Home ದೇಶ ಮಣಿಪುರದಲ್ಲಿ ಪ್ರಧಾನಿ: ಮಹಿಳಾ ಸಂಘಟನೆಗಳಿಂದ ‘ಗೋ ಬ್ಯಾಕ್ ಮೋದಿ’ ಅಭಿಯಾನ

ಮಣಿಪುರದಲ್ಲಿ ಪ್ರಧಾನಿ: ಮಹಿಳಾ ಸಂಘಟನೆಗಳಿಂದ ‘ಗೋ ಬ್ಯಾಕ್ ಮೋದಿ’ ಅಭಿಯಾನ

0

ಇಂಫಾಲ್: ಕಳೆದ ಎರಡು ವರ್ಷ ನಾಲ್ಕು ತಿಂಗಳಿಂದ ಮಣಿಪುರದಲ್ಲಿನ ಹಿಂಸಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯಲು ಯಾವುದೇ ಪ್ರಯತ್ನ ಮಾಡದ ಪ್ರಧಾನಿ ನರೇಂದ್ರ ಮೋದಿ ಅವರ ಈಗಿನ ಭೇಟಿಯನ್ನು ವಿರೋಧಿಸಿ ರಾಜ್ಯದ ಪ್ರಮುಖ ಮಹಿಳಾ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ.

“ಗೋ ಬ್ಯಾಕ್ ಮೋದಿ” ಎಂಬ ಘೋಷಣೆಯೊಂದಿಗೆ ಶನಿವಾರ ಪ್ರತಿಭಟನೆ ನಡೆಸುವುದಾಗಿ ಸಂಘಟನೆಗಳು ಘೋಷಿಸಿದ್ದು, ಪ್ರಧಾನಿಯನ್ನು “ಕಸಾಯಿ” ಎಂದು ಬಣ್ಣಿಸಿವೆ. ‘ವರ್ಕಿಂಗ್ ಗ್ರೂಪ್ ಆಫ್ ಮೀರಾ ಫೈಬಿ’ ಬ್ಯಾನರ್ ಅಡಿಯಲ್ಲಿ ಬೀದಿಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

‘ವರ್ಕಿಂಗ್ ಗ್ರೂಪ್’ನ ಪ್ರಧಾನ ಕಾರ್ಯದರ್ಶಿ ಅಪಾಬಿ ಲೀಮಾ ಇಂಫಾಲ್‌ನಲ್ಲಿ ಮಾತನಾಡಿ, 2023ರ ಮೇ 3ರಿಂದ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನಿಯಂತ್ರಿಸಲು ಪ್ರಧಾನಿ ವಿಫಲರಾಗಿದ್ದಾರೆ. ಇದೇ ಕಾರಣಕ್ಕೆ ನಾವು ಪ್ರತಿಭಟನೆಗೆ ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಹಿಂಸಾಚಾರದಲ್ಲಿ ನೂರಾರು ಜನರು ಮೃತಪಟ್ಟಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. ಅಲ್ಲದೆ, ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದು, ಅನೇಕ ಜನರು ನಿರಾಶ್ರಿತರಾಗಿದ್ದಾರೆ. ಇಂದಿಗೂ ಅವರು ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

“ಹಿಂಸೆಯನ್ನು ಕೊನೆಗೊಳಿಸಲು ಏನನ್ನೂ ಮಾಡದ ಪ್ರಧಾನಿಗಳು ಈಗ ರಾಜ್ಯಕ್ಕೆ ಏಕೆ ಭೇಟಿ ನೀಡುತ್ತಿದ್ದಾರೆ? ಮಣಿಪುರವನ್ನು ಸಂಪೂರ್ಣವಾಗಿ ನಾಶಪಡಿಸಲು ಮತ್ತೊಂದು ಕಾರ್ಯತಂತ್ರದೊಂದಿಗೆ ಬರುತ್ತಿದ್ದಾರೆಯೇ?” ಎಂದು ಅವರು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ “ಮೋದಿ ಗೋ ಬ್ಯಾಕ್,” “ಸ್ವಯಂ ನಿರ್ಣಯ ನಮ್ಮ ಹಕ್ಕು,” “ಎಎಫ್‌ಎಸ್‌ಪಿಎ ಒಂದು ವಲಸೆ ಕಾನೂನು,” ಮತ್ತು “ವಿಭಜಿಸಿ ಆಳುವ ನೀತಿಯನ್ನು ನಿಲ್ಲಿಸಿ” ಮುಂತಾದ ಘೋಷಣೆಗಳನ್ನು ಕೂಗುವುದಾಗಿ ಅವರು ತಿಳಿಸಿದ್ದಾರೆ.

ಪೀಪಲ್ಸ್ ಪ್ರೊಗ್ರೆಸಿವ್ ಅಲೈಯನ್ಸ್ ಮಣಿಪುರ (ಪಿಪಿಎಎಂ) ನಾಯಕರು ಕೂಡ ಮೋದಿ ಅವರ ಭೇಟಿಯನ್ನು ವಿರೋಧಿಸಿದ್ದು, ಈ ಸಂದರ್ಭದಲ್ಲಿ ಮಹಿಳಾ ಸಂಘಟನೆಗಳು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳೊಂದಿಗೆ ಮಾತನಾಡಲು ಮೋದಿ ಅವಕಾಶ ನೀಡದಿರುವುದನ್ನು ಖಂಡಿಸಿದ್ದಾರೆ.

ಮೋದಿ ಭೇಟಿ ಕೇವಲ ಪ್ರಚಾರಕ್ಕಾಗಿ: ಕಾಂಗ್ರೆಸ್

ಮೋದಿ ಅವರ ಮಣಿಪುರ ಭೇಟಿ ಕೇವಲ ಪ್ರಚಾರಕ್ಕಾಗಿ ಎಂದು ಕಾಂಗ್ರೆಸ್ ಟೀಕಿಸಿದೆ. ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕಿಶಮ್ ಮೇಘಚಂದ್ರ ಅವರು ವೀಡಿಯೊ ಸಂದೇಶದಲ್ಲಿ ಈ ಹೇಳಿಕೆ ನೀಡಿದ್ದಾರೆ.

“ರಾಜ್ಯದ ಜನರು ಶಾಂತಿ, ಪುನರ್ವಸತಿ ಮತ್ತು ನ್ಯಾಯಕ್ಕಾಗಿ ಒಂದು ನಿರ್ದಿಷ್ಟ ಕ್ರಿಯಾ ಯೋಜನೆಯನ್ನು ನಿರೀಕ್ಷಿಸುತ್ತಿದ್ದಾರೆ. ಈ ಭೇಟಿಯಲ್ಲಿ ಸಂಘ ಸಂಸ್ಥೆಗಳೊಂದಿಗೆ ಯಾವುದೇ ಚರ್ಚೆ ಇಲ್ಲದಿರುವುದು ನೋವಿನ ಸಂಗತಿ,” ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಸಂವಹನ ವಿಭಾಗದ ಉಸ್ತುವಾರಿ ಜೈರಾಮ್ ರಮೇಶ್, “ಮೋದಿ ಮಣಿಪುರದಲ್ಲಿ ಮೂರು ಗಂಟೆಗಳಿಗಿಂತ ಕಡಿಮೆ ಸಮಯ ಕಳೆಯಲಿದ್ದಾರೆ. ಶಾಂತಿ ಮತ್ತು ಸಾಮರಸ್ಯವನ್ನು ಸ್ಥಾಪಿಸಲು ಪ್ರೋತ್ಸಾಹ ನೀಡುವ ಬದಲಿಗೆ, ಈ ಭೇಟಿ ಕೇವಲ ಪ್ರಹಸನವಾಗಿ ಮಾರ್ಪಡಲಿದೆ,” ಎಂದು ಟೀಕಿಸಿದ್ದಾರೆ.

ಬಿಜೆಪಿ ನಾಯಕರ ಸಾಮೂಹಿಕ ರಾಜೀನಾಮೆ

ಪ್ರಧಾನಿ ನರೇಂದ್ರ ಮೋದಿ ಅವರ ಮಣಿಪುರ ಭೇಟಿಗೆ ಮುನ್ನವೇ ಸ್ವಂತ ಪಕ್ಷದ ನಾಯಕರು ಆಘಾತ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳನ್ನು ನಾಯಕತ್ವ ನಿರ್ಲಕ್ಷಿಸುತ್ತಿದೆ ಮತ್ತು ರಾಜ್ಯ ಸಮಿತಿಯಲ್ಲಿ ಒಗ್ಗಟ್ಟು ಇಲ್ಲ ಎಂದು ಆರೋಪಿಸಿ ಫುಂಗ್ಯಾರ್ ಮಂಡಲಕ್ಕೆ ಸೇರಿದ 43ಕ್ಕೂ ಹೆಚ್ಚು ಬಿಜೆಪಿ ಸದಸ್ಯರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.

ರಾಜ್ಯ ಬಿಜೆಪಿಯ ವಿಶೇಷ ಆಹ್ವಾನಿತರಾಗಿದ್ದ ನಾಗಚೋಮ್ನಿ ರಾಮ್‌ಶಾಂಗ್ ಅವರ ನೇತೃತ್ವದಲ್ಲಿ ಈ ಎಲ್ಲರೂ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ನೀಡಿದವರಲ್ಲಿ ಫುಂಗ್ಯಾರ್ ಮಂಡಲದ ಬಿಜೆಪಿ ಅಧ್ಯಕ್ಷರು, ಮಹಿಳಾ ಮೋರ್ಚಾ ಅಧ್ಯಕ್ಷರು, ಯುವ ಮೋರ್ಚಾ ಅಧ್ಯಕ್ಷರು, ಕಿಸಾನ್ ಮೋರ್ಚಾ ಅಧ್ಯಕ್ಷರು, ಪರಿಶಿಷ್ಟ ಪಂಗಡ ಮೋರ್ಚಾ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಬೂತ್ ಮಟ್ಟದ ಅಧ್ಯಕ್ಷರು ಸೇರಿದ್ದಾರೆ. ಪಕ್ಷದಲ್ಲಿನ ಪರಿಸ್ಥಿತಿಗಳ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

You cannot copy content of this page

Exit mobile version