Home ಅಂಕಣ ಬೊಗಸೆಗೆ ದಕ್ಕಿದ್ದು-82 : ಮೋದಿ ಹೇಳಿದಂತೆ ಬದುಕಿ ಕುರಿಗಳೇ! ಆತ ಬದುಕುವಂತೆ ಅಲ್ಲ!

ಬೊಗಸೆಗೆ ದಕ್ಕಿದ್ದು-82 : ಮೋದಿ ಹೇಳಿದಂತೆ ಬದುಕಿ ಕುರಿಗಳೇ! ಆತ ಬದುಕುವಂತೆ ಅಲ್ಲ!

0

“..’ಹೇಳುವುದು ಶಾಸ್ತ್ರ, ಇಕ್ಕುವುದು ಗಾಳ’ : ತಾನು ಮಾಡಬಾರದ್ದೆಂದು ಬೇರೆಯವರಿಗೆ ಹೇಳುವುದನ್ನು ತಾನೇ ತನ್ನ “ರಾಜಸವಲತ್ತು” ಎಂಬಂತೆ ಮಾಡುವ ಪ್ರಧಾನಿ ನರೇಂದ್ರ ಮೋದಿಗೆ ಈ ಗಾದೆ ಸರಿಯಾಗಿ ಹೊಂದಿಕೆಯಾಗುತ್ತದೆ..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

“ಹೇಳುವುದು ಶಾಸ್ತ್ರ; ಇಕ್ಕುವುದು ಗಾಳ!” ಎಂಬುದೊಂದು ಜಾತಿ ಮೇಲ್ಮೆಯ ಗಾದೆಯೂ ಹೌದು, ಮೇಲ್ಜಾತಿ ಆಷಾಢಭೂತಿತನವನ್ನು ಟೀಕಿಸುವ ಗಾದೆಯೂ ಹೌದು! ತಾನು ಮಾಡಬಾರದ್ದೆಂದು ಬೇರೆಯವರಿಗೆ ಹೇಳುವುದನ್ನು ತಾನೇ ತನ್ನ “ರಾಜಸವಲತ್ತು” ಎಂಬಂತೆ ಮಾಡುವ ಪ್ರಧಾನಿ ನರೇಂದ್ರ ಮೋದಿಗೆ ಈ ಗಾದೆ ಸರಿಯಾಗಿ ಹೊಂದಿಕೆಯಾಗುತ್ತದೆ. ಜೊತೆಗೆ ಆತನಿಗೆ ಸರಿಯಾಗಿ ಹೊಂದಿಕೆಯಾಗುವ ಮಾತೆಂದರೆ: ಡಾ. ರಾಜ್‌ಕುಮಾರ್ ಅವರ “ಜ್ವಾಲಾಮುಖಿ” ಚಿತ್ರದ “ಹೇಳುವುದು ಒಂದು; ಮಾಡುವುದು ಇನ್ನೊಂದು!” ಹಾಡು! “ರಾಷ್ಟ್ರಪಿತ” ಮಹಾತ್ಮಾ ಗಾಂಧಿಯವರು ಸರಳತೆಯನ್ನು ಬೋಧಿಸುವ ಮೊದಲು- ಸರಳತೆಯನ್ನು ಅನುಸರಿಸಿ, ಸರಳತೆಯನ್ನೇ ಬಾಳಿದರು. ಕೋಟು ಬೂಟಿನಿಂದ ಇಳಿದು, “ಬರಿಮೈ ಫಕೀರ” ಎನಿಸಿಕೊಂಡರೆ, “ಭಕ್ತಪಿತ” ಮೋದಿ- ತಾನೇ (ಸುಳ್ಳು) ಹೇಳಿದಂತೆ ಮೂವತ್ತು ವರ್ಷ ಭಿಕ್ಷೆಬೇಡಿ ಬದುಕಿದವರು- ದಿನಕ್ಕೆ ಮೂರುಮೂರು ವಿದೇಶಿ ಸೂಟು ಬದಲಿಸುವ, ಶ್ರೀಮಂತಿಕೆಯನ್ನೇ ಬಾಳುವ- ಸಾಮಾನ್ಯ ಜನರಿಗೆ ಮಾತ್ರವೇ ತ್ಯಾಗ ಮತ್ತು ಸರಳತೆಯನ್ನು ಬೋಧಿಸುವ “ಷೋಕಿಲಾಲ ಫಕೀರ” ಎನಿಸಿಕೊಂಡಿದ್ದಾರೆ!

ಈಗಿನ ಭಾರತೀಯ ಆಡಳಿತದ ಭವ್ಯವಾದ, ನಿಯಾನ್-ಲೈಟ್ ಕಾರ್ಖಾನೆಯಲ್ಲಿ, “ತ್ಯಾಗ”ವು ಹೆಚ್ಚು ಉತ್ಪಾದನೆಯಲ್ಲಿರುವ ಸರಕು. ಇದನ್ನು ಸರಕಾರವು ಪ್ಯಾಕ್ ಮಾಡುತ್ತದೆ, ಸಾರ್ವಜನಿಕ ಸಂಪರ್ಕ ಸಂಸ್ಥೆಗಳ ಮೂಲಕ ಜನಸಾಮಾನ್ಯರಿಗೆ ಆಕ್ರಮಣಕಾರಿಯಾಗಿ ಮಾರಾಟ ಮಾಡುತ್ತದೆ! ಮೋದಿಯೇ ಅದರ ಬ್ರಾಂಡ್ ಅಂಬಾಸಡರ್. ತಾವು ವಿದೇಶಿ ಬಳಸುತ್ತಾ, ಕೋಟಿಗಟ್ಟಲೆ ಸಂಪಾದಿಸಿ, ಜಾಹೀರಾತಿನ ಮೂಲಕ ಇಲ್ಲಿನ ನಾಯಿಬೆಕ್ಕು ಬ್ರಾಂಡ್‌ಗಳನ್ನು ಜನರ ತಲೆಗೆ ಹಿಡಿಸುವ ಸಿನಿಮಾ ತಾರೆಯಂತೆಯೇ ಮೋದಿ! ನಟ ಚತುರ ಮಾರ್ತಾಂಡ!

ದುಬಾರಿ ಖರ್ಚಿನ ಶೋಕಿಲಾಲ ಫಕೀರ!
ಮೋದಿಯನ್ನು ಹಿಂದಿನಿಂದಲೂ ಎಲ್ಲಾ ಬಿಟ್ಟ ಯಾವುದೋ ಋಷಿಯೋ, ಮುನಿಯೋ ಎಂಬಂತೆ ರೋಮ್ಯಾಂಟಿಕ್ ಆಗಿ ಚಿತ್ರಿಸಲಾಗುತ್ತಿದೆ. ಕನಿಷ್ಟ ನಿದ್ದೆ ಮಾಡುವ, 18 ಗಂಟೆ ಕೆಲಸ ಮಾಡುವ, ಯಾವುದೇ ಆಸ್ತಿಯನ್ನು ಹೊಂದಿರದ, ಒಂದು ಬಟ್ಟೆ ಚೀಲವನ್ನು ಮಾತ್ರ ಹೊಂದಿರುವ, ಯಾವಾಗ ಬೇಕಾದರೂ ಹೊರಡಲು ಸಿದ್ಧನಾದ ಫಕೀರ ಮನುಷ್ಯ ಎಂಬಂತೆ ಚಿತ್ರಿಸಲಾಗುತ್ತಿದೆ. ಈ ಮಹಾ ಸುಳ್ಳನ್ನು ಆತ ಸಾರ್ವಜನಿಕವಾಗಿ ನಾಚಿಕೆ ಬಿಟ್ಟು ಹಲವು ಸಲ ಹೇಳಿಕೊಂಡಿದ್ದಾರೆ. (ಮೈ ತೋ ಫಕೀರ್ ಆದ್ಮಿ ಹೂಂ, ಜೋಲಾ ಲೇಕರ್ ನಿಕಲ್ ಪಡೂಂಗಾ!). ಆದರೂ, ಆತನ ಭೌತಿಕ ಜೀವನವು ಹೇಸಿಗೆ ಬರಿಸುವ ವಿರೋಧಾಭಾಸವನ್ನು ತೋರಿಸುತ್ತದೆ.

ಸಾಮಾನ್ಯ ನಾಗರಿಕರು ತಮ್ಮ ಸೊಂಟಪಟ್ಟಿ ಬಿಗಿಗೊಳಿಸಲು, ಮಧ್ಯವರ್ಗದ ಕುಟುಂಬಗಳು ತಮ್ಮ ಸೌಕರ್ಯಗಳನ್ನು ಕಡಿತಗೊಳಿಸಲು ಮತ್ತು ದೇಶಭಕ್ತಿಯ ಹೆಸರಿನಲ್ಲಿ ಆರ್ಥಿಕ ಸಂಕಷ್ಟಗಳನ್ನು, ಬೆಲೆ ಏರಿಕೆಯನ್ನು, ಅನಿಲ ಕೊರತೆಯನ್ನು, ದುರಾಡಳಿತವನ್ನು ಮರುಮಾತಿಲ್ಲದೆ ಸಹಿಸಿಕೊಳ್ಳಬೇಕು ಎಂದು ಆತ ಕರೆ ನೀಡುತ್ತಾರೆ! ಆದರೆ, ಸರಕಾರಿ ಯಂತ್ರವು ಒಬ್ಬ ಟೊಳ್ಳು ವ್ಯಕ್ತಿಯನ್ನು ಸಂಪೂರ್ಣ ಐಷಾರಾಮಿ, ಹೈಪರ್-ಶೈಲೀಕೃತ, ಬಹು-ಪದರಗಳ ಭ್ರಮೆಯ ಗುಳ್ಳೆಯೊಳಗೆ ಇರಿಸಿ, ಪ್ರದರ್ಶನ ಮಾಡಲು ನೂರಾರು ಕೋಟಿಗಳನ್ನು ಖರ್ಚು ಮಾಡುತ್ತದೆ. ಈಗಿನ ಭಾರತೀಯ ರಾಜಕಾರಣದ ಮೂಲ ಸಂದೇಶ ಒಂದೇ: ನೀವು ದೇಶಪ್ರೇಮಿ ಆಗಿದ್ದರೆ ಆರ್ಥಿಕ ಸಂಕಷ್ಟ ಸಹಿಸಬೇಕು- ಯಾಕೆಂದರೆ ನೀವು ಪ್ರಜೆ; ನಾವು ಸಕಲ ಸುಖ ಸೌಭಾಗ್ಯ ಅನುಭವಿಸಬೇಕು- ಯಾಕೆಂದರೆ, ನಾವು ಮಹಾರಾಜರು! ಬಿಜೆಪಿಯ ಕಲ್ಪನೆಯ ಪ್ರಜಾಪ್ರಭುತ್ವ ಎಂದರೆ, ಜಾತಿ-ವರ್ಗ ತಾರತಮ್ಯದ ರಾಜಪ್ರಭುತ್ವದ ಆಧುನಿಕ ರೂಪ.

ಹೇಳುವುದು ಒಂದು; ಮಾಡುವುದು ಇನ್ನೊಂದು!
ದೇಶವನ್ನುದ್ದೇಶಿಸಿ ಮೋದಿ ಮಾಡಿದ ಸರಳತೆಯ, ಕಷ್ಟ ಸಹಿಷ್ಣುತೆಯ ಸಂದೇಶವನ್ನು ಬಹಳ ಪ್ರಚಾರ ಮಾಡಲಾಯಿತು. ಜಾಗತಿಕ ಮಾರುಕಟ್ಟೆ ಅಸ್ಥಿರತೆಗಳ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ರಚನಾತ್ಮಕ ಆರ್ಥಿಕ ಪರಿಹಾರವನ್ನು ನೀಡಲಾಗಿಲ್ಲ. ಬದಲಾಗಿ, ದೊಡ್ಡ ದೊಡ್ಡ ನೈತಿಕ ಪಾಠಗಳನ್ನು ಹೇಳಲಾಗಿದೆ. ಇದರ ಇಬ್ಬಗೆ ನೀತಿಯು ಕಣ್ಣುಕುಕ್ಕುವಂತಿದೆ. ಒಂದು ಕಡೆ ಸಾಮಾನ್ಯ ನಾಗರಿಕನಿಗೆ ಚಿನ್ನ ಖರೀದಿ ಮಾಡಬೇಡಿ, ಸ್ವಂತ ಕಾರು ಬಳಸಬೇಡಿ, ಸಾರ್ವಜನಿಕ ಸಾರಿಗೆ ಬಳಸಿ, ವಿದೇಶ ಪ್ರಯಾಣ ಮಾಡಬೇಡಿ, ವಿದೇಶಿ ವಸ್ತುಗಳನ್ನು ಬಳಸಬೇಡಿ, ಇಂಧನ ಬಳಕೆಯನ್ನು ಕಡಿತಗೊಳಿಸಿ ಮತ್ತು ದೇಶವು ಬಾಹ್ಯ ಒತ್ತಡಗಳನ್ನು ನಿಭಾಯಿಸಲು ಮನೆಯಿಂದ ಕೆಲಸ ಮಾಡಿ ಇತ್ಯಾದಿಯಾಗಿ- ತಾನು ಅನುಸರಿಸದ ಬಿಟ್ಟಿ ಸಲಹೆಗಳನ್ನು ಮೋದಿ ನೀಡಿದ್ದಾರೆ. ಇದೇ ಹೊತ್ತಿಗೆ ಭಾರತವು ಯುಎಸ್ಎಯಿಂದ ವರ್ಷಕ್ಕೆ 43 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಸರಕುಗಳನ್ನು ಕೊಳ್ಳಲಿದೆ ಎಂದು ಭಾರತಕ್ಕೆ ಭೇಟಿ ನೀಡಿದ ಯುಎಸ್ಎಯ ರಾಜ್ಯಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೋ ಹೇಳಿಕೆ ನೀಡುತ್ತಾರೆ!

ಇನ್ನೊಂದು ಕಡೆಯಲ್ಲಿ, ಯಾವುದೇ ಬಿಕ್ಕಟ್ಟು ನಮ್ಮ ನಾಯಕನನ್ನು ವೈಯಕ್ತಿಕವಾಗಿ ಬಾಧಿಸುವುದಿಲ್ಲ. ಕೋಟಿಗಟ್ಟಲೆ ಮೌಲ್ಯದ ಕಸ್ಟಮ್ ಮೇಡ್ ಸೂಟ್‌ಗಳು, ವಿವಿಐಪಿ ಬೋಯಿಂಗ್ 777 ವಿಮಾನಗಳ ಬೃಹತ್ ಫ್ಲೀಟ್, 40ರಿಂದ 50 ಕಾರುಗಳ ಭದ್ರತಾ ಬೆಂಗಾವಲುಗಳು ಮತ್ತು ಅಂತ್ಯವಿಲ್ಲದ, ಸಾರ್ವಜನಿಕ ತೆರಿಗೆ ಹಣವನ್ನು ಹೀರುವ ಪ್ರಾದೇಶಿಕ ಚುನಾವಣಾ ಪ್ರಚಾರ ಸಭೆಗಳಿಗೆ ಇದೆಲ್ಲಾ ಅನ್ವಯಿಸುವುದಿಲ್ಲ. ಚಿನ್ನದ ಬೆಲೆಯು ಆಕಾಶಕ್ಕೆ ಏರುತ್ತಿರುವ ಸಂದರ್ಭದಲ್ಲಿ- ಚಿನ್ನವನ್ನು ತ್ಯಜಿಸುವ ಸಲಹೆಯು ಮಧ್ಯಮ ವರ್ಗದ ಮೇಲೆ ನೇರ ದಾಳಿಯಾಗಿದ್ದು, ಸಾಂಪ್ರದಾಯಿಕ ಕುಟುಂಬ ಆಚರಣೆಗಳು, ಮದುವೆಗಳು ಮತ್ತು ಆಳವಾಗಿ ಬೇರೂರಿರುವ ಆರ್ಥಿಕ ಭದ್ರತೆಯ ಭಾವನೆಗಳನ್ನು ಬುಡಮೇಲು ಮಾಡುತ್ತದೆ. ಯಾಕೆಂದರೆ, ಭಾರತೀಯರು ಮುಂದಿನ ಜೀವನದ ಭದ್ರತೆಗಾಗಿ ನಂಬುವುದು ಚಿನ್ನವನ್ನೇ. ಜೊತೆಗೆ ಲಕ್ಷಾಂತರ ಸ್ಥಳೀಯ ಕುಶಲಕರ್ಮಿಗಳನ್ನು ನೇಮಿಸಿಕೊಳ್ಳುವ ದೇಶೀಯ ಆಭರಣ ಉದ್ಯಮವು ಈ ಹುಚ್ಚಾಟಗಳ ಆಘಾತವನ್ನು ಹೀರಿಕೊಳ್ಳಬೇಕಾಗಿದೆ. ಜತೆಗೆ ಸರಕಾರವು ಈಗಾಗಲೇ ಚಿನ್ನದ ಆಮದಿನ ಮೇಲೆ ಮಿತಿ, ನಿಯಂತ್ರಣಗಳನ್ನು ಹೇರಿದೆ.

ಹೀಗಿದ್ದರೂ, ಜನಸಾಮಾನ್ಯರು ಚಿನ್ನದ ಖರೀದಿಯೇ ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ಭಾವಿಸಿರುವಾಗ, ಮೋದಿಯ ಸ್ವಂತ ಉಡುಗೆತೊಡುಗೆಗಳ ಆಯ್ಕೆ ಬೇರೆಯೇ ಆರ್ಥಿಕ ವಾಸ್ತವದ ಜೊತೆಗೆ- ಮಹಾರಾಜರಂತೆ ಬದುಕಬೇಕೆಂಬ ಆತನ ಒಳಮನದಾಸೆಯನ್ನು ಬಿಂಬಿಸುತ್ತದೆ. ಕೊನೆಗೂ ಇದು- ಲಕ್ಷಗಟ್ಟಲೆ ಮೌಲ್ಯದ (ನಂತರ 4 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತಕ್ಕೆ ಹರಾಜಾದ) ಮೊನೊಗ್ರಾಮ್ ಮಾಡಿದ ಪಿನ್‌ಸ್ಟ್ರೈಪ್ ಸೂಟ್‌ಗಳು, ಡಿಸೈನರ್ ಐಷಾರಾಮಿ ಸನ್‌ಗ್ಲಾಸುಗಳು, ಲಕ್ಷ ಬೆಲೆಬಾಳುವ ವಿದೇಶಿ ಪೆನ್ನು, ಪಾದರಕ್ಷೆಗಳು ಮತ್ತು ನಿರ್ದಿಷ್ಟ ಟೆಲಿವಿಷನ್ ಫ್ರೇಮ್‌ಗಳಿಗೆ ಎಚ್ಚರಿಕೆಯಿಂದ ಆಯ್ಕೆಮಾಡಿದ ಹೆಚ್ಚಿನ ಬೆಲೆಯ ಸಾಂಪ್ರದಾಯಿಕ ಶಾಲುಗಳ ಮೂಲಕ- ಸಾರ್ವಜನಿಕ ನೌಕರನಾದ ನಕಲಿ “ಚಾಯ್‌ವಾಲಾ”ನ ಡೌಲುದೌಲತ್ತು, ಐಷಾರಾಮಿ, ಶೋಕಿಲಾಲತನವನ್ನು ನಿರ್ಲಜ್ಜವಾಗಿ ಪ್ರದರ್ಶಿಸುತ್ತದೆ. ಕಟ್ಟುನಿಟ್ಟಾಗಿ ನಿಗದಿಪಡಿಸಲಾದ ಪ್ರಾದೇಶಿಕ ಭೇಟಿಗಳ ಸಮಯದಲ್ಲಿ ಮೋದಿ ದಿನಕ್ಕೆ ಮೂರು ಬಾರಿ ವೇಷಭೂಷಣಗಳನ್ನು ಬದಲಾಯಿಸುವುದನ್ನು ಮತ್ತೆ ಮತ್ತೆ ನೋಡಿಯೂ ಸಾರ್ವಜನಿಕರು ಇದರ ಹಿಂದಿನ ಅಶ್ಲೀಲತೆ ಮತ್ತು ಅನೈತಿಕತೆಗಳನ್ನು ನೋಡುವುದಿಲ್ಲ! ಈತನ ಪ್ರಾದೇಶಿಕವಾದ ಮತ್ತು ಹೆಚ್ಚಿನ ಸಲ ನಗೆಪಾಟಲಾಗುವ ಛದ್ಮವೇಷಗಳಿಗೆ ಎಷ್ಟು ವೆಚ್ಚವಾಗುತ್ತದೆ ಎಂದು ಪ್ರಶ್ನಿಸುವುದಿಲ್ಲ! ಆತನ ಪ್ರವಾಸಗಳು ಸರಕಾರಿ ವೆಚ್ಚದಲ್ಲಿ ನಡೆಯುವ ಫ್ಯಾಷನ್ ಶೋಗಳಾಗಿವೆ. ನಾಗರಿಕರು ದಿನಸಿ, ತರಕಾರಿ, ಪೆಟ್ರೋಲ್, ಡೀಸೆಲ್, ಅನಿಲ, ಔಷಧಿ ಮುಂತಾದವುಗಳ ಏರುತ್ತಿರುವ ಬೆಲೆಯನ್ನು ಲೆಕ್ಕ ಹಾಕುತ್ತಿದ್ದರೆ, ಸರಕಾರವು ಒಬ್ಬ ನಕಲಿ ಫಕೀರನ “ಸೌಂದರ್ಯೋಪಾಸನೆ”ಗಾಗಿ ವಿಶೇಷವಾದ ಲಾಜಿಸ್ಟಿಕ್ ವ್ಯವಸ್ಥೆಗಳಿಗೆ ಉದಾರವಾಗಿ ಸಾರ್ವಜನಿಕ ಹಣವನ್ನು ಖರ್ಚು ಮಾಡುತ್ತದೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೊದಲು ಗಂಟೆಗಟ್ಟಲೆ ಮೇಕಪ್ ಮಾಡಿಸಿಕೊಳ್ಳುವ, ತಮಿಳುನಾಡಿಗೆ ಭೇಟಿ ನೀಡುವಾಗ “ದ್ರಾವಿಡರಂತೆ ಕಪ್ಪಾದ” ಈತನೇ ಬ್ಯೂಟಿ ಪಾರ್ಲರ್‌ಗಳಿಗೆ ಹೋಗಬೇಡಿರೆಂದು ಮಹಿಳೆಯರಿಗೆ ಕರೆ ನೀಡುತ್ತಾರೆ ಎಂದರೆ, ಇದಕ್ಕಿಂತ ದೊಡ್ಡ ಆಷಾಢಭೂತಿತನ ಬೇರೆ ಬೇಕೆ!?

‘ಫಕೀರ’ನನ್ನು ಆರಾಮವಾಗಿ ಇಡುವ ವೆಚ್ಚ
ಮೋದಿಯ “​ಸಂಪೂರ್ಣ ತ್ಯಾಗ”ದ ಈ ಚಿತ್ರಣವನ್ನು ಕಾಪಾಡಿಕೊಳ್ಳಲು ಬೇಕಾಗುವ ಆರ್ಥಿಕ ವೆಚ್ಚವು ದಿಗ್ಭ್ರಮೆಗೊಳಿಸುವಂತಿದೆ. ವಾರ್ಷಿಕ ಬಜೆಟ್ ಹಂಚಿಕೆ ಸುಮಾರು 500 ಕೋಟಿ ರೂಪಾಯಿಗಳಿರುವ ಗಣ್ಯರ ವಿಶೇಷ ರಕ್ಷಣಾ ಗುಂಪು (SPG) ಭದ್ರತಾ ವ್ಯವಸ್ಥೆಯನ್ನು ಪರಿಗಣಿಸಿ. ಪ್ರಧಾನ ಮಂತ್ರಿ ಮಾತ್ರವೇ ಪ್ರಸ್ತುತ ಈ ರಕ್ಷಣೆಯ ಅಡಿಯಲ್ಲಿ ಇರುವುದರಿಂದ ವೈಯಕ್ತಿಕ ರಕ್ಷಣೆಯ ಲೆಕ್ಕಾಚಾರವು ದಿನಕ್ಕೆ ಸರಿಸುಮಾರು 1.3ರಿಂದ 1.6 ಕೋಟಿ ರೂಪಾಯಿ ಅಥವಾ ನಿಮಿಷಕ್ಕೆ 11,000 ರೂಪಾಯಿಗಳಿಗಿಂತ ಹೆಚ್ಚಾಗುತ್ತದೆ.

​ಈ ಭದ್ರತಾ ತಂಡವು 40ರಿಂದ 50 ಪ್ರೀಮಿಯಂ ಐಷಾರಾಮಿ ವಾಹನಗಳ ಬೃಹತ್ ಬೆಂಗಾವಲು ಪಡೆಯೊಂದಿಗೆ ಪ್ರಯಾಣ ಮಾಡುತ್ತದೆ. ಇವುಗಳಲ್ಲಿ ಹೆಚ್ಚಿನವು ವಿಶೇಷವಾಗಿ ತಯಾರಿಸಲಾದ ಇಂಧನವನ್ನು ನೀರಿನಂತೆ ಕುಡಿಯುವ ಮರ್ಸಿಡಿಸ್-ಮೇಬ್ಯಾಕ್ ಮತ್ತು ಶಸ್ತ್ರಸಜ್ಜಿತ ರೇಂಜ್ ರೋವರ್ ಮಾಡೆಲ್‌ಗಳು. ಈ ರಾಜಕೀಯ ರೋಡ್‌ಶೋಗಳಲ್ಲಿ ಒಂದರ ಇಂಗಾಲದ ಹೆಜ್ಜೆಗುರುತು (carbon footprint) ಮತ್ತು ಇಂಧನ ಬಳಕೆಯೇ ವಾರಗಳವರೆಗೆ ಒಂದು ಟೈಯರ್-2 ಭಾರತೀಯ ಪಟ್ಟಣದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸರಿಸಮನಾಗಿದೆ. ಆದರೂ, ಈ ವ್ಯಂಗ್ಯದ ಸುಳಿವು ಇಲ್ಲದೆ, ನಮ್ಮ ನಾಯಕ- ಈ ಶಸ್ತ್ರಸಜ್ಜಿತ, ಹವಾಮಾನ-ನಿಯಂತ್ರಿತ ವಾಹನಗಳಿಂದ ಹೊರಬಂದು, ನೇರವಾಗಿ ಟಿವಿ ಕ್ಯಾಮೆರಾವನ್ನು ನೋಡಿ ನಾಗರಿಕರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಲು, ಸ್ವಂತ ವಾಹನ ಬಳಸದಿರಲು ಹೇಳುತ್ತಾನೆ!

ಫೋಟೋ ಶೂಟ್ ಪುರಾಣ!
ಮೋದಿ ಸಕಲ ಗುಣ ಸಂಪನ್ನ ಎಂದು ಕೃತಕವಾಗಿ ಯೋಜಿಸಲಾದ, ಪ್ರಚಾರಕ್ಕೆಂದೇ ನಿರ್ಮಿಸಲಾಗುವ ಹಲವಾರು ಫೋಟೋ ಶೂಟ್‌ಗಳನ್ನು ಓದುಗರು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿರುವುದರಿಂದ ಈ ಕುರಿತು ಹೆಚ್ಚೇನೂ ಹೇಳಬೇಕಾಗಿಲ್ಲ. ಹತ್ತು ರೂಪಾಯಿಯ ಜುಲ್‌ಮುರಿ ತಿನ್ನಲು ಕೋಟಿಗಟ್ಟಲೆ ಖರ್ಚುಮಾಡಿದ್ದು ಇತ್ತೀಚೆಗೆ ಹೆಚ್ಚು ಪ್ರಚಾರ ಪಡೆಯಿತು. ರಸ್ತೆಯಲ್ಲಿ ಇರಲಿ, ದೋಣಿಯಲ್ಲಿ ಇರಲಿ- ಅಂಬ್ಯೂಲೆನ್ಸ್ ಒಂದು ತಪ್ಪದೇ ಬರುತ್ತದೆ. ಅದಕ್ಕೆ ಮೋದಿಯ ರಕ್ಷಣೆಯ ವಾಹನಗಳೆಲ್ಲಾ ದಾರಿ ಮಾಡಿಕೊಟ್ಟು “ಮಾನವೀಯತೆ” ಮೆರೆಯುತ್ತವೆ! ಬಿಟ್ಟಿ ಪ್ರಚಾರ ಸಿಗುತ್ತದೆ. ಅದೇ ಹೊತ್ತಿಗೆ ಅಂಬ್ಯುಲೆನ್ಸ್ ಇಲ್ಲದೇ ಶವವನ್ನು ಹೊತ್ತು ಸಾಗುವ ಬಡವರ ಚಿತ್ರಗಳು ಪ್ರಚಾರ ಪಡೆಯುವುದಿಲ್ಲ. ಪಡೆದರೂ ಅಮಾನವೀಯ ಭಕ್ತಗಣಗಳಿಂದ ಟ್ರೋಲ್‌ಗೆ ಗುರಿಯಾಗುತ್ತವೆ.

ಮೋದಿಯು ಆಧ್ಯಾತ್ಮಿಕ ಏಕಾಂತತೆಯನ್ನು ಬಯಸಿದಾಗ, ಅದು ಶಾಂತ, ಏಕಾಂತತೆಯಲ್ಲಿ ನಡೆಯುವುದಿಲ್ಲ. ಇದು ಬಹು-ಕ್ಯಾಮೆರಾಗಳ ಸೆಟಪ್ ಮುಂದೆ ಸಂಭವಿಸುತ್ತದೆ. ಅದು ಹೆಚ್ಚು ಪ್ರಚಾರ ಪಡೆದ ದೋಣಿ ವಿಹಾರವಾಗಲಿ- ವಿದ್ಯುತ್ ಔಟ್‌ಲೆಟ್‌ಗಳು ಮತ್ತು ಐಷಾರಾಮಿ ಕಾರ್ಪೆಟ್‌ಗಳನ್ನು ಹೊಂದಿರುವ ಗುಹೆಯಲ್ಲಿ ಧ್ಯಾನ ಮಾಡುತ್ತಿರಲಿ ಅಥವಾ “ನವಾಮಿ ಗಂಗಾ” ಹೆಸರಿನಲ್ಲಿ ಕೋಟಿಗಟ್ಟಲೆ ನುಂಗಿ “ಶುದ್ಧೀಕರಿಸಲಾದ” ಪರಮ ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಲು ಹಿಂಜರಿದು, ಕೃತಕ ಈಜುಕೊಳ ನಿರ್ಮಿಸಿದ ವಂಚಕತನ- ಅಪ್ರಾಮಾಣಿಕತೆಯಿರಲಿ, ಖಾಲಿ ಪರ್ವತಕ್ಕೆ ಕೈಬೀಸುವುದಿರಲಿ, ಡೋಲು ಜಾಗಟೆ ತಮ್ಮಟೆ ಬಾರಿಸುವುದಿರಲಿ, ತ್ರಿಶೂಲ ಪ್ರದರ್ಶನ, ಪೂಜೆಗೀಜೆ ಇತ್ಯಾದಿ ಛದ್ಮವೇಷಗಳಿರಲಿ- ಎಲ್ಲವೂ ಕೃತಕ ಆಡಂಬರ. ಪ್ರಾಮಾಣಿಕತೆಯ ಲವಲೇಶವೂ ಅದರಲ್ಲಿ ಕಾಣಿಸುವುದಿಲ್ಲ. “ಆಧ್ಯಾತ್ಮಿಕ” ಎಂಬ ಪದವೇ ನಾಚಿ ಆತ್ಮಹತ್ಯೆ ಮಾಡಿಕೊಳ್ಳಬೇಕು! ಕ್ಯಾಮರಾ ಹಿಡಿದವನ ಫೋಟೋ ತೆಗೆಯಲೆಂದೇ ಸುತ್ತಲೂ ಕ್ಯಾಮರಾಗಳು! ಪ್ರಕೃತಿ, ಧರ್ಮ ಅಥವಾ ಸಾರ್ವಜನಿಕರ ಜೊತೆ ಕೃತಕವಾದ, ಮೊದಲೇ ಚಿತ್ರಕತೆ, ಸಂಭಾಷಣೆ ಬರೆದ ಪ್ರತಿಯೊಂದು ಸಂವಹನವನ್ನು ವೃತ್ತಿಪರರ ತಂಡಗಳು ಸಿನಿಮಾ ಮಾದರಿಯಲ್ಲಿ ಶೂಟಿಂಗ್ ಮಾಡಿ, ಪ್ರಚಾರ ಮಾಡುತ್ತವೆ. ಗೋದಿ ಮಾಧ್ಯಮಗಳು ಹೊಗಳಿ ಗುಣಗಾನ ಮಾಡುತ್ತವೆ. ಸ್ವಂತ ತಾಯಿಯ ಜೊತೆ ಊಟ ಮಾಡುವ ಖಾಸಗಿ ಕ್ಷಣವನ್ನೂ, ಹಲ್ಲಿಲ್ಲದ ಬಾಯಿಗೆ ಪರೋಟ ತುರುಕುವ ಫೋಟೋ ಶೂಟ್ ಮಾಡಿಸಿ ಪ್ರಚಾರ ಗಿಟ್ಟಿಸಿದ, ಬಿಹಾರದ ಚುನಾವಣೆಯಲ್ಲಿ ಲಾಭಪಡೆಯಲು ವರ್ಷದ ಹಿಂದೆ ಸತ್ತ ತಾಯಿಗೆ ಪಿಂಡ ಬಿಡಲು ಹೊರಟ ಪ್ರಚಾರ ವ್ಯಸನಿಯಿಂದ ಬೇರೇನನ್ನು ನಿರೀಕ್ಷಿಸಲು ಸಾಧ್ಯ!?

ಸಾರ್ವಜನಿಕ ಹಣ; ಎಲ್ಲಪ್ಪನ ಜಾತ್ರೆ!
ಆದರೆ, ಸರಕಾರದ ಸ್ವತ್ತುಗಳನ್ನು, ನೌಕರರು, ಸಿಬ್ಬಂದಿಯನ್ನು ಪಕ್ಷಪಾತದ ರಾಜಕೀಯ ಲಾಭಕ್ಕಾಗಿ ಸಕ್ರಿಯವಾಗಿ ನಿಯೋಜಿಸಿದಾಗ ಈ ಜೀವನಶೈಲಿಯು ಕೇವಲ ವೈಯುಕ್ತಿಕ ತೆವಲಿನ ಮಟ್ಟವನ್ನು ಮೀರಿ ಪ್ರಜಾಪ್ರಭುತ್ವಕ್ಕೆ ಮಾಡುವ ಗಂಭೀರ ಅನ್ಯಾಯವಾಗುತ್ತದೆ. ಅಧಿಕೃತ ರಾಜ್ಯ ಭೇಟಿಗಳು, ಧಾರ್ಮಿಕ ದೇವಾಲಯ ಉದ್ಘಾಟನೆಗಳು ಮತ್ತು ಚುನಾವಣಾ ಪ್ರಚಾರ ಸಭೆಗಳ, ರೋಡ್ ಶೋಗಳ ನಡುವಿನ ಗೆರೆಗಳನ್ನು ಸಂಪೂರ್ಣವಾಗಿ ಅಳಿಸಿಹಾಕಲಾಗಿದೆ. ಸರಕಾರಿ ಖರ್ಚಿನಲ್ಲಿ ಬಿಜೆಪಿಯ ಪ್ರಚಾರ ನಡೆದರೂ, ಗುಲಾಮಿ ಚುನಾವಣಾ ಆಯೋಗ ಪ್ರಶ್ನಿಸುವುದಿಲ್ಲ! ಯಾವಯಾವುದಕ್ಕೋ ಸ್ವಯಂಪ್ರೇರಿತ ನಿರ್ದೇಶನಗಳನ್ನು ನೀಡುವ ನ್ಯಾಯಾಲಯಗಳು ಈ ಕುರಿತು ಏನೂ ಮಾಡುವುದಿಲ್ಲ!

​ಪ್ರಧಾನಿ ಐದು ರಾಜ್ಯಗಳಲ್ಲಿ ಮಿಂಚಿನ, ಪಕ್ಷಪಾತದ ಚುನಾವಣಾ ಭಾಷಣಗಳನ್ನು ನೀಡಲು ಪ್ರಯಾಣಿಸಿದಾಗ, ಇಡೀ ವ್ಯವಸ್ಥೆ ಆತನೊಂದಿಗೆ ಪ್ರಯಾಣಿಸುತ್ತದೆ. ವಿವಿಐಪಿ ಬೋಯಿಂಗ್ 777-300ER ವಿಮಾನಗಳು, ವಾಯುಪಡೆಯ ಹೆಲಿಕಾಪ್ಟರ್‌ಗಳು, ಬೃಹತ್ ಎಸ್‌ಪಿಜಿ ತುಕಡಿಗಳು, ಸ್ಥಳೀಯ ಜಿಲ್ಲಾ ಆಡಳಿತ ಯಂತ್ರಗಳು ಮತ್ತು ಸಂವಹನ ನಿರ್ಬಂಧಗಳು ಇವೆಲ್ಲವೂ “ಅಧಿಕೃತ” ಪ್ರಧಾನ ಮಂತ್ರಿ ಪ್ರಯಾಣದ ಸೋಗಿನಲ್ಲಿ ಸಾರ್ವಜನಿಕ ಹಣದಿಂದ ನಡೆಯುತ್ತವೆ. ಆದರೆ, ಆತ ಮಾಡುವುದು ಮಾತ್ರ ಸರಕಾರಿ ಕೆಲಸವಲ್ಲ; ಪಕ್ಷದ ಪ್ರಚಾರ ಮತ್ತು ಪ್ರತಿಪಕ್ಷಗಳ ಮೇಲೆ ಕುಹಕ, ಕುತ್ಸಿತ ದಾಳಿ!

​ಇದು ಆಳವಾದ ಪ್ರಜಾಪ್ರಭುತ್ವ ವಿರೋಧಿ ಆಟದ ಬಯಲನ್ನು ಸೃಷ್ಟಿಸುತ್ತದೆ. ಆಳುವ ಪಕ್ಷ ಹಲವು ಪಟ್ಟು ಶ್ರೀಮಂತವಾಗಿದ್ದರೂ ಸರಕಾರಿ ಸೌಲಭ್ಯ, ಸಾರ್ವಜನಿಕ ಹಣವನ್ನು ಬಳಸಿದರೆ, ವಿರೋಧ ಪಕ್ಷಗಳ ನಾಯಕರು ನಿಯಮಿತ ವಾಣಿಜ್ಯ ವಿಮಾನ ವೇಳಾಪಟ್ಟಿಗಳು, ಬಾಡಿಗೆ ಹೆಲಿಕಾಪ್ಟರ್‌ಗಳು ಮತ್ತು ಸ್ಥಳೀಯ ಪೊಲೀಸ್ ಅನುಮತಿಗಳಿಗೆ ಪಕ್ಷದ ಸೊರಗಿದ ಖಜಾನೆಯಿಂದ ಪಾವತಿಸಬೇಕಾಗುತ್ತದೆ. ಈ ರೀತಿ ದುರುಪಯೋಗವಾಗುವ ಹಣವನ್ನು, ಮೋದಿಯ ಶೋಕಿಯ ವೆಚ್ಚವನ್ನು ಭರಿಸುವವರು ಯಾರು? ತೆರಿಗೆ ಭರಿಸುವ, ದೇಶ ಪ್ರೇಮದ ಹೆಸರಿನಲ್ಲಿ ಹೊಟ್ಟೆಕಟ್ಟಿ, ಕಷ್ಟ ಸಹಿಸಿ ಎಂದು ಅದೇ ಮೋದಿಯಿಂದ ಹೇಳಿಸಿಕೊಳ್ಳುವ ಅದೇ ನಾಗರಿಕರು!

​”ಮೋದಿ ಎಂಬಾತ- ನೀವು ತಾನು ಹೇಳುವಂತೆ ಬದುಕಬೇಕೆಂದು ಬಯಸುತ್ತಾನೆ, ಆತ ಸ್ವತಃ ಬದುಕುವಂತೆ ಅಲ್ಲ!” ಎಂಬುದೇ ಬೂಟಾಟಿಕೆಯ ಅರ್ಥವಾಗಿದೆ. “ಅಮೃತ ಕಾಲ ಬರಲಿದೆ, ಅಚ್ಛೇದಿನ್ ಬರಲಿದೆ” ಎಂದು ಜನರ ಮುಂಗೈಗೆ ಬೆಲ್ಲ ಸವರಿದ ಮೋದಿ, ಈಗ ಏಕಾಏಕಿಯಾಗಿ ಕೈಕಾಲು ಬಿಟ್ಟು, “ಕಠಿಣ ಬಡತನದ ದಿನಗಳು ಬರಲಿವೆ” ಎಂದು ಅದೇ ನಾಲಗೆಯಿಂದ ಹೇಳುತ್ತಿರುವುದು ಸ್ವಂತ ವೈಫಲ್ಯದ ಮತ್ತು ದೇಶವನ್ನು ಪ್ರಪಾತದ ಅಂಚಿಗೆ ತಲಪಿಸಿರುವ ಸೂಚನೆಯೇ?! ಮುಖ್ಯ ಪ್ರಶ್ನೆ ಎಂದರೆ, ಪಾಕಿಸ್ತಾನವನ್ನು ಹಾಗೆ ಮಾಡುತ್ತೇವೆ, ಬಲಿಷ್ಟ ಚೀನಾಕ್ಕೆ ಹೀಗೆ ಮಾಡುತ್ತೇವೆ ಎಂದು ಬೊಗಳೆ ಬಿಡುವ ಮೋದಿ ಸರಕಾರವು- ಭಾರತ ನೇರವಾಗಿ ಭಾಗಿಯಾಗದ ಒಂದು ಯುದ್ಧದಿಂದಲೇ ಮೋದಿ ಇಷ್ಟು ಕಂಗಾಲಾದರೆ, ಒಂದು ವೇಳೆ ದೇಶವು ಇರಾನ್ ಅಥವಾ ಉಕ್ರೇನಿನಂತೆ ದೀರ್ಘಕಾಲದ ಯುದ್ಧವನ್ನು ಎದುರಿಸಬೇಕಾಗಿ ಬಂದರೆ ಏನು ಮಾಡಬಹುದು ಎಂದು- ಯುದ್ಧವನ್ನು ಕಂಪ್ಯೂಟರ್ ಆಟದಂತೆ ಸಂಭ್ರಮಿಸುವ ಗೋದಿ ಮಾಧ್ಯಮಗಳು ಮತ್ತು ಮೋದಿಯ ಅಂಧ ಭಕ್ತರು ಹೇಳಬೇಕು. ಯಾಕೆಂದರೆ, ದೇಶ ಮತ್ತು ದೇಶಪ್ರೇಮ ಯಾರೊಬ್ಬನ, ಯಾವುದೇ ಪಕ್ಷ ಅಥವಾ ಸಂಘಟನೆಯ ಸ್ವಂತ ಪಿತ್ರಾರ್ಜಿತ ಆಸ್ತಿಯಲ್ಲ. ಅದು ಪ್ರತಿಯೊಬ್ಬ ಭಾರತೀಯರದ್ದು!

You cannot copy content of this page

Exit mobile version