ನವದೆಹಲಿ: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಸುವರ್ಣ ದಾಖಲೆಯೊಂದನ್ನು ಬರೆಯಲು ಸಜ್ಜಾಗಿದ್ದಾರೆ. ಪ್ರಸಕ್ತ ತಿಂಗಳ ಜೂನ್ 10 ರಂದು ನರೇಂದ್ರ ಮೋದಿ ಅವರು ಭಾರತದ ಇತಿಹಾಸದಲ್ಲೇ ‘ದೀರ್ಘ ಅವಧಿಗೆ ದೇಶವನ್ನು ಮುನ್ನಡೆಸಿದ ಪ್ರಧಾನಿ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಈ ಮೂಲಕ ಅವರು ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಗೆದ್ದು, ಅತ್ಯಂತ ಹೆಚ್ಚು ದಿನಗಳ ಕಾಲ ಪ್ರಧಾನಿ ಹುದ್ದೆಯಲ್ಲಿದ್ದ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ನೆಹರೂ ಅವರು ಮೇ 13, 1952 ರಂದು ಅಧಿಕೃತವಾಗಿ ಪ್ರಧಾನಿ ಜವಾಬ್ದಾರಿ ವಹಿಸಿಕೊಂಡಿದ್ದರು. ಮೇ 27, 1964 ರಂದು ಅವರು ನಿಧನರಾಗುವವರೆಗೂ ಪ್ರಧಾನಿಯಾಗಿ ಮುಂದುವರಿದಿದ್ದರು. ಈ ಮೂಲಕ ನೆಹರೂ ಅವರು ಒಟ್ಟು 4,398 ದಿನಗಳ ಕಾಲ ದೇಶದ ಪ್ರಧಾನ ಮಂತ್ರಿಯಾಗಿದ್ದರು. ದಶಕಗಳ ಕಾಲ ಯಾರೂ ಮುರಿಯಲಾಗದಿದ್ದ ಈ ಐತಿಹಾಸಿಕ ದಾಖಲೆಯನ್ನು ಪ್ರಧಾನಿ ಮೋದಿ ಮುಂಬರುವ ಜೂನ್ 10 ರಂದು ಮೀರಲಿದ್ದಾರೆ. ಜೂನ್ 10 ರಂದು ಮೋದಿ ಅವರು ಪ್ರಧಾನಿಯಾಗಿ 4,399 ದಿನಗಳನ್ನು ಯಶಸ್ವಿಯಾಗಿ ಪೂರೈಸಲಿದ್ದಾರೆ. ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಮೇ 26, 2014 ರಂದು ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು, ಅಂದಿನಿಂದ ಇಂದಿನವರೆಗೂ ಅವರು ನಿರಂತರವಾಗಿ ಈ ಹುದ್ದೆಯಲ್ಲಿ ಮುಂದುವರಿದಿದ್ದಾರೆ.
ಪ್ರಧಾನಿ ಮೋದಿ ಅವರು ಇದಕ್ಕೂ ಮುನ್ನ ಜುಲೈ 5, 2025 ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರಲ್ಲಿದ್ದ ಮತ್ತೊಂದು ದೊಡ್ಡ ದಾಖಲೆಯನ್ನು ಇತಿಹಾಸದ ಪುಟ ಸೇರಿಸಿದ್ದರು. ಇಂದಿರಾ ಗಾಂಧಿ ಅವರು ಜನವರಿ 24, 1966 ರಂದು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು, ಮಾರ್ಚ್ 24, 1977 ರವರೆಗೆ ಸತತವಾಗಿ 4,077 ದಿನಗಳ ಕಾಲ ಆಡಳಿತ ನಡೆಸಿದ್ದರು. ಕಳೆದ ವರ್ಷವೇ ಇಂದಿರಾ ಗಾಂಧಿ ಅವರ ಸತತ ಆಡಳಿತದ ಅವಧಿಯನ್ನು ದಾಟಿದ್ದ ಮೋದಿ, ಇದೀಗ ನೆಹರೂ ಅವರ ದಾಖಲೆಯನ್ನೂ ಹಿಂದಿಕ್ಕಲಿದ್ದಾರೆ.
ನೆಹರೂ ಕಾಲದ ಭಾರತಕ್ಕೂ ಮೋದಿ ಕಾಲದ ಭಾರತಕ್ಕೂ ಇರುವ ವ್ಯತ್ಯಾಸ: ಸ್ವಾತಂತ್ರ್ಯ ಬಂದ ಆರಂಭಿಕ ದಿನಗಳಲ್ಲಿ ನೆಹರೂ ಅವರು ಪ್ರಧಾನಿ ಹುದ್ದೆ ಅಲಂಕರಿಸಿದಾಗ ದೇಶದ ಒಟ್ಟು ಜನಸಂಖ್ಯೆ ಕೇವಲ 34 ಕೋಟಿಯಷ್ಟಿತ್ತು. ಆದರೆ, 2014 ರಲ್ಲಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಳ್ಳುವಾಗ ಭಾರತದ ಜನಸಂಖ್ಯೆ 131 ಕೋಟಿಗೆ ತಲುಪಿತ್ತು, ಪ್ರಸ್ತುತ ದೇಶದ ಜನಸಂಖ್ಯೆ ಸುಮಾರು 146 ಕೋಟಿ ದಾಟಿದೆ ಎಂದು ಅಂದಾಜಿಸಲಾಗಿದೆ. ಇಷ್ಟು ವರ್ಷಗಳ ಅವಧಿಯಲ್ಲಿ ದೇಶದ ಜನಸಂಖ್ಯೆಯೊಂದಿಗೆ ಪ್ರಜಾಪ್ರಭುತ್ವದ ವಿಸ್ತರಣೆ ಮತ್ತು ರಾಜಕೀಯ ಪಕ್ಷಗಳ ಭಾಗವಹಿಸುವಿಕೆಯೂ ಭಾರಿ ಪ್ರಮಾಣದಲ್ಲಿ ಬೆಳೆದಿದೆ.
ದೇಶದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದ 1951-52 ರಲ್ಲಿ ಕೇವಲ 53 ರಾಜಕೀಯ partyಗಳು ಸ್ಪರ್ಧಿಸಿದ್ದವು. ಆದರೆ, ಮೋದಿ ಅಧಿಕಾರಕ್ಕೆ ಬಂದ 2014 ರ ಲೋಕಸಭಾ ಚುನಾವಣೆಯ ವೇಳೆಗೆ ಸ್ಪರ್ಧಿಸಿದ ಪಕ್ಷಗಳ ಸಂಖ್ಯೆ 464 ಕ್ಕೆ ಏರಿಕೆಯಾಗಿತ್ತು ಮತ್ತು ಇತ್ತೀಚಿನ 2024 ರ ಚುನಾವಣೆ ವೇಳೆಗೆ ಬರೋಬ್ಬರಿ 744 ರಾಜಕೀಯ ಪಕ್ಷಗಳು ಕಣದಲ್ಲಿದ್ದವು. ಮತದಾರರ ಸಂಖ್ಯೆಯನ್ನು ನೋಡುವುದಾದರೆ, ದೇಶದ ಮೊದಲ ಚುನಾವಣೆಯಲ್ಲಿ ಕೇವಲ 17 ಕೋಟಿ ಜನರಷ್ಟೇ ಮತದಾನದ ಹಕ್ಕು ಹೊಂದಿದ್ದರು, ಆದರೆ 2014 ರ ವೇಳೆಗೆ ಆ ಸಂಖ್ಯೆ 84 ಕೋಟಿಗೆ ತಲುಪಿತ್ತು. ನೆಹರೂ ಅವರ ಆಡಳಿತಾವಧಿಯಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಏಕಸ್ವಾಮ್ಯವಿತ್ತು. ಅಂದಿನ ಮೊದಲ ಚುನಾವಣೆಯಲ್ಲಿದ್ದ ಒಟ್ಟು 489 ಲೋಕಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ ಒಂದೇ ಬರೋಬ್ಬರಿ 364 ಸ್ಥಾನಗಳನ್ನು ಗೆದ್ದು ಬೀಗಿತ್ತು ಎಂದು ವರದಿ ವಿಶ್ಲೇಷಿಸಿದೆ.
