Tuesday, October 1, 2024

ಸತ್ಯ | ನ್ಯಾಯ |ಧರ್ಮ

ʼನಿಮ್ಮ ಮಗಳಿಗೆ ಮದುವೆ ಮಾಡಿಸಿ, ಬೇರೆಯವರ ಹೆಣ್ಣು ಮಕ್ಕಳನ್ನು ಏಕೆ ಸನ್ಯಾಸಿನಿಯರನ್ನಾಗಿ ಮಾಡುತ್ತಿದ್ದೀರಿ?ʼ ಸದ್ಗುರು ಜಗ್ಗಿ ವಾಸುದೇವ್‌ಗೆ ಹೈಕೋರ್ಟ್‌ ಪ್ರಶ್ನೆ

ಚೆನ್ನೈ: ಸದ್ಗುರು ಎಂದೇ ಖ್ಯಾತರಾಗಿರುವ ಮೈಸೂರು ಮೂಲದ ಈಶಾ ಫೌಂಡೇಷನ್‌ ಮುಖ್ಯಸ್ಥ ಜಗ್ಗಿ ವಾಸುದೇವ್‌ ವಿರುದ್ಧ ದಾಖಲಾಗಿದ್ದ ದೂರೊಂದರ ವಿಚಾರಣೆಯನ್ನು ಇಂದು ಚೆನ್ನೈ ಹೈಕೋರ್ಟ್‌ ನಡೆಸಿತು.

ದೂರಿನಂತೆ ಜಗ್ಗಿವಾಸುದೇವ್‌ ತಮಿಳುನಾಡಿನ ಕೊಯಮತ್ತೂರು ಮೂಲದ ವ್ಯಕ್ತಿಯೊಬ್ಬರ ಇಬ್ಬರ ಹೆಣ್ಣು ಮಕ್ಕಳನ್ನು ಬ್ರೈನ್‌ ವಾಷ್‌ ಮಾಡಿ ಸನ್ಯಾಸಿನಿಯರನ್ನಾಗಿ ಮಾಡಿದ್ದಾರೆ. ಇದರಿಂದಾಗಿ ತಮ್ಮ ಬದುಕು ದುಸ್ತರವಾಗಿದೆ ಎಂದು ನೊಂದು ತಂದೆ ಕೋರ್ಟ್‌ ಮೆಟ್ಟಿಲು ಹತ್ತಿದ್ದಾರೆ.

ಕೊಯಮತ್ತೂರಿನ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಪ್ರೊಫೆಸರ್ ಎಸ್ ಕಾಮರಾಜ್ ಅವರು ಪ್ರಕರಣ ದಾಖಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 42 ಮತ್ತು 39 ವರ್ಷದ ಇಬ್ಬರು ಮಹಿಳೆಯರು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಇಬ್ಬರೂ ಮಹಿಳೆಯರು ತಾವು ತಾವೇ ಬಯಸಿ ಇಲ್ಲಿದ್ದು, ತಮ್ಮನ್ನು ಯಾರೂ ಬಲವಂತವಾಗಿ ಇರಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. ಆದರೆ ಮಕ್ಕಳ ಅಗಲಿಕೆಯಿಂದ ತಮ್ಮ ಬದುಕು ದುಸ್ತರವಾಗಿದೆ ಎಂದು ಪೋಷಕರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ವಾದ ವಿವಾದಗಳನ್ನು ಆಲಿಸಿದ ನಂತರ, ಈ ಪ್ರಕರಣದಲ್ಲಿ ಇನ್ನಷ್ಟು ಆಳವಾದ ತನಿಖೆ ನಡೆಯಬೇಕು ಎಂದು ನ್ಯಾಯಾಧೀಶರು ಸೂಚಿಸಿದರು.

ಇಶಾ ಫೌಂಡೇಷನ್ನಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನೂ ಪಟ್ಟಿ ಮಾಡುವಂತೆ ಪೊಲೀಸರಿಗೆ ಸೂಚಿಸಿದರು. ನ್ಯಾಯಮೂರ್ತಿ ಶಿವಜ್ಞಾನಂ ಅವರು “ತನ್ನ ಮಗಳಿಗೆ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿರುವ ಜಗ್ಗಿ ವಾಸುದೇವ್‌ ಅವರು ಇನ್ನೊಬ್ಬರ ಮಗಳು ಸನ್ಯಾಸಿಯಾಗಬೇಕೆಂದು ಯಾಕೆ ಬಯಸುತ್ತಾರೆ ಎನ್ನುವುದನ್ನು ನಾನು ತಿಳಿಯಬೇಕು” ಎಂದು ಹೇಳಿದ್ದಾರೆ.

ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್ ಎಂ ಸುಬ್ರಮಣ್ಯಂ ಮತ್ತು ವಿ ಶಿವಜ್ಞಾನ್ ಅವರನ್ನೊಳಗೊಂಡ ಪೀಠ ನಡೆಸಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page