ನ್ಯಾಯಾಂಗ ನಿಂದನೆ ಪ್ರಕರಣ: ಸೌಜನ್ಯ ಮಾವ ವಿಠಲ ಗೌಡ ಬಂಧನಕ್ಕೆ ಪೊಲೀಸರ ಶೋಧ

ಬೆಳ್ತಂಗಡಿ : ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ತಲೆಮರೆಸಿಕೊಂಡಿರುವ ಧರ್ಮಸ್ಥಳದ ಸೌಜನ್ಯರ ಮಾವ ವಿಠಲ ಗೌಡರ ಬಂಧನಕ್ಕಾಗಿ ಪೊಲೀಸರು ಬೆಳ್ತಂಗಡಿ ತಾಲೂಕಿನ ವಿವಿಧ ಭಾಗಗಳಲ್ಲಿ ಶುಕ್ರವಾರ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದರು.

ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಬೆಂಗಳೂರಿನ ನ್ಯಾಯಾಲಯವು ವಿಠಲ ಗೌಡರಿಗೆ ಒಂದು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ನ್ಯಾಯಾಲಯ ನಿರ್ಬಂಧ ವಿಧಿಸಿದ್ದರೂ, ಅದನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಈ ಶಿಕ್ಷೆ ಪ್ರಕಟವಾಗಿತ್ತು ಎಂದು ತಿಳಿದುಬಂದಿದೆ.

ಶಿಕ್ಷೆಯ ಆದೇಶ ಹೊರಬಿದ್ದ ನಂತರ ವಿಠಲ ಗೌಡರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ಅವರನ್ನು ಬಂಧಿಸುವ ಉದ್ದೇಶದಿಂದ ಬೆಂಗಳೂರಿನಿಂದ ಆಗಮಿಸಿದ ಪೊಲೀಸ್ ತಂಡ ನ್ಯಾಯಾಲಯದ ಅಧಿಕಾರಿಗಳ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಿತು.

ಈ ವೇಳೆ ಧರ್ಮಸ್ಥಳ ಸಮೀಪದ ಪಾಂಗಳದಲ್ಲಿರುವ ವಿಠಲ ಗೌಡರ ನಿವಾಸ ಸೇರಿದಂತೆ ಅವರ ಆಪ್ತರ ಮನೆಗಳು ಮತ್ತು ಸಂಪರ್ಕ ಹೊಂದಿರುವ ಹಲವು ಸ್ಥಳಗಳಲ್ಲಿ ಪೊಲೀಸರು ತಪಾಸಣೆ ನಡೆಸಿದರು. ಆದಾಗ್ಯೂ, ಕಾರ್ಯಾಚರಣೆಯ ಅಂತ್ಯದ ವೇಳೆಯೂ ವಿಠಲ ಗೌಡರ ಸುಳಿವು ದೊರೆತಿಲ್ಲ ಎಂದು ಮೂಲಗಳು ತಿಳಿಸಿವೆ.

ಇನ್ನೊಂದೆಡೆ, ತಮ್ಮ ವಿರುದ್ಧದ ಶಿಕ್ಷೆಯ ಆದೇಶವನ್ನು ಪ್ರಶ್ನಿಸಿ ವಿಠಲ ಗೌಡರು ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದಾಗಿ ತಿಳಿದುಬಂದಿದ್ದು, ಆ ಅರ್ಜಿಯ ವಿಚಾರಣೆ ಇನ್ನೂ ನಡೆಯಬೇಕಿದೆ. ಹೀಗಾಗಿ ಪ್ರಕರಣವು ಕಾನೂನು ಹೋರಾಟದ ಹೊಸ ಹಂತಕ್ಕೆ ಕಾಲಿಟ್ಟಿದೆ.

ವಿಠಲ ಗೌಡರ ಬಂಧನಕ್ಕಾಗಿ ಮುಂದಿನ ದಿನಗಳಲ್ಲಿಯೂ ಶೋಧ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಸೂಚಿಸಿವೆ.

Related Articles

ಇತ್ತೀಚಿನ ಸುದ್ದಿಗಳು