ಬಾಂಗ್ಲಾದೇಶ : ದಿಢೀರ್ ರಾಜಕೀಯ ವಿದ್ಯಮಾನಗಳು ಸಂಭವಿಸಿರುವ ಹಿನ್ನಲೆ, ದೇಶದ ನೂತನ ಅಧ್ಯಕ್ಷರ ಆಯ್ಕೆಗೆ ಬರುವ ಆಗಸ್ಟ್ 20ರಂದು ಚುನಾವಣೆ ನಡೆಯಲಿದೆ ಎಂದು ಬಾಂಗ್ಲಾದೇಶ (Bangladesh) ಚುನಾವಣಾ ಆಯೋಗ (Election Commission) ಗುರುವಾರ ಅಧಿಕೃತವಾಗಿ ಘೋಷಿಸಿದೆ. ಹಾಲಿ ಅಧ್ಯಕ್ಷರಾಗಿದ್ದ ಮೊಹಮ್ಮದ್ ಶಹಾಬುದ್ದೀನ್ (Mohammed Shahabuddin) ಅವರು ತಮ್ಮ ಐದು ವರ್ಷಗಳ ಅಧಿಕಾರಾವಧಿ ಪೂರ್ಣಗೊಳ್ಳಲು ಇನ್ನೂ ಸುಮಾರು ಎರಡು ವರ್ಷಗಳು ಬಾಕಿ ಇರುವಾಗಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಚುನಾವಣೆಯನ್ನು ಕರೆಯಲಾಗಿದೆ.
ಶೇಖ್ ಹಸೀನಾ ಜೊತೆ ಸಂಪರ್ಕ ಹೊಂದಿದ್ರಾ ಶಹಾಬುದ್ದೀನ್?
ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ನಿಕಟವರ್ತಿಯಾಗಿದ್ದ 76 ವರ್ಷದ ಶಹಾಬುದ್ದೀನ್ ಅವರು ಆರೋಗ್ಯ ಸಮಸ್ಯೆಯನ್ನು ಉಲ್ಲೇಖಿಸಿ ಜುಲೈ 24ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಪ್ರಸ್ತುತ ದೇಶದ ಆಡಳಿತ ನಡೆಸುತ್ತಿರುವ ಪ್ರಧಾನಿ ತಾರಿಕ್ ರಹಮಾನ್ ನೇತೃತ್ವದ ಸರ್ಕಾರವು, ಸಾಂವಿಧಾನಿಕವಾಗಿ ಮುಖ್ಯಸ್ಥರಾಗಿದ್ದ ಶಹಾಬುದ್ದೀನ್ ಅವರ ಬಗ್ಗೆ ಅಸಮಾಧಾನ ಹೊಂದಿತ್ತು ಎಂಬ ಮಾತುಗಳೂ ಕೇಳಿಬಂದಿದ್ದವು. ಈ ನಡುವೆ ಶಹಾಬುದ್ದೀನ್ ಅವರು ಭಾರತದಲ್ಲಿ ತಂಗಿರುವ ಶೇಖ್ ಹಸೀನಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂಬ ವರದಿಗಳೂ ಹರಡಿದ್ದವು, ಆದರೆ ಶಹಾಬುದ್ದೀನ್ ಈ ಆರೋಪಗಳನ್ನು ಸಂಪೂರ್ಣ ಆಧಾರರಹಿತ ಎಂದು ತಳ್ಳಿಹಾಕಿದ್ದರು.
ಆಗಸ್ಟ್ 20ರಂದು ಮತದಾನ ಪ್ರಕ್ರಿಯೆ
ಚುನಾವಣಾ ವೇಳಾಪಟ್ಟಿಯ ಕುರಿತು ಮಾಹಿತಿ ನೀಡಿರುವ ಚುನಾವಣಾ ಆಯೋಗದ ಸಚಿವಾಲಯದ ಹಿರಿಯ ಕಾರ್ಯದರ್ಶಿ ಅಖ್ತರ್ ಅಹಮದ್, ಆಗಸ್ಟ್ 20ರಂದು ಮಧ್ಯಾಹ್ನ 2:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಜಾತೀಯ ಸಂಸತ್ (ಸಂಸತ್ ಭವನ) ಅಧಿವೇಶನ ಸಭಾಂಗಣದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ. ನಿಗದಿಪಡಿಸಿದ ವೇಳಾಪಟ್ಟಿಯಂತೆ ಆಸಕ್ತ ಅಭ್ಯರ್ಥಿಗಳು ಆಗಸ್ಟ್ 13ರಂದು ಬೆಳಿಗ್ಗೆ 10:00ರಿಂದ ಸಂಜೆ 4:00 ಗಂಟೆಯೊಳಗೆ ಮುಖ್ಯ ಚುನಾವಣಾ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬೇಕಾಗಿದೆ. ತದನಂತರ ಆಗಸ್ಟ್ 16ರಂದು ಬೆಳಿಗ್ಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಸ್ಪರ್ಧೆಯಿಂದ ಹಿಂದೆ ಸರಿಯಲು ಆಗಸ್ಟ್ 18ರ ಸಂಜೆ 4:00 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ.
ಸಂವಿಧಾನದ ನಿಯಮಾವಳಿಗಳ ಪ್ರಕಾರ ಪ್ರಸ್ತುತ ಸಂಸತ್ತಿನ ಸ್ಪೀಕರ್ ಹಫೀಜ್ ಉದ್ದೀನ್ ಅಹಮದ್ ಅವರು 90 ದಿನಗಳ ಅವಧಿಗೆ ಮಧ್ಯಂತರ ಅಥವಾ ಹಂಗಾಮಿ ಅಧ್ಯಕ್ಷರಾಗಿ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ. ಅವರೊಂದಿಗೆ ನಡೆಸಿದ ಸುದೀರ್ಘ ಚರ್ಚೆಯ ನಂತರವೇ ಚುನಾವಣಾ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ಸರ್ಕಾರಿ ಸುದ್ದಿಸಂಸ್ಥೆ ಬಿಎಸ್‌ಎಸ್ ವರದಿ ಮಾಡಿದೆ. ಮತದಾರರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಅಗತ್ಯವಿರುವ ಎಲ್ಲಾ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಮತದಾನದ ದಿನಾಂಕಕ್ಕಿಂತ ಮುಂಚಿತವಾಗಿಯೇ ಪೂರ್ಣಗೊಳಿಸಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ.
ಮಾಜಿ ನ್ಯಾಯಾಧೀಶ ಹಾಗೂ 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಹಿರಿಯ ಹೋರಾಟಗಾರರಾಗಿದ್ದ ಶಹಾಬುದ್ದೀನ್ ಅವರು ಏಪ್ರಿಲ್ 2023ರಲ್ಲಿ ಬಾಂಗ್ಲಾದೇಶದ 22ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 2024ರ ಜುಲೈ-ಆಗಸ್ಟ್ ಅವಧಿಯಲ್ಲಿ ದೇಶಾದ್ಯಂತ ನಡೆದ ತೀವ್ರ ವಿದ್ಯಾರ್ಥಿ ದಂಗೆ ಮತ್ತು ಹಿಂಸಾತ್ಮಕ ಪ್ರತಿಭಟನೆಗಳ ಪರಿಣಾಮವಾಗಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರ ಪತನಗೊಂಡಿತ್ತು. ಆ ಕ್ರಾಂತಿಕಾರಿ ಬದಲಾವಣೆಯ ನಂತರವೂ ತಮ್ಮ ಸಂವಿಧಾನಿಕ ಹುದ್ದೆಯಲ್ಲಿ ಮುಂದುವರಿದಿದ್ದ ಏಕೈಕ ಪ್ರಮುಖ ವ್ಯಕ್ತಿಯಾಗಿದ್ದರು ಶಹಾಬುದ್ದೀನ್. ಆದರೆ ಇದೀಗ ಅವರ ರಾಜೀನಾಮೆಯೊಂದಿಗೆ ಬಾಂಗ್ಲಾದೇಶದಲ್ಲಿ ಹೊಸ ಅಧ್ಯಕ್ಷರ ಆಯ್ಕೆಗೆ ಸಾಂವಿಧಾನಿಕ ಪ್ರಕ್ರಿಯೆಗಳು ಅಧಿಕೃತವಾಗಿ ಚಾಲನೆ ಪಡೆದುಕೊಂಡಿವೆ.
