ಸ್ವದೇಶಿ ಉತ್ಪನ್ನಗಳನ್ನೇ ಬಳಸಿ; ದೇಶಭಕ್ತಿ ಎಂದರೆ ದೇಶಕ್ಕಾಗಿ ಸಾಯುವುದಲ್ಲ, ಬದುಕುವುದು: ಪ್ರಧಾನಿ ಮೋದಿ ಕರೆ

ಜಾಗತಿಕ ಆರ್ಥಿಕ ಬಿಕ್ಕಟ್ಟು ಹಾಗೂ ಅಂತರಾಷ್ಟ್ರೀಯ ಪೂರೈಕೆ ವ್ಯವಸ್ಥೆಯಲ್ಲಿನ ಏರುಪೇರುಗಳನ್ನು ಎದುರಿಸಲು ದೇಶದ ಜನರು ಕಡ್ಡಾಯವಾಗಿ ಸ್ವದೇಶಿ ಉತ್ಪನ್ನಗಳನ್ನೇ ಖರೀದಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಭಾನುವಾರ ಹೈದರಾಬಾದ್‌ನ ಪರೇಡ್ ಗ್ರೌಂಡ್ಸ್‌ನಲ್ಲಿ ನಡೆದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಇರಾನ್ ಯುದ್ಧ, ಕೋವಿಡ್ ನಂತರದ ಸನ್ನಿವೇಶ ಮತ್ತು ತೈಲ ಬಿಕ್ಕಟ್ಟಿನಿಂದಾಗಿ ಜಾಗತಿಕವಾಗಿ ಉಂಟಾಗಿರುವ ಆರ್ಥಿಕ ಸವಾಲುಗಳ ಕುರಿತು ಜನರಿಗೆ ವಿವರಿಸಿದರು.

ದೇಶದ ಆರ್ಥಿಕತೆಯನ್ನು ಬಲಪಡಿಸಲು ಜನರು ಒಗ್ಗಟ್ಟಾಗಿ ಶ್ರಮಿಸಬೇಕು. ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಭಾರತೀಯ ಉತ್ಪನ್ನಗಳಿಗೇ ಮೊದಲ ಆದ್ಯತೆ ನೀಡಬೇಕು ಮತ್ತು ಇದಕ್ಕಾಗಿ ಪ್ರತಿಜ್ಞೆ ಮಾಡಬೇಕು ಎಂದು ಪ್ರಧಾನಿ ಮನವಿ ಮಾಡಿದರು.

ದೇಶಭಕ್ತಿ ಎಂದರೆ ಕೇವಲ ದೇಶಕ್ಕಾಗಿ ಪ್ರಾಣ ಬಿಡುವುದಲ್ಲ, ಬದಲಿಗೆ ದೇಶಕ್ಕಾಗಿ ಬದುಕುವುದು ಮತ್ತು ನಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುವುದು ಎಂದು ಮೋದಿ ಅವರು ದೇಶಭಕ್ತಿಗೆ ಹೊಸ ವ್ಯಾಖ್ಯಾನ ನೀಡಿದರು.

ದೇಶದ ವಿದೇಶಿ ವಿನಿಮಯ ಮೀಸಲನ್ನು ಉಳಿಸಲು ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಇದಕ್ಕಾಗಿ ಸಾರ್ವಜನಿಕ ಸಾರಿಗೆ, ಎಲೆಕ್ಟ್ರಿಕ್ ವಾಹನ ಹಾಗೂ ಕಾರ್ ಪೂಲಿಂಗ್ ಪದ್ಧತಿಯನ್ನು ಜನರು ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಕನಿಷ್ಠ ಒಂದು ವರ್ಷದ ಮಟ್ಟಿಗೆ ಚಿನ್ನದ ಖರೀದಿಯನ್ನು ನಿಯಂತ್ರಿಸುವಂತೆ ಪ್ರಧಾನಿ ಕೋರಿದರು. ಚಿನ್ನದ ಆಮದು ಕಡಿಮೆಯಾದಷ್ಟೂ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹಬ್ಬ ಹಾಗೂ ಶುಭ ಕಾರ್ಯಗಳಲ್ಲಿ ಚಿನ್ನದ ಬಳಕೆಯನ್ನು ಮಿತಿಗೊಳಿಸುವುದು ಒಳಿತು ಎಂದರು.

ಅಡುಗೆ ಎಣ್ಣೆ ಮತ್ತು ಯೂರಿಯಾದಂತಹ ಅಗತ್ಯ ವಸ್ತುಗಳಿಗಾಗಿ ನಾವು ಇನ್ನೂ ವಿದೇಶಗಳ ಮೇಲೆ ಅವಲಂಬಿತರಾಗಿದ್ದೇವೆ. ಈ ಅವಲಂಬನೆಯನ್ನು ಕಡಿಮೆ ಮಾಡಿ ದೇಶವು ಸ್ವಾವಲಂಬಿಯಾಗದಿದ್ದರೆ ನೈಜ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಜನರು ವಿದೇಶಿ ಪ್ರವಾಸಗಳ ಬದಲು ದೇಶದ ಒಳಗಿನ ಪ್ರವಾಸಿ ತಾಣಗಳಿಗೇ ಭೇಟಿ ನೀಡಬೇಕು. ಇದರಿಂದ ಸ್ಥಳೀಯರಿಗೆ ಉದ್ಯೋಗ ದೊರೆಯುವುದರ ಜೊತೆಗೆ ದೇಶದ ಹಣ ದೇಶದಲ್ಲೇ ಉಳಿಯುತ್ತದೆ ಎಂದು ಮೋದಿ ಪ್ರತಿಪಾದಿಸಿದರು.

Related Articles

ಇತ್ತೀಚಿನ ಸುದ್ದಿಗಳು