Tuesday, April 30, 2024

ಸತ್ಯ | ನ್ಯಾಯ |ಧರ್ಮ

ಪ್ರಜ್ವಲ್‌ ರೇವಣ್ಣ ಲೈಂಗಿಕ ಕಿರುಕುಳ ಪ್ರಕರಣ: ಬಿಜೆಪಿ – ಜೆಡಿಎಸ್‌ ಮೈತ್ರಿಯಲ್ಲಿ ಬಿರುಕು?

ಬೆಂಗಳೂರು: ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಮೊಮ್ಮಗ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲಿನ ಲೈಂಗಿಕ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮುಜುಗರದ ಪರಿಸ್ಥಿತಿಗೆ ಸಿಲುಕಿದೆ.

ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪಗಳ ತನಿಖೆಗೆ ಕಾಂಗ್ರೆಸ್ ಸರ್ಕಾರ ಈಗಾಗಲೇ ಎಸ್‌ಐಟಿ ರಚಿಸಿದೆ. ಲೋಕಸಭೆ ಚುನಾವಣೆಯಲ್ಲಿ ತನ್ನ ಅಸ್ತಿತ್ವವನ್ನು ಸಾರಲು ಜೆಡಿಎಸ್ ಹರಸಾಹಸ ಪಡುತ್ತಿದೆ. ಈ ವೇಳೆ ‌ಪ್ರಜ್ವಲ್ ರೇವಣ್ಣ ವಿವಾದಕ್ಕೆ ಸಿಲುಕಿರುವುದು ಪಕ್ಷಕ್ಕೆ ಸಂಚಕಾರ ತಂದಿದೆ. ರೇವಣ್ಣ ಅವರ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ವಿಡಿಯೋಗಳು ಈಗಾಗಲೇ ಹಾಸನದಲ್ಲಿ ನೂರಾರು ವೀಕ್ಷಣೆಗಳನ್ನು ಪಡೆಯುತ್ತಿವೆ. ಈ ಘಟನೆಯಿಂದ ಪಕ್ಷ ಹಾಗೂ ಮೈತ್ರಿಕೂಟದ ಪ್ರತಿಷ್ಠೆಗೆ ಧಕ್ಕೆಯಾಗಲಿದೆ ಎಂಬುದು ವೀಕ್ಷಕರ ಅಭಿಪ್ರಾಯ. ಇದು ಮೈತ್ರಿಕೂಟಕ್ಕೆ ಮಾಡಿದ ಅವಮಾನ ಎಂದು ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರಿ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ಮೊದಲ ಹಂತದ ಮತದಾನ ಮುಗಿದಿದೆ. ಎರಡನೇ ಹಂತದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮತದಾನ ನಡೆಯಲಿದೆ. ಅಲ್ಲಿ ಜೆಡಿಎಸ್‌ಗೆ ಅಷ್ಟೊಂದು ಬಲವಿಲ್ಲ. ಆದರೆ, ಎಸ್ ಐಟಿ ತನಿಖೆಯಲ್ಲಿ ‌ಪ್ರಜ್ವಲ್ ರೇವಣ್ಣ ತಪ್ಪಿತಸ್ಥರೆಂದು ಸಾಬೀತಾದರೆ ಮೈತ್ರಿ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಇದು ಮಾರ್ಫ್ ಮಾಡಿದ ವಿಡಿಯೋ ಎಂಬುದನ್ನು ಬಿಜೆಪಿ ಅಲ್ಲಗಳೆದಿದೆ. ಹಾಸನದಲ್ಲಿ ರೇವಣ್ಣ ಅವರ ವೀಡಿಯೋ ತುಣುಕುಗಳು ಹರಿದಾಡುತ್ತಿದ್ದು, ಇದು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ‌

ಈ ನಡುವೆ ವಿಡಿಯೋ ಕ್ಲಿಪ್ಪಿಂಗ್ ಬೆಳಕಿಗೆ ಬಂದಾಗ ಪ್ರಜ್ವಲ್ ರೇವಣ್ಣ ಜರ್ಮನಿಗೆ ಪರಾರಿಯಾಗಿದ್ದಾರೆ ಎಂಬ ವರದಿಗಳು ಬಂದಿದ್ದವು. ಇದೇ ತಿಂಗಳ 26ರಂದು ಹಾಸನದಲ್ಲಿ ಮತದಾನ ನಡೆದಿತ್ತು. ಅದಕ್ಕೂ ಎರಡು ದಿನಗಳ ಹಿಂದೆ ವಿಡಿಯೋ ಕ್ಲಿಪ್ಪಿಂಗ್‌ಗಳು ಹರಿದಾಡಿದ್ದವು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಲೈಂಗಿಕ ಕಿರುಕುಳ ಪ್ರಕರಣವನ್ನು ಸುಮೋಟೋ ಆಗಿ ತೆಗೆದುಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಕುರಿತು ತನಿಖಾ ತಂಡವನ್ನು ರಚಿಸುವಂತೆ ಅವರು ರಾಜ್ಯ ಸರ್ಕಾರ ಮತ್ತು ಡಿಜಿಪಿಯನ್ನು ಕೋರಿದ್ದರು.

ಈ ಪ್ರಕರಣದಲ್ಲಿ ಪಾರದರ್ಶಕ ತನಿಖೆಗೆ ಸಹಕರಿಸುವುದಾಗಿ ಜೆಡಿಎಸ್ ಮುಖಂಡ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಪ್ರಜ್ವಲ್ ರೇವಣ್ಣ ಅವರ ಚಿಕ್ಕಪ್ಪ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಬಿಜೆಪಿ ಈ ವಿವಾದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದೆ. ಆದರೆ, ಪಕ್ಷದಲ್ಲಿ ಇನ್ನೂ ಗೊಂದಲವಿದೆ. ಎರಡನೇ ಹಂತದ ಮತದಾನದಲ್ಲಿ ಈ ಘಟನೆ ಪರಿಣಾಮ ಬೀರಲಿದೆ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸುತ್ತಿದ್ದರೂ ಹೊರೆ ಏನೂ ಆಗಿಲ್ಲವೆನ್ನುವಂತೆ ವರ್ತಿಸುತ್ತಿದೆ.

ಆದರೆ ಬಿಜೆಪಿ ನಾಯಕರು ಪ್ರಕರಣದಿಂದ ಮುಜುಗರ ಎದುರಿಸುತ್ತಿದ್ದಾರೆ. ಹುಬ್ಬಳ್ಳಿ ಪ್ರಕರಣ ತೆಗೆದುಕೊಂಡು ಹಾದಿರಂಪ ಮಾಡಿದ್ದ ಬಿಜೆಪಿಗೆ ಪ್ರಜ್ವಲ್‌ ಪ್ರಕರಣ ಈಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬಿಜೆಪಿ ಈ ಕುರಿತ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುತ್ತಿದೆ. ಮೂಲಗಳ ಪ್ರಕಾರ ಬಿಜೆಪಿಯ ಒಂದು ಬಣವು ಜೆಡಿಎಸ್‌ ಜೊತೆಗಿನ ಮೈತ್ರಿಯನ್ನು ಕಡಿದುಕೊಳ್ಳುವಂತೆ ಒತ್ತಡ ಹೇರುತ್ತಿದೆ ಎನ್ನಲಾಗಿದೆ.

ಅವಮಾನದಿಂದಾಗಿ ಹಲವು ಬಿಜೆಪಿ ನಾಯಕರು ಪ್ರಚಾರ ಸಭೆಗೆ ಹೋಗುವುದಕ್ಕೂ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು