ಎಸ್ಸೆಸ್ಸೆಲ್ಸಿ ಓದುತ್ತಿದ್ದ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಬಂಟ್ವಾಳ ಭಾಗದ ಬಿಜೆಪಿ ಮುಖಂಡನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ. ಆರೋಪಿ ಕ್ಷೇತ್ರದ ಪ್ರಭಾವಿ ಬಿಜೆಪಿ ಮುಖಂಡ ಆಗಿರುವ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರು ತಡವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬ ಬಗ್ಗೆಯೂ ಮಾತುಗಳು ಕೇಳಿ ಬಂದಿವೆ.
ಎಸ್ಸೆಸ್ಸೆಲ್ಸಿ ಓದುತ್ತಿದ್ದ 16 ವರ್ಷದ ಬಾಲಕಿಗೆ ಸುಳ್ಳು ಆಮಿಷ ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಕೃತ್ಯವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾಗಿ ಆರೋಪಿ ಪ್ರಯತ್ನಿಸಿದ್ದ ಎಂಬ ಮಾಹಿತಿಯೂ ಕೇಳಿಬಂದಿದೆ. ಬಂಟ್ವಾಳ ಭಾಗದ ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕನೂ ಆಗಿರುವ ಬಿಜೆಪಿ ಮುಖಂಡ ಮಹೇಶ್ ಭಟ್ ಎಂಬ ವ್ಯಕ್ತಿ ಜಿಲ್ಲಾ ವ್ಯಾಪ್ತಿಯಲ್ಲೂ ಸಾಕಷ್ಟು ಪ್ರಭಾವ ಹೊಂದಿರುವ ಹಿನ್ನೆಲೆಯಲ್ಲಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದ.
ಆದರೆ ತಡವಾಗಿಯಾದರೂ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ. ಆರೋಪಿತ ವ್ಯಕ್ತಿಯ ಹಿಡಿಯಲು ಶೋಧ ಕಾರ್ಯ ನಡೆದಿದೆ.
ಬಾಲಕಿಯ ಪೋಷಕರು ಆರೋಪಿಗೆ ಸೇರಿದ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಈ ನಡುವೆ, ಕಳೆದ ಜನವರಿ ತಿಂಗಳಲ್ಲಿ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗುತ್ತಿದೆ.
ಎರಡು ತಿಂಗಳಿನಿಂದ ಬಾಲಕಿ ಶಾಲೆಗೆ ಹೋಗಿರಲಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆ ಇದ್ದರೂ ಯಾಕೆ ಶಾಲೆಗೆ ಬಂದಿಲ್ಲವೆಂದು ಶಾಲೆಯ ಶಿಕ್ಷಕರು ವಿಚಾರಿಸುವ ಸಲುವಾಗಿ ಆಕೆಯ ಮನೆಗೆ ತೆರಳಿದ್ದರು.
ಈ ವೇಳೆ, ಬಾಲಕಿಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಶಿಕ್ಷಕರನ್ನು ನೋಡಲು ಬಿಟ್ಟಿರಲಿಲ್ಲ. ಆರೋಪಿ ಮಹೇಶ್ ಭಟ್ ರಾಜಕೀಯ ಪ್ರಭಾವದ ಕಾರಣಕ್ಕೆ ಶಿಕ್ಷಕರಿಗೆ ಬಾಲಕಿಯ ಭೇಟಿಗೂ ಅವಕಾಶ ನೀಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಅಸ್ವಸ್ಥ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದ ವೇಳೆ ಘಟನೆ ಬೆಳಕಿಗೆ ಬಂದಿದೆ. ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿದ್ದರಿಂದ ವಿಷಯ ಪೊಲೀಸ್ ಠಾಣೆಗೆ ತಿಳಿದು ವಿಟ್ಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆದರೆ ಮೇಲ್ನೋಟಕ್ಕೆ ಈ ಪ್ರಕರಣ ಹಾದಿ ತಪ್ಪುವ ಸಾಧ್ಯತೆ ಇದೆ ಎನ್ನುವುದು ಸ್ಥಳೀಯರ ಅಭಿಪ್ರಾಯ. ಯಾಕೆಂದರೆ ಪೊಲೀಸರು ಪ್ರಕರಣ ದಾಖಲಿಸಿರುವುದೂ ಸಹ ತೀರಾ ಗಂಭೀರವಾಗಿ ವಿಷಯ ದಾಖಲಿಸಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
“ನೀನು ನನ್ನ ಜೊತೆ ಗುಡ್ಡಕ್ಕೆ ಬರ್ತೀಯಾ” ಎಂದಷ್ಟೇ ಆರೋಪಿ ಸಂತ್ರಸ್ತೆಯನ್ನು ಕೇಳಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ಸಧ್ಯ ಈ ಬಗ್ಗೆ ಯಾವುದೇ ಸ್ಥಳೀಯ ನಾಯಕರೂ ದನಿ ಎತ್ತದಿರುವುದು ಪ್ರಕರಣ ಹಾದಿ ತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ.