Wednesday, October 2, 2024

ಸತ್ಯ | ನ್ಯಾಯ |ಧರ್ಮ

ಜಗ್ಗಿ ವಾಸುದೇವ್ ಇಶಾ ಫೌಂಡೇಶನ್ ಮೇಲೆ ಪೊಲೀಸರ ದಾಳಿ

ಬೆಂಗಳೂರು: ತಮಿಳುನಾಡು ಪೊಲೀಸರು ಮಂಗಳವಾರ ಕೊಯಮತ್ತೂರು ಜಿಲ್ಲೆಯ ತೊಂಡಮುತ್ತೂರಿನಲ್ಲಿರುವ ಸ್ವಯಂಘೋಷಿತ ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್‌ನಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ, ಮದ್ರಾಸ್ ಹೈಕೋರ್ಟ್ ಈ ಸಂಸ್ಥೆಯ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳ ಕುರಿತು ವರದಿಯನ್ನು ಕೋರಿದ ಒಂದು ದಿನದ ನಂತರ ಇದು ನಡೆದಿದೆ.

ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ನೇತೃತ್ವದಲ್ಲಿ ಸುಮಾರು 150 ಪೊಲೀಸ್ ಅಧಿಕಾರಿಗಳು ಮತ್ತು ಮೂವರು ಉಪ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒಳಗೊಂಡ ತಂಡ ಶೋಧಕಾರ್ಯ ಆರಂಭಿಸಿದೆ. ಇಶಾ ಫೌಂಡೇಶನ್‌ನ ಸಿಬ್ಬಂದಿಗಳ ಪರಿಶೀಲನೆ ನಡೆಸಲಾಯಿತು ಮತ್ತು ಅದರ ಭಾಗವಾಗಿ ಕೊಠಡಿಗಳನ್ನು ಶೋಧಿಸಲಾಗಿದೆ ಎಂದು ಹೆಸರು ಹೇಳಲು ಬಯಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಸೋಮವಾರ ಎಸ್.ಎಂ.ಸುಬ್ರಮಣ್ಯಂ ಮತ್ತು ವಿ.ಶಿವಜ್ಞಾನಂ ನ್ಯಾಯಪೀಠವು ಎಸ್.ಕಾಮರಾಜ್ ಎಂಬ ನಿವೃತ್ತ ಪ್ರಾಧ್ಯಾಪಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿತು.

ತಮ್ಮ ಇಬ್ಬರು ಪುತ್ರಿಯರಾದ 42 ವರ್ಷದ ಗೀತಾ ಕಾಮರಾಜ್ ಮತ್ತು 39 ವರ್ಷದ ಲತಾ ಕಾಮರಾಜ್ ಅವರನ್ನು ಫೌಂಡೇಶನ್‌ನಲ್ಲಿರುವ ಯೋಗ ಕೇಂದ್ರದಲ್ಲಿ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಎಸ್ ಕಾಮರಾಜ್, ಈ ಸಂಸ್ಥೆಯು ವ್ಯಕ್ತಿಗಳ ಬ್ರೈನ್ ವಾಶ್ ಮಾಡುತ್ತಿದೆ, ಅವರನ್ನು ಸನ್ಯಾಸಿಗಳಾಗಿ ಪರಿವರ್ತಿಸುತ್ತಿದೆ ಮತ್ತು ಅವರ ಕುಟುಂಬಗಳೊಂದಿಗೆ ಅವರ ಸಂಪರ್ಕವನ್ನು ನಿರ್ಬಂಧಿಸುತ್ತಿದೆ ಎಂದು ಆರೋಪ ಮಾಡಿದ್ದರು.

ಯುನೈಟೆಡ್ ಕಿಂಗ್‌ಡಮ್‌ನ ವಿಶ್ವವಿದ್ಯಾನಿಲಯದಿಂದ ಮೆಕಾಟ್ರಾನಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ತಮ್ಮ ಹಿರಿಯ ಮಗಳು 2008 ರಲ್ಲಿ ತನ್ನ ಪತಿಗೆ ವಿಚ್ಛೇದನ ನೀಡುವ ಮೊದಲು ಗಣನೀಯ ಸಂಬಳವನ್ನು ಪಡೆಯುತ್ತಿದ್ದರು ಎಂದು ನಿವೃತ್ತ ಪ್ರಾಧ್ಯಾಪಕ ಕಾಮರಾಜ್ ಹೇಳಿದ್ದರು. ವಿಚ್ಛೇದನದ ನಂತರ ಅವರು ಈಶಾ ಫೌಂಡೇಶನ್‌ನಲ್ಲಿ ಯೋಗ ತರಗತಿಗಳಿಗೆ ಹಾಜರಾಗಲು ಪ್ರಾರಂಭಿಸಿದರು.

ಇದಾದ ಮೇಲೆ ಅಕ್ಕನಂತೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ತಂಗಿಯೂ ಈಶಾ ಫೌಂಡೇಶನ್‌ಗೆ ಹೋಗಲು ಆರಂಭಿಸಿದರು, ಕೊನೆಗೆ ಅಲ್ಲಿಯೇ ಶಾಶ್ವತವಾಗಿ ಉಳಿಯಲು ನಿರ್ಧರಿಸಿದರು ಎಂದು ಕಾಮರಾಜ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಫೌಂಡೇಶನ್ ಅವರ ಹೆಣ್ಣುಮಕ್ಕಳಿಗೆ‌ ನೀಡಿದ ಆಹಾರ ಮತ್ತು ಔಷಧಿಗಳನ್ನು ಅವರ ಅರಿವಿನ ಸಾಮರ್ಥ್ಯಗಳನ್ನು ಮಂದಗೊಳಿಸಿತು, ಇದು ಅವರ ಕುಟುಂಬದೊಂದಿಗೆ ಸಂಬಂಧವನ್ನು ಕಡಿತಗೊಳಿಸಲು ಕಾರಣವಾಯಿತು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ವಿಚಾರಣೆಯ ಸಂದರ್ಭದಲ್ಲಿ, ವಾಸುದೇವ್ ಅವರ ಸ್ವಂತ ಮಗಳನ್ನು ಮದುವೆಯಾಗಿ “ಚೆನ್ನಾಗಿ ನೆಲೆಸಿದ್ದಾಳೆ” ಎಂಬುದು ತಿಳಿದ ನಂತರ, ಇತರ ಯುವತಿಯರ ತಲೆ ಕೆಡಿಸಿ ಸನ್ಯಾಸಿಗಳಂತೆ ಬದುಕಲು ಏಕೆ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಪೀಠವು ಕೇಳಿತ್ತು.  

ಆದರೆ ನ್ಯಾಯಾಲಯದಲ್ಲಿ ಹಾಜರಾಗಿದ್ದ ಅರ್ಜಿದಾರರ ಪುತ್ರಿಯರು, ತಮ್ಮ ಸ್ವ ಇಚ್ಛೆಯಿಂದ ಯೋಗ ಕೇಂದ್ರದಲ್ಲಿ ವಾಸವಿದ್ದು, ಯಾರೂ ತಮ್ಮ ಇಚ್ಛೆಗೆ ವಿರುದ್ಧವಾಗಿ ಬಂಧಿಸಿಲ್ಲ ಎಂದು ಹೇಳಿದ್ದಾರೆ..

ಈಶಾ ಫೌಂಡೇಶನ್‌ನ ವಕೀಲ ಕೆ ರಾಜೇಂದ್ರ ಕುಮಾರ್, ವಯಸ್ಕರು ತಮ್ಮ ಜೀವನದಲ್ಲಿ ತಮ್ಮದೇ ಆದ ಮಾರ್ಗವನ್ನು ಆರಿಸಿಕೊಳ್ಳಲು ಸ್ವತಂತ್ರರು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಮಹಿಳೆಯರು ತಮ್ಮ ಸ್ವಂತ ಇಚ್ಛೆಯ ಮೇರೆಗೆ ಕೆಲಸ ಮಾಡುತ್ತಿರುವುದರಿಂದ ಅಂತಹ ವೈಯಕ್ತಿಕ ನಿರ್ಧಾರಗಳ ಬಗ್ಗೆ ವಿಚಾರಣೆ ಅನಗತ್ಯ ಎಂದು ಅವರು ಹೇಳಿದರು.

ಇದಕ್ಕೆ “ನೀವು ಒಂದು ನಿರ್ದಿಷ್ಟ ಪಾರ್ಟಿಗಾಗಿ ಇಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ ನಿಮಗೆ ಇದು ಅರ್ಥವಾಗುವುದಿಲ್ಲ” ಎಂದು ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರತಿಕ್ರಿಯಿಸಿದರು. ಆದರೆ ಈ ನ್ಯಾಯಾಲಯ ಯಾರ ಪರವೂ ಅಲ್ಲ, ವಿರುದ್ಧವೂ ಅಲ್ಲ. ನಮ್ಮ ಮುಂದಿರುವ ದಾವೆದಾರರಿಗೆ ನ್ಯಾಯವನ್ನು ನೀಡುವುದನ್ನು ಮಾತ್ರ ನಾವು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.

ಹೆಣ್ಣುಮಕ್ಕಳು ಮತ್ತು ಅವರ ಹೆತ್ತವರ ನಡುವಿನ ಸ್ಪಷ್ಟವಾದ ಹಗೆತನವನ್ನು ಗಮನಿಸಿದ ಸುಬ್ರಮಣಿಯಂ: “ನೀವು [ಅರ್ಜಿದಾರರ ಹೆಣ್ಣುಮಕ್ಕಳು] ಆಧ್ಯಾತ್ಮಿಕತೆಯ ಹಾದಿಯಲ್ಲಿದ್ದೀರಿ ಎಂದು ಹೇಳಿಕೊಳ್ಳುತ್ತೀರಿ. ನಿಮ್ಮ ತಂದೆ ತಾಯಿಯರನ್ನು ನಿರ್ಲಕ್ಷಿಸುವುದು ಪಾಪ ಎಂದು ನಿಮಗೆ ಅನಿಸುವುದಿಲ್ಲವೇ? ‘ಎಲ್ಲರನ್ನು ಪ್ರೀತಿಸಿ ಮತ್ತು ಯಾರನ್ನೂ ದ್ವೇಷಿಸಬೇಡಿ’ ಎಂಬುದು ಭಕ್ತಿಯ ತತ್ವವಾಗಿದೆ ಆದರೆ ನಿಮ್ಮಲ್ಲಿ ನಿಮ್ಮ ಹೆತ್ತವರ ಬಗ್ಗೆ ತುಂಬಾ ದ್ವೇಷವನ್ನು ನಾವು ನೋಡಬಹುದು. ನೀವು ಅವರನ್ನು ಗೌರವಯುತವಾಗಿ ಸಂಬೋಧಿಸುತ್ತಿಲ್ಲ,” ಎಂದು ಕೇಳಿದ್ದಾರೆ.

ಅರ್ಜಿದಾರರ ಪರ ವಕೀಲ ಎಂ ಪುರುಷೋತ್ತಮನ್ ಅವರು, ಫೌಂಡೇಶನ್‌ಗೆ ಸಂಬಂಧಿಸಿದಂತೆ ಈ ಹಿಂದೆ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದವು, ಇದು ದುರ್ನಡತೆ ಮತ್ತು ಕಾನೂನು ಉಲ್ಲಂಘನೆಯನ್ನು ಸೂಚಿಸುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಈಶಾ ಫೌಂಡೇಶನ್‌ ವಿರುದ್ಧ ಬಾಕಿ ಉಳಿದಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳ ಪಟ್ಟಿಯನ್ನು ಅಕ್ಟೋಬರ್ 4 ರೊಳಗೆ ಸಲ್ಲಿಸುವಂತೆ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಇ ರಾಜ್ ತಿಲಕ್ ಅವರಿಗೆ ನ್ಯಾಯಾಲಯ ಸೂಚಿಸಿದೆ.

ಇದಕ್ಕೆ ಪ್ರತಿಕ್ರಿಯಿಸುತ್ತಾ ಈಶಾ ಫೌಂಡೇಶನ್‌ “ಜನರನ್ನು ಮದುವೆಯಾಗಲು ಅಥವಾ ಸನ್ಯಾಸಿತ್ವವನ್ನು ತೆಗೆದುಕೊಳ್ಳಲು ನಾವು ಹೇಳುವುದಿಲ್ಲ; ಇವು ವೈಯಕ್ತಿಕ ಆಯ್ಕೆಗಳಾಗಿವೆ. ಯೋಗ ಕೇಂದ್ರವು ಅನೇಕ ವ್ಯಕ್ತಿಗಳಿಗೆ ಆತಿಥ್ಯ ನೀಡುತ್ತದೆ, ಕೆಲವರು ಮಾತ್ರ ಸನ್ಯಾಸಿತ್ವವನ್ನು ಆರಿಸಿಕೊಂಡಿದ್ದಾರೆ ಎಂದು ತಿಳಿಸಿದೆ.

“ಈ ಹಿಂದೆ ಇಶಾ ಫೌಂಡೇಶನ್ ನಿರ್ಮಿಸುತ್ತಿರುವ ಸ್ಮಶಾನದ ಸುತ್ತಲಿನ ಸಂಗತಿಗಳ ಬಗ್ಗೆ ವಿಚಾರಿಸಲು ಸತ್ಯಶೋಧನಾ ಸಮಿತಿ ಎಂಬ ಸುಳ್ಳು ನೆಪದಲ್ಲಿ ಈ ಅರ್ಜಿದಾರರು ಇತರರೊಂದಿಗೆ ನಮ್ಮ ಆವರಣಕ್ಕೆ ಅತಿಕ್ರಮ ಪ್ರವೇಶ ಮಾಡಲು ಪ್ರಯತ್ನಿಸಿದರು ಮತ್ತು ನಂತರ ಈಶಾ ಯೋಗ ಕೇಂದ್ರದ ಜನರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದರು,” ಎಂದು ಈಶಾ ಫೌಂಡೇಶನ್ ಹೇಳಿಕೆಯಲ್ಲಿ ಹೇಳಲಾಗಿದೆ.

“ಇದರ ವಿರುದ್ಧ ಗೌರವಾನ್ವಿತ ಮದ್ರಾಸ್ ಹೈಕೋರ್ಟ್ ಪೊಲೀಸರಿಂದ ಅಂತಿಮ ವರದಿಯನ್ನು ಸಲ್ಲಿಸಲು ತಡೆಯಾಜ್ಞೆ ನೀಡಿದೆ. ಇದನ್ನು ಹೊರತುಪಡಿಸಿ, ಪ್ರತಿಷ್ಠಾನದ ವಿರುದ್ಧ ಬೇರೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ,” ಎಂದು ಅದು ಹೇಳಿದೆ.

ಪೋಲೀಸರ ದಾಳಿಯ ಬಗ್ಗೆ ಫೌಂಡೇಶನ್ ಇದು ಕೇವಲ ತನಿಖೆ ಎಂದು ಹೇಳಿದೆ. “ಅವರು [ಪೊಲೀಸರು] ನಿವಾಸಿಗಳು ಮತ್ತು ಸ್ವಯಂಸೇವಕರನ್ನು ವಿಚಾರಿಸುತ್ತಿದ್ದಾರೆ, ಜೀವನಶೈಲಿಯನ್ನು ಅರ್ಥಮಾಡಿಕೊಳ್ಳುತ್ತಾರೆ, ಅವರು ಹೇಗೆ ಬರುತ್ತಾರೆ ಮತ್ತು ಉಳಿಯುತ್ತಾರೆ ಇತ್ಯಾದಿಗಳ ಬಗ್ಗೆ ಅರ್ಥಮಾಡಿಕೊಳ್ಳುತ್ತಿದ್ದಾರೆ,” ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page