Home ವಿಶೇಷ ಪತ್ರಕರ್ತರ ಫೋನಿನಲ್ಲಿ‌ ಕುಖ್ಯಾತ ಪೆಗಾಸಸ್ ಪತ್ತೆ!

ಪತ್ರಕರ್ತರ ಫೋನಿನಲ್ಲಿ‌ ಕುಖ್ಯಾತ ಪೆಗಾಸಸ್ ಪತ್ತೆ!

0

ಬೆಂಗಳೂರು: ಈಗ ಮತ್ತೆ ಪೆಗಾಸಸ್‌ ಸಾಫ್ಟ್‌ವೇರ್ ಚರ್ಚೆಯಲ್ಲಿದೆ. ಪತ್ರಕರ್ತರಾದ ದಿ ವೈರ್‌ನ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಮತ್ತು ಓರಗನೈಸ್ಡ್ ಕ್ರೈಮ್ ಅಂಡ್ ಕರಪ್ಷನ್ ರಿಪೋರ್ಟಿಂಗ್ ಪ್ರಾಜೆಕ್ಟ್‌ನ ಆನಂದ್ ಮಂಗ್ನಾಲೆ ಅವರ ಮೊಬೈಲ್ ಫೋನ್‌ಗಳ ಮೇಲೆ ಅಪರಿಚಿತ ಸರ್ಕಾರಿ ಸಂಸ್ಥೆಯೊಂದು ಪೆಗಾಸಸ್ ಸಾಫ್ಟ್‌ವೇರನ್ನು ಬಳಸಿದೆ ಎಂಬುದಕ್ಕೆ ಪುರಾವೆಗಳಿವೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಸೆಕ್ಯುರಿಟಿ ಲ್ಯಾಬ್ ಗಂಭೀರ ಆರೋಪ ಮಾಡಿದೆ ಎಂದು ದಿ ವೈರ್‌ ವರದಿ ಮಾಡಿದೆ.

ವಾಷಿಂಗ್ಟನ್ ಪೋಸ್ಟ್‌ನ ತನಿಖಾ ವರದಿಯ ಭಾಗವಾಗಿ ಅಮ್ನೆಸ್ಟಿ ಡಿಸೆಂಬರ್ 28 ರಂದು ತನ್ನ ಸಂಶೋಧನೆಗಳ ವರದಿಗಳನ್ನು ಬಿಡುಗಡೆ ಮಾಡಿದೆ.

ಇಸ್ರೇಲಿ ವಿನ್ಯಾಸದ ಈ ಸಾಫ್ಟ್‌ವೇರ್‌ ಬಳಸಿ ವರದರಾಜನ್ ಅವರನ್ನು ಗುರಿ ಮಾಡುತ್ತಿರುವುದು ಇದು ಎರಡನೇ ಬಾರಿ. ‘ಪೆಗಾಸಸ್ ಪ್ರಾಜೆಕ್ಟ್’ ಎಂದು ಕರೆಯಲ್ಪಡುವ ವಿಶ್ವಾದ್ಯಂತ ಮಾಧ್ಯಮ ಒಕ್ಕೂಟದ ತನಿಖೆಯ ಭಾಗವಾಗಿ 2021 ರಲ್ಲಿ ದಿ ವೈರ್ ವರದಿ ಮಾಡಿದಂತೆ, ಅವರ ಫೋನ್ ಹಲವಾರು ಇತರ ಪತ್ರಕರ್ತರು, ವಿರೋಧ ಪಕ್ಷದ ರಾಜಕಾರಣಿಗಳು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ಫೋನ್‌ಗಳಲ್ಲಿ ಅಮ್ನೆಸ್ಟಿಯ ಸೆಕ್ಯುರಿಟಿ ಲ್ಯಾಬ್ ಪೆಗಾಸಸ್ ಅನ್ನು ಕಂಡುಹಿಡಿದಿದೆ. ಮಂಗ್ನಾಲೆ ಅವರ ಫೋನ್‌ನಲ್ಲಿ ಈ ಸಾಫ್ಟ್‌ವೇರ್‌ ಇರುವುದನ್ನು ಕಂಡು ಬಂದಿದ್ದು, ಅದಾನಿ ಗ್ರೂಪಿನ ವ್ಯಾಪಾರ ವ್ಯವಹಾರಗಳ ಬಗ್ಗೆ ಅವರು ನಡೆಸಿರುವ ತನಿಖೆಯ ಕಾರಣಕ್ಕೆ ಇವರನ್ನು ಗುರಿ ಮಾಡಲಾಗಿದೆ.

ವಾಷಿಂಗ್ಟನ್ ಪೋಸ್ಟ್ ವರದಿಯಲ್ಲಿ, “ಆಗಸ್ಟ್. 23 ರಂದು, ಭಾರತೀಯ ಭದ್ರತಾ ಕಾನೂನಿನ ಉಲ್ಲಂಘನೆ ಮಾಡಿ ಅದಾನಿಯವರ ಸಹೋದರ ಅದಾನಿ ಗ್ರೂಪ್ ಕಾಂಗ್ಲೋಮರೇಟ್‌ನ ಸಾರ್ವಜನಿಕ ಸ್ಟಾಕ್‌ನ ನೂರಾರು ಮಿಲಿಯನ್ ಡಾಲರ್‌ಗಳನ್ನು ರಹಸ್ಯವಾಗಿ ವ್ಯಾಪಾರ ಮಾಡಿದ್ದಾರೆ ಎಂಬ ಆರೋಪದ ಮೇಲೆ ಒಂದು ವಾರದ ನಂತರ ಪ್ರಕಟಿಸಲಿರುವ ವರದಿಯ ಬಗ್ಗೆ ಅಭಿಪ್ರಾಯ ನೀಡುವಂತೆ ಅದಾನಿಯವರಿಗೆ OCCRP (Organized Crime and Corruption Reporting Project) ಇ-ಮೇಲ್‌ ಮಾಡಿತ್ತು. ಆಮ್ನೆಸ್ಟಿ ಇಂಟರ್‌ನ್ಯಾಶನಲ್ ನಡೆಸಿದ ಮತ್ತು ದಿ ವಾಷಿಂಗ್ಟನ್ ಪೋಸ್ಟ್‌ ಪ್ರಕಟಿಸಿರುವಂತೆ, ಈ ವಿಚಾರಣೆ ನಡೆದು 24 ಗಂಟೆಗಳ ಒಳಗೆ ದಾಳಿಕೋರರು  ಇಸ್ರೇಲಿ ಕಂಪನಿ NSO ಗ್ರೂಪ್ ಅಭಿವೃದ್ಧಿಪಡಿಸಿದ ಕುಖ್ಯಾತ ಸಾಫ್ಟ್‌ವೇರ್ ಪೆಗಾಸಸ್ ಅನ್ನು‌ ಮಂಗ್ನಾಲೆ ಅವರ ಫೋನ್‌ನಲ್ಲಿ ಹಾಕಿದ್ದಾರೆ ಎಂದು ಫೋನಿನ ಫೋರೆನ್ಸಿಕ್ ವಿಶ್ಲೇಷಣೆಯಲ್ಲಿ ಕಂಡುಬಂದಿದೆ. NSO ಗ್ರೂಪ್‌ ಈ ಸಾಫ್ಟ್‌ವೇರನ್ನು ಸರ್ಕಾರಕ್ಕೆ ಮಾರಿದ್ದೇವೆ ಎಂದು ಹೇಳಿಕೊಂಡಿದೆ.

“On Aug. 23, the OCCRP emailed Adani seeking comment for a story it would publish a week later alleging that his brother was partof a group that had secretly traded hundreds of millions of dollars worth of the Adani Group conglomerate’s public stock, possibly in violation of Indian securities law. A forensic analysis of Mangnale’s phone, conducted by Amnesty International and shared withThe Washington Post, found that within 24 hours of that inquiry, an attacker infiltrated the device and planted Pegasus, the notorious spyware that was developed by Israeli company NSO Groupand that NSO says is sold only to governments.”

“ನಮ್ಮ ಇತ್ತೀಚಿನ ಸಂಶೋಧನೆಗಳ ಪ್ರಕಾರ ಭಾರತದಲ್ಲಿ ಪತ್ರಕರ್ತರು ತಮ್ಮ ವೃತ್ತಿಯ ಕಾರಣಕ್ಕಾಗಿ ಕಾನೂನುಬಾಹಿರ ಕಣ್ಗಾವಲು ಬೆದರಿಕೆಯನ್ನು ಎದುರಿಸುತ್ತಿದ್ದಾರೆ, ಜೊತೆಗೆ ಕಠಿಣ ಕಾನೂನುಗಳ ಅಡಿಯಲ್ಲಿ ಜೈಲುವಾಸ, ಸ್ಮೀಯರ್ ಕ್ಯಾಂಪೇನ್‌ಗಳು, ಕಿರುಕುಳ ಮತ್ತು ಬೆದರಿಕೆಯನ್ನು ಎದುರಿಸುತ್ತಿದ್ದಾರೆ” ಎಂದು ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಸೆಕ್ಯುರಿಟಿ ಲ್ಯಾಬ್‌ನ ಮುಖ್ಯಸ್ಥ ಡೊನ್ಚಾ ಓ ಸಿಯರ್‌ಬೈಲ್ (Donncha Ó Cearbhaill) ತಿಳಿಸಿದ್ದರು.

ಭಾರತ ಸರ್ಕಾರ ಗೂಢಾಚಾರಿಕೆಗಾಗಿ ಸ್ಪೈವೇರ್‌ ಸಿಸ್ಟಂವೊಂದನ್ನು ಹುಡುಕುತ್ತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದ ಕೆಲವೇ ತಿಂಗಳಲ್ಲಿ, ಅಂದರೆ ಜೂನ್ 2023 ರಂದು ಭಾರತದ ಪ್ರಮುಖ ವ್ಯಕ್ತಿಗಳ ಫೋನಿಗೆ ಪೆಗಾಸಸ್ ಸ್ಪೈವೇರ್ ಬೆದರಿಕೆಗಳು ಬಂದಿರುವುದನ್ನು ಸೆಕ್ಯುರಿಟಿ ಲ್ಯಾಬ್ ಗಮನಿಸಿರುವ ಬಗ್ಗೆ  ಅಮ್ನೆಸ್ಟಿ ಹೇಳಿಕೊಂಡಿದೆ.

“ಸರ್ಕಾರಿ ಪ್ರಾಯೋಜಿತ ದಾಳಿಕೋರರು” ಮೊಬೈಲ್‌ ಮೇಲೆ ದಾಳಿ ಇಡುವ ಬಗ್ಗೆ ಐಫೋನ್ ಬಳಕೆದಾರರಿಗೆ ಆಪಲ್ ಜಾಗತಿಕವಾಗಿ ಎಚ್ಚರಿಕೆಯ ಸೂಚನೆಯನ್ನು ನೀಡಿತ್ತು. ವರದರಾಜನ್, ಆನಂದ್ ಮಂಗ್ನಾಲೆ‌, ಅದಾನಿ ಗ್ರೂಪಿನ ಮೇಲೆ ಸತತವಾಗಿ ಟೀಕೆ ಮಾಡುತ್ತಾ ಬಂದಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, OCCRP ಯ ಪತ್ರಕರ್ತ ರವಿ ನಾಯರ್ ಸೇರಿದಂತೆ ಭಾರತದ ಹಲವಾರು ಪತ್ರಕರ್ತರು ಮತ್ತು ವಿರೋಧ ಪಕ್ಷದ ನಾಯಕರಿಗೆ ಈ ಮೆಸೆಜನ್ನು ಆಪಲ್ ಕಳಿಸಿತ್ತು.

ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಸೆಕ್ಯುರಿಟಿ ಲ್ಯಾಬ್ ವರದರಾಜನ್ ಮತ್ತು ಮಂಗ್ನಾಲೆ‌ ಅವರ ಫೋನ್‌ಗಳಲ್ಲಿ ಪೆಗಾಸಸ್ ಸ್ಪೈವೇರ್‌ನ ಕುರುಹುಗಳನ್ನು ಕಂಡುಹಿಡಿದಿದೆ.  ಇದು ಆನಂದ್‌ ಮಂಗ್ನಾಲೆ ಅವರ ಫೋನಿಗೆ ಬಂದಿದ್ದ ಜೀರೋ-ಕ್ಲಿಕ್ ಮೆಸೆಜನ್ನು ತೆಗೆದುಕೊಂಡು ವಿಶ್ಲೇಷಿಸಿದೆ. ಈ ಮೆಸೆಜನ್ನು iMessage ಮೂಲಕ ಅವರ ಫೋನ್‌ಗೆ 23 ಆಗಸ್ಟ್ 2023 ರಂದು ಕಳುಹಿಸಲಾಗಿದೆ ಮತ್ತು ಪೆಗಾಸಸ್ ಸ್ಪೈವೇರ್ ಅನ್ನು ರಹಸ್ಯವಾಗಿ ಮೊಬೈಲ್‌ ಒಳಗೆ ಕೂರಿಸಲು ಬಳಸಲಾಗಿದೆ. ಆ ಸಂದರ್ಭದಲ್ಲಿ ಆನಂದ್‌ ಮಂಗ್ನಾಲೆ  iOS 16.6 ಫೋನ್‌ ಬಳಸುತ್ತಿದ್ದರು.

Zero-Click Exploit ಮೇಲೆ ಕ್ಲಿಕ್‌ ಮಾಡಿದರೆ ನಿಮ್ಮ ಫೋನಿನಲ್ಲಿ ನಿಮ್ಮ ಗಮನಕ್ಕೆ ಬಾರದ ಹಾಗೆ ಯಾವುದೇ ಸ್ಪೈವೇರನ್ನು ಹಾಕಬಹುದು.

ಸೆಕ್ಯುರಿಟಿ ಲ್ಯಾಬ್ ಪೆಗಾಸಸ್ ದಾಳಿಯಲ್ಲಿ ಬಳಸಲಾಗಿರುವ ದಾಳಿಕೋರರಿಂದ ಮಾತ್ರ ನಿಯಂತ್ರಿಸಲ್ಪಡುವ ಇಮೇಲ್ ವಿಳಾಸವನ್ನು ಕೂಡ ಗುರುತಿಸಿದೆ.  ಈ ಸ್ಯಾಂಪಲ್‌ಗಳು NSO ಗ್ರೂಪ್‌ಗೆ ಸೇರಿದ BLASTPASS Exploit ಜೊತೆಗೆ ಹೋಲಿಕೆಯಾಗುತ್ತಿದ್ದು, ಸೆಪ್ಟೆಂಬರ್ 2023 ರಂದು ಸಿಟಿಜನ್ ಲ್ಯಾಬ್‌ ಸಾರ್ವಜನಿಕವಾಗಿ ಇದನ್ನು ಗುರುತಿಸಿದೆ ಮತ್ತು iOS 16.6.1 (CVE-2023-41064) ನಲ್ಲಿ Apple ಇದನ್ನು ಪ್ಯಾಚ್ ಮಾಡಿದೆ.

“ಆನಂದ್ ಮಂಗ್ನಾಲೆ ಅವರ ಫೋನ್ ದಾಳಿಯ ಸಮಯದಲ್ಲಿ ಈ ಜೀರೋ ಕ್ಲಿಕ್‌ ವಂಚನೆಗೆ ಗುರಿಯಾಗಿತ್ತು. ಆದರೆ ಅವರ ಡಿವೈಸ್‌ ಈ ಕಾರಣಕ್ಕೆ ಯಶಸ್ವಿ ರಾಜಿಯಾಗಿದೆ ಎಂಬುದು ಪ್ರಸ್ತುತ ಅಸ್ಪಷ್ಟವಾಗಿದೆ,” ಎಂದು ಸೆಕ್ಯೂರಿಟಿ ಲ್ಯಾಬ್‌ ಹೇಳಿದೆ.

ವರದರಾಜನ್ ಅವರ ಫೋನ್‌ಗೆ ಸಂಬಂಧಿಸಿದಂತೆ, ಆಮ್ನೆಸ್ಟಿಯ ಫೊರೆನ್ಸಿಕ್ ವರದಿ, “ಸೆಕ್ಯುರಿಟಿ ಲ್ಯಾಬ್ ಸಿದ್ಧಾರ್ಥ್ ವರದರಾಜನ್ ಅವರ iPhone 11 ನಿಂದ ಫೋರೆನ್ಸಿಕ್ ದಾಖಲೆಗಳನ್ನು ಪರಿಶೀಲಿಸಿ, ಅಕ್ಟೋಬರ್ 2023 ರಲ್ಲಿ NSO ಗ್ರೂಪ್‌ನ ಪೆಗಾಸಸ್ ಸ್ಪೈವೇರ್‌ಗೆ ಅವರ ಫೋನ್‌ ಬಲಿಯಾಗಿರುವುದನ್ನು,”  ಖಚಿತ ಪಡಿಸಿದೆ.

ಸಿದ್ಧಾರ್ಥ್ ವರದರಾಜನ್ ಐಫೋನ್‌ನಲ್ಲಿದ್ದ ಹೋಮ್‌ಕಿಟ್ ಲಾಗ್‌ಗಳು ಆನಂದ್ ಮಂಗ್ನಾಲೆಯವರನ್ನು ಗುರಿಯಾಗಿಸಿದ ಅದೇ ಇ-ಮೇಲ್‌ ಅನ್ನು ಪೆಗಾಸಸ್ ದಾಳಿಕೋರರು ಬಳಸಿದ್ದಾರೆ ಎಂದು ತೋರಿಸಿದೆ. ಪರಿಶೀಲನೆಗೆ ತೆಗೆದುಕೊಂಡಿರುವ ವರದರಾಜನ್‌ ಅವರ ಐಫೋನಿನ HomeKit ಲಾಗ್‌ಗಳು natalymarinova@proton.me ಆಪಲ್ ಖಾತೆಯು ವರದರಾಜನ್‌ ಅವರ HomeKit ಸೇವೆಯೊಂದಿಗೆ 16 ಅಕ್ಟೋಬರ್ 2023 ರಂದು 14:36:09 UTC ನಲ್ಲಿ ಸಂವಹನ ನಡೆಸಿದೆ ಎಂದು ತೋರಿಸುತ್ತದೆ. ಆ ಸಮಯದಲ್ಲಿ ಅವರು iOS – 16.6.1 ಐಫೋನ್‌ ಬಳಸುತ್ತಿದ್ದರು ಮತ್ತು ಅದರ ಮೇಲೆ BLASTPASRT ದಾಳಿಯಾಗಿರಲಿಲ್ಲ.  

ಆಪಲ್‌ ತನ್ನ ಕೆಲವು ಬಳಕೆ ದಾರರಿಗೆ ಸರ್ಕಾರಿ ಪ್ರಾಯೋಜಿತ ದಾಳಿಯಾಗುವ ಸಾಧ್ಯತೆಯ ಬಗ್ಗೆ, ಸ್ಪೈವೇರ್ ಬಗ್ಗೆ ಎಚ್ಚರಿಕೆಯನ್ನು ನೀಡಿತ್ತು. ಇವರಲ್ಲಿ ಭಾರತದ ರಾಜಕಾರಣಿಗಳೂ ಸೇರಿದ್ದಾರೆ.  ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದಂತೆ  ಕೆಲವು ಭಾರತೀಯ ರಾಜಕಾರಣಿಗಳ ಫೋನ್‌ಗಳನ್ನು ನ್ಯೂಯಾರ್ಕ್ ಭದ್ರತಾ ಸಂಸ್ಥೆಯಾದ iVerify ಪರೀಕ್ಷಿಸುತ್ತಿದೆ.  ತೊಡಗಿಸಿಕೊಂಡಿದೆ ಎಂದು ಮಾಡಿದೆ, ಟಾರ್ಗೆಟ್ ಮಾಡುವ ಹೆಜ್ಜೆಗುರುತುಗಳನ್ನು ಕಂಡುಹಿಡಿದಿದೆ:

“IVerify ಮೊಯಿತ್ರಾ ಅವರ ಫೋನ್ ಬ್ಯಾಕಪ್ ಅನ್ನು ಪರೀಕ್ಷಿಸಿದ್ದು, ಅವರು ಆಪಲ್‌ನಿಂದ ಎಚ್ಚರಿಕೆಯ ಸಂದೇಶವನ್ನು ಸ್ವೀಕರಿಸಿರುವುದನ್ನು ದೃಢಪಡಿಸಿದೆ. ಇತರ ಡಿಜಿಟಲ್ ದಾಖಲೆಗಳೊಂದಿಗೆ ಸಾಧನವನ್ನು ಹ್ಯಾಕ್ ಮಾಡಲಾಗಿದೆ ಎಂದು ಸೂಚಿಸುವ ತುರ್ತು ಕ್ರ್ಯಾಶ್ ವರದಿಗಳೂ ಸಹ ಇದ್ದವು. ಪ್ರತಿಪಕ್ಷದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಡೇಟಾ ಅನಾಲಿಟಿಕ್ಸ್ ವಿಭಾಗದ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿ ಅವರ ಫೋನ್‌ನಲ್ಲಿ ಇದ್ದ ಬೆದರಿಕೆ ಸಂದೇಶಗಳು ಮತ್ತು ಅನುಮಾನಾಸ್ಪದ ಚಟುವಟಿಕೆಯನ್ನು ಕಂಪನಿಯು ಕಂಡುಹಿಡಿದಿದೆ,” ಎಂದು ವರದಿಯಲ್ಲಿ ತಿಳಿಸಿದೆ.

ಭಾರತದ ಪತ್ರಕರ್ತರ ವಿರುದ್ಧ ಪೆಗಾಸಸ್‌ ಬಳಸಿರುವುದನ್ನು ತನಿಖೆ ಮಾಡಲು ನೇಮಿಸಿದ್ದ ತಾಂತ್ರಿಕ ಸಮಿತಿಯೊಂದನ್ನು ನೇಮಿಸಲಾಗಿತ್ತು. ಇದು ಐದು ಮೊಬೈಲ್ ಫೋನ್‌ಗಳಲ್ಲಿ ಮಾಲ್‌ವೇರ್‌ ಇರುವುದಕ್ಕೆ ಪುರಾವೆ ನೀಡಿತ್ತು, ಮತ್ತದನ್ನು ಸುಪ್ರೀಂ ಕೋರ್ಟ್‌ ಪರಿಶೀಲನೆ ನಡೆಸಿತ್ತು. ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು, ನರೇಂದ್ರ ಮೋದಿ ಸರ್ಕಾರವು ಸಮಿತಿಯೊಂದಿಗೆ ಸಹಕರಿಸಲು ನಿರಾಕರಿಸಿದೆ ಎಂದು ಹೇಳಿದ್ದರು.

ಈ ಸಮಿತಿಯ ವರದಿ ಸುಪ್ರೀಂ ಕೋರ್ಟಿನ ಟೇಬಲಿನಲ್ಲಿ ಇದ್ದರೂ ಯಾವ ಕ್ರಮಗಳನ್ನೂ ತೆಗೆದುಕೊಂಡಿಲ್ಲ. ವರದಿಯನ್ನೂ ಬಹಿರಂಗ ಪಡಿಸಿಲ್ಲ. ಅಲ್ಲದೇ ವಾಷಿಂಗ್ಟನ್ ಪೋಸ್ಟ್ ವರದಿಯಲ್ಲಿ ಆಪಲ್‌ ಕಂಪನಿಗೆ ತಾನು ಕಳಿಸಿದ ಎಚ್ಚರಿಕೆಯ ಸಂದೇಶಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಲಾಗಿದೆ ಎಂದು ಹೇಳಲಾಗಿದೆ.

You cannot copy content of this page

Exit mobile version