ಸಕಲೇಶಪುರ : ತಾಲೂಕಿನ ಹಾನುಬಾಳ್ ಹೋಬಳಿಯಲ್ಲಿ ರೆಸಾರ್ಟ್ ಮಾಲಿಕನೋರ್ವ ತನ್ನ ಸಹಚರರೊಂದಿಗೆ ಅಕ್ರಮವಾಗಿ ಅಭಯಾರಣ್ಯಕ್ಕೆ ಪ್ರವೇಶಿಸಿ ಕಾಡುಕುರಿಯೊಂದನ್ನು ಬೇಟೆಯಾಡಿದ ಪ್ರಕರಣ ಹೊರ ಬಂದ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 4 ಅಡಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಹಾನುಬಾಳು ಹೋಬಳಿಯ ಬಾಳೆಕೋಲು ರೆಸಾರ್ಟ್ ನ ಅವಿನಾಶ್, ಜೀವನ್, ಕೀರ್ತನ್, ಶಿಶಿರ ಎಂಬುವರು ಬುಧವಾರ ರಾತ್ರಿ ಸೆಕ್ಷನ್ 4 ಅಡಿ ಬರುವ ಶೋಲಾ ಅರಣ್ಯದಡಿ ಕಾಡುಕುರಿಯೊಂದನ್ನು ಬೇಟೆಯಾಡಿದ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದರು.
ಅವಿನಾಶ್, ಜೀವನ್,ಕೀರ್ತನ್ ಎಂಬುವರು ಪರಾರಿಯಾಗಿದ್ದು ಶಿಶಿರ್ ಎಂಬಾತನನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದೆ. ಒಂದೂವರೆ ಲಕ್ಷದ ಮೌಲ್ಯದ ಒಂದು ಬಂದೂಕು, ಒಂದು ಪಿಕ್ ಅಪ್ ವಾಹನ, ಒಂದು ಆಲ್ಟೋ ಕಾರು , ಒಂದು ಬೈಕ್, ಒಂದು ಮರ ಕತ್ತರಿಸುವ ಯಂತ್ರ , 12 ಕೆ.ಜಿ ಕುರಿ ಮಾಂಸವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಎ.ಸಿ.ಎಫ್ ಸುರೇಶ್ ಬಾಬು, ರೇಂಜರ್ ಶಿಲ್ಪ, ಉಪ ಅರಣ್ಯಾಧಿಕಾರಿಗಳಾದ ಮೋಹನ್ ಕುಮಾರ್, ವೇಣುಗೋಪಾಲ್, ಸಿಬ್ಬಂದಿಗಳಾದ ಉಮೇಶ್, ಯೋಗೇಶ್, ಮಹಾದೇವ್, ಮುಂತಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.