ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಕ್ರಮವಾಗಿ ಮೊಬೈಲ್ ಫೋನ್ ಬಳಸಿದ್ದಾರೆ ಎಂಬ ವಿವಾದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟವಾಗಿ ದೂರ ಉಳಿದಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೈಲಿನಲ್ಲಿ ಶಿಸ್ತು ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆಯ ಜವಾಬ್ದಾರಿಯಾಗಿದೆ ಎಂದಿದ್ದಾರೆ.
“ಅದು ನನಗೆ ಸಂಬಂಧಿಸಿದ ವಿಷಯವಲ್ಲ, ನನಗೆ ಗೊತ್ತೂ ಇಲ್ಲ. ಅದು ಸರ್ಕಾರದ ಹೊಣೆ. ಗೃಹ ಇಲಾಖೆಯ ಹೊಣೆಗಾರಿಕೆ,” ಎಂದು ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು. “ಅಲ್ಲಿ ಏನಾದರೂ ಅಕ್ರಮ ನಡೆದ್ದರೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳುತ್ತಾರೆ. ನನ್ನನ್ನು ಏಕೆ ಕೇಳಬೇಕು?” ಎಂದು ಪ್ರಶ್ನಿಸಿದರು.
ಜೈಲುಗಳ ನಿರ್ವಹಣೆಯ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಒತ್ತಿಹೇಳಿದ ಅವರು, “ಕಾರಾಗೃಹದಲ್ಲಿ ಏನೇ ನಡೆದರೂ, ಅದು ಸೆಂಟ್ರಲ್ ಜೈಲ್ ಇರಲಿ ಅಥವಾ ನಿಮ್ಮ ಪರಪ್ಪನ ಅಗ್ರಹಾರವೇ ಇರಲಿ, ಅಲ್ಲಿ ಕಾನೂನನ್ನು ಬಿಗಿಯಾಗಿ ಅನುಷ್ಠಾನಗೊಳಿಸುವ ಹೊಣೆ ಸರ್ಕಾರಕ್ಕೆ ಸೇರಿದ್ದು,” ಎಂದು ಹೇಳಿದರು.
