Home ಅಂಕಣ ಬೆದರಿಕೆಯ ಬಾಗಿಲಲ್ಲಿ ಬಹುತ್ವ ಭಾರತ

ಬೆದರಿಕೆಯ ಬಾಗಿಲಲ್ಲಿ ಬಹುತ್ವ ಭಾರತ

0
  • ಹೊಸ ವರ್ಷ 2023 ರ ಮೊದಲ ತಿಂಗಳಲ್ಲಿಯೇ ದೇಶದಲ್ಲಿ ಅನೇಕ ಮಹತ್ತರ ಘಟನೆಗಳು ನಡೆದವು. ಅವೆಲ್ಲವೂ ನಾನಾ ದೃಷ್ಟಿಯಿಂದ ದೇಶ ಎತ್ತ ಸಾಗುತ್ತಿದೆ ಎನ್ನುವುದನ್ನು ಸ್ಪಷ್ಟವಾಗಿ ಸೂಚಿಸುವ ದಿಕ್ಸೂಚಿಗಳಂತಿವೆ. ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ, ನಿರ್ಭೀತ ಜರ್ನಲಿಸಂ ಗೆ ವಿದಾಯ, ಮೊಗಲ್ ಗಾರ್ಡನ್ ಅಮೃತ ಉದ್ಯಾನವಾದದ್ದು ಇವುಗಳೆಲ್ಲ ಬಹುತ್ವ ಭಾರತಕ್ಕೆ ಕೊಡುತ್ತಿರುವ ಕೊಡಲಿಯೇಟು ಎಂಬ ಅಂಶಗಳನ್ನು ಶ್ರೀನಿವಾಸ ಕಾರ್ಕಳ ಎತ್ತಿತೋರಿಸಿದ್ದಾರೆ ಶ್ರೀನಿ ಕಾಲಂ ನಲ್ಲಿ

ದ್ವೇಷದ ಬಾಜಾರಿನಲ್ಲಿ ಪ್ರೀತಿಯ ದುಕಾನು ತೆರೆಯುವ ಉದ್ದೇಶದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು 2022 ರ ಸೆಪ್ಟಂಬರ್ 7 ರಂದು ಭಾರತದ ದಕ್ಷಿಣ ತುದಿಯಾದ ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಿಸಿದ ‘ಭಾರತ ಐಕ್ಯತಾ ಯಾತ್ರೆ’ (ಭಾರತ್ ಜೋಡೋ ಯಾತ್ರಾ) ಇದೇ 2023 ರ ಜನವರಿ 29 ರಂದು ಭಾರತದ ಉತ್ತರ ತುದಿಯಾದ ಕಾಶ್ಮೀರದ ಶ್ರೀನಗರದ ಲಾಲ್ ಚೌಕ್ ನಲ್ಲಿ ಭಾರತದ ತ್ರಿವರ್ಣ ಬಾವುಟವನ್ನು ಹಾರಿಸುವ ಮೂಲಕ ಕೊನೆಗೊಂಡಿದೆ. ಭಾರೀ ಹಿಮಪಾತದ ನಡುವೆಯೇ ಇಂದು ಅಂದರೆ ಜನವರಿ 30 ರಂದು ಸಮಾರೋಪ ಕಾರ್ಯಕ್ರಮವೂ ನಡೆದಿದೆ.

ದಿನ ಬೆಳಗಾದರೆ ದ್ವೇಷ, ಅಪನಂಬಿಕೆ, ಹಿಂಸೆಯ ಮಾತು ಮತ್ತು ಕೃತಿಗಳಿಂದ ತೀವ್ರವಾಗಿ ಗಾಯಗೊಂಡಿದ್ದ ದೇಶದಲ್ಲಿ ಈ ಯಾತ್ರೆ ಪ್ರೀತಿಯ ತಣ್ಣಗಿನ ಗಾಳಿಯನ್ನು ಬೀಸುತ್ತಾ ಸಕಾರಾತ್ಮಕ ಸಂದೇಶವೊಂದನ್ನು ಸರಿಸುಮಾರು ಐದು ತಿಂಗಳ ಕಾಲ ನೀಡುತ್ತಾ ಬಂದುದು ಸುಳ್ಳಲ್ಲ. ರಾಹುಲ್ ರ ಯಾತ್ರೆ ಸಾಗಿದ ದಾರಿಯಲ್ಲಿ ಹೊಸ ಸಂಚಲನವೊಂದು ಉಂಟಾಯಿತು. ರಾಹುಲ್ ರ ಕೈಗೆ ಕೈ ಸೇರಿಸಿ ಹೆಜ್ಜೆ ಹಾಕಿದವರು, ರಾಹುಲ್ ರ ಬಿಸಿ ಅಪ್ಪುಗೆಯನ್ನು ಅನುಭವಿಸಿದವರು ಅದ್ಭುತ ನೆನಪುಗಳೊಂದಿಗೆ ಹೊಸ ಜೀವನೋತ್ಸಾಹ ಗಳಿಸಿದರು. ಸದಾ ದ್ವೇಷದ ಮಾತಾಡುವ ಕೆಲವರಲ್ಲಿಯಾದರೂ ದ್ವೇಷ ಬೇಡ, ಪ್ರೀತಿ ಬೇಕು, ಸೌಹಾರ್ದ ಬೇಕು, ಅದು ಮಾತ್ರ ಸರ್ವಜನಾಂಗದ ಶಾಂತಿಯ ತೋಟವನ್ನು ಉಳಿಸೀತು ಎಂಬ ಮನಪರಿವರ್ತನೆಯಾಗಿರಬಹುದು. ದೇಶದ ಭವಿಷ್ಯದ ಬಗ್ಗೆ ಭರವಸೆಯನ್ನೂ ಹು‍ಟ್ಟಿಸಿದ ಯಾತ್ರೆಯಿದು ಎಂಬುದರಲ್ಲಿ ಎರಡು ಮಾತಿಲ್ಲ.

ಆತಂಕದ ದಿನಗಳು

ಒಂದು ಆದರ್ಶ ನಾಡಿನಲ್ಲಿ ಮನಸನ್ನು ಅರಳಿಸುವ, ಜನರಲ್ಲಿ ಜೀವನೋತ್ಸಾಹವನ್ನು ತುಂಬುವ, ಹೊಸ ಭರವಸೆಯನ್ನು ಮೂಡಿಸುವ ಇಂತಹ ಘಟನೆಗಳ ಸಂಖ್ಯೆ ಹೆಚ್ಚು ಇರಬೇಕಿತ್ತು. ಬೇಸರದ ಸಂಗತಿಯೆಂದರೆ ಇಂತಹ ಘಟನೆಗಳು ಕಡಿಮೆಯಿದ್ದು ಆತಂಕದ ಸಂಗತಿಗಳೇ ಹೆಚ್ಚುತ್ತಿರುವುದು. ‘ಸಬ ಕಾ ಸಾತ್’, ತಮ್ಮದು ಬಡವರ ಪರ ಎಂದು ಹೇಳುತ್ತಲೇ ಬಂದಿರುವ ಈಗಿನ ಒಕ್ಕೂಟ ಸರಕಾರ ಕೆಲವೇ ಕೆಲವು ಉದ್ಯಮಿಗಳಿಗೆ ಅತಿಯಾದ ಆದ್ಯತೆ ನೀಡುತ್ತಿರುವುದು, ಅವರಿಗೆ ಹೇರಳ ಸಂಪತ್ತು ಕ್ರೋಡೀಕರಿಸಲು ಅವಕಾಶ ಮಾಡಿಕೊಡುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ.

ದೇಶದ ಬಡವರು ಇನ್ನಷ್ಟು ಬಡವರಾಗುತ್ತಾ, ಮಧ್ಯಮ ವರ್ಗವು ಕೆಳ ಮಧ‍್ಯಮ ವರ್ಗವಾಗುತ್ತಾ, ಕೆಳ ಮಧ್ಯಮ ವರ್ಗವು ಬಡತನ ರೇಖೆಯ ಕೆಳಕ್ಕೆ ಜಾರುತ್ತಿರುವ ಹೊತ್ತಿನಲ್ಲಿಯೂ ನಮ್ಮಲ್ಲಿ ಬಿಲಿಯಾಧಿಪತಿಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿರುವುದರ ಮರ್ಮವಾದರೂ ಏನು? ಇವರೆಲ್ಲ ನಿಜವಾಗಿಯೂ ನೇರ ಮಾರ್ಗದಲ್ಲಿ ಶ್ರೀಮಂತರಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿರುವ ಹೊತ್ತಿನಲ್ಲಿಯೇ ಅಮೆರಿಕದ ಹಿಂಡನ್ ಬರ್ಗ್ ಸಂಶೋಧನಾ ಸಂಸ್ಥೆ ಜಗತ್ತಿನ ಮೂರನೇ ಅತಿದೊಡ್ಡ ಶ್ರೀಮಂತ ಎಂಬ ಖ್ಯಾತಿಯ ಗೌತಮ್ ಅದಾನಿಯವರ ಸಂಸ್ಥೆಯ ಆರ್ಥಿಕ ಅವ್ಯಹಾರಗಳ ಬಗ್ಗೆ ಮಾಡಿರುವ ಆರೋಪಗಳು ಆರ್ಥಿಕ ವಲಯದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿವೆ (ಈ ಪ್ರಕರಣದಿಂದಾಗಿ ಇಂದು ಸಂಜೆಗಾಗುವಾಗ ಶೇರು ಮಾರುಕಟ್ಟೆಯಲ್ಲಿ ಬರ್ಕಾಸ್ತಾದ ಬಂಡವಾಳ 14 ಲಕ್ಷ ಕೋಟಿ ಎನ್ನಲಾಗಿದೆ). ಅದಾನಿ ಶೇರುಗಳ ಪತನದೊಂದಿಗೆ ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಎಲ್ ಐ ಸಿ ಕೂಡಾ ನಷ್ಟ ಮಾಡಿಕೊಂಡಿದೆ. ಎಲ್ ಐ ಸಿ ಮತ್ತು ಎಸ್ ಬಿ ಐ ಗೆ 78 ಸಾವಿರ ಕೋಟಿ ರುಪಾಯಿಗೂ ಅಧಿಕ ನಷ್ಟವಾಗಿದೆ ಎಂದು ಕಾಂಗ್ರೆಸ್ ನಾಯಕ ಸುರ್ಜೇವಾಲಾ ಹೇಳಿದ್ದಾರೆ. ಎಲ್ ಐ ಸಿ ಮತ್ತು ಬ್ಯಾಂಕುಗಳಲ್ಲಿರುವುದು ಜನರ ಹಣ. ಇಂತಹ ಒಂದು ಹಗರಣ ನಮ್ಮನ್ನು ಆತಂಕಕ್ಕೆ ದೂಡುವಂಥದ್ದು. ಇದರ ಬಗ್ಗೆ ಗಂಭೀರ ಚರ್ಚೆ ನಡೆಯಬೇಕಿತ್ತು. ಆದರೆ ವಿಪಕ್ಷವೊಂದರಂತೆ ಕೆಲಸ ಮಾಡಬೇಕಾದ ಭಾರತದ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಮೌನಕ್ಕೆ ಶರಣಾಗಿವೆ.

ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಪ್ರಸಾರ ನಿಷೇಧ ಪ್ರಕರಣವು ಭಾರತವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ ಸರ್ವಾಧಿಕಾರದ ಹಾದಿಯಲ್ಲಿ ಸಾಗುತ್ತಿದೆಯೇ ಎಂಬ ಭಯವನ್ನು ಹುಟ್ಟು ಹಾಕಿದೆ.  ಸಂವಿಧಾನದ ಪರಿಚ್ಛೇದ 14, 19 ಮತ್ತು 21 ಇವು ಸಂವಿಧಾನದ ಆತ್ಮ ಎನ್ನುತ್ತಾರೆ ಸುಪ್ರೀಂ ಕೋರ್ಟಿನ ಪ್ರಧಾನ ನ್ಯಾಯಮೂರ್ತಿ ಡಿ ವೈ ಚಂದ್ರ ಚೂಡ್ ಅವರು.  ಇಲ್ಲಿ ಪರಿಚ್ಛೇದ 19 ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ.

2002 ರ ಗುಜರಾತ್ ಗಲಭೆ ಪ್ರಕರಣದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದು ಅದರಲ್ಲಿ ಅಲ್ಪಸಂಖ್ಯಾಕ ಸಮುದಾಯದವರೇ ಅಧಿಕ. ಅಲ್ಲಿನ ಗಲಭೆ ಕೈ ಮೀರಿ ಹೋಗಲು ಕಾರಣ ಆಗಿನ ಸರಕಾರ ತನ್ನ ನಿಷ್ಕ್ರಿಯತೆಯ ಮೂಲಕ ಪರೋಕ್ಷವಾಗಿ ನೀಡಿದ ಬೆಂಬಲ ಎನ್ನಲಾಗಿದೆ.  ಈ ಬಗ್ಗೆ ಅಪಾರ ಮಾಹಿತಿ ಈಗಾಗಲೇ ಸಾರ್ವಜನಿಕ ವಲಯದಲ್ಲಿ ಇದೆ. ಆದರೆ ಬಿಬಿಸಿ ತನ್ನ ಎರಡು ಭಾಗಗಳ ಸರಣಿಯಲ್ಲಿ ತುಂಬಾ ವೃತ್ತಿಪರವಾಗಿ ಆಗ ನಡೆದುದು ಏನು, ಅದರಲ್ಲಿ ಸರಕಾರದ ಪಾತ್ರ ಎಷ್ಟು ಎಂಬುದನ್ನು ನಿಖರವಾಗಿ ದಾಖಲಿಸಿದೆ. ಬ್ರಿಟಿಷ್ ಸರಕಾರ ತಾನು ಮಾಡಿದ ತನಿಖೆಯಲ್ಲಿ ಆಗಿನ ಗುಜರಾತ್ ಸರಕಾರ ಗಲಭೆಯಲ್ಲಿ ವಹಿಸಿದ ಪಾತ್ರವನ್ನು ಸ್ಪಷ್ಟವಾಗಿ ಬೆಟ್ಟು ಮಾಡಿದೆ. ಇದು ಈಗ ದೇಶ ಆಳುತ್ತಿರುವವರಿಗೆ ಇಷ್ಟವಾಗದ ಕಾರಣ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬರದಂತೆ ನಿಷೇಧ ಹೇರಿದೆ.

ನಮ್ಮಲ್ಲಿ striesand effect ಎನ್ನುವುದೊಂದಿದೆ. ಏನಾದರೊಂದನ್ನು ಸೆ‍ನ್ಸರ್ ಮಾಡಲು, ಅಡಗಿಸಲು ಅಥವಾ ಗಮನ ಬೇರೆಡೆ ಹರಿಸಲು ಯತ್ನಿಸಿದರೆ ಜನ ಅದರತ್ತ ಹೆಚ್ಚು ಆಕರ್ಷಿತರಾಗುತ್ತಾರೆ ಎನ್ನುವುದು ಇದರ ಅರ್ಥ. ಸರಕಾರ ನಿಷೇಧಕ್ಕೆ ಹೊರಡುತ್ತಿದ್ದಂತೆ ಜನ ಕುತೂಹಲದಿಂದ ಮುಗಿಬಿದ್ದು ಅದನ್ನು ನೋಡಿದರು. ಎರಡನೇ ಭಾಗವನ್ನು ಇನ್ನೂ ಕುತೂಹಲದಿಂದ ಕಾದು ಕುಳಿತು ವೀಕ್ಷಿಸಿದರು. ದೇಶದ ವಿವಿಗಳಲ್ಲಿ ಅದನ್ನು ವಿದ್ಯಾರ್ಥಿಗಳು ಸಾಮೂಹಿಕವಾಗಿ ಪ್ರದರ್ಶಿಸ ಹೊರಟಾಗ ಅದನ್ನು ತಡೆಯಲು ಪೊಲೀಸ್ ಬಲ ಬಳಸಿದುದು ಇನ್ನಷ್ಟು ಕೋಲಾಹಲಗಳಿಗೆ ಕಾರಣವಾಯಿತು.

ಇಲ್ಲಿ ಮೂಡುವ ಬಹುಮುಖ್ಯ ಪ್ರಶ್ನೆ- ತಾನೇನೂ ತಪ್ಪು ಮಾಡಿಲ್ಲವಾದರೆ ಸಾಕ್ಷ್ಯ ಚಿತ್ರವೊಂದರ ಬಗ್ಗೆ ಸರಕಾರ ಇಷ್ಟೊಂದು ಗಲಿಬಿಲಿಗೊಳ್ಳುವುದೇಕೆ? ಜನ ನೋಡಿ ತಮ್ಮದೇ ಆದ ಅಭಿಪ್ರಾಯ ರೂಪಿಸಿಕೊಳ್ಳಲಿ. ನಿಷೇಧ ಎನ್ನುವುದು ಪ್ರಜಾತಂತ್ರ ವಿರೋಧಿ ನಡೆವಳಿಕೆಯಲ್ಲವೇ? ಎರಡನೆಯದಾಗಿ, ಇಡೀ ಜಗತ್ತೇ ಒಂದು ಹಳ್ಳಿ ಎನಿಸಿಕೊಂಡಿರುವ ಇಂಟರ್ನೆಟ್ ಯುಗದಲ್ಲಿ ಹೀಗೆ ಮಾಹಿತಿಯ ಪ್ರಸರಣವನ್ನು ತಡೆಯುವುದು ಸಾಧ್ಯವೇ? ಇದೇ ಸಾಕ್ಷ್ಯ ಚಿತ್ರವನ್ನು ಬಹುತೇಕ ಎಲ್ಲರೂ ನೋಡಿಯಾಗಿದೆ, ಡೌನ್ ಲೋಡ್ ಮಾಡಿ ಸಂಗ್ರಹಿಸಿಟ್ಟುಕೊಂಡೂ ಆಗಿದೆ. ನಿಷೇಧ ಎನ್ನುವುದು ಅಪ್ರಸ್ತುತವಾಗಲಿಲ್ಲವೇ? ಮೂರನೆಯದಾಗಿ, ನಮ್ಮ ದೇಶದವರು ಅದನ್ನು ನೋಡದಿರಬಹುದು. ಆದರೆ ವಿದೇಶದಲ್ಲಿ ಎಲ್ಲರೂ ಅದನ್ನು ನೋಡುವ ಅವಕಾಶವಿದೆ. ಹಾಗಾದರೆ ನಿಷೇಧದಿಂದ ಆದ ಪ್ರಯೋಜನವೇನು? ನಾಲ್ಕನೆಯದಾಗಿ ಜಗತ್ತಿನ ಅತಿದೊಡ್ಡ ಪ್ರಜಾತಂತ್ರವು ಯಃಕಶ್ಚಿತ ಸಾಕ್ಷ್ಯಚಿತ್ರವೊಂದನ್ನು ನಿಷೇಧಿಸುವುದರಿಂದ ಭಾರತ ಪ್ರಜಾತಂತ್ರದ ಬಗ್ಗೆ ಅವರಲ್ಲಿ ಯಾವ ಅಭಿಪ್ರಾಯ ಮೂಡುತ್ತದೆ?

ಅಪಾಯದಲ್ಲಿ ಮಾಧ್ಯಮ ರಂಗ

ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಬಿಬಿಸಿ ಪತ್ರಕರ್ತೆ ಮಾಡಿದ ಸಂದರ್ಶನದ ಒಂದು ತುಣುಕು ಇದೆ. ಅದರಲ್ಲಿ ಪತ್ರಕರ್ತೆ ಒಂದು ಪ್ರಶ್ನೆ ಕೇಳುತ್ತಾಳೆ. ‘ಗುಜರಾತ್ ಗಲಭೆಯನ್ನು ನಿಭಾಯಿಸಿದ್ದಕ್ಕೆ ಸಂಬಂಧಿಸಿದ್ದಂತೆ ನೀವು ಇನ್ನೂ ಚೆನ್ನಾಗಿ ನಿಭಾಯಿಸಬಹುದಾಗಿತ್ತು ಎನ್ನುವ ಒಂದು ಕ್ಷೇತ್ರ ಯಾವುದು?’ ಎಂಬುದೇ ಆ ಪ್ರಶ್ನೆ. ಅದಕ್ಕೆ ಉತ್ತರಿಸುವ ಮೋದಿಯವರು ‘ನಿಜ ಒಂದು ಕ್ಷೇತ್ರದಲ್ಲಿ ನಾನು ತುಂಬ ದುರ್ಬಲನಾಗಿದ್ದೆ, ಅದೆಂದರೆ ನಾನು ಮೀಡಿಯಾವನ್ನು ಇನ್ನೂ ಚೆನ್ನಾಗಿ ಹ್ಯಾಂಡಲ್ ಮಾಡಬೇಕಿತ್ತು’ ಎನ್ನುತ್ತಾರೆ. ಈ ‘ಹ್ಯಾಂಡಲ್’ ಮಾಡುವುದು ಎಂಬುದಕ್ಕೆ ವಿಶೇಷ ಅರ್ಥವಿದೆ. ಇದು 2014 ರ ಬಳಿಕ ಎಲ್ಲರಿಗೂ ಸ್ಪಷ್ಟವಾಯಿತು. ಸರಕಾರವನ್ನು ಟೀಕಿಸುವ ಪ್ರತಿಯೊಂದು ಮಾಧ್ಯಮವೂ ಒತ್ತಡವನ್ನು ಅನುಭವಿಸಬೇಕಾಯಿತು. ಕೆಲವು ಮಾಧ್ಯಮಗಳು ಆಮಿಷಕ್ಕೆ ಬಲಿಯಾದರೆ ಇನ್ನುಳಿದವರು ಕೇಂದ್ರೀಯ ಸಂಸ್ಥೆಗಳ ದಾಳಿಯ ಭಯದಿಂದ ನಿರ್ಭೀತ ಜರ್ನಲಿಸಂ ಗೆ ವಿದಾಯ ಹೇಳಿದವು.

ಔಟ್ ಲುಕ್ ಪತ್ರಿಕೆಯ ಸಂಪಾದಕ ಕೃಷ್ಣಪ್ರಸಾದ್ ಸಂಪಾದಕ ಸ್ಥಾನದಿಂದ ಇಳಿಯುವಂತೆ ಮಾಡಲಾಯಿತು. ಎಬಿಪಿ ನ್ಯೂಸ್ ನಲ್ಲಿ ಕೆಲಸ ಮಾಡುತ್ತಿದ್ದ ಅಭಿಸಾರ್ ಶರ್ಮ, ಪುಣ್ಯಪ್ರಸೂನ್ ವಾಜಪೇಯಿ ಮೊದಲಾದವರು ಸರಕಾರವನ್ನು ಪ್ರಶ್ನಿಸುತ್ತಿದ್ದ ಕಾರಣಕ್ಕೆ ಕೆಲಸ ಕಳೆದುಕೊಳ್ಳಬೇಕಾಯಿತು. ಒಂದೇ ಒಂದು ದಿಟ್ಟ ದನಿಯಾಗಿ ಕೆಲಸ ಮಾಡುತ್ತಿದ್ದ ಎನ್ ಡಿ ಟಿ ವಿಯ ಮೇಲೆ ಕೇಂದ್ರೀಯ ಏಜೆನ್ಸಿಗಳ ಮೂಲಕ ದಾಳಿ ನಡೆಸಲಾಯಿತು. ಆಗಲೂ ಬಗ್ಗದೆ ರವೀಶ‍್ ಕುಮಾರ್ ರಂಥವರು ಸರಕಾರವನ್ನು ದಿಟ್ಟವಾಗಿ ತರಾಟೆಗೆ ತೆಗೆದುಕೊಳ್ಳುತ್ತ ಹೋದಾಗ ಬೇರೊಂದು ಮಾರ್ಗದಲ್ಲಿ ಅದರ ಮೇಲೆ ಹಿಡಿತ ಸಾಧಿಸಲಾಯಿತು. ಮೋದಿಯವರ ಆಪ್ತ ಅದಾನಿಯವರ ಮೂಲಕ ಎನ್ ಡಿ ಟಿ ವಿಯನ್ನು ಖರೀದಿಸಲಾಯಿತು. ಆ ಮೂಲಕ ಇದ್ದೊಂದು ದಿಟ್ಟ ದನಿಯನ್ನೂ ಅಡಗಿಸಲಾಯಿತು.

ಎಲ್ಲವೂ ನಿರೀಕ್ಷಿಸಿದಂತೆಯೇ ನಡೆಯಲಾರಂಭಿಸಿತು. ರವೀಶ‍್ ಕುಮಾರ್ ಮೊದಲು ಹೊರಬಂದರು. ಹಿಂಡನ್ ಬರ್ಗ್ ವರದಿ ಬಂದಾಗಲೂ ಎನ್ ಡಿ ಟಿ ವಿ ಅದಾನಿ ಸಂಸ್ಥೆಯ ಆರೋಪಿತ ಅಕ್ರಮಗಳ ಬಗ್ಗೆ ಮಾತನಾಡದಿದ್ದಾಗ ಕಾಕತಾಳೀಯವೋ ಏನೋ ಎಂಬಂತೆ ಇದೇ ಹೊತ್ತಿನಲ್ಲಿ ಹೆಸರಾಂತ ಪತ್ರಕರ್ತ, ‘ಟ್ರುತ್ ವರ್ಸಸ್ ಹೈಪ್’ ಕಾರ್ಯಕ್ರಮಗಳ ಮೂಲಕ ನಿಜ ಅರ್ಥದ ಮತ್ತು ದಿಟ್ಟ ಪತ್ರಿಕಾವೃತ್ತಿ ನಡೆಸುತ್ತಿದ್ದ ಶ್ರೀನಿವಾಸನ್ ಜೈನ್ ರಾಜೀನಾಮೆ ನೀಡಿ ಹೊರಬಂದರು. ಹೀಗೆ ಪ್ರಜಾತಂತ್ರದ ನಾಲ್ಕನೆಯ ಕಂಬ ಎನಿಸಿಕೊಂಡಿರುವ ಮಾಧ್ಯಮ ರಂಗ ಹಿಂದೆಂದೂ ಇಲ್ಲದ ಇಕ್ಕಟ್ಟನ್ನು ಬಿಕ್ಕಟ್ಟನ್ನು ಎದುರಿಸುತ್ತಿದೆ. ಈಗಾಗಲೇ ಪತ್ರಿಕಾ ಸ್ವಾತಂತ್ರ್ಯ ರ‍್ಯಾಂಕಿಂಗ್ ನಲ್ಲಿ ಭಾರತದ ಸ್ಥಾನ 180 ರಲ್ಲಿ 150 ನೆಯದು ಎಂಬುದು ನೆನಪಿರಬೇಕು.

ಮೊಗಲ್ ಗಾರ್ಡನ್ ಇನ್ನು ಮುಂದೆ ಅಮೃತ ಉದ್ಯಾನ

ಈ ಬೆಳವಣಿಗೆಗಳ ಬಗ್ಗೆ ಜನ ಆತಂಕಿತರಾಗಿದ್ದ ಹೊತ್ತಿನಲ್ಲಿಯೇ ರಾಷ್ಟ್ರಪತಿ ಭವನದ ಪ್ರಖ್ಯಾತ ಉದ್ಯಾನ ‘ಮೊಗಲ್ ಗಾರ್ಡನ್’ ನ ಹೆಸರನ್ನು ಬದಲಾಯಿಸಿ ‘ಅಮೃತ ಉದ್ಯಾನ’ ಎಂದು ಹೆಸರಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ಹೆಸರು ಬದಲಾಯಿಸುವ ಪ್ರಕ್ರಿಯೆ ಮುಂದುವರಿದೇ ಇದೆ. ಮುಗಲ್ ಸರಾಯ್ ರೈಲ್ವೇ ಜಂಕ್ಷನ್ ಪಂಡಿತ್ ದೀನ್ ದಯಾಳ್ ಉಪಾಧ‍್ಯಾಯ ಜಂಕ್ಷನ್ ಆಯಿತು, ಅಲಹಾಬಾದ್ ಪ್ರಯಾಗರಾಜ್, ಔರಂಗಜೇಬ್ ಮಾರ್ಗ ಡಾ ಎ ಪಿ ಜೆ ಅಬ್ದುಲ್ ಕಲಾಂ ಮಾರ್ಗ, ಟಿಪ್ಪು ಎಕ್ಸ್ ಪ್ರೆಸ್ ಒಡೆಯರ್ ಎಕ್ಸ್ ಪ್ರೆಸ್ ಆಯಿತು, ಈಗ ಮೊಗಲ್ ಗಾರ್ಡನ್ ನ ಸರದಿ.

ಮೊಗಲ್ ಗಾರ್ಡನ್ ಗೆ ಅದರದೇ ಆದ ವಿಶೇಷತೆ ಇದೆ. ಇದು ಪರ್ಶಿಯನ್ ಗಾರ್ಡನ್ ನ ಪ್ರೇರಣೆಯಿಂದ ರಚಿತವಾದುದು. ದೇಶದಲ್ಲಿರುವ ಎಲ್ಲ ಮೊಗಲ್ ಗಾರ್ಡನ್ ಗಳಲ್ಲಿಯೂ ಇರುವ ಚಾರ್ ಬಾಗ್, ಕೊಳ, ಚಿಲುಮೆ, ಹರಿಯುವ ನೀರು ಎಲ್ಲವೂ ಪರ್ಶಿಯನ್ ಗಾರ್ಡನ್ ನ ಮಾಡೆಲ್ ಗಳೇ.

ನಮ್ಮ ಸಾಂಸ್ಕೃತಿಕ ಸಾಮಾಜಿಕ ಇತಿಹಾಸದಲ್ಲಿ ಈ ಉದ್ಯಾನಗಳ ಮಹತ್ವ ಏನು ಎಂಬುದನ್ನು ಚಿಂತಕ ರಹಮತ್ ತರಿಕೆರೆಯವರು ಹೀಗೆ ಬಹು ಸುಂದರವಾಗಿ ಕಟ್ಟಿಕೊಡುತ್ತಾರೆ- “ಭಾರತದಂತಹ ಬಹುಧಾರ್ಮಿ, ಬಹುಭಾಷಿಕ, ಬಹುಸಾಂಸ್ಕೃತಿಕ ದೇಶದಲ್ಲಿ ಕೂಡುಬಾಳಿನ ರೂಪಕ ಸಂಕೇತಗಳನ್ನು ನಮ್ಮ ಹಿರೀಕರು ಉದ್ಯಾನದ ಚಿತ್ರಗಳಲ್ಲೇ‌ ಕಟ್ಟಿಕೊಟ್ಟರು. ಪ್ರಾಚೀನ ದೊರೆಗಳು ತಮ್ಮ ರಾಜ್ಯವನ್ನು ‘ಬಹುಧರ್ಮಧೇನು‌ ನಿವಹಕ್ಕಾಡುಂಬೊಲಂ’ ಎಂದು ಬಣ್ಣಿಸಿದರು; ಇಕ್ಬಾಲರು ‘ಏ ಬುಲ್ ಬುಲೇ ಹೈ ಇಸಕೆ ಈ ಗುಲಸಿತಾ ಹಮಾರ’ ಎಂದರೆ; ಕುವೆಂಪು ‘ಸರ್ವಜನಾಂಗದ ಶಾಂತಿಯ ತೋಟ’ ವೆಂದರು. ‘ನೂರುಮರ ನೂರುಸ್ವರ; ಒಂದೊಂದೂ ಅತಿಮಧುರ’ ಇದು ಬೇಂದ್ರೆ ಮಾತು”.

ಯಾವುದೇ ಒಂದು ದೇಶವನ್ನು ಕಟ್ಟುವಲ್ಲಿ ಅದನ್ನು ಆಳಿದ ಎಲ್ಲ ದೊರೆಗಳ ಪಾತ್ರವೂ ಇರುತ್ತದೆ. ನಮಗಿಷ್ಟವಾಗದಿರಬಹುದು, ಆದರೆ ಅವರು ಚರಿತ್ರೆಯಲ್ಲಿ ಇದ್ದುದು ಸತ್ಯ. ಹಾಗಾಗಿ ಅವರು ಚರಿತ್ರೆಯ ಭಾಗ. ವರ್ತಮಾನದಲ್ಲಿಯೂ ಅಷ್ಟೇ ಎಲ್ಲ ಸಮುದಾಯಗಳ ದುಡಿಮೆಯಿಂದಲೇ ನಾಡಿನ ಸಂಪತ್ತು, ಸಾಂಸ್ಕೃತಿಕ ಸಂಪತ್ತು ಶ್ರೀಮಂತವಾಗುತ್ತ ಹೋಗುತ್ತವೆ. ಬಹುತ್ವದ ಈ ಪ್ರಜ್ಞೆಯಿಲ್ಲದೆ ಮಾಡುವ ಕೆಲಸಗಳು ಒಟ್ಟಾರೆಯಾಗಿ ದೇಶಕ್ಕೆ ಹಾನಿ ಮಾಡುತ್ತದೆ.

ಒಂದು ಉದ್ಯಾನದ ಹೆಸರನ್ನು ಬದಲಾಯಿಸಿದ್ದಲ್ಲವೇ? ಅದರಿಂದ ಏನು ಮಹಾ ಆಗುತ್ತದೆ ಎಂದು ಸುಮ್ಮನಿರಬಹುದು. ಅಲ್ಲ, ಅದರ ಹಿಂದೆ ಧರ್ಮವೊಂದರ ಸಮುದಾಯವೊಂದರ ಚಾರಿತ್ರಿಕ ಗುರುತುಗಳನ್ನು ಸಾರ್ವಜನಿಕ ಸ್ಮೃತಿಯಿಂದ ಅಳಿಸುವ, ದೇಶ ಕಟ್ಟುವ ಕೆಲಸದಲ್ಲಿ ಅವುಗಳ ಪಾತ್ರವನ್ನು ನಿರಾಕರಿಸುವ ಒಂದು ಅಜೆಂಡಾ ಇದೆ. ಇದು ಈ ಒಂದು ಸಮುದಾಯಕ್ಕೆ ಸೀಮಿತಗೊಳ್ಳುವುದಿಲ್ಲ. ಈ ಸಮುದಾಯ ಆದ ಮೇಲೆ ʼಆʼ ಸಮುದಾಯ ಹೀಗೆ ಮುಂದುವರಿಯುತ್ತದೆ.

ಮೊಗಲರು ಮತ್ತು ಟಿಪ್ಪುವಿನ ನೆನಪುಗಳನ್ನು ಒರೆಸಿಹಾಕುವುದರ ಹಿಂದೆ ಇರುವುದು ಕೇವಲ ಅವರನ್ನು ಟಾರ್ಗೆಟ್ ಮಾಡುವುದಲ್ಲ, ಅವರಿಗೆ ಸಂಬಂಧಿಸಿದ ವರ್ತಮಾನದ ನಿರ್ದಿಷ್ಟ ಸಮುದಾಯವನ್ನೂ ಟಾರ್ಗೆಟ್ ಮಾಡುವುದು ಉದ್ದೇಶವಾಗಿದೆ. ಇದನ್ನು ಅರಿಯದೆ ‘ನನಗೇನು’ ಎಂದು ಸುಮ್ಮನೆ ಕೂರುವವರಿಗೆ “ಅವರು ಮೊದಲು ಸಮಾಜವಾದಿಗಳನ್ನು ಹುಡುಕಿಕೊಂಡು ಬಂದರು, ಆದರೆ ನಾನು ಸುಮ್ಮನಿದ್ದೆ, ಯಾಕೆಂದರೆ ನಾನು ಸಮಾಜವಾದಿಯಾಗಿರಲಿಲ್ಲ… ಕೊನೆಗೆ ಅವರು ನನ್ನನ್ನೇ ಹುಡುಕಿಕೊಂಡು ಬಂದರು ಆಗ ಮಾತನಾಡಲು ಯಾರೂ ಉಳಿದಿರಲಿಲ್ಲ” ಎಂಬ ಮಾರ್ಟಿನ್ ನೇಮುಲ್ಲರ್ ನ ಮಾತು ಎಚ್ಚರಿಕೆಯ ಗಂಟೆಯಾಗಬೇಕು. ‘ಸೂಳ್ಪಡೆಯಲ್ ಅಪ್ಪುದು ಕಾಣಾ ಮಹಾಜಿರಂಗದೊಳ್’ ಎಂದು ಕುಮಾರ್ ವ್ಯಾಸ ಭಾರತದಲ್ಲಿಯೇ ಇದೆಯಲ್ಲ.  ಪ್ರತಿಯೊಬ್ಬರ ಸರದಿಯೂ ಒಂದು ದಿನ ಬಂದೇ ಬರುತ್ತದೆ.

ಶ್ರೀನಿವಾಸ ಕಾರ್ಕಳ

ಚಿಂತಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

You cannot copy content of this page

Exit mobile version