Sunday, April 28, 2024

ಸತ್ಯ | ನ್ಯಾಯ |ಧರ್ಮ

ಮುಂಬರುವ ಚುನಾವಣೆಯಲ್ಲಿ 40% ಸರ್ಕಾರವನ್ನು ಕಿತ್ತೊಗೆಯಬೇಕೆಂಬುವುದೇ ʼಜನ ಸಂಕಲ್ಪʼ: ಸಿದ್ದರಾಮಯ್ಯ

ಬಳ್ಳಾರಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 40% ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎನ್ನುವುದೇ ʼಜನ ಸಂಕಲ್ಪʼ ಎಂದು ವಿರೋಧ ಪಕ್ಷದ ನಾಯಕ ಸಿದದ್ದರಾಮಯ್ಯ ಟೀಕಿಸಿದರು.

ಬಳ್ಳಾರಿಯಲ್ಲಿ ನಡೆದ ಭಾರತ ಐಕ್ಯತಾ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಪಾದಯಾತ್ರೆ. ರಾಜಕೀಯ ಅಧಿಕಾರ ಗಳಿಸುವ ಉದ್ದೇಶದಿಂದ ಕೈಗೊಂಡ ಪಾದಯಾತ್ರೆ ಇದಲ್ಲ. ಜಾತಿ, ಧರ್ಮ, ವರ್ಗಗಳ ಆಧಾರದಲ್ಲಿ ಒಡೆದಿರುವ ಭಾರತವನ್ನು ಒಂದುಗೂಡಿಸುವ  ರಾಷ್ಟ್ರೀಯ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಪ್ರಯತ್ನವೇ ಭಾರತಐಕ್ಯತಾಯಾತ್ರೆ ಎಂದು ಹೇಳಿದರು.

ಏಕಕಾಲದಲ್ಲಿ ಸುಮಾರು 3,570 ಕಿ.ಮೀ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಪ್ರವಾಸ ಕೈಗೊಂಡಿರುವುದು ಇದೇ ಮೊದಲು. ಈಗಾಗಲೇ 1,000 ಕಿ.ಮೀ ನಡಿಗೆಯನ್ನು ರಾಹುಲ್‌ ಗಾಂಧಿ ಅವರು ಯಶಸ್ವಿಯಾಗಿ ಮುಗಿಸಿದ್ದಾರೆ. ಅತೀ ಮುಖ್ಯವಾಗಿ ಪಾದಯಾತ್ರೆಗೆ ನಿರೀಕ್ಷೆಗೂ ಮೀರಿದ ಜನಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಬಿಜೆಪಿಯ ದ್ವೇಷ, ಹಿಂಸೆ, ಧರ್ಮ ರಾಜಕಾರಣದಿಂದ ದಲಿತರು, ಮಹಿಳೆಯರು, ಶೋಷಿತರು, ಅಲ್ಪಸಂಖ್ಯಾತ ಸಮುದಾಯದ ಜನ ಭಯದಲ್ಲಿ ಬದುಕುವಂತಾಗಿದೆ. “ಸರ್ವಜನಾಂಗದ ಶಾಂತಿಯ ತೋಟ”ವೆಂಬ ಕುವೆಂಪು ಅವರ ಆಶಯಕ್ಕೆ ವಿರುದ್ಧ ದಿಕ್ಕಿನಲ್ಲಿ ದೇಶ ಸಾಗುತ್ತಿದೆ ಎಂದರು.

ದೇಶದ ಸ್ವಾತಂತ್ರ್ಯ ಕಾಂಗ್ರೆಸ್ ನ ಹೋರಾಟದ ಫಲ. ಮಹಾತ್ಮ ಗಾಂಧಿ, ನೆಹರು ಆದಿಯಾಗಿ ನಮ್ಮ ಪಕ್ಷದ ಅನೇಕರ ತ್ಯಾಗ, ಬಲಿದಾನ, ಜೈಲುವಾಸದಿಂದ ನಮಗೆ ಸ್ವಾತಂತ್ರ್ಯ ದಕ್ಕಿದೆ. 1925ರಲ್ಲಿ ಆರಂಭವಾದ ಆರ್‌,ಎಸ್‌,ಎಸ್‌ ನವರಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಒಬ್ಬನೇ ಒಬ್ಬ ವ್ಯಕ್ತಿ ಇದ್ದಾರ? ಎಂದು ವಾಗ್ದಾಳಿ ನಡಿಸಿದರು.

1977ರಲ್ಲಿ ವಿಜಯನಗರ ಉಕ್ಕಿನ ಕಾರ್ಖಾನೆಯನ್ನು ಸ್ಥಾಪನೆ ಮಾಡಿ, ಇಂದು ಸಾವಿರಾರು ಜನರಿಗೆ ಉದ್ಯೋಗ, ಆ ಮೂಲಕ ಅನ್ನಕ್ಕೆ ದಾರಿ ಆಗಿದ್ದರೆ ಅದಕ್ಕೆ ಇಂದಿರಾ ಗಾಂಧಿ ಅವರು ಕಾರಣ. ಗಣಿ ಲೂಟಿ ಮಾಡಿದ್ದೇ ಬಳ್ಳಾರಿಗೆ ಬಿಜೆಪಿ ಕೊಡುಗೆ ಸೋನಿಯಾ ಗಾಂಧಿ ಅವರು 1999ರಲ್ಲಿ ಬಳ್ಳಾರಿಯಿಂದ ಸ್ಪರ್ಧೆ ಮಾಡಿ ಲೋಕಸಭಾ ಸದಸ್ಯರಾದ ಮೇಲೆ 3,300 ಕೋಟಿಯ ಕುಡತಿನಿ ವಿದ್ಯುತ್‌ ಯೋಜನೆ ಜಾರಿ ಮಾಡಿದ್ದರು. ಆದರೆ ಕಳೆದ ಎಂಟು ವರ್ಷಗಳಿಂದ  ನರೇಂದ್ರ ಮೋದಿ ಸರ್ಕಾರ ಬಳ್ಳಾರಿಗೆ ಯಾವ ಕೊಡುಗೆ ನೀಡಿದೆ? ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರು ಬಳ್ಳಾರಿಯಿಂದ ದೋಚಿದ್ದು ಬಿಟ್ಟರೆ, ಬಳ್ಳಾರಿಗೆ ನೀಡಿರುವ ಕೊಡುಗೆ ಶೂನ್ಯ. ಬೇಕಿದ್ದರೆ ಬಳ್ಳಾರಿಯ ಅಭಿವೃದ್ಧಿ ವಿಚಾರಗಳ ಬಗ್ಗೆ ಸಚಿವ ಬಿ ಶ್ರೀರಾಮುಲು ಅವರು ನಮ್ಮ ಪಕ್ಷದ ಉಗ್ರಪ್ಪನವರ ಜೊತೆ ಬಹಿರಂಗ ಚರ್ಚೆಗೆ ಬರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಲೆಯೇರಿಕೆ, ದ್ವೇಷರಾಜಕಾರಣ, ಸಾಮಾಜಿಕ ಅಶಾಂತಿಯಿಂದ ನೊಂದಿರುವ ಜನ ಪ್ರವಾಹದಂತೆ ಬಂದು ನಮ್ಮ ಪಾದಯಾತ್ರೆಯನ್ನು ಕೂಡಿಕೊಳ್ಳುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷದ 40% ಕಮಿಷನ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು “ಜನ ಸಂಕಲ್ಪ” ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ರಾಹುಲ್‌ ಗಾಂಧಿ  ಮತ್ತು ಸೋನಿಯಾ ಗಾಂಧಿ ಅವರು ನನಗೆ 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವ ಮುಕ್ತ ಅವಕಾಶ ಕೊಟ್ಟಿದ್ದರು. ನಮ್ಮ ಸರ್ಕಾರ ಜನರಿಗೆ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿ, ನುಡಿದಂತೆ ನಡೆದಿದೆ. ಆದರೆ ಬಿಜೆಪಿ ತನ್ನ ಪ್ರಣಾಳಿಕೆಯ 10% ಭರವಸೆಯನ್ನೂ ಈಡೇರಿಸಿಲ್ಲ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಜನತೆಗೆ ನೀಡಿದ್ದ ಪ್ರತಿ ಭರವಸೆಯೂ ಹುಸಿಯಾಗಿದ್ದು, ಬೆಲೆಯೇರಿಕೆ, ನಿರುದ್ಯೋಗ, ಬಡತನ ಇಂಥಾ ಹತ್ತಾರು ಸಮಸ್ಯೆಗಳು ದೇಶದ ಜನರ ಬದುಕು ಕಸಿದಿದೆ. ಈ ಉದ್ದೇಶಕ್ಕಾಗಿಯೇ ರಾಹುಲ್ ಗಾಂಧಿ ಅವರು ಭಾರತ‌ಐಕ್ಯತಾಯಾತ್ರೆ ಮೂಲಕ ಸಂಕಷ್ಟದಲ್ಲಿರುವ ಜನರ ಜೊತೆ ನಿಂತಿದ್ದಾರೆ. ಹೀಗಾಹಿ ರಾಹುಲ್‌ ಗಾಂಧಿ ಅವರು ಭಾರತ‌ ಐಕ್ಯತಾ ಯಾತ್ರೆ ಎಂಬ ಬಹುದೊಡ್ಡ ಸಾಹಸಕ್ಕೆ ಕೈ ಹಾಕಿರುವುದಕ್ಕಾಗಿ ಅವರಿಗೆ ತುಂಬುಹೃದಯದ ಧನ್ಯವಾದ ಅರ್ಪಿಸುತ್ತೇನೆ. ದೇಶ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗೆ ಈ ಯಾತ್ರೆಯ ಅನಿವಾರ್ಯತೆ ಇದೆ ಎಂದು ಸಿದ್ದರಾಮಯ್ಯ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು