ಅಶ್ಲೀಲ ವಿಡಿಯೋ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಕಾರಿನ ಚಾಲಕ ಕಾರ್ತಿಕ್ ಸೋಮವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿ ಸಾಕ್ಷ್ಯ ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಮೊಬೈಲ್ನಲ್ಲಿ 2000ಕ್ಕೂ ಹೆಚ್ಚು ಮಹಿಳೆಯರ ಛಾಯಾಚಿತ್ರಗಳು ಮತ್ತು 40-50 ವಿಡಿಯೋಗಳು ಇದ್ದವು ಎಂದು ಕಾರ್ತಿಕ್ ಸ್ಫೋಟಕ ಹೇಳಿಕೆ ನೀಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಕಾರ್ತಿಕ್ ಹೇಳಿಕೆಯ ಪ್ರಕಾರ, ಪ್ರಜ್ವಲ್ ರೇವಣ್ಣ ಒಮ್ಮೆ ತಮ್ಮ ಮೊಬೈಲ್ ಫೋನ್ ಅನ್ನು ಕಾರಿನಲ್ಲಿ ಬಿಟ್ಟು ಜಯನಗರದಲ್ಲಿ ತಮ್ಮ ಗೆಳತಿಯ ಮನೆಗೆ ಹೋಗಿದ್ದರು. ಮೊಬೈಲ್ನ ಪಾಸ್ವರ್ಡ್ ತಿಳಿದಿದ್ದ ಕಾರ್ತಿಕ್, ಕುತೂಹಲದಿಂದ ಫೋನ್ ಬ್ರೌಸ್ ಮಾಡಿದಾಗ, ಪ್ರಜ್ವಲ್ ರೇವಣ್ಣ ಲೈಂಗಿಕ ಸಂಭೋಗದಲ್ಲಿ ತೊಡಗಿರುವ ವಿಡಿಯೋಗಳು ಕಂಡುಬಂದವು. ಈ ವಿಡಿಯೋಗಳು ಮತ್ತು ಫೋಟೋಗಳು ಪಕ್ಷದ ಕಾರ್ಯಕರ್ತರು, ಸೇವಕಿ, ಸೇವಕರು ಸೇರಿದಂತೆ ಸುಮಾರು 30-40 ಮಹಿಳೆಯರನ್ನು ಒಳಗೊಂಡಿದ್ದವು. ಒಟ್ಟು 2000ಕ್ಕೂ ಹೆಚ್ಚು ಮಹಿಳೆಯರ ಛಾಯಾಚಿತ್ರಗಳು ಮತ್ತು 40-50 ವಿಡಿಯೋಗಳು ಫೋನ್ನಲ್ಲಿ ಇದ್ದವು ಎಂದು ಕಾರ್ತಿಕ್ ನ್ಯಾಯಾಲಯದ ಮುಂದೆ ತಿಳಿಸಿದ್ದಾರೆ.
ಕಾರ್ತಿಕ್ ಪ್ರಕಾರ, ಈ ವಿಷಯವನ್ನು ಪ್ರಜ್ವಲ್ರ ತಾಯಿ ಭವಾನಿ ರೇವಣ್ಣ ಅವರಿಗೆ ತಿಳಿಸಿ, ಅವರಿಗೆ ಬುದ್ಧಿ ಹೇಳಲು ವಿಡಿಯೋಗಳನ್ನು ವರ್ಗಾಯಿಸಿದ್ದರು. ಭವಾನಿ ರೇವಣ್ಣ ಫೋಟೋ ಮತ್ತು ವಿಡಿಯೋಗಳನ್ನು ತಮಗೆ ಕಳುಹಿಸುವಂತೆ ಕೇಳಿದ್ದರು ಮತ್ತು ಈ ವಿಷಯವನ್ನು ಎಲ್ಲೂ ಬಹಿರಂಗಪಡಿಸದಂತೆ ಮನವಿ ಮಾಡಿದ್ದರು. ಆದರೆ, ವಿಡಿಯೋಗಳ ಬಗ್ಗೆ ತಿಳಿಸಿದವರು ಯಾರು ಎಂದು ಪ್ರಜ್ವಲ್ ಕೇಳಿದಾಗ, ಭವಾನಿ ರೇವಣ್ಣ ಕಾರ್ತಿಕ್ ಹೆಸರನ್ನು ಬಹಿರಂಗಪಡಿಸಿದ್ದರು. ಇದರಿಂದ ಕುಪಿತರಾದ ಪ್ರಜ್ವಲ್ ಫೋನ್ ಮೂಲಕ ಕಾರ್ತಿಕ್ಗೆ ಗದರಿಸಿದ್ದರು ಎಂದು ಸಾಕ್ಷ್ಯದಲ್ಲಿ ತಿಳಿಸಲಾಗಿದೆ.
ಕಾರ್ತಿಕ್ 2009 ರಿಂದ ಎಚ್.ಡಿ. ರೇವಣ್ಣ ಅವರ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು ಮತ್ತು 2018 ರಿಂದ ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕನಾಗಿದ್ದರು. ಕ್ಷೇತ್ರ ಸಂಚಾರದ ಸಮಯದಲ್ಲಿ ಪ್ರಜ್ವಲ್ ಕಾರಿನಲ್ಲಿ ಮೊಬೈಲ್ನಲ್ಲಿ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸುತ್ತಿದ್ದರು. ಕಾರ್ತಿಕ್ ಅವರ ಕಡೆಗೆ ನೋಡಿದಾಗ ಪ್ರಜ್ವಲ್ ಫೋನ್ ತಿರುಗಿಸಿಕೊಳ್ಳುತ್ತಿದ್ದರು ಎಂದು ಅವರು ಹೇಳಿದ್ದಾರೆ.
2022 ರಲ್ಲಿ ಆಸ್ತಿ ವಿವಾದದಿಂದ ಕಾರ್ತಿಕ್ ಮತ್ತು ಪ್ರಜ್ವಲ್ ನಡುವೆ ಜಗಳವಾಗಿ ಕಾರ್ತಿಕ್ ಕೆಲಸ ಬಿಟ್ಟಿದ್ದರು. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದರು. ನಂತರ ಆಸ್ತಿ ವಿವಾದ ಬಗೆಹರಿಸುವ ಭರವಸೆಯ ಮೇಲೆ ಕೆಲಸಕ್ಕೆ ಮರಳಿ ಕರೆದಾಗ, ವಿಡಿಯೋಗಳನ್ನು ಬಹಿರಂಗಪಡಿಸದಂತೆ ತಡೆಯಾಜ್ಞೆ ತರಲಾಗಿತ್ತು. ಆದರೆ, ಕಾರ್ತಿಕ್ರನ್ನು ಪ್ರತಿವಾದಿಯಾಗಿ ಮಾಡಿದ್ದರಿಂದ ಅವರು ವಕೀಲ ದೇವರಾಜೇಗೌಡರನ್ನು ಸಂಪರ್ಕಿಸಿದರು. ಸಾಕ್ಷಿಯಾಗಿ ಫೋಟೋಗಳನ್ನು ನೀಡುವಂತೆ ಸೂಚಿಸಿದ್ದರಿಂದ ಕಾರ್ತಿಕ್ ಪೆನ್ಡ್ರೈವ್ ಮೂಲಕ ಅವುಗಳನ್ನು ಹಂಚಿಕೊಂಡಿದ್ದರು. ಆದರೆ, ಚುನಾವಣೆ ಸಂದರ್ಭದಲ್ಲಿ ಈ ಫೋಟೋ ಮತ್ತು ವಿಡಿಯೋಗಳು ಬಹಿರಂಗಗೊಂಡವು ಎಂದು ಕಾರ್ತಿಕ್ ನ್ಯಾಯಾಲಯದಲ್ಲಿ ಸಾಕ್ಷ್ಯದಲ್ಲಿ ತಿಳಿಸಿದ್ದಾರೆ.