪೌರಕಾರ್ಮಿಕರಿಗೆ ವಿಶೇಷ ನೇಮಕಾತಿ ನಿಯಮಗಳ ಅಡಿಯಲ್ಲಿ ನೇಮಕಾತಿ ಮಾಡಿಕೊಳ್ಳುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಬಿಬಿಎಂಪಿಯ 3673 ನೌಕರರು, ನಗರಸಭೆ, ಪುರಸಭೆಗಳಲ್ಲಿ 5533 ಮತ್ತು ಮಹಾನಗರ ಪಾಲಿಕೆಗಳಲ್ಲಿನ 1927 ಪೌರಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಸರ್ಕಾರಿ ನೌಕರರೆಂದು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಇದರಿಂದ ಪೌರಕಾರ್ಮಿಕರು 17,000-28,980 ವೇತನ ಶ್ರೇಣಿ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ.
ಈ ಕುರಿತು ದಿನಗೂಲಿ ಕಾರ್ಮಿಕರು , ಗಾರ್ಮೆಂಟ್ಸ್ ನೌಕರರು ಹಾಗೂ ಪೌರಕಾರ್ಮಿಕರ ಕುರಿತು ಸಾಕಷ್ಟು ಕೆಲಸ ಮಾಡಿರುವ ದು. ಸರಸ್ವತಿ ಮಾತನಾಡಿ, ಎಲ್ಲ ಅಭಿನಂದನೆಗಳನ್ನು ನಾಲ್ಕು ದಿನ ಗಾಳಿ ಮಳೆ ಧೂಳು ಲೆಕ್ಕಿಸದೆ ಪಟ್ಟು ಹಿಡಿದು ಕೂತ ಕಾರ್ಮಿಕರಿಗೆ ವಿಶೇಷವಾಗಿ ಮಹಿಳೆಯರಿಗೆ ಸಲ್ಲಿಸುವೆ. ಸರ್ಕಾರ ಒಪ್ಪಿಕೊಂಡಿದ್ದು ರಾಜ್ಯಾದ್ಯಂತ ಇರುವ ಸುಮಾರು 27000 ಗುತ್ತಿಗೆ ಕಾರ್ಮಿಕರಿಗೆ. ಕೊಟ್ಟಿರುವುದು ಹನ್ನೊಂದು ಸಾವಿರ + ಜನರಿಗೆ. ಮತ್ತೊಮ್ಮೆ ಸರ್ಕಾರ ನುಡಿದಂತೆ ನಡೆದಿಲ್ಲ. ಮುಂದಿನ ಹೋರಾಟದ ಬಗ್ಗೆ ಯೋಚನೆ ಆರಂಭವಾಗಿದೆ. ಇಷ್ಟು ಜನರಿಗಾದರೂ ಖಾಯಮಾತಿ ಮಾಡಿರುವುದು ಸ್ವಾಗತಾರ್ಹ. ಮತ್ತೆ ಮುಂದುವರೆಯಲಿದೆ ಹೋರಾಟ. ಎಂದು ಪ್ರತಿಕ್ರಿಯೆ ನೀಡಿದ್ದಾರೆ.