“ಕರ್ನಾಟಕದಲ್ಲಿ ಆಚರಣೆಯಲ್ಲಿದ್ದ ಕೆಲವು ಮುಖ್ಯವಾದ ಅಮಾನವೀಯ ಆಚರಣೆಗಳನ್ನು ಇಲ್ಲಿ ನೋಡಿದ್ದೇವೆ. ಮತ್ತೆ ನೆನಪಿಸಬೇಕೆಂದರೆ, ಇನ್ನೂ ಕೆಲವು ಚಿತ್ರವಿಚಿತ್ರ ಅಮಾನವೀಯ ಪದ್ಧತಿ, ಆಚರಣೆಗಳನ್ನು ಚುಟುಕಾಗಿ ನೋಡೋಣ.. ನಿಖಿಲ್ ಕೋಲ್ಪೆಯವರ ಬರಹದಲ್ಲಿ
ಕರ್ನಾಟಕದಲ್ಲಿ ಆಚರಣೆಯಲ್ಲಿದ್ದ ಕೆಲವು ಮುಖ್ಯವಾದ ಅಮಾನವೀಯ ಆಚರಣೆಗಳನ್ನು ಇಲ್ಲಿ ನೋಡಿದ್ದೇವೆ. ಮತ್ತೆ ನೆನಪಿಸಬೇಕೆಂದರೆ, ಅಜಲು ಪದ್ಧತಿ, ಮಡೆಸ್ನಾನ, ಎಂಜಲಿಗೆ ಸಂಬಂಧಿಸಿದ ಆಚರಣೆಗಳು, ಕುಂಡೆ ಹಬ್ಬ, ಗರ್ಭಿಣಿ ಬಾಣಂತಿಯರನ್ನು ಊರ ಹೊರಗೆ ತಳ್ಳುವುದು, ಮೊಟ್ಟೆಯಿಂದ ಕನ್ಯತ್ವ ಪರೀಕ್ಷೆ, ದೇವದಾಸಿ ಪದ್ಧತಿ, ಸಾಮೂಹಿಕ ಸಂಭೋಗ, ಬತ್ತಲೆ ಸೇವೆ, ಬೇವಿನುಡುಗೆ, ಸಿಡಿಯಾಟ, ಬಾಯಿಗೆ ಬೀಗ, ಸ್ವಯಂ ಹಿಂಸೆ…ಇತ್ಯಾದಿ. ಈಗ ಇನ್ನೂ ಕೆಲವು ಚಿತ್ರವಿಚಿತ್ರ ಅಮಾನವೀಯ ಪದ್ಧತಿ, ಆಚರಣೆಗಳನ್ನು ಚುಟುಕಾಗಿ ನೋಡೋಣ.
ಕಾಲು ತೊಳೆದು ನೀರು ಕುಡಿಯುವುದು
ಆ ಜಾತಿ, ಈ ಜಾತಿ ಎನ್ನದೇ ಈ ಕಾಲುಗಳ ಬಗ್ಗೆ ವಿಚಿತ್ರವಾದ ಹಲವು ತದ್ವಿರುದ್ಧ ಕಲ್ಪನೆಗಳು ಇವೆ. ಕಾಲು ಎಂಬುದು ಕೀಳು ಎಂಬುದು ಒಂದು ಕಡೆಯಾದರೆ, ಕಾಲು ಪವಿತ್ರ ಎಂಬುದು ಇನ್ನೊಂದು ಕಡೆ. ಯಾರಿಗಾದರೂ ಗೊತ್ತಿಲ್ಲದೇ ಕಾಲು ತಾಗಿದರೆ ಕ್ಷಮೆ ಕೇಳುತ್ತೇವೆ. ಕರಾವಳಿಯಲ್ಲಂತೂ “ಪುಡ್ಯ ಪಾಡುನಿ” ಎಂಬುದು ಆಟೋಮ್ಯಾಟಿಕ್ ಆಗಿ ಚಿಕ್ಕಂದಿನಿಂದ ಬರುವ ಅಭ್ಯಾಸವಾಗಿದೆ. ಚಿಕ್ಕವರಿರಲಿ, ಮಕ್ಕಳಿರಲಿ ಯಾರಿಗಾದರೂ, ಅಥವಾ ಪವಿತ್ರ ಎಂದು ಭಾವಿಸುವ ಯಾವುದಾದರೂ ವಸ್ತುವಿಗೆ ಗೊತ್ತಿಲ್ಲದೇ ಕಾಲು ತಾಗಿದರೆ ಯೋಚಿಸುವ ಮೊದಲೇ ಇದು ನಡೆಯುತ್ತದೆ. ಎದುರಿನವರನ್ನು ಅಥವಾ ವಸ್ತುವಾದರೆ ಅದನ್ನು ಮುಟ್ಟಿ ನಂತರ ನಮ್ಮ ಎದೆ ಮತ್ತು ಹಣೆಯನ್ನು, ಮಕ್ಕಳಾಗಿದ್ದರೆ ಎದೆ ಮತ್ತು ತುಟಿಯನ್ನು ಮುಟ್ಟಿಕೊಳ್ಳುವುದು. ಕಾಲು ಎಂಬುದು ಕೀಳು ಎಂಬ ಭಾವನೆ ಇದರ ಮೂಲದಲ್ಲಿರುವುದು. ಇದರಿಂದಾಗಿಯೇ ಬ್ರಾಹ್ಮಣನು ತಲೆಯಿಂದಲೂ, ಶೂದ್ರನು ತಲೆಯಿಂದಲೂ ಸೃಷ್ಟಿಯಾದನೆಂಬ ಕ್ರೂರ ಬುರುಡೆ ಕತೆ ಹುಟ್ಟಿದುದು.
ಆದರೆ ಇದೇ ಕಾಲು ಪವಿತ್ರವೂ ಆಗುತ್ತದೆ! ಹಿರಿಯರ, ಬ್ರಾಹ್ಮಣರ, ಸ್ವಾಮಿಗಳ ಕಾಲು ಹಿಡಿಯುವ ಸಂಪ್ರದಾಯವೇ ಇದೆ. ಇಲ್ಲಿ ಮೊದಲನೆಯದರಲ್ಲಿ ಉದ್ದೇಶ ಗೌರವ ನೀಡುವುದಿದ್ದರೆ, ಉಳಿದುದರಲ್ಲಿ ಮೇಲು ಕೀಳಿನ ಅಂಶವೇ ಇರುವುದು. ವಯಸ್ಸಿನ ಹಿರಿತನಕ್ಕೆ ಇಲ್ಲಿ ಬೆಲೆಯಿಲ್ಲ. ಇಲ್ಲಿ ಮಾನ್ಯತೆ ಇರುವುದು ಮೇಲು ಕೀಳು ಎಂಬ ಚಿಂತನೆಯಲ್ಲಿ ಮತ್ತು ನನ್ನ ಕಾಲು ಕೀಳಾದರೂ ನಿನಗೆ ಅದು ಶ್ರೇಷ್ಟ, ಪವಿತ್ರ ಎಂಬ ಅಹಂನಲ್ಲಿ. ಇಂದೂ ನಾವು ವಯಸ್ಸುಗಿಯಸ್ಸು ನೋಡದೇ ಕಂಡಕಂಡವರ ಕಾಲಿಗೆ ಬೀಳುವವರನ್ನೂ, ಯಾವುದೇ ಹಿಂಜರಿಕೆ ಇಲ್ಲದೇ ಭಕ್ತರ ತಲೆಯ ಮೇಲೆ ಕಾಲಿಡುವ ಡೋಂಗಿ ದೇವಮಾನವರನ್ನೂ, ಶಿವಲಿಂಗ ಆದಿಯಾಗಿ ದೇವರ ಮೂರ್ತಿಯ ತಲೆಯ ಮೇಲೆ ಕಾಲಿಡುವ ಅರ್ಚಕರನ್ನೂ ದೇಶದಾದ್ಯಂತ ನೋಡುತ್ತೇವೆ.
ಆದರೆ, ಕಾಲು ತೊಳೆದು ನೀರು ಕುಡಿಯುವುದು? ಈ ಪರಿಕಲ್ಪನೆ ಕೂಡಾ ನಮ್ಮ ಜನರ ಸಾಮೂಹಿಕ ಗುಲಾಮಿ ಸ್ಮೃತಿಯಲ್ಲಿ ಹೊಕ್ಕುಬಿಟ್ಟಂತಿದೆ. ಯಾರಾದರೂ ಒಳ್ಳೆಯವರು ಎನಿಸಿದರೆ, ಸಾಮಾನ್ಯರನ್ನು ಈ ರೀತಿ ಹಂಗಿಸಲಾಗುತ್ತದೆ: “ಅವರ ಕಾಲು ತೊಳೆದು ನೀರು ಕುಡಿಯಬೇಕು ನೀನು!” ಇಲ್ಲಿ ಉಲ್ಲೇಖಿಸುತ್ತ ಬಂದಿರುವ ದಾಖಲಾತಿಯ ಹೊತ್ತಿಗೆ ದಾವಣಗೆರೆಯ ಬೆಂಕಿಕೆರೆ ಗ್ರಾಮದಲ್ಲಿ ಕಾಲು ತೊಳೆದು ನೀರು ಕುಡಿಯುವ ಒಂದು ವಿಲಕ್ಷಣ ಆಚರಣೆ ನಡೆಯುತ್ತಿತ್ತು. ಇಲ್ಲಿನ ಬೋವಿ ಜನಾಂಗದವರು ಇದನ್ನು ಆಚರಿಸುತ್ತಾರೆ. ಇಲ್ಲಿ ಕೆಲವೇ ಕೆಲವು ಲಿಂಗಾಯತ ಕುಟುಂಬಗಳಿದ್ದರೂ, ಅವರನ್ನು ಪ್ರತ್ಯಕ್ಷ ದೇವರೆಂದೇ ಭಾವಿಸಲಾಗುತ್ತಿತ್ತು. ಈ ಅನಾರೋಗ್ಯಕರ ಆಚರಣೆಯಲ್ಲಿ ಹಬ್ಬಗಳ ದಿನ ಲಿಂಗಾಯತರನ್ನು ಮನೆಗೆ ಕರೆಸಿ, ಪಾದಪೂಜೆ ಮಾಡಿ, ಅದನ್ನೇ ತೀರ್ಥದಂತೆ ಕುಡಿಯುತ್ತಾರೆ ಮಾತ್ರವಲ್ಲ; ಅದೇ ನೀರನ್ನು ಬೆರೆಸಿ ಹಬ್ಬದಡುಗೆ ಮಾಡಿ, ಉಣ್ಣುತ್ತಾರೆ ಮತ್ತು ನೆಂಟರಿಷ್ಟರಿಗೂ ಬಡಿಸುತ್ತಾರೆ. ಕಾಲು ತೊಳೆದು ನೀರು ಕುಡಿಯುವುದು “ಮೇಲು ಜಾತಿ”ಗಳಲ್ಲೂ ಇದೆ. ಆದರೆ, ಇದರಲ್ಲಿ “ಕೆಳ ಜಾತಿ”ಗಳು ಇರುವುದಿಲ್ಲ. ಅವರು ತಮ್ಮ ತಮ್ಮ ಮಠದ ಸ್ವಾಮಿಗಳನ್ನು ತಮ್ಮ ಪಾರುಪತ್ಯದ ದೇವಸ್ಥಾನಕ್ಕೆ ಕರೆಸಿ, ಪಾದಪೂಜೆ ಮಾಡಿ, ಕಾಲು ತೊಳೆದು ನೀರು ಕುಡಿಯುತ್ತಾರೆ. ದಶಕಗಳ ಹಿಂದೆ ಶಾಲೆಯಲ್ಲಿ ನಾವು “ಶೂದ್ರ ಹುಡುಗರು”, “ನಿಮ್ಮ ಸ್ವಾಮಿಗಳು ಹೇಲು ಮೆಟ್ಟಿ ಬಂದರೆ?” ಎಂದು ಕುಹಕ ಪ್ರಶ್ನೆ ಕೇಳಿ, “ಮೇಲ್ಜಾತಿ” ಹುಡುಗರು ನಮ್ಮ ಬಗ್ಗೆ ಹೊಂದಿದ್ದ ಅವಮಾನಕಾರಿ ತಾತ್ಸಾರಕ್ಕೆ “ಸೇಡು” ತೀರಿಸಿಕೊಳ್ಳುತ್ತಿದ್ದೆವು.
ಅಗಸನಿಂದ ಮುಟ್ಟಾದವರ ಬಟ್ಟೆ ತೊಳೆಸುವುದು
ಮುಟ್ಟಾಗುವುದು ಒಂದು ಪ್ರಕೃತಿ ಸಹಜ ಮತ್ತು ಸೃಷ್ಟಿಗೆ ಸಂಬಂಧಿಸಿದ ಕ್ರಿಯೆಯಾದರೂ, ಅದನ್ನು ಕೀಳಾಗಿ ಕಾಣುವುದು ನಮ್ಮ ಪರಂಪರೆಯಲ್ಲಿ ನಡೆದು ಬಂದಿದೆ. ಮುಟ್ಟಾದ ಮಹಿಳೆ ಅಸ್ಪೃಶ್ಯಳಂತೆ. ಶಬರಿ ಮಲೆ ಸಹಿತ ಮುಟ್ಟಾದ ಮಹಿಳೆಯರಿಗೆ ದೇವಾಲಯಗಳಲ್ಲಿ ಪ್ರವೇಶವಿಲ್ಲ. ಕಲ್ಲುಟ್ಟಿ, ಲೆಕ್ಕೆಸಿರಿ, ಉಲ್ಲಾಳ್ತಿ ಮುಂತಾದ ಹೆಣ್ಣು ದೈವಗಳನ್ನು ಆರಾಧಿಸುವ, ತನ್ನ ಕಾಲದ ಪ್ರಗತಿಪರ ಹೆಣ್ಣು “ಸಿರಿ” ಆರಾಧನೆ ಇರುವ ಕರಾವಳಿಯಲ್ಲೂ ಮುಟ್ಟಾದ ಮಹಿಳೆಯರು ದೂರವೇ. ಅವರು ಹಿಂದೆ ಮುಟ್ಟಾದಾಗ ಮನೆಯ ಹೊರಗೆ ದನದ ಕೊಟ್ಟಿಗೆಯಲ್ಲಿ ಮೂರು ದಿನ ವಾಸವಿರಬೇಕಿತ್ತು. ಮಕ್ಕಳು ಕೂಡಾ ಅವರನ್ನು ಮುಟ್ಟುವಂತಿರಲಿಲ್ಲ. ಕೇಳಿದರೆ, “ಕಾಗೆ ಮುಟ್ಟಿದೆ” ಎನ್ನುತ್ತಿದ್ದರು. ಈಗ ಕಳೆದ ಮೂರು ನಾಲ್ಕು ದಶಕಗಳಲ್ಲಿ ಇದು ಮಾಯವಾಗಿ ತೀರಾ ಅಪರೂಪವಾಗಿದೆ.
ಹೀಗಿರುವಾಗ, ಮಂಡ್ಯ ಮತ್ತು ಹಿಂದಿನ ಶಿವಮೊಗ್ಗ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹೆಣ್ಣು ಮೊದಲ ಸಲ ಋತುಮತಿಯಾದಾಗ, ಮತ್ತು ನಂತರವೂ ಹೆಂಗಸರು ತಮ್ಮ ರಕ್ತಸಿಕ್ತ ಒಳಉಡುಪು ಸೇರಿದಂತೆ ಬಟ್ಟೆಗಳನ್ನು ಒಗೆಯುತ್ತಿರಲಿಲ್ಲ. ಹಿತ್ತಿಲಿನಲ್ಲಿ ಒಂದು ಕಡೆ ಇಟ್ಟಿರುತ್ತಿದ್ದರು. ಊರಿನ ಅಗಸರು ಅವರ ಮನೆಗೆ ಬಂದು ಅವುಗಳನ್ನು ಕೊಂಡೊಯ್ದು ಒಗೆದುಕೊಡಬೇಕಾಗಿತ್ತು. ಇಂತವರು ಬಟ್ಟೆ ಕೊಂಡುಹೋಗುವಾಗ ಬೀದಿಯಲ್ಲಿ ಎದುರು ಸಿಕ್ಕಿದರೂ ಜನರು ದೂರ ಸರಿದು ಅಪಶಕುನವೆಂದು ಅವಮಾನಿಸುತ್ತಿದ್ದರು. ಈಗಲೂ ಇದು ಮುಂದುವರಿದಿದೆಯೇ ಎಂದು ಗೊತ್ತಿಲ್ಲ. ಯಾಕೆಂದರೆ, ಆ ಹೊತ್ತಿಗೆ ಅನೇಕರು, ‘ಇದೊಂದು ಮಾಮೂಲಿ ಪದ್ಧತಿ ಎಂದು ಭಾವಿಸಿದ್ದೆವು, ಈಗ ಯೋಚಿಸಿ ನೋಡಿದರೆ ಇದು ಎಷ್ಟು ಅವಮಾನಕಾರಿ ಎಂದು ತಿಳಿಯುತ್ತದೆ’ ಎಂದು ಪ್ರತಿಕ್ರಿಯಿಸಿದ್ದರು.
ಪಾರಂಪರಿಕ ಭಿಕ್ಷಾಟನೆ
ಭಾರತದಲ್ಲಿ ಭಿಕ್ಷಾಟನೆಯು ಒಂದು ವೃತ್ತಿ ಅಥವಾ ಉಪವೃತ್ತಿಯ ರೀತಿಯಲ್ಲಿ ನಡೆಯುತ್ತಿದೆ. ಭಿಕ್ಷೆ ಬೇಡಿಸುವ ಸಂಘಟಿತ ಮಾಫಿಯಾಗಳೇ ಇವೆ. ಈ ರೀತಿಯ ಭಿಕ್ಷಾಟನೆಯು ಮುಖ್ಯವಾಗಿ ಬಡತನಕ್ಕೆ ಸಂಬಂಧಿಸಿದೆ. ನಮ್ಮಲ್ಲಿ ಭಿಕ್ಷಾಟನಾ ನಿಷೇಧ ಕಾಯಿದೆಯೂ ಇದೆ ಮತ್ತು ಪಂಚಾಯಿತಿ ಮಟ್ಟದಲ್ಲಿ- ಸಂಗ್ರಹವಾಗುವ ಹಣ ಎಲ್ಲಿಗೆ ಹೋಗುತ್ತದೆ ಎಂದೂ ಯಾರೂ ಲೆಕ್ಕ ಕೊಡದ- ಭಿಕ್ಷುಕರ ಸೆಸ್ ಕೂಡಾ ಇದೆ. ಆದರೆ, ಇಲ್ಲಿ ಉಲ್ಲೇಖಿಸುತ್ತಿರುವ ಭಿಕ್ಷಾಟನೆ ಆ ರೀತಿಯದಲ್ಲ. ಒಂದು ಜಾತಿಯಲ್ಲಿ ಹುಟ್ಟಿದ ಕಾರಣಕ್ಕಾಗಿ ಭಿಕ್ಷೆ ಬೇಡಲೇಬೇಕು ಎಂಬ ಒತ್ತಾಯ, ಒತ್ತಡವಿರುವ ಆಚರಣೆಯೇ ಪಾರಂಪರಿಕ ಭಿಕ್ಷಾಟನೆ.
ಉತ್ತರ ಕನ್ನಡದ ಅಗೇರರು, ಕರಾವಳಿಯ ಕೊರಗರು, ಪರವರು, ಪಂಬದರು ಮುಂತಾಗಿ ಹಲವು ಜನಾಂಗದವರು ಪರಂಪರೆಯ ಹೆಸರಿನಲ್ಲಿ ಭಿಕ್ಷೆ ಬೇಡುತ್ತಾರೆ. ಮೂಲಭೂತವಾಗಿ ಬಡತನವು ಭಿಕ್ಷಾಟನೆಗೆ ಕಾರಣವಾದರೂ, ಅದನ್ನೊಂದು ಕರ್ತವ್ಯ ಎಂಬಂತೆ ವಿಧಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ವರ್ಷಕ್ಕೊಂದು ದಿನ ಎಳೆಯ ಹುಡುಗರು ಮೂರು ನಾಮ ಹಾಕಿ, ಮನೆಮನೆಗೆ ಹೋಗಿ “ವೆಂಕಟರಮಣ ಹರಿ ಗೋವಿಂದ” ಎಂದು ಭಿಕ್ಷೆ ಬೇಡುವ ಪದ್ಧತಿ ಇದೆ. ಈ ರೀತಿಯ ಭಿಕ್ಷಾಟನೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಬಿಟ್ಟರೆ, ರಾಜ್ಯದ ಉಳಿದ ಕಡೆಗಳಲ್ಲಿ ನೇರ ವೆಂಕಟರಮಣನ ಸಂಬಂಧ ಇರುವಂತಿದೆ. “ಭವತೀ ಭಿಕ್ಷಾಂದೇಹಿ” ಎಂದು ಬೇಡುವುದು ಹಿಂದೂ ಪರಂಪರೆಯ ಭಾಗವಾಗಿರುವುದು, ಬೌದ್ಧ, ಜೈನ ಪರಂಪರೆಯಲ್ಲೂ “ಬಿಕ್ಕು”ಗಳು ಇರುವುದು ಇತ್ಯಾದಿ ಕಾರಣಗಳಿಂದ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ದಾಸಯ್ಯ ಪರಂಪರೆಯವರೂ ನಿರ್ದಿಷ್ಟ ದಿನಗಳಲ್ಲಿ ಮನೆಮನೆಗಳಿಗೆ ಹೋಗಿ ಶಂಖ ಊದಿ, ಜಾಗಟೆ ಬಾರಿಸಿ, ಅಕ್ಕಿ ತೆಂಗಿನಕಾಯಿ ಇತ್ಯಾದಿ ಪಡೆಯುತ್ತಾರೆ. ಇವರೇನು ಆರ್ಥಿಕವಾಗಿ ದುರ್ಬಲರಾಗಿರುವ ಕಾರಣದಿಂದ ಮಾಡುತ್ತಿಲ್ಲ; ಬದಲಾಗಿ ತಮ್ಮ ಮೇಲೆ ಹೇರಲಾಗಿರುವ ಪರಂಪರೆ ಮತ್ತು ಧಾರ್ಮಿಕ ಕರ್ತವ್ಯ ಎಂಬ ನೆಲೆಯಲ್ಲಿ ಮಾಡುತ್ತಾರೆ. ಕೊರಗ, ಪರವ, ಪಂಬದ ಮುಂತಾದವರು ಮಾಡುವುದಕ್ಕೆ ದೈವಾರಾಧನೆಯ ಸಂಸ್ಕೃತಿ, ಸಂಪ್ರದಾಯ, ನಂಬಿಕೆಗಳ ಜೊತೆಗೆ ಕಲೆಯನ್ನೂ ತಳಕುಹಾಕಲಾಗಿದೆ. ತುಳು ಕ್ಯಾಲೆಂಡರಿನ ಆಟಿ ಮತ್ತು ಸೋಣ ತಿಂಗಳುಗಳಲ್ಲಿ ಕ್ರಮವಾಗಿ “ಆಟಿ ಕೆಳಿಂಜೆ” ಮತ್ತು “ಸೋಣದ ಮದಿಮಾಲ್” ಎಂಬ ವೇಷ ಹಾಕಿದ ತೆಂಗಿನ ಗರಿಯ ಕೊಡೆ ಹಿಡಿದ ಬಾಲಕ ಮತ್ತು ಸಿಂಗರಿಸಿದ ಮದುಮಗಳು ಬರುತ್ತಾರೆ. ಈ ಆಟಿ ಕೆಳಿಂಜೆಗೆ ಇತ್ತೀಚೆಗೆ ವೈದಿಕರು ವಾಮನಾವತಾರದ ಫಿಟ್ಟಿಂಗ್ ಮಾಡಿದ್ದಾರೆ! ಇವು ಊರಿನ ರೋಗ, ರುಜಿನಗಳನ್ನು ದೂರಮಾಡುತ್ತದೆ ಎಂಬ ನಂಬಿಕೆ. ಯಾರೂ ಇದನ್ನು ಭಿಕ್ಷಾಟನೆ ಎಂದು ಪರಿಗಣಿಸುವುದಿಲ್ಲ. ಕರ್ತವ್ಯ ಎಂಬಂತೆ ಕೊಡುವುದನ್ನು ಕೊಟ್ಟು ಕಳಿಸುತ್ತಾರೆ. ಏನಿದ್ದರೂ ಇವು ಕಾಲದ ಜೊತೆ ತಮ್ಮಿಂದ ತಾವಾಗಿಯೇ ಅಪರೂಪ ಎಂಬಷ್ಟು ಕಡಿಮೆಯಾಗಿವೆ.
ಇವೆಲ್ಲವುಗಳಿಗಿಂತಲೂ ಭಿನ್ನವಾಗಿರುವುದು ಉತ್ತರ ಕನ್ನಡದ ಅಗೇರರಲ್ಲಿ ಇರುವ ಭಿಕ್ಷಾಟನೆಯ ಆಚರಣೆ. ಇವರಲ್ಲಿ ಸಾಕಷ್ಟು ಶ್ರೀಮಂತರೂ, ಒಳ್ಳೆಯ ಉದ್ಯೋಗ ಇರುವವರೂ ಕೆಲವು ನಿರ್ದಿಷ್ಟ ಹಬ್ಬಗಳ ದಿನ ಮನೆ ಮನೆ ಹೋಗಿ “ಬೇಡಿಕೆ” ಮಾಡುತ್ತಾರೆ. ನಾನು ಈ ದಾಖಲಾತಿಗಾಗಿ ಮಾಹಿತಿ ಸಂಗ್ರಹಿಸಲು ಅಂಕೋಲೆಗೆ ಹೋಗಿದ್ದಾಗ, ಮಂಜುಗುಣಿ ಪಂಚಾಯಿತಿ ಸದಸ್ಯ ಸೋಮು ಅಗೇರ ಎಂಬವರೂ ಈ ಆಚರಣೆ ಮಾಡುವುದು ತಿಳಿದು ಆಶ್ಚರ್ಯಗೊಂಡಿದ್ದೆ. ಅಗೇರರ ಮುಖ್ಯ ನಿಯಂತ್ರಣ ಇರುವುದು ಅಂಕೋಲಾದ ವೆಂಕಟರಮಣ ದೇವಸ್ಥಾನದಲ್ಲಿ. ಅಲ್ಲಿನ “ಐಗಳು” ಹೇಳಿದ್ದೇ ಅವರಿಗೆ ವೇದವಾಕ್ಯವಾಗಿತ್ತು. ಅಗೇರರಿಗೆ “ಬುಧವಂತ” ಎಂಬ ಕುಲದ ಯಜಮಾನರು ಹಳ್ಳಿಹಳ್ಳಿಗಳಲ್ಲಿ ಇರುತ್ತಾರೆ. ಇವರು ಐಗಳ ಅಧೀನರು. ಬೇಡಿಕೆ ಮಾಡಬೇಕೆಂದು ಅವರು ನಿರ್ಣಯ ಮಾಡಿದರೆ ಮುಗಿಯಿತು. ಯಾರೂ ಅದನ್ನು ಮೀರುವಂತಿಲ್ಲ. ಮನಸಿಲ್ಲದಿದ್ದರೂ ಭಿಕ್ಷಾಟನೆ ಮಾಡಲೇಬೇಕು. ರಾಜಕೀಯ ಸಂಕಲ್ಪ ಇದ್ದಲ್ಲಿ, ಈ “ಐಗಳು” ಮತ್ತು “ಬುಧವಂತರ” ಮನ ಒಲಿಸಿದ್ದಲ್ಲಿ ಇದನ್ನು ಸುಲಭದಲ್ಲಿ ಸಂಪೂರ್ಣವಾಗಿ ನಿಲ್ಲಿಸಬಹುದಿತ್ತು. ಆದರೆ, ಮತಗಳ ಮೇಲೆ ಸದಾ ಕಣ್ಣಿಟ್ಟಿರುವ ರಾಜಕಾರಣಿಗಳು ಯಾವತ್ತೂ ಯಥಾಸ್ಥಿತಿಯನ್ನೇ ಹೆಚ್ಚಾಗಿ ಬಯಸುತ್ತಾರೆ ಮತ್ತು ಇತ್ತೀಚೆಗೆ ಕೆಲವರು ಧರ್ಮದ ಹೆಸರಿನಲ್ಲಿ ಹಿಂದಕ್ಕೆ ಹೋಗಲು ಬಯಸುತ್ತಿದ್ದಾರೆ.
ಅಮಾನವೀಯ ಆಚರಣೆಗಳನ್ನು ಈ ಕಂತಿನಲ್ಲಿ ಮುಗಿಸಬೇಕು ಎಂದುಕೊಂಡಿದ್ದೆ. ಆದರೆ, ಆ ಉದ್ದವಾದ ಪಟ್ಟಿ ಮುಗಿಯಲೇ ಒಲ್ಲದು. ಆದುದರಿಂದ, ಉಳಿದವುಗಳನ್ನು ಮುಂದಿನ ಒಂದು ಕಂತಿನಲ್ಲಿ ನೋಡೋಣ.